More

    ಕರಾವಳಿ ಕಾವಲು ಠಾಣೆಗೆ ಮೀನುಗಾರರ ಮುತ್ತಿಗೆ

    ಗಂಗೊಳ್ಳಿ: ಗಂಗೊಳ್ಳಿ ಸುತ್ತಮುತ್ತ ಕಾನೂನುಬಾಹಿರವಾಗಿ ಬುಲ್ ಟ್ರಾಲ್ ಮೀನುಗಾರಿಕೆ ನಡೆಸುತ್ತಿರುವ ಬೋಟ್‌ಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹಿಸಿ ನಾಡದೋಣಿ ಮೀನುಗಾರರು ಗುರುವಾರ ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
    ರಾತ್ರಿ ಹೊತ್ತು ಕಾನೂನುಬಾಹಿರವಾಗಿ ಸಮುದ್ರದಲ್ಲಿ ಸ್ಥಳೀಯ ಬೋಟುಗಳು ನಿರಂತರವಾಗಿ ಬುಲ್ ಟ್ರಾಲ್ ಮೀನುಗಾರಿಕೆ ನಡೆಸುತ್ತಿದೆ. ಈ ಬಗ್ಗೆ ಕರಾವಳಿ ಕಾವಲು ಪೊಲೀಸ್ ಠಾಣೆ ಹಾಗೂ ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅಪರೂಪಕ್ಕೊಮ್ಮೆ ಬುಲ್ ಟ್ರಾಲ್ ನಡೆಸುವ ಬೋಟ್ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರಿಗಳು, ನಿರಂತರವಾಗಿ ಬುಲ್ ಟ್ರಾಲ್ ಮೀನುಗಾರಿಕೆ ನಡೆಸುವ ಬೋಟ್ ವಿರುದ್ಧ ಕ್ರಮಕ್ಕೆ ಮುಂದಾಗುತ್ತಿಲ್ಲ. ಹೀಗಾಗಿ ರಾತ್ರಿ ಹೊತ್ತು ಕಡಲಿನಲ್ಲಿ ಪ್ಯಾಟ್ರೋಲಿಂಗ್ ವ್ಯವಸ್ಥೆ ಮಾಡಿ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಮೀನುಗಾರರು ಒತ್ತಾಯಿಸಿದರು.
    ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಭೀಮಾಶಂಕರ್ ಎಸ್., ಮೀನುಗಾರಿಕೆ ಇಲಾಖೆಯ ವಿಶ್ವನಾಥ, ಗೋಪಾಲಕೃಷ್ಣ, ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಮಂಜು ಬಿಲ್ಲವ, ಗಂಗೊಳ್ಳಿ ಪ್ರಾಥಮಿಕ ಮೀನುಗಾರ ಸಹಕಾರಿ ಸಂಘದ ಅಧ್ಯಕ್ಷ ಸದಾಶಿವ ಖಾರ್ವಿ, ಉಪಾಧ್ಯಕ್ಷ ಸೂರಜ್ ಖಾರ್ವಿ, ನಾಡದೋಣಿ ಮೀನುಗಾರರ ಸಂಘದ ಸದಸ್ಯರು, ಮೀನುಗಾರರು ಉಪಸ್ಥಿತರಿದ್ದರು.

    ಅನಧಿಕೃತ ಮೀನುಗಾರಿಕೆ ವಿರುದ್ಧ ಕ್ರಮ
    ಪ್ರತಿಭಟನಾಕಾರರ ಜತೆ ಮಾತನಾಡಿದ ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯ ಪ್ರಭಾರ ಇನ್‌ಸ್ಪೆಕ್ಟರ್ ಅನಂತಪದ್ಮನಾಭ ಕೆ.ವಿ., ಅನಧಿಕೃತವಾಗಿ ಬುಲ್‌ಟ್ರಾಲ್ ಮೀನುಗಾರಿಕೆ ನಡೆಸುತ್ತಿರುವ ಬಗ್ಗೆ ಸ್ಥಳೀಯ ಮೀನುಗಾರರು ನೀಡಿರುವ ಮಾಹಿತಿ ಮೇರೆಗೆ ಬೋಟ್ ವಶಪಡಿಸಿಕೊಳ್ಳಲಾಗಿದೆ. ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಮೀನುಗಾರಿಕೆ ಇಲಾಖೆಗೆ ವರದಿ ಸಲ್ಲಿಸಲಾಗುವುದು. ಸಮುದ್ರದಲ್ಲಿ ಯಾವುದೇ ಅನಧಿಕೃತ ಮೀನುಗಾರಿಕೆ ನಡೆಸುತ್ತಿರುವುದು ಕಂಡು ಬಂದಲ್ಲಿ ಇಲಾಖೆ ಮಾಹಿತಿ ನೀಡಬೇಕು. ಮೀನುಗಾರಿಕೆ ಇಲಾಖೆ ಹಾಗೂ ಕರಾವಳಿ ಕಾವಲು ಪೊಲೀಸ್ ಇಲಾಖೆ ಜಂಟಿಯಾಗಿ ಮುಂದಿನ ದಿನಗಳಲ್ಲಿ ಈ ಬಗ್ಗೆ ಕಾರ್ಯಪ್ರವೃತವಾಗಲಿದ್ದು, ಮೀನುಗಾರರು ಇಲಾಖೆಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts