More

    ಬೋಟ್ ಆಂಬುಲೆನ್ಸ್ ನಿರೀಕ್ಷೆಯಲ್ಲಿ ಕರಾವಳಿ

    ಮಂಗಳೂರು: ಮಳೆಗಾಲ ಆರಂಭಕ್ಕೆ ಮುನ್ನವೇ ಚಂಡಮಾರುತದಿಂದಾಗಿ ಸಮುದ್ರದಲ್ಲಿ ಉಂಟಾದ ಬೋಟ್ ಅವಘಡಗಳಿಂದ ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೇನು ಮುಂಗಾರು ಆಗಮನಕ್ಕೆ ದಿನಗಣನೆ ಆರಂಭವಾಗಿದ್ದು, ಸಮುದ್ರ ಮತ್ತೆ ಪ್ರಕ್ಷುಬ್ಧವಾಗಲಿದೆ. ಕಡಲಿನಲ್ಲಾಗುವ ಜೀವಹಾನಿ ತಡೆಯುವ ನಿಟ್ಟಿನಲ್ಲಿ ಕರಾವಳಿಯ ಬಹುನಿರೀಕ್ಷಿತ ಬೋಟ್ ಆಂಬುಲೆನ್ಸ್ ಇನ್ನೂ ನಿಯೋಜನೆಗೊಂಡಿಲ್ಲ.

    ತಲಪಾಡಿಯಿಂದ ಗೋವಾ ಗಡಿವರೆಗಿನ ಸುಮಾರು 320 ಕಿ.ಮೀ ಉದ್ದದ ಕರ್ನಾಟಕ ಕರಾವಳಿ ವ್ಯಾಪ್ತಿಯ ಸಮುದ್ರದಲ್ಲಿ ಪ್ರತಿವರ್ಷ ಬಹಳಷ್ಟು ಅವಘಡಗಳು ಸಂಭವಿಸುತ್ತಿದೆ. ಅವಘಡ ನಡೆದಾಗ ತಕ್ಷಣಕ್ಕೆ ಸ್ಥಳಕ್ಕೆ ತೆರಳಲು ಸಾಧ್ಯವಾಗದೆ ಹಲವು ಮಂದಿ ಸಾವಿಗೀಡಾಗುತ್ತಿದ್ದಾರೆ. ಕೋಸ್ಟ್‌ಗಾರ್ಡ್‌ನಲ್ಲಿ ಹಡಗುಗಳು, ಕರಾವಳಿ ಕಾವಲು ಪಡೆಯಲ್ಲಿ ಇಂಟರ್‌ಸೆಪ್ಟರ್ ಬೋಟ್‌ಗಳಿವೆ. ಇದರಲ್ಲಿ ಪ್ರಥಮ ಚಿಕಿತ್ಸೆ ಮಾತ್ರ ಲಭ್ಯವಿದ್ದು, ತಕ್ಷಣಕ್ಕೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ, ದಡಕ್ಕೆ ಬಂದು ಅಲ್ಲಿಂದ ಆಸ್ಪತ್ರೆಗೆ ದಾಖಲಿಬೇಕು. ಇದರಿಂದ ಸಮಯ ವ್ಯರ್ಥವಾಗುತ್ತದೆ. ಬೋಟ್ ಆಂಬುಲೆನ್ಸ್ ಇದ್ದರೆ ಹೆಚ್ಚು ಅನುಕೂಲ.

    ಕನಿಷ್ಠ ಎರಡು ಬೋಟ್ ಅಗತ್ಯ: ಸ್ವಲ್ಪ ಮಟ್ಟಿಗಾದರೂ ಜೀವಹಾನಿ ಪ್ರಮಾಣವನ್ನು ತಗ್ಗಿಸಬೇಕು, ಅವಘಡ ನಡೆದ ಕೆಲವೇ ನಿಮಿಷದಲ್ಲಿ ಸ್ಥಳಕ್ಕೆ ಧಾವಿಸಲು ಸಾಧ್ಯವಾಗಬೇಕು ಎನ್ನುವ ನಿಟ್ಟನಲ್ಲಿ ರಾಜ್ಯ ಸರ್ಕಾರ ಬೋಟ್ ಆಂಬುಲೆನ್ಸ್ (ಸೀ-ಆಂಬುಲೆನ್ಸ್ ಬೋಟ್) ನಿಯೋಜಿಸಲು ಉದ್ದೇಶಿಸಿತ್ತು. ಇದು ಮೀನುಗಾರರ ಬಹುಕಾಲದ ಬೇಡಿಕೆಯೂ ಆಗಿತ್ತು. ಕರಾವಳಿ ಕಾವಲು ಪೊಲೀಸ್ ಮತ್ತು ಮೀನುಗಾರಿಕಾ ಇಲಾಖೆಯೂ ಸರ್ಕಾರದ ಗಮನವನ್ನು ಸೆಳೆದಿದೆ. ಆದರೆ ಆಂಬುಲೆನ್ಸ್ ಮಾತ್ರ ಬಂದಿಲ್ಲ. ಕೇರಳದಲ್ಲಿ ಈಗಾಗಲೇ ಎರಡು ಆಂಬುಲೆನ್ಸ್ ಬೋಟ್‌ಗಳು ಕಾರ್ಯಾಚರಣೆ ನಡೆಸುತ್ತಿವೆ. ಕರಾವಳಿಗೆ ಕನಿಷ್ಠ ಎರಡು ಬೋಟ್‌ಗಳ ಅವಶ್ಯಕತೆಯಿದ್ದು, ಶೀಘ್ರ ಲಭಿಸಿದರೆ ಮಳೆಗಾಲದ ಅವಧಿಯಲ್ಲಿ ಜಿಲ್ಲಾಡಳಿತಕ್ಕೆ ಹೆಚ್ಚಿನ ಬಲ ಬಂದಾಗುತ್ತದೆ.

    ಏನೇನು ಸೌಲಭ್ಯ?: ರಸ್ತೆಯಲ್ಲಿ ಚಲಿಸುವ ಆಂಬುಲೆನ್ಸ್‌ಗಳ ಮಾದರಿಯಲ್ಲಿ, ಅದಕ್ಕಿಂತಲೂ ಹೆಚ್ಚು ಸುಸಜ್ಜಿತವಾಗಿರುತ್ತದೆ ಬೋಟ್ ಆಂಬುಲೆನ್ಸ್. ಮುಖ್ಯವಾಗಿ ನೀರಿಗೆ ಬಿದ್ದು ರಕ್ಷಿಸಲ್ಪಟ್ಟವರಿಗೆ ಯಾವ ರೀತಿ ಚಿಕಿತ್ಸೆ ನೀಡಬೇಕು ಎಂದು ತಿಳಿದಿರುವ ತಜ್ಞರ ತಂಡ ಅದರಲ್ಲಿರುತ್ತದೆ. ಏಕಕಾಲದಲ್ಲಿ ಹಲವು ಮಂದಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ, ಚಿಕಿತ್ಸಾ ಕೇಂದ್ರ, ಶವಾಗಾರ ಎಲ್ಲವನ್ನೂ ಒಳಗೊಂಡಿರುತ್ತದೆ. ಜತೆಗೆ ನುರಿತ ಈಜುಗಾರರೂ ಬೋಟ್‌ನಲ್ಲಿರುತ್ತಾರೆ. ಇದು ಗಂಟೆಗೆ 14 ನಾಟಿಕಲ್ ಮೈಲು ವೇಗದಲ್ಲಿ ಸಂಚರಿಸಬಲ್ಲದು.

    ಸಮುದ್ರದಲ್ಲಿ ಉಂಟಾಗುವ ಅವಘಡಗಳಲ್ಲಿ ಜನರ ಪ್ರಾಣ ರಕ್ಷಣೆ ಉದ್ದೇಶದಿಂದ ಸೀ ಆಂಬುಲೆನ್ಸ್ ಬೋಟ್ ನಿಯೋಜಿಸುವ ನಿಟ್ಟಿನಲ್ಲಿ ಪ್ರಕ್ರಿಯೆಗಳು ನಡೆಯುತ್ತಿದೆ. ಶೀಘ್ರದಲ್ಲಿ ಒದಗಿಸಲಾಗುವುದು.

    ಕ್ಯಾ.ಮಣಿವಣ್ಣನ್ ಪಿ
    ಪ್ರಧಾನ ಕಾರ್ಯದರ್ಶಿ, ಪಶುಸಂಗೋಪನೆ ಮತ್ತು ಮೀನುಗಾರಿಕಾ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts