More

    ಮೀನುಗಾರಿಕಾ ಆದಾಯ ಹೆಚ್ಚಿಸಲು ಆದ್ಯತೆ, ಸಿಎಂ ಯಡಿಯೂರಪ್ಪ ಹೇಳಿಕೆ

    ಪಡುಬಿದ್ರಿ: ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆ ಮೂಲಕ ಮೀನುಗಾರರ ಸುರಕ್ಷತೆ ಹಾಗೂ ಮೀನುಗಾರಿಕಾ ಆದಾಯ ಹೆಚ್ಚಿಸಲು ಸರ್ಕಾರ ಆದ್ಯತೆ ನೀಡಲಿದೆ. ಶ್ರಮಜೀವಿಗಳಾದ ಮೀನುಗಾರರ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನು ಉತ್ತಮಪಡಿಸಲು ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ರಾಜ್ಯ ಸರ್ಕಾರ ಅನುಷ್ಠಾನಗೊಳಿಸುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

    ಸುಮಾರು 181 ಕೋಟಿ ರೂ. ವೆಚ್ಚದ ಹೆಜಮಾಡಿ ಕೋಡಿ ಮೀನುಗಾರಿಕಾ ಬಂದರು ಯೋಜನೆಗೆ ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ಮೀನುಗಾರರ 60 ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ. ಕಳೆದ ಸಾಲಿನ ಬಜೆಟ್‌ನಲ್ಲಿ ಮೀನುಗಾರಿಕಾ ಅಭಿವೃದ್ಧಿಗೆ 251.57 ಕೋಟಿ ರೂ. ಒದಗಿಸಿ, ಈ ಪೈಕಿ ಕೇಂದ್ರ ಪುರಸ್ಕೃತ ಯೋಜನೆಗೆ ಒಟ್ಟು 200 ಕೋಟಿ ರೂ. ವೆಚ್ಚದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಅವಕಾಶ ಕಲ್ಪಿಸಿದೆ.

    ಕರಾವಳಿಯಲ್ಲಿ ಯಾಂತ್ರೀಕೃತ ಮೀನುಗಾರಿಕೆ ಪ್ರೋತ್ಸಾಹಕವಾಗಿ ಪ್ರತೀ ವರ್ಷ 135 ಕೋಟಿ ರೂ.ಗಳನ್ನು ಮೀನುಗಾರಿಕೆ ದೋಣಿಗಳಿಗೆ ಬಳಸುವ ಡೀಸೆಲ್‌ಗಾಗಿ ಸಹಾಯಧನವನ್ನಾಗಿ ನೀಡಲಾಗುತ್ತಿದೆ. ಕೈಗಾರಿಕೆ ಉದ್ಯಮ ಸ್ವರೂಪ ಹೊಂದಿರುವ ಮೀನುಗಾರಿಕೆ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಮೀನುಗಾರಿಕೆ ಸಂಬಂಧ ಇರುವ ಅನೇಕ ಸಮಸ್ಯೆಗಳ ಬಗ್ಗೆ ಚರ್ಚೆಗಳಾಗಿವೆ. ಕರೊನಾ ಪರಿಣಾಮ ಹಣಕಾಸಿನ ಸಮಸ್ಯೆಯಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಅನುಕೂಲಗಳನ್ನು ಕಲ್ಪಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

    ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, ಎಲ್ಲರ ಸಹಕಾರದಿಂದ ಮೀನುಗಾರರ ಹಲವು ದಶಕಗಳ ಬೇಡಿಕೆ ಈಡೇರಿದೆ. ಕಡಲ್ಕೊರೆತ, ಮಹಿಳಾ ಮೀನುಗಾರರ ಸಮಸ್ಯೆ, ಮೀನು ಮಾರುಕಟ್ಟೆಗಳ ಉನ್ನತೀಕರಣವಾಗಬೇಕಾದ ಅವಶ್ಯಕತೆಯಿದೆ ಎಂದು ಶಾಸಕ ಲಾಲಾಜಿ ಆರ್. ಮೆಂಡನ್ ಮುಖ್ಯಮಂತ್ರಿ ಗಮನ ಸೆಳೆದರು.
    ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಕೇಂದ್ರ ಸರ್ಕಾರ 2018ರಲ್ಲಿಯೇ ಬಂದರು ಯೋಜನೆಗೆ 13.50 ಕೋಟಿ ರೂ. ಬಿಡುಗಡೆ ಮಾಡಿದರೂ, ರಾಜ್ಯ ಸರ್ಕಾರದಲ್ಲಿ ಪೂರಕ ವಾತಾವರಣವಿಲ್ಲದೆ ವಿಳಂಬವಾಗಿತ್ತು. ಮುಂದೆ ಹಂಗಾರಕಟ್ಟೆ, ಕೋಡಿಕನ್ಯಾಣ ಹಾಗೂ ಮಲ್ಪೆ ಬಂದರುಗಳ ಅಭಿವೃದ್ಧಿಗೆ ಒತ್ತು ನೀಡಬೇಕು. ಮೀನುಗಾರ ಮಹಿಳೆಯರಿಗೆ ಬಾಕಿ ಬಡ್ಡಿ ಬಿಡುಗಡೆ ಮಾಡುವಂತೆ ವಿನಂತಿಸಿದರು.

    ಮತ್ಸಾೃಶ್ರಯ, ಮೀನುಗಾರರ ಸಂಕಷ್ಟ ಪರಿಹಾರ ನಿಧಿ ಹಾಗೂ ಭಾಗ್ಯಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಮುಖ್ಯಮಂತ್ರಿ ಚೆಕ್ ವಿತರಿಸಿದರು. ಉಚ್ಚಿಲ ಮೊಗವೀರ ಮಹಾಜನ ಸಂಘದಿಂದ ಮೊಗವೀರರ ಪರವಾಗಿ ಮುಖ್ಯಮಂತ್ರಿಯನ್ನು ಅಭಿನಂದಿಸಲಾಯಿತು. ಶಾಸಕರಾದ ಕೆ. ರಘುಪತಿ ಭಟ್, ಉಮಾನಾಥ ಕೋಟ್ಯಾನ್, ರಾಜ್ಯ ಹಿಂದುಳಿದ ವರ್ಗಗಳ ಅಯೋಗ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ, ಮುಖ್ಯಮಂತ್ರಿ ಸಂಸದೀಯ ಕಾರ್ಯದರ್ಶಿ ಜೀವರಾಜ್, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಸದಸ್ಯರಾದ ಶಶಿಕಾಂತ್ ಪಡುಬಿದ್ರಿ, ಸುಮಿತ್ ಶೆಟ್ಟಿ ಬೈಲೂರು, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಕಾಪು ತಾ.ಪಂ ಅಧ್ಯಕ್ಷೆ ಶಶಿಪ್ರಭಾ ಶೆಟ್ಟಿ, ಸದಸ್ಯೆ ರೇಣುಕಾ ಪುತ್ರನ್, ಮೀನುಗಾರಿಕಾ ಅಭಿವೃದ್ಧಿ ನಿಗಮ ಅಧ್ಯಕ್ಷ ನಿತಿನ್ ಕುಮಾರ್, ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಮಹಾಮಂಡಳಿ ಅಧ್ಯಕ್ಷ ಯಶಪಾಲ್ ಸುವರ್ಣ, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಸಂಸ್ಥಾಪಕ ಡಾ.ಜಿ ಶಂಕರ್, ಮೀನುಗಾರ ಮುಖಂಡ ಆನಂದ್ ಸಿ. ಕುಂದರ್, ಹೆಜಮಾಡಿ ಬಂದರು ಹೋರಾಟ ಸಮಿತಿ ಅಧ್ಯಕ್ಷ ಸದಾಶಿವ ಕೋಟ್ಯಾನ್, ಜಿಲ್ಲಾಧಿಕಾರಿ ಜಗದೀಶ್, ಎಸ್‌ಪಿ ವಿಷ್ಣುವರ್ಧನ್, ಜಿಪಂ ಸಿಇಒ ನವೀನ್ ಭಟ್ ವೈ, ಮೀನುಗಾರಿಕಾ ಇಲಾಖೆ ನಿರ್ದೇಶಕ ರಾಮಾಚಾರ್ಯ ಉಪಸ್ಥಿತರಿದ್ದರು.
    ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಜಿ. ಕಲ್ಪನಾ ಸ್ವಾಗತಿಸಿದರು. ಉಪನ್ಯಾಸಕ ನಾಗರಾಜ ಜಿ.ಎಸ್. ಕಾರ್ಯಕ್ರಮ ನಿರೂಪಿಸಿದರು.

    ಎರಡು ವರ್ಷದಲ್ಲಿ ಪೂರ್ಣ: ಕೇಂದ್ರ ಸರ್ಕಾರದ 69.30 ಕೋಟಿ ಹಾಗೂ 111.54 ಕೋಟಿ ರೂ. ರಾಜ್ಯದ ಪಾಲಿನಲ್ಲಿ ಬಂದರು ನಿರ್ಮಾಣವಾಗಲಿದ್ದು, ಎರಡು ವರ್ಷದಲ್ಲಿ ಪೂರ್ಣಗೊಂಡು ಮೀನುಗಾರಿಕೆಗೆ ಲಭಿಸುವ ವಿಶ್ವಾಸವಿದೆ. ಗುತ್ತಿಗೆದಾರರಿಗೂ ಸೂಚನೆ ನೀಡಲಾಗಿದೆ. ಕಾಮಗಾರಿ ಗುಣಮಟ್ಟದಲ್ಲಿ ಯಾವುದೇ ರಾಜಿಯಿಲ್ಲದೆ, ವಿಳಂಬವಾಗದಂತೆ ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು.

    ಮೀನುಗಾರರಿಗೆ ಅನುಕೂಲ ಕ್ರಮ: 2023ಕ್ಕೆ ಮಲ್ಪೆ ಶಿಪ್‌ಯಾರ್ಡ್ ಕರಾರು ಪೂರ್ಣಗೊಳ್ಳಲಿದ್ದು, ಅಲ್ಲಿನ ಸಮಸ್ಯೆ ಬಗೆಹರಿಸಿ ಮೀನುಗಾರರಿಗೆ ಅನುಕೂಲವಾಗಿಸುವಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುವುದು. ಮಲ್ಪೆ ಸ್ಲಿಪ್‌ವೇ ನಿರ್ಮಾಣಕ್ಕೆ ಮೀನುಗಾರಿಕಾ ಇಲಾಖೆಯಿಂದ 2 ದಿನಗಳಲ್ಲಿ ಆದೇಶ ನೀಡಲಾಗುವುದು. ಒಂದೂವರೆ ವರ್ಷದಲ್ಲಿ ಎಲ್ಲ ಯಾಂತ್ರೀಕೃತ ದೋಣಿಗಳಿಗೆ ಮೇಕ್ ಇನ್ ಇಂಡಿಯಾ ಯೋಜನೆಯಡಿ ಸ್ವದೇಶಿ ನಿರ್ಮಿತ ದೋಣಿ ಯಂತ್ರ ಅಳವಡಿಸುವ ಮಹದಾಸೆ ಹೊಂದಲಾಗಿದೆ ಎಂದು ಮೀನುಗಾರಿಕಾ ಸಚಿವ ಶ್ರೀನಿವಾಸ ಪೂಜಾರಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts