More

    ಸಹಕಾರಿ ಬ್ಯಾಂಕ್‌ಗಳ ಭದ್ರತೆ ಮೇಲ್ದರ್ಜೆಗೆ ಕ್ರಮ

    ಉಡುಪಿ: ಜಿಲ್ಲೆಯಲ್ಲಿ ಸಹಕಾರಿ ಬ್ಯಾಂಕ್‌ಗಳ ಭದ್ರತೆ ಮೇಲ್ದರ್ಜೆಗೇರಿಸುವ ಬಗ್ಗೆ ಜಿಲ್ಲಾ ಸಹಕಾರಿ ಯೂನಿಯನ್ ಚಿಂತನೆ ನಡೆಸಿದೆ.
    ಇತ್ತೀಚೆಗೆ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಹಕಾರಿ ಸೊಸೈಟಿಯೊಂದರಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಸಹಕಾರಿ ಸಂಸ್ಥೆಗಳು ಕಳವಳ ವ್ಯಕ್ತಪಡಿಸಿವೆ. ಅಲ್ಲದೆ ಸಹಕಾರಿ ಬ್ಯಾಂಕ್‌ನಲ್ಲಿ ನಡೆದ ಲಕ್ಷಾಂತರ ರೂ. ಕಳ್ಳತನ ಪ್ರಕರಣ ಪೊಲೀಸ್ ಇಲಾಖೆಯನ್ನು ಚಿಂತೆಗೀಡು ಮಾಡಿದೆ. ಪ್ರಕರಣದಲ್ಲಿ ಸೊಸೈಟಿಯ ಹಿಂಬದಿ ಕಿಟಕಿಯ ಗ್ಲಾಸ್‌ಗಳನ್ನು ಒಡೆದಿದ್ದು ಗ್ಯಾಸ್ ಕಟ್ಟರ್ ಬಳಸಿ ಕಬ್ಬಿಣದ ಗ್ರಿಲ್ ತುಂಡು ಮಾಡಿ, ಲಾಕರ್ ಚಿಲಕಗಳನ್ನು ತೆಗೆದು ಅದರಲ್ಲಿದ್ದ 4.32 ಲಕ್ಷ ರೂ. ನಗದು, ಗ್ರಾಹಕರು ಅಡವಿಟ್ಟಿದ್ದ ಅಂದಾಜು 44.25 ಲಕ್ಷ ರೂ. ಮೌಲ್ಯದ 922.57 ಗ್ರಾಂ ಚಿನ್ನಾಭರಣ ಕಳವು ಮಾಡಲಾಗಿತ್ತು.

    ಜಿಲ್ಲೆಯಲ್ಲಿ 725ಕ್ಕೂ ಅಧಿಕ ಸಹಕಾರಿ ಸಂಸ್ಥೆಗಳಿದ್ದು ಇದರಲ್ಲಿ 322 ಹಾಲು ಉತ್ಪಾದಕ ಸಹಕಾರಿ ಸಂಸ್ಥೆಗಳು. ಇವು ಬ್ಯಾಂಕಿಂಗ್ ವ್ಯವಹಾರ ನಡೆಸುವುದಿಲ್ಲ. 92 ಸೌಹಾರ್ದ ಸಹಕಾರಿ ಬ್ಯಾಂಕ್‌ಗಳು, 322 ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಗಳು ಬ್ಯಾಂಕಿಂಗ್ ವ್ಯವಹಾರ ಮಾಡುತ್ತವೆ. ಠೇವಣಿ, ಉಳಿತಾಯ, ಪಿಗ್ಮಿ, ಕೃಷಿ, ಹೈನುಗಾರಿಕೆ ಸಾಲ, ಕಿರುಸಾಲ, ವಾಹನ, ಚಿನ್ನಾಭರಣ, ವೈಯಕ್ತಿಕ, ಗೃಹ, ಉದ್ಯಮ ಸಾಲ ಯೋಜನೆಗಳ ಮೂಲಕ ರಿಯಾಯಿತಿ ಬಡ್ಡಿ ದರದಲ್ಲಿ ಜಿಲ್ಲೆಯ ಕೋ ಆಪರೇಟಿವ್ ಸೊಸೈಟಿಗಳು ಉತ್ತಮ ಸೇವೆ ನೀಡುತ್ತಿವೆ. ಜನ ಸಹಕಾರಿ ಬ್ಯಾಂಕ್‌ಗಳಲ್ಲಿ ಉತ್ತಮ ವಹಿವಾಟು ಸಂಬಂಧ ಹೊಂದಿದ್ದಾರೆ.
    ನಕಲಿ ಚಿನ್ನ ಅಡಮಾನ ಕಟ್ಟೆಚ್ಚರ

    ನಕಲಿ ಚಿನ್ನ ಅಡಮಾನವಿಟ್ಟ ಪ್ರಕರಣ ಸಂಬಂಧಿಸಿ ಮಂಗಳೂರಿನ ಎರಡು ಠಾಣೆಗಳಲ್ಲಿ ಮೂರು ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ಜಿಲ್ಲೆಯ ಸಹಕಾರಿ ಸಂಸ್ಥೆಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಜಿಲ್ಲೆಯ ಎಲ್ಲ ಸಹಕಾರಿ ಸಂಸ್ಥೆಗಳು ಪ್ರತಿ ಆರು ತಿಂಗಳಿಗೊಮ್ಮೆ ಬೇರೆ ಬೇರೆ ಸಹಕಾರಿ ಸಂಸ್ಥೆಯ ಚಿನ್ನ ಪರಿಶೋಧಕರಿಂದ ಕ್ರಾಸ್ ವೆರಿಫಿಕೇಶನ್ ಮಾಡಿಸಬೇಕು ಎಂದು ಪೊಲೀಸ್ ಅಧಿಕಾರಿಗಳು ಸಲಹೆ ನೀಡಿದ್ದಾರೆ.

    ಸಹಕಾರಿ ಬ್ಯಾಂಕ್‌ಗಳು ಗ್ರಾಹಕರಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಿಗಿಂತ ಉತ್ತಮ ಹಣಕಾಸು ಸೇವೆ ನೀಡುತ್ತಿವೆ. ಸಹಕಾರಿ ಬ್ಯಾಂಕ್‌ಗಳ ಭದ್ರತೆ ಮರು ಪರಿಶೀಲಿಸಿ, ಆರ್‌ಬಿಐ ನೀತಿಯ ಪ್ರಕಾರ ಭದ್ರತಾ ನಿಯಮಾವಳಿಗಳನ್ನು ವ್ಯವಸ್ಥಿತವಾಗಿ ಪಾಲಿಸುವಂತೆ ಯೂನಿಯನ್ ವತಿಯಿಂದ ವಿಶೇಷ ಸಭೆ ನಡೆಸಿ ಎಲ್ಲ ಸಹಕಾರಿ ಬ್ಯಾಂಕ್‌ಗಳಿಗೆ ಸೂಚನೆ ನೀಡಲಾಗುವುದು.
    ಜಯಕರ ಶೆಟ್ಟಿ ಇಂದ್ರಾಳಿ, ಅಧ್ಯಕ್ಷರು, ಜಿಲ್ಲಾ ಸಹಕಾರಿ ಯೂನಿಯನ್

    ಸಹಕಾರಿ ಬ್ಯಾಂಕ್‌ನಲ್ಲಿ ಕಳ್ಳತನ ಪ್ರಕರಣ ಸಂಬಂಧಿಸಿ ಕೃತ್ಯ ನಡೆಸಿದ ತಂಡವನ್ನು ಬಂಧಿಸಲು ವಿಶೇಷ ತಂಡದಿಂದ ಕಾರ್ಯಾಚರಣೆ ನಡೆಯುತ್ತಿದೆ. ಎಲ್ಲ ಸಹಕಾರಿ ಬ್ಯಾಂಕ್ ಪ್ರಮುಖರ ಸಭೆ ಶೀಘ್ರ ಕರೆದು ಬ್ಯಾಂಕ್‌ಗಳ ಭದ್ರತೆ ಕುರಿತು ಪಾಲಿಸಬೇಕಾದ ಕ್ರಮಗಳ ಬಗ್ಗೆ ಸಲಹೆ ನೀಡಲಾಗುವುದು.
    ಎನ್.ವಿಷ್ಣುವರ್ಧನ್, ಜಿಲ್ಲಾ ಪೊಲೀಸ್ ಅಧೀಕ್ಷಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts