More

    ಪ್ರವಾಸ ಒಂದು, ಪರಿಹಾರ ಹಲವು: ವಾರದಲ್ಲಿ ಎರಡು ದಿನ ಸಿಎಂ ರಾಜ್ಯ ಪರ್ಯಟನೆ

    • ವಿಲಾಸ ಮೇಲಗಿರಿ ಬೆಂಗಳೂರು

    ಆಡಳಿತದಲ್ಲಿ ಬಿಗಿ ತರಲು ರಾಜ್ಯ ಸರ್ಕಾರ ಸಜ್ಜಾಗಿದೆ. ‘ಆಡಳಿತ ವ್ಯವಸ್ಥೆಯ ಮೇಲೆ ಸರ್ಕಾರದ ಹಿಡಿತವಿಲ್ಲ. ಅಭಿವೃದ್ಧಿ ಆಗುತ್ತಿಲ್ಲ.ಸರ್ಕಾರ ಸತ್ತೇ ಹೋಗಿದೆ’ ಎಂಬ ಪ್ರತಿಪಕ್ಷಗಳ ಟೀಕೆ ಹಾಗೂ ಕೋವಿಡ್ ಕಾರಣದಿಂದ ಕೈತಪ್ಪಿದಂತಿರುವ ಆಡಳಿತ ಯಂತ್ರವನ್ನು ಹಿಡಿತದಲ್ಲಿಟ್ಟುಕೊಳ್ಳಲು ಕಾರ್ಯಸೂಚಿಯೊಂದು ಸಿದ್ಧವಾಗಿದೆ. ಜನರಿಗೆ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ದೊರೆಯುತ್ತಿಲ್ಲ. ಇದರಿಂದ ಮುಂಬರುವ ಚುನಾವಣೆ ಎದುರಿಸುವುದು ಕಷ್ಟವಾಗಬಹುದೆಂಬ ದೃಷ್ಟಿಯಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಾರದಲ್ಲಿ ಎರಡು ದಿನ ರಾಜ್ಯ ಪ್ರವಾಸ ನಡೆಸಲು ನಿರ್ಧರಿಸಿದ್ದಾರೆ.

    ಪ್ರವಾಸದ ಕಾರ್ಯಸೂಚಿ ಏನು?: ಬಜೆಟ್ ಅಧಿವೇಶನದ ನಂತರ ವಾರದಲ್ಲಿ ಎರಡು ದಿನ ಪ್ರವಾಸ ಕೈಗೊಂಡು ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಿಎಂ ಪಾಲ್ಗೊಳ್ಳಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಒ ಸೇರಿ ಜಿಲ್ಲಾ ಮಟ್ಟದ ಅಧಿಕಾರಿಗಳು ಈ ಸಭೆಯಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ಸೂಚಿಸಲಾಗು ತ್ತದೆ. ಆಯಾ ಜಿಲ್ಲೆಗಳಿಗೆ ಬಿಡುಗಡೆಯಾಗಿರುವ ಅನು ದಾನ, ವೆಚ್ಚ, ಗುರಿ ಸಾಧನೆ, ಜನರ ಸಮಸ್ಯೆಗಳಿಗೆ ಸ್ಪಂದನೆ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಪರಾಮಶಿಸಲಿದ್ದಾರೆ.

    ಸಾರ್ವಜನಿಕ ಸಭೆ, ಸಮಾರಂಭ: ಆಯಾ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆ, ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಏರ್ಪಾಡು ಮಾಡಲಾಗುತ್ತಿದೆ.

    ಬಿಜೆಪಿ ಕಚೇರಿಗೂ ಭೇಟಿ: ಸರ್ಕಾರ ಮತ್ತು ಪಕ್ಷದ ನಡುವೆ ಸಮನ್ವಯತೆ ಇಲ್ಲ ಎಂಬ ಅಸಮಾಧಾನ ಪದೇಪದೆ ಕೇಳಿ ಬರುತ್ತಿರುವುದರಿಂದ ಮುಖ್ಯಮಂತ್ರಿ, ತಾವು ಭೇಟಿ ನೀಡುವ ಜಿಲ್ಲೆಯಲ್ಲಿ ಬಿಜೆಪಿ ಕಚೇರಿಗೆ ತೆರಳಿ ಪದಾಧಿಕಾರಿಗಳು, ಮುಖಂಡರ ಜತೆ ಸಮಾಲೋಚನೆ ನಡೆಸಲಿದ್ದಾರೆ. ಆ ಮೂಲಕ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ವಿಶ್ವಾಸ ತುಂಬವ ಕೆಲಸ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಜತೆಗೆ ಶಾಸಕರು, ಸಚಿವರು ಕೂಡ ಆಗಾಗ್ಗೆ ಪಕ್ಷದ ಕಚೇರಿಗೆ ಭೇಟಿ ನೀಡಿ ಪದಾಧಿಕಾರಿಗಳು, ಕಾರ್ಯಕರ್ತರ ಜತೆ ಸೌಹಾರ್ದ ಸಂಬಂಧ ಇಟ್ಟುಕೊಳ್ಳುವ ಸಂದೇಶ ರವಾನಿಸುವ ಚಿಂತನೆ ಈ ಭೇಟಿಯ ಹಿಂದಿದೆ.

    ಸಾರ್ವಜನಿಕ ಅಹವಾಲು ಸ್ವೀಕಾರ: ಕೆಡಿಪಿ ಸಭೆ ಬಳಿಕ ಸಿಎಂ ಸಾರ್ವಜನಿಕರ ಆಹವಾಲು ಕೂಡ ಆಲಿಸಲಿದ್ದಾರೆ. ಸ್ಥಳದಲ್ಲೇ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಮೂಲಕ ಅಹವಾಲಿಗೆ ಪರಿಹಾರ ದೊರಕಿಸಿಕೊಡುವ ಪ್ರಯತ್ನ ಮಾಡಲಿದ್ದಾರೆ.

    2023 ಚುನಾವಣೆ ಗುರಿ: ಸದ್ಯದಲ್ಲೇ ಎದುರಾಗಲಿರುವ ಒಂದು ಲೋಕಸಭೆ, ಮೂರು ವಿಧಾನಸಭೆ ಉಪಚುನಾವಣೆ, 2023ರ ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಮುಖ್ಯಮಂತ್ರಿಗಳು ತಮ್ಮ ಪ್ರವಾಸದ ರೂಪುರೇಷೆ ಸಿದ್ಧಪಡಿಸಿದ್ದಾರೆ. ಬಜೆಟ್ ಕಾರ್ಯಕ್ರಮಗಳನ್ನು ಕೂಡ ಈ ಸಂದರ್ಭದಲ್ಲಿ ಪ್ರಚುರಪಡಿಸುವ ಆಲೋಚನೆ ನಡೆದಿದೆ.

    ಉತ್ತರ ಕರ್ನಾಟಕದಿಂದ ಯಡಿಯೂರಪ್ಪ ಪ್ರಯಾಣ

    ಯಡಿಯೂರಪ್ಪ ಉತ್ತರ ಕರ್ನಾಟಕದಿಂದಲೇ ಪ್ರವಾಸ ಹಾಗೂ ಪ್ರಗತಿಪರಿಶೀಲನಾ ಸಭೆ ನಡೆಸಲು ತೀರ್ವನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಉತ್ತರ ಕರ್ನಾಟಕದ ಜನರ ವಿಶ್ವಾಸ ಗಳಿಸಿ ಮುಂದಿನ ಚುನಾವಣೆಗೆ ದಾರಿ ಸುಗಮ ಮಾಡಿಕೊಳ್ಳುವುದು ಕೂಡ ಈ ಪ್ರವಾಸದ ಒಂದು ಭಾಗವಾಗಿದೆ ಎನ್ನಲಾಗಿದೆ.

    ರಾಜಕೀಯ ಹೇಳಿಕೆಗಷ್ಟೇ ಸೀಮಿತ…

    ಕೋವಿಡ್ ಹಿನ್ನೆಲೆಯಲ್ಲಿ 1 ವರ್ಷ ಸಿಎಂ ನಿರೀಕ್ಷಿತ ಮಟ್ಟದಲ್ಲಿ ರಾಜ್ಯ ಪ್ರವಾಸ ಕೈಗೊಂಡಿರಲಿಲ್ಲ. ಇದರಿಂದಾಗಿ ಆಡಳಿತದಲ್ಲಿ ಜಡತ್ವ ಆವರಿಸಿತ್ತು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ತಮ್ಮ ಜಿಲ್ಲೆಗಳನ್ನು ಬಹುತೇಕ ಮರೆತುಬಿಟ್ಟಿದ್ದರು. ಕೆಲವೇ ಕೆಲವು ಸಚಿವರನ್ನು ಹೊರತುಪಡಿಸಿ ಅನೇಕರು ತಮ್ಮ ಕ್ಷೇತ್ರಗಳಿಗೆ ಸೀಮಿತರಾಗಿದ್ದರು. ಇದು ಸಿಎಂ ಬೇಸರಕ್ಕೆ ಕಾರಣವಾಗಿತ್ತು. ಸಚಿವರು ತಮ್ಮ ತಮ್ಮ ಉಸ್ತುವಾರಿ ಜಿಲ್ಲೆಗಳ ಅಭಿವೃದ್ಧಿಗಿಂತ ಪೊಲಿಟಿಕಲ್ ಸ್ಟೇಟ್​ವೆುಂಟ್​ಗೆ ಮಾತ್ರ ಸೀಮಿತರಾಗಿದ್ದಾರೆ. ಪರಸ್ಪರ ಕೆಸರೆರಚಾಟ, ಕಾಲೆಳೆತದಲ್ಲಿ ತೊಡಗಿದ್ದಾರೆ. ಆರೋಪ-ಪ್ರತ್ಯಾರೋಪದಲ್ಲೇ ಕಾಲ ಕಳೆಯುತ್ತಿದ್ದಾರೆ ಎಂಬ ಆರೋಪವೂ ಸರ್ಕಾರದ ಮೇಲಿದೆ. ಹಾಗಾಗಿ ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಸಿಎಂ ತಂತ್ರಗಾರಿಕೆ ರೂಪಿಸಿದ್ದಾರೆ.

    ನಾಳೆ ಸಚಿವರ ವಿಶೇಷ ಸಭೆ

    ಬೆಂಗಳೂರು: ನಿಷ್ಕ್ರಿಯರಾಗಿರುವ ಸಚಿವರಿಗೆ ಚಾಟಿ ಬೀಸುವ ಸಲುವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ಸಚಿವರ ವಿಶೇಷ ಸಭೆ ಕರೆದಿದ್ದಾರೆ. ಅಂದು ಬೆಳಗ್ಗೆ 10 ಗಂಟೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಭೆ ನಡೆಯಲಿದ್ದು, ವಿಧಾನಮಂಡಲ ಅಧಿವೇಶನದಲ್ಲಿ ಬಹುತೇಕ ಸಚಿವರ ಮೌನ ಸರ್ಕಾರವನ್ನು ಪದೇಪದೆ ಮುಜುಗರಕ್ಕೆ ಗುರಿಯಾಗಿಸಿದೆ. ಪ್ರತಿಪಕ್ಷಗಳು ತರಾಟೆಗೆ ತೆಗೆದುಕೊಳ್ಳುತ್ತಿದ್ದರೂ ಅನೇಕ ಸಚಿವರು ಇದಕ್ಕೂ ತಮಗೂ ಸಂಬಂಧವೇ ಇಲ್ಲವೆಂಬಂತೆ ಸುಮ್ಮನಿರುತ್ತಾರೆ. ಇಂತಹವರಿಗೆ ಬುದ್ದಿವಾದದ ಮೂಲಕ ಎಚ್ಚರಿಕೆ ನೀಡಲು ಯಡಿಯೂರಪ್ಪ ತೀರ್ವನಿಸಿದ್ದಾರೆ. ಬಹುತೇಕ ಸಚಿವರು ಸದನದಲ್ಲಿ ಹಾಜರಿರುವುದಿಲ್ಲ, ಇದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಆದ್ದರಿಂದ ಸಚಿವರೆಲ್ಲರೂ ಸದನ ನಡೆಯುವ ಸಂದರ್ಭದಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ಸೂಚನೆ ನೀಡಲಿದ್ದಾರೆ ಎಂದು ಮೂಲಗಳು ಹೇಳಿವೆ.

    ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿರುವ ಆರು ಸಚಿವರಿಗೆ ಕಾಂಗ್ರೆಸ್ ಬಹಿಷ್ಕಾರ ಹಾಕುತ್ತಿದೆ. ಇಂತಹ ಸಂದರ್ಭದಲ್ಲಿ ಆ ಸಚಿವರ ನೆರವಿಗೆ ಇನ್ನುಳಿದವರು ಹೋಗಬೇಕು. ಆದರೆ ಆರು ಜನರನ್ನು ಹೊರತುಪಡಿಸಿ ಉಳಿದವರ್ಯಾರು ಅವರ ನೆರವಿಗೆ ಹೋಗುತ್ತಿಲ್ಲ. ಈ ಬಗ್ಗೆಯೂ ಚರ್ಚೆ ನಡೆಯಲಿದೆ. ಮೀಸಲಾತಿ ವಿಚಾರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸದನದಲ್ಲಿ ಧರಣಿ ನಡೆಸುವ ಸಾಧ್ಯತೆಗಳಿವೆ. ಅದನ್ನು ತಡೆಯುವ ಬಗ್ಗೆಯೂ ಚರ್ಚೆಯಾಗಲಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಮಾಜಿ ಸಚಿವರೊಬ್ಬರ ಅಶ್ಲೀಲ ಸಿಡಿ ಪ್ರಕರಣದಲ್ಲಿ ನಡೆದಿರುವ ಬೆಳವಣಿಗೆಗಳ ಬಗ್ಗೆಯೂ ಚರ್ಚೆಯಾಗಲಿದ್ದು, ಸಂಪುಟದ ನಿಲುವು ಯಾವ ರೀತಿಯಲ್ಲಿರಬೇಕು ಎಂಬ ಬಗ್ಗೆ ಯಡಿಯೂರಪ್ಪ ಸಲಹೆ ಸೂಚನೆ ನೀಡಲಿದ್ದಾರೆ ಎಂದು ಹೇಳಲಾಗಿದೆ. ಒಂದು ಲೋಕಸಭಾ ಹಾಗೂ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಮುಂದಿನ ವಾರವೇ ಅಧಿಸೂಚನೆ ಪ್ರಕಟವಾಗಲಿದ್ದು, ಆ ಕ್ಷೇತ್ರಗಳನ್ನು ಗೆಲ್ಲುವ ಕಾರ್ಯತಂತ್ರಗಳ ಬಗ್ಗೆಯೂ ಚರ್ಚೆ ಮಾಡಲಾಗುತ್ತದೆ ಎಂದು ಮೂಲಗಳು ಹೇಳಿವೆ.

    ಜಿಲ್ಲಾ ಉಸ್ತುವಾರಿ ಬದಲು?

    ಬೆಂಗಳೂರು: ಹಲವು ಜಿಲ್ಲೆಯ ಉಸ್ತುವಾರಿಗಳನ್ನು ಬದಲಾಯಿಸಿ, ಖಾಲಿ ಇರುವ ಜಿಲ್ಲೆಗಳಿಗೆ ಹೊಸದಾಗಿ ನೇಮಕ ಮಾಡುವ ಪ್ರಕ್ರಿಯೆಗೆ ಸಿಎಂ ಯಡಿಯೂರಪ್ಪ ಶೀಘ್ರವೇ ಚಾಲನೆ ನೀಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕವಾದ ಮೇಲೆ ಅವರು ಜವಾಬ್ದಾರಿ ವಹಿಸಿಕೊಂಡಿರುವ ಜಿಲ್ಲೆಗೆ ಎಷ್ಟು ಬಾರಿ ಪ್ರವಾಸ ಮಾಡಿದ್ದಾರೆ? ಅಲ್ಲಿ ಎಷ್ಟು ಕೆಡಿಪಿ ಸಭೆಗಳನ್ನು ನಡೆಸಿದ್ದಾರೆ? ಅತಿವೃಷ್ಟಿ, ಅನಾವೃಷ್ಟಿ ಸಂದರ್ಭ ಜಿಲ್ಲಾಡಳಿತವನ್ನು ಯಾವ ರೀತಿ ಮುನ್ನಡೆಸಿ ಜನರಿಗೆ ಸ್ಪಂದಿಸಿದ್ದಾರೆ ಎಂಬಿತ್ಯಾದಿ ಮಾಹಿತಿಗಳನ್ನೊಳಗೊಂಡ ವರದಿ ನೀಡುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.

    ಸ್ವಾತಂತ್ರ್ಯ ದಿನಾಚರಣೆ, ಕನ್ನಡ ರಾಜ್ಯೋತ್ಸವ, ಗಣರಾಜ್ಯೋತ್ಸವ ಹೊರತುಪಡಿಸಿದರೆ, ಬೇರೆ ಸಂದರ್ಭದಲ್ಲಿ ಆಯಾ ಜಿಲ್ಲೆಗೆ ಭೇಟಿ ನೀಡಿರುವ ಸಚಿವರ ಸಂಖ್ಯೆ ವಿರಳವಾಗಿದೆ. ಅಪರೂಪಕ್ಕೊಮ್ಮೆ ಜಿಲ್ಲೆಗೆ ಭೇಟಿ ನೀಡಿರುವವರ ಸಂಖ್ಯೆಯೇ ಹೆಚ್ಚಾಗಿದೆ. ಈ ಬಗ್ಗೆ ಮಾಹಿತಿ ಲಭ್ಯವಾದ ಬಳಿಕ ನಿರಾಸಕ್ತಿ ಹೊಂದಿದ ಸಚಿವರಿಗೆ ಕೊಕ್ ಕೊಡುವ ಸಾಧ್ಯತೆಯೂ ಇದೆ. ಹಾವೇರಿ ಜಿಲ್ಲೆ ಮೇಲೆ ಕಣ್ಣಿಟ್ಟಿರುವ ಆರ್.ಶಂಕರ್, ಸಿಎಂ ಭೇಟಿ ಮಾಡಿ ತಮ್ಮ ಹಕ್ಕೊತ್ತಾಯ ಮಂಡಿಸಿದ್ದಾರೆ. ಸಚಿವರನ್ನಾಗಿ ಮಾಡುವುದರ ಜತೆಗೆ ಹಾವೇರಿ ಜಿಲ್ಲೆ ಉಸ್ತುವಾರಿ ನೀಡುವುದಾಗಿ ಹೇಳಿರುವುದನ್ನು ನೆನಪಿಸಿದ್ದು, ಈ ಬಗ್ಗೆ ಗೃಹ ಸಚಿವರಿಗೂ ಮಾತನಾಡಿದ್ದಾರೆ.

    ಕೊಡಗು ಜಿಲ್ಲೆ ಉಸ್ತುವಾರಿ ನೀಡಿದ್ದರ ಬಗ್ಗೆ ಅಸಮಾಧಾನಗೊಂಡಿರುವ ವಸತಿ ಸಚಿವ ವಿ.ಸೋಮಣ್ಣರಿಗೆ ಚಾಮರಾಜನಗರ ಉಸ್ತುವಾರಿ ನೀಡಬೇಕು ಎನ್ನುವ ಇರಾದೆ ಸಿಎಂ ಅವರಿಗಿದೆ. ಬೆಳಗಾವಿ ಜಿಲ್ಲೆ ಮೇಲೆ ಕಣ್ಣಿಟ್ಟಿರುವ ಉಮೇಶ್ ಕತ್ತಿಗೆ ನೀಡಿದ್ದ ಭರವಸೆ ಈ ಬಾರಿ ಈಡೇರುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ ಜಿಲ್ಲೆ ಉಸ್ತುವಾರಿ ಮೇಲೆ ಅಂಗಾರ ಕಣ್ಣಿಟ್ಟಿದ್ದಾರೆ. ಉಡುಪಿ ಉಸ್ತುವಾರಿಯನ್ನು ಕೋಟ ಶ್ರೀನಿವಾಸ ಪೂಜಾರಿಗೆ ನೀಡುವ ಸಾದ್ಯತೆ ಇದೆ. ಕೋಲಾರ, ಹಾಸನ ಜಿಲ್ಲೆ ಸೇರಿ ಹಲವು ಜಿಲ್ಲೆಗಳ ಉಸ್ತುವಾರಿ ಬದಲಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ಮೂಲಗಳು ತಿಳಿಸಿವೆ.

    ಜಾರಕಿಹೊಳಿ ಸಿಡಿ ಪ್ರಕರಣ: ‘ಸಂತ್ರಸ್ತ’ ಯುವತಿಯ ನೆರವಿಗೆ ಧಾವಿಸಿದ ರಾಜ್ಯ ಮಹಿಳಾ ಆಯೋಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts