More

    ತೆಂಗಿಗೆ ಬಿಳಿ ಕೀಟದ ಕಾಟ ;  ಗರಿಗಳ ಹಿಂದೆ ಕೀಟಗಳ ಬಲೆ ; ಚಿಕ್ಕನಾಯಕನಹಳ್ಳಿ ಭಾಗದಲ್ಲಿ ಆತಂಕ ಶುರು

    ಹುಳಿಯಾರು : ಕಾಯಿಲೆಗಳು ಮನುಷ್ಯನಿಗೆ ಬರದೆ ಮರಕ್ಕೆ ಬರುತ್ತವೆಯೇ? ಎಂಬ ಮಾತಿತ್ತು. ಆದರೆ 20 ವರ್ಷಗಳ ಹಿಂದೆ ನುಸಿ ರೋಗ ತೆಂಗಿಗೆ ಬಂದು ಈ ಮಾತನ್ನು ಸುಳ್ಳಾಗಿಸಿತು. ನಂತರದ ದಿನಗಳಲ್ಲಿ ತೆಂಗಿಗೆ ಹಳದಿ ರೋಗ, ಬೆಂಕಿ, ಅಣಬೆ ರೋಗ, ನುಸಿ ರೋಗ, ಕೆಂಪುಮೂತಿ ಹುಳ, ಸಿರಿಕೊಳೆ ರೋಗ ಹೀಗೆ ಅನೇಕ ರೋಗಗಳು ಕಾಡುವ ಮೂಲಕ ತೆಂಗು ಬೆಳೆಗಾರರನ್ನು ಅಕ್ಷರಶಃ ಕಂಗಾಲಾಗಿಸಿವೆ. ಈಗ ಈ ರೋಗಗಳ ಪಟ್ಟಿಗೆ ಬಿಳಿ ಹುಳುಗಳ ಕಾಟ ಸಹ ಸೇರ್ಪಡೆಯಾಗಿದೆ.

    ಕೇರಳದ ಪಾಲಕ್ಕಾಡ್‌ನಲ್ಲಿ 2016ರಲ್ಲಿ ಕಾಣಿಸಿಕೊಂಡ ಈ ರೋಗಾಣು ಬಳಿಕ ತಮಿಳುನಾಡು, ಆಂಧ್ರಪ್ರದೇಶದಲ್ಲೂ ತೆಂಗಿನ ಬೆಳೆಯನ್ನು ಬಹುವಾಗಿ ಕಾಡಿ ಕರ್ನಾಟಕಕ್ಕೆ ಕಾಲಿಟ್ಟಿದೆ. ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಆರಂಭವಾದ ಹುಳು ಕಾಟ ಈಗ ಚಿಕ್ಕನಾಯಕನಹಳ್ಳಿ ತಾಲೂಕಿನ ತಮ್ಮಡಿಹಳ್ಳಿ ಗೊಲ್ಲರಹಟ್ಟಿಯ ತೋಟಗಳಿಗೆ ಪ್ರವೇಶಿಸಿ ಇಲ್ಲಿನ ರೈತರ ಆತಂಕಕ್ಕೆ ಕಾರಣವಾಗಿದೆ.

    ತೆಂಗಿನ ಗರಿಗಳ ಕೆಳ ಭಾಗದಲ್ಲಿ ಬಿಳಿ ಬಲೆ ಕಟ್ಟಿಕೊಂಡು ಅದರೊಳಗೆ ಕುಳಿತುಕೊಳ್ಳುವ ಈ ಬಿಳಿ ಕೀಟ ನೋಡುವುದಕ್ಕೆ ಪುಟ್ಟ ನೊಣದ ರೀತಿ ಕಾಣುತ್ತದೆ. ಚಿಟ್ಟೆಯಂತೆ ಗರಿಯಿಂದ ಗರಿಗೆ ಹಾರಾಡುತ್ತವೆ. ರಾತ್ರಿ ಸಂದರ್ಭದಲ್ಲಿ ಕುಳಿತಲ್ಲೇ ಕುಳಿತು ಗರಿಯಲ್ಲಿನ ರಸ ಹೀರುತ್ತದೆ. ಪರಿಣಾಮ ಗರಿಗಳು ಕಪ್ಪಾಗುತ್ತದೆಯಲ್ಲದೆ ತೆಂಗಿನ ಹರಳುಗಳು ಉದುರುತ್ತಿವೆ. ತೆಂಗಿನ ಗರಿಗಳ ಬೆಳವಣಿಗೆ ಹಾಗೂ ಇಳುವರಿ ಎರಡೂ ಕುಂಠಿತವಾಗಿ ಕ್ರಮೇಣ ಇಡೀ ಮರ ಕಪ್ಪು ಬಣ್ಣಕ್ಕೆ ತಿರುಗುತ್ತಿವೆ.

    ತಮ್ಮಡಿಹಳ್ಳಿ ಗೊಲ್ಲರಹಟ್ಟಿಯ ಒಂದೆರಡು ಮರಗಳಲ್ಲಿ ಕಾಣಿಸಿಕೊಂಡ ಈ ಬಿಳಿ ಕೀಟ ಈಗ ಒಂದು ಮರದಿಂದ ಒಂದು ಮರಕ್ಕೆ ಹಬ್ಬುತ್ತಿದೆ. ಇದರಿಂದ ತೆಂಗಿನ ತೋಟಗಳು ಸಾಂಕ್ರಾಮಿಕವಾಗಿ ಈ ರೋಗಕ್ಕೆ ತುತ್ತಾಗಿ ಈಗಾಗಲೇ ನೂರಾರು ಫಲಭರಿತ ಮರ ಹಾಗೂ ಸಸಿಗಳು ಸೊರಗಿವೆ. ಅಲ್ಲದೆ ಕೀಟ ಹಬ್ಬಿರುವ ರೈತರ ಅಕ್ಕಪಕ್ಕದ ರೈತರ ನೆಮ್ಮದಿಗೆ ಭಂಗ ತಂದಿವೆ.

    ತೆಂಗು ಉಳಿಸುವುದೇ ಸವಾಲು : ಅರಸೀಕೆರೆ, ತಿಪಟೂರು ಬಿಟ್ಟರೆ ಚಿಕ್ಕನಾಯಕನಹಳ್ಳಿ ತಾಲೂಕು ಹೆಚ್ಚು ತೆಂಗು ಬೆಳೆಯುವ ಪ್ರದೇಶವಾಗಿದೆ. ಇಲ್ಲಿನ ಸಾವಿರಾರು ಕುಟುಂಬಗಳು ತೆಂಗು ನಂಬಿ ಜೀವನ ನಡೆಸುತ್ತಿದ್ದು, ಇದೀಗ ಬಿಳಿ ಕೀಟ ರೈತರ ನಿದ್ದೆಗೆಡಿಸಿದೆ. ಆರಂಭದಲ್ಲಿ ಹಾವಳಿ ತಡೆದರೆ ವ್ಯಾಪಕವಾಗಿ ತೋಟದಿಂದ ತೋಟಕ್ಕೆ ಹಬ್ಬುವುದನ್ನು ತಡೆಯಬಹುದಾಗಿದೆ. ಆದರೆ ತೋಟಗಾರಿಗೆ ಇಲಾಖೆ ಏಕೋ ನಿರ್ಲಕ್ಷ್ಯ ಅನುಸರಿಸುತ್ತಿದೆ. ಬಿಳಿ ಕೀಟ ತಗುಲಿದ ತಕ್ಷಣ ಮಾಹಿತಿ ನೀಡಿದರೂ ಇಲ್ಲಿಯವರೆವಿಗೆ ಬಂದು ನೋಡಿಲ್ಲ ಎಂಬುದು ರೈತರ ಆರೋಪವಾಗಿದೆ.

     ನಮ್ಮ ಭಾಗದಲ್ಲಿ ತೆಂಗಿಗೆ ಬಿಳಿ ಹುಳು ಕಾಟ ಆರಂಭವಾಗಿದೆ. ಇದಕ್ಕೆ ರ‌್ಯೂಗೊಸ್ ವೈಟ್ ಪ್ಲೈ ಅಂತಾರೆ. ಇದಕ್ಕೆ 1 ಲೀಟರ್ ನೀರಿಗೆ 1 ಎಂಎಲ್ ಬೇವಿನ ಎಣ್ಣೆ ಹಾಕಿ ಸಿಂಪಡಣೆ ಮಾಡುವುದು ಹಾಗೂ ಎಕರೆಗೆ ಮೂರರಿಂದ ನಾಲ್ಕು ಆಕರ್ಷಕ ಬಲೆ ಇಟ್ಟರೆ ಕೀಟಗಳು ಬಂದು ಅಂಟಿಕೊಳ್ಳುತ್ತವೆ. ಸದ್ಯಕ್ಕೆ ಇಷ್ಟು ಬಿಟ್ಟರೆ ಬೇರೆ ಯಾವುದೇ ಔಷಧೋಪಚಾರ ಇಲ್ಲ. ಇಲಾಖೆಯಲ್ಲಿ ಬಿಳಿ ಹುಳು ರೋಗಕ್ಕೆ ಔಷಧ ಸಪ್ಲೈ ಇಲ್ಲ. ಬೇವಿನ ಎಣ್ಣೆಯೂ ದಾಸ್ತಾನು ಇದ್ದರೆ ಕೊಡ್ತಿವಿ, ಇಲ್ಲವೆಂದರೆ ಇಲ್ಲ. ರೈತರು ತಮ್ಮ ಭಾಗದ ತೋಟಗಾರಿಗೆ ಅಧಿಕಾರಿಗಳನ್ನು ವಿಚಾರಿಸಲಿ.
    ಸಿ.ಚಿತ್ತೇಶ್, ಸಹಾಯಕ ನಿರ್ದೇಶಕರು, ತೋಟಗಾರಿಗೆ ಇಲಾಖೆ, ಚಿಕ್ಕನಾಯಕನಹಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts