More

    ದಕ್ಷಿಣ ಕೋಟೆಯ ಹೆಬ್ಬಾಗಿಲು ಸಿಎಂ ಯಡಿಯೂರಪ್ಪ

    | ಡಾ.ಕೆ.ಸುಧಾಕರ್

    ನಾಯಕನಾದವನು ಉತ್ತಮ ಸಂಘಟಕ ನಾಗಿರಬೇಕು, ಕೇಳಿಸಿಕೊಳ್ಳುವ ಗುಣ ಹೊಂದಿರಬೇಕು, ಉತ್ತಮ ವಾಗ್ಮಿಯಾಗಿರಬೇಕು ಎಂಬ ಅನೇಕ ವಿಚಾರಗಳಿವೆ. ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಲ್ಲಿ ರಾಜಕೀಯ ನಾಯಕರು, ಜನಸಾಮಾನ್ಯರು, ವಿರೋಧ ಪಕ್ಷದವರೂ ಕಾಣುವ ಗುಣ ನಂಬಿಕರ್ಹತೆ. ನಂಬಿದವರನ್ನು ಕೈಬಿಡುವುದಿಲ್ಲ ಎಂಬುದು ಪಕ್ಷಾತೀತವಾಗಿ ಎಲ್ಲರೂ ಒಪ್ಪುವ ಮಾತು.

    ಅಭಿವೃದ್ಧಿ ವಿಚಾರ, ಜನರ ಸಮಸ್ಯೆ ಬಗೆಹರಿಸುವ ವಿಚಾರ ಬಂದರೆ ರಾಜಕೀಯವನ್ನೂ ಮೀರಿದ ಮುತ್ಸದ್ದಿತನ ಯಡಿಯೂರಪ್ಪ ಅವರದು. ಸದನದಲ್ಲಿ ಎದುರು ಬದುರು ನಿಂತು ಕಾದಾಡಿದ ವಿರೋಧ ಪಕ್ಷದವರೇ, ತಮ್ಮ ಕ್ಷೇತ್ರದ ಜನರ ಸಮಸ್ಯೆಯನ್ನು ಮುಂದಿಟ್ಟಿಕೊಂಡು ಹೋದರೆ, ಸದನದಲ್ಲಿ ಏನೂ ನಡೆದೇ ಇಲ್ಲವೇನೊ ಎಂಬಂತೆ ಮಾತನಾಡಿಸಿ ಕೆಲಸ ಮಾಡಿಕೊಡುವ ಗುಣ, ಯಾವ ಪಕ್ಷದವನು? ಇವನಿಗೆ ಅನುದಾನ ನೀಡಿದರೆ ನಮ್ಮ ಪಕ್ಷದ ಕಾರ್ಯಕರ್ತರು ಸಿಟ್ಟಾಗುತ್ತಾರೆಯೇ? ಊಹ್ಞು. ಇಂತಹ ಯೋಚನೆಗಳೇ ಅವರಲ್ಲಿ ಸುಳಿಯುವುದಿಲ್ಲ. ಎಷ್ಟೋ ಬಾರಿ ಇಂತಹದ್ದೇ ಕಾರಣಗಳಿಂದಾಗಿ ಸ್ವಪಕ್ಷೀಯರಿಂದಲೇ ದೂಷಣೆಗೆ ಒಳಗಾಗಿದ್ದೂ ಇದೆ. ಶಿಕಾರಿಪುರದ ಸಣ್ಣ ಅಕ್ಕಿ ಗಿರಣಿಯಿಂದ ಜೀವನ ಆರಂಭಿಸಿದ ಯಡಿಯೂರಪ್ಪ ಅವರನ್ನು ಜನರು ಗುರುತಿಸುವುದು ರೈತ ನಾಯಕ ಎಂದೆ. ರಾಜ್ಯದಲ್ಲಿ ಮೊದಲ ಬಾರಿಗೆ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿ, ರೈತರ ಬಗೆಗಿನ ಕಾಳಜಿ ಚುನಾವಣೆಗೋ, ತೋರಿಕೆಗೋ ಅಲ್ಲ, ನೈಜವಾದದ್ದು ಎಂಬುದನ್ನು ಸಾಬೀತುಪಡಿಸಿದರು.

    ಮೂಲೆ ಮೂಲೆಗೆ ಜನಸಂಘದ ದೀಪ: ಮೂಲತಃ ಆರೆಸ್ಸೆಸ್ ಕಾರ್ಯಕರ್ತನಾಗಿ ಸಾಮಾಜಿಕ ಜೀವನಕ್ಕೆ ಪದಾರ್ಪಣೆ ಮಾಡಿದ ಯಡಿಯೂರಪ್ಪ, ನಂತರದಲ್ಲಿ ಜನಸಂಘದ ದೀಪವನ್ನು ರಾಜ್ಯದ ಮೂಲೆಮೂಲೆಯಲ್ಲೂ ಉರಿಸಲು ಶ್ರಮಿಸಿದವರು. ಸೈಕಲ್​ನಲ್ಲೆ ಊರೂರು ಸುತ್ತಿ ಸಂಘಟನೆ ಕಟ್ಟಿದರು. ಚುನಾವಣೆಯಲ್ಲಿ ಜನಸಂಘದ ಅಭ್ಯರ್ಥಿ ಠೇವಣಿ ಉಳಿಸಿಕೊಂಡರೆ ಸಿಹಿ ಹಂಚಿ ಪಟಾಕಿ ಸಿಡಿಸುತ್ತಿದ್ದ ಕಾಲ ಅದು. ತಮ್ಮ ಜೀವಿತಾವಧಿಯಲ್ಲೆ ಪಕ್ಷ ಅಧಿಕಾರಕ್ಕೆ ಏರಬಹುದು ಎಂಬ ಕಲ್ಪನೆಗೂ ಅವಕಾಶವಿಲ್ಲದ ಸಂದರ್ಭದಲ್ಲಿ ಜನಜಾಗೃತಿ ಕೈಗೊಂಡರು. ರೈತರನ್ನು ಕೇಂದ್ರಿತವಾಗಿರಿಸಿಕೊಂಡು ನೈಜ ಹೋರಾಟ ಮಾಡಿದ್ದೇ ಆದರೆ ಜನಸೇವೆ ಅವಕಾಶ ಸಿಕ್ಕೇಸಿಗುತ್ತದೆ ಎಂದು ಜತೆಗಿದ್ದ ಕಾರ್ಯಕರ್ತರಲ್ಲೂ ಭರವಸೆ ಮೂಡಿಸುತ್ತಲೇ ತಾವೂ ಬೆಳೆಯುತ್ತ ಪಕ್ಷವನ್ನೂ ಬೆಳೆಸಿದರು.

    ಜನಮಾನಸದಲ್ಲಿ ವಿಶಿಷ್ಟ ಸ್ಥಾನ: ತುರ್ತು ಪರಿಸ್ಥಿತಿಯಲ್ಲಿ 45 ದಿನ ಸೆರೆವಾಸ ಅನುಭವಿಸುವುದರಿಂದ ಹಿಡಿದು ಲಾಲ್​ಚೌಕ್ ಧ್ವಜಾರೋಹಣ, ರಾಮಜನ್ಮಭೂಮಿ ಆಂದೋಲನದವರೆಗೆ ದೇಶ, ಧರ್ಮದ ವಿಚಾರದಲ್ಲಿ ಎಂದೂ ರಾಜಿ ಮಾಡಿಕೊಳ್ಳದೆ ಹೋರಾಡಿದವರು. ಆದರೆ ಆರೆಸ್ಸೆಸ್ ಸಿದ್ಧಾಂತವನ್ನೂ ಮೀರಿ ಜನಮಾನಸದಲ್ಲಿ ಯಡಿಯೂರಪ್ಪ ಅವರಿಗೆ ವಿಶಿಷ್ಟ ಸ್ಥಾನವಿದೆ. ಹಿಂದುಗಳಷ್ಟೆ ಅಲ್ಲ, ಮುಸ್ಲಿಂ, ಕ್ರೖೆಸ್ತರಿಗೂ ಯಡಿಯೂರಪ್ಪ ನಮ್ಮವರು ಎನ್ನಿಸುತ್ತಾರೆ. ಮೊದಲ ಬಾರಿಗೆ ಉಪಮುಖ್ಯಮಂತ್ರಿಯಾಗಿದ್ದಾಗ ಜಾರಿ ಮಾಡಿದ ಉಚಿತ ಸೈಕಲ್, ಭಾಗ್ಯಲಕ್ಷ್ಮಿಯಂತಹ ಯೋಜನೆಗಳು ಒಂದು ಸಮುದಾಯಕ್ಕೆ ಸೀಮಿತವಾದವಲ್ಲ. ಎಲ್ಲ ಧರ್ಮ, ನಂಬಿಕೆಗಳ ಜನರೂ ಯಾವುದೇ ಭೇದವಿಲ್ಲದೆ ಫಲ ಕಂಡುಕೊಳ್ಳುವಂತೆ ಮಾಡಿದ್ದು ಯಡಿಯೂರಪ್ಪ ಅವರಲ್ಲಿರುವ ಈ ವಿಶಿಷ್ಟ ಗುಣ. ಯಡಿಯೂರಪ್ಪ ಏನು ಕೇಳಿದರೂ ಬರಿಗೈಲಿ ಕಳಿಸುವುದಿಲ್ಲ ಎಂಬ ಮಾತು ಜನಜನಿತ. ಹೀಗಾಗಿಯೇ ಬೇರೆ ಯಾವ ಅವಧಿಯಲ್ಲಿಯೂ ಇಲ್ಲದಷ್ಟು ಮನವಿ, ಬೇಡಿಕೆಗಳು ಯಡಿಯೂರಪ್ಪ ಮುಖ್ಯಮಂತ್ರಿ ಆದಾಗ ಸಲ್ಲಿಕೆಯಾಗುತ್ತವೆ. ಎಷ್ಟೇ ದೊಡ್ಡ, ಸಂಕೀರ್ಣ ವಿಚಾರಗಳು ಕಣ್ಣ ಮುಂದೆ ಬಂದರೂ ಎದೆಗುಂದದೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಾರೆ. ಇಂತಹ ಜಾತಿ ಎಂಬ ಕಾರಣಕ್ಕೆ ಕೆಲಸ ಮಾಡಿಕೊಟ್ಟಿಲ್ಲ ಎಂಬ ಒಂದೇ ಉದಾಹರಣೆಯನ್ನು ನೀಡಲು ಸಾಧ್ಯವಿಲ್ಲ.

    ಚುನಾವಣೆಗಳ ಸಂದರ್ಭದಲ್ಲಂತೂ ಎದುರಾಳಿಗಳ ಅನೇಕ ಅಸ್ತ್ರಗಳಿಂದ ಪಕ್ಷವನ್ನು ಕಾಪಾಡಿದ ಉದಾಹರಣೆಗಳಿವೆ. 2018ರ ವಿಧಾನಸಭೆ ಚುನಾವಣೆಯನ್ನು ಅವಲೋಕಿಸಿದಾಗ ಇದು ಸ್ಪಷ್ಟವಾಗುತ್ತದೆ. ಪ್ರತ್ಯೇಕ ಲಿಂಗಾಯತ ಧರ್ಮ ಬೇಕು ಎಂಬ ದಾಳವನ್ನು ಅಂದಿನ ಆಡಳಿತ ಪಕ್ಷದ ಪ್ರಮುಖರು ಉರುಳಿಸಿದ್ದೇ ಮತಗಳ ವಿಭಜನೆ ಮಾಡಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಬೇಕು ಎಂಬ ಕಾರಣಕ್ಕೆ. ಅತ್ಯಂತ ಯೋಜಿತವಾಗಿ ರೂಪಿಸಿದ್ದ ಈ ರಣತಂತ್ರದ ವಿರುದ್ಧ ದಿಕ್ಕಿನಲ್ಲಿ ಗುರಾಣಿಯಾಗಿ ಯಡಿಯೂರಪ್ಪ ಅಲ್ಲದೆ ಬೇರೆ ಯಾರೇ ಇದ್ದರೂ ಬಿಜೆಪಿ ಮತಗಳು ವಿಭಜನೆ ಆಗುವುದನ್ನು ತಡೆಯಲು ಸಾಧ್ಯವಿರುತ್ತಿರಲಿಲ್ಲ.

    ದಕ್ಷಿಣ ಭಾರತದ ಬೇರೆ ಯಾವ ರಾಜ್ಯಗಳಲ್ಲೂ ಇಲ್ಲದ ವಿಶಿಷ್ಟ ಸ್ವರೂಪದ ರಾಷ್ಟ್ರೀಯವಾದ ಕರ್ನಾಟಕದ ಜನರಲ್ಲಿದೆ. ಜೈ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ ಎಂಬ ರಾಷ್ಟ್ರಕವಿ ವಾಕ್ಯವೇ ಇದಕ್ಕೆ ಉದಾಹರಣೆ. ಈ ರಾಷ್ಟ್ರೀಯ ಅಲೆಯ ಜತೆಗೆ ಯಡಿಯೂರಪ್ಪನವರಂತಹ ನಂಬಿಕಸ್ಥ ವ್ಯಕ್ತಿತ್ವವೇ ಬಿಜೆಪಿಗೆ ಶ್ರೀರಕ್ಷೆಯಾಗಿದೆ. ಈ ದಕ್ಷಿಣ ಭಾರತದ ಕೋಟೆಗೆ ಭದ್ರವಾದ ಹೆಬ್ಬಾಗಿಲಾಗಿ ನಿಂತಿರುವುದು ಇದೇ ಯಡಿಯೂರಪ್ಪ. 2019ರ ಲೋಕಸಭೆ ಚುನಾವಣೆಯಲ್ಲಿ ದೇಶಾದ್ಯಂತ ನರೇಂದ್ರ ಮೋದಿ ಅಲೆ ಇತ್ತು, ಹಾಗಾಗಿ ಕರ್ನಾಟಕದಲ್ಲಿ 25 ಲೋಕಸಭೆ ಸದಸ್ಯರು ಬಿಜೆಪಿಯಿಂದಲೇ ಆಯ್ಕೆಯಾದರು ಎಂಬುದು ನೂರಕ್ಕೆ ನೂರು ನಿಜ. ಮೋದಿ, ಷಾ ಜೋಡಿಗೆ ಕರ್ನಾಟಕದ ಮಟ್ಟಿಗೆ ಯಡಿಯೂರಪ್ಪ ಶಕ್ತಿ ಸಾಥ್ ನೀಡಿತು ಎಂಬುದು ರಾಜಕೀಯ ಪಂಡಿತರು ಮುಂದಿಡುವ ವಿಶ್ಲೇಷಣೆ. 2014ರಲ್ಲಿ 17 ಸಂಸದರು ಜಯಿಸಿದಾಗಲೂ ಕರ್ನಾಟಕದ ಮಟ್ಟಿಗೆ ಇದೇ ಫಾಮುಲಾ ಕೆಲಸ ಮಾಡಿತೆಂಬುದರಲ್ಲಿ ಅತಿಶಯೋಕ್ತಿ ಇಲ್ಲ. ಈ ಮಾತಿಗೆ 2009ರಲ್ಲಿ 19 ಸಂಸದರು ಆಯ್ಕೆಯಾಗಿದ್ದು, 2004ರಲ್ಲಿ 18 ಸಂಸದರು ಜಯಿಸಿದ್ದು ಒಂದು ಐತಿಹಾಸಿಕ ನಿದರ್ಶನ. 2014ರಿಂದೀಚೆಗೆ ಬಿಜೆಪಿ ಕೇಂದ್ರ, ರಾಜ್ಯಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಿತು. ಮೋದಿ ಮತ್ತು ಷಾ ಎಂಬ ಇಬ್ಬರು ದೈತ್ಯ ಶಕ್ತಿಯ ಬಲ,ಚುನಾವಣಾ ರಣತಂತ್ರದ ವ್ಯೂಹ ಬಿಜೆಪಿಗೆ ದಿಲ್ಲಿಯಿಂದ ಹಳ್ಳಿಯವರೆಗೆ ಶ್ರೀಶಕ್ತಿ ಆಗಿ ನಿಂತುಕೊಂಡಿದೆ. 2004, 2009ರ ಚುನಾವಣೆಗಳಲ್ಲಿ ಕರ್ನಾಟಕದ ಮೂಲಕ ಬಿಜೆಪಿಗೆ ದಕ್ಷಿಣ ಭಾರತದ ಹೆಬ್ಬಾಗಿಲು ತೆರೆದದ್ದು ಯಡಿಯೂರಪ್ಪ ಎಂಬ ದೈತ್ಯ ಶಕ್ತಿ ಎಂಬುದರಲ್ಲಿ ಎರಡು ಮಾತಿಲ್ಲ. ಯಡಿಯೂರಪ್ಪ ಅನೇಕ ಕಾರಣಗಳಿಂದಾಗಿ ಪಕ್ಷದಿಂದ ಹೊರನಡೆದಿದ್ದರೂ, ದೇಶ ಅಭಿವೃದ್ಧಿಯಾಗಬೇಕೆಂದರೆ ಮೋದಿ ಕೈ ಬಲಪಡಿಸಬೇಕು ಎನ್ನುತ್ತ ಪಕ್ಷಕ್ಕೆ ವಾಪಸಾದ, ಅಭಿವೃದ್ಧಿಯೆಡೆಗಿನ ಅವರ ಬದ್ಧತೆ ನಿಚ್ಚಳವಾಗಿ ಕಾಣುತ್ತದೆ. ಶಿಕಾರಿಪುರದ ಸಾರ್ವಜನಿಕ ಹೋರಾಟದಿಂದ ಇಂದಿನವರೆಗೆ ಯಡಿಯೂರಪ್ಪ ಅವರ ಹೋರಾಟ, ಒತ್ತು ಏನಿದ್ದರೂ ಅದು ಜನಸಾಮಾನ್ಯರ ವಿಚಾರಗಳೆ. ನೀರು, ವಿದ್ಯುತ್ ಸಮಸ್ಯೆ, ರೈತರ ಸಮಸ್ಯೆ, ಕೂಲಿಗಾಗಿ ಕಾಳು ಯೋಜನೆಯಲ್ಲಿ ಅಕ್ರಮ, ರೈತರ ಭೂಮಿ ಉಳಿಸುವ ಹೋರಾಟ, ಗ್ರಾಮ ರಾಜ್ಯ ಉಳಿಸಿ ರೈತರ ರಕ್ಷಿಸಿ ಪಾದಯಾತ್ರೆ, ಕಾವೇರಿ ಸಮಸ್ಯೆ ಉಲ್ಬಣಿಸಿದಾಗ ರೈತಜಾಥಾ, ಬಗರ್​ಹುಕುಂ ಸಾಗುವಳಿದಾರರಪರ ಹೋರಾಟ. ಹೀಗೇ ಹೇಳುತ್ತಾ ಹೋದರೆ ದೊಡ್ಡ ಪಟ್ಟಿಯೇ ಬೆಳೆಯುತ್ತದೆ. ಎಷ್ಟೇ ಎತ್ತರಕ್ಕೆ ಬೆಳೆದರೂ ಬೇರನ್ನು ಮರೆಯದ ಯಡಿಯೂರಪ್ಪನವರ ಮಾತೃಹೃದಯ ಎಲ್ಲರನ್ನೂ ತಟ್ಟುತ್ತದೆ. ಅವರ ಮುಖದಲ್ಲಿನ ಕೆಂಡದಂತಹ ಕೋಪ ಬಡವರ ಮೇಲಿನ ದೌರ್ಜನ್ಯ ತಡೆಯಲೇ ಹೊರತು ಯಾರ ಮೇಲಿನ ದ್ವೇಷಕ್ಕಲ್ಲ. ಕೋಪಗೊಂಡ ಮರುಕ್ಷಣದಲ್ಲೆ ವಾತ್ಸಲ್ಯ ತೋರುವ, ಮನೆಗೆ ಬಂದವರಿಗೆ ದಾಸೋಹ ಮಾಡಿಸಿಯೇ ಕಳಿಸುವ, ನಿರಂತರ ಜನಸೇವೆಯಲ್ಲಿ ತೊಡಗುವ ಕಾಯಕ ವೃತ್ತಿಯೇ ಇಂದು ಅವರನ್ನು ನಾಡಿನ ಮಹಾನ್ ನಾಯಕನನ್ನಾಗಿಸಿದೆ.

    ಯುದ್ಧಕಾಲದ ಮಹಾ ನಾಯಕ

    ಓರ್ವ ಮುಖ್ಯಮಂತ್ರಿಯಾಗಿ ಕರೊನಾ ಸಂಕಷ್ಟ ನಿರ್ವಹಿಸಿದ ರೀತಿಯನ್ನು ಉಲ್ಲೇಖಿಸದೇ ಹೋದರೆ ಹೇಗೆ? ಇಡೀ ಜಗತ್ತನ್ನು ಕಾಡಿದ ಮಹಾಮಾರಿ ಕೊರೊನಾಕ್ಕೆ ಮದ್ದರೆಯುವಲ್ಲೂ ಕರ್ನಾಟಕವೇ ಮುಂಚೂಣಿಯಲ್ಲಿ ನಿಂತುಕೊಂಡಿತು. ದೇಶದಲ್ಲಿ ಮೊದಲು ಲಾಕ್ ಡೌನ್ ಮಾಡಿದ್ದೂ ಕರ್ನಾಟಕ, ಲಾಕ್ ಡೌನ್ ಮೊದಲು ಮುಕ್ತಾಯಗೊಳಿಸಿದ್ದೂ ಕರ್ನಾಟಕ ಎಂಬುದು ನಮ್ಮ ಪಾಲಿನ ಸಾರ್ವಕಾಲಿಕ ಹೆಮ್ಮೆ. ಕೊರೊನಾದಿಂದ ಉಂಟಾದ ಆರೋಗ್ಯ ಹಾಗೂ ಆರ್ಥಿಕ ಸಂಕಷ್ಟ ಎಂಥ ಬಲಿಷ್ಠನೇ ಆದರೂ ಜಂಘಾಬಲವೇ ಉಡುಗಿ ಹೋಗಬೇಕು. ಅಂಥ ಸಂದರ್ಭದಲ್ಲಿ ದೃತಿಗೆಡದೆ ಯುದ್ಧಕಾಲದ ನಾಯಕನಂತೆ ಯಡಿಯೂರಪ್ಪ ಅಚಲವಾಗಿ ನಿಂತುಕೊಂಡರು. ಕೊರೊನಾ ಸಂಕಷ್ಟಕಾಲದಲ್ಲಿ ಆರೋಗ್ಯ ಇಲಾಖೆಯ ಹೊಣೆಯನ್ನು ನನ್ನ ಹೆಗಲಿಗೆ ಹಾಕಿ,ಯಶಸ್ವೀ ಕಾರ್ಯನಿರ್ವಹಣೆಗೂ ಬೆಂಗಾವಲಾದರು.ಅದರ ಪರಿಣಾಮ ಕೊರೊನಾ ನಿರ್ವಹಣೆಯಲ್ಲಿ ಕರ್ನಾಟಕ ದೇಶಕ್ಕೇ ಮಾದರಿಯಾಗಿ ಕರ್ಮಯೋಗಿ ಪ್ರಧಾನಿ ಮೋದಿಯವರಿಂದಲೂ ಭೇಷ್ ಎನಿಸಿಕೊಳ್ಳಲು ಸಾಧ್ಯವಾಯಿತು.

    (ಲೇಖಕರು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts