More

    ಬಡ ಆಟೋ ಚಾಲಕನ ಮೇಲೆ ಸಿಎಂ ಬ್ರಹ್ಮಾಸ್ತ್ರ; ಹೇಡಿತನದ ರಾಜಕಾರಣವೆಂದು ಟೀಕೆ

    ಬೆಂಗಳೂರು: ಬಡ ಆಟೋಚಾಲಕನ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬ್ರಹ್ಮಾಸ ಪ್ರಯೋಗ ಮಾಡುತ್ತಿದ್ದಾರೆ, ಸಾವು ಬದುಕಿನ ನಡುವೆ ಹೋರಾಡುತ್ತಿರುವ 65 ವರ್ಷದ ಶ್ರೀಕಾಂತ್ ಪೂಜಾರಿ ವಿರುದ್ಧ ಅಪರಾಧ ಸಾಬೀತಾಗದ ಪ್ರಕರಣದಲ್ಲಿ 30 ವರ್ಷದ ಬಳಿಕ ಬಂಧಿಸುವ ಮೂಲಕ ಕಿರುಕುಳ ನೀಡಿ, ಭಯದ ವಾತಾವರಣ ಸೃಷ್ಟಿಸಿ ಹೇಡಿತನದ ರಾಜಕಾರಣ ಮಾಡಲಾಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ಹರಿಹಾಯ್ದಿದ್ದಾರೆ.
    ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ರಾಮ ಮಂದಿರ ಉದ್ಘಾಟನಾ ಕಾರ್ಯಕ್ಕೆ ಕಲ್ಲುಹಾಕಬೇಕು, ವಿಘ್ನ ಮಾಡಬೇಕೆಂದೇ ಕರ್ನಾಟಕ ಕಾಂಗ್ರೆಸ್ ಹೊರಟಿರುವುದು ದುರದೃಷ್ಟಕರ ಎಂದರು.
    ಯಾವ ಪ್ರಕರಣದಲ್ಲಿ ಶ್ರೀಕಾಂತ್ ಪೂಜಾರಿಯನ್ನು ಬಂಧಿಸಲಾಗಿದೆಯೋ ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸೂಕ್ತ ಸಾಕ್ಷಾೃಧಾರ ಕೊಟ್ಟಿಲ್ಲ ಎಂದು ಕೋರ್ಟ್ ತೀರ್ಪು ಬಂದಿದೆ. ಐದು ಮಂದಿಯ ಮೇಲಿನ ಪ್ರಕರಣದಲ್ಲಿ ಮೂವರು ನಿಧನರಾಗಿದ್ದಾರೆ, ಈತ ಬಡ ಆಟೋ ಚಾಲಕ, ಕೋರ್ಟ್‌ಗೆ ಅಪೀಲ್ ಹೋಗಿಲ್ಲ ಎಂದು ಕೇಸ್ ಉಳಿದಿದೆ. ಅಂತಹ ಪ್ರಕರಣವನ್ನು ಇಟ್ಟುಕೊಂಡು ಬಂಧಿಸಲಾಗಿದೆ. ಕೋರ್ಟ್ ಮೂರು ದಿನ ಇರುವುದಿಲ್ಲ ಎಂದು ನೋಡಿಕೊಂಡೇ ಬಂಧಿಸಲಾಗಿದೆ ಎಂದು ವಿವರಿಸಿದರು.
    ಶ್ರೀಕಾಂತ್ ಪೂಜಾರಿಯನ್ನು ಕ್ರಿಮಿನಲ್ ಎನ್ನುವ ಸಿದ್ದರಾಮಯ್ಯ ಅವರು, ಅವರದೇ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರನ್ನು ಏನೆನ್ನುತ್ತಾರೆ? ಅವರ ಮೇಲೂ ಪ್ರಕರಣ ಇದೆಯಲ್ಲ. ತಮ್ಮದೇ ಸಂಪುಟದ ಸಹೋದ್ಯೋಗಿ ನಾಗೇಂದ್ರ ಮೇಲೆ 23 ಪ್ರಕರಣ ಇದೆ, ಕ್ರಿಮಿನಲ್ ಕೇಸ್‌ಗಳಿವೆ ಎಂದ ಅಶೋಕ, ಕಾಂಗ್ರೆಸ್ ನಾಯಕರ ವಿರುದ್ಧ ಪ್ರಕರಣ ದಾಖಲಾದಾಗ ಎಲ್ಲರೂ ಪ್ರತಿಭಟಿಸಿದರು. ಕ್ರಿಮಿನಲ್ ಪ್ರಕರಣದಲ್ಲಿ ಬೇಲ್ ಪಡೆದು ಹೊರಬಂದಾಗ ಅದ್ದೂರಿ ಸ್ವಾಗತ ಕೋರಿದರು. ಆಟೋರಿಕ್ಷಾ ಓಡಿಸುವ ಬಡವರಿಗೆ ಒಂದು ಕಾನೂನು, ಶ್ರೀಮಂತರಿಗೆ ಒಂದು ಕಾನೂನು ಇದೆಯೇ? ಸಿದ್ದರಾಮಯ್ಯಶ್ರೀಮಂತರ ಪರ ವಕಾಲತ್ತು ವಹಿಸುತ್ತಿದ್ದಾರೆ ಎಂಟು ಟೀಕಿಸಿದರು.
    ಪೊಲೀಸರು ಹಾಕಿರುವ ಇತರ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಕಾಂತ್ ಪೂಜಾರಿ ಠಾಣೆಗೆ ಹೋಗಿ ಸಹಿ ಹಾಕಿ ಬಂದಿದ್ದರೂ, ಈ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದಾರೆಂದು ಬಂಧಿಸಿರುವುದರ ಹಿಂದೆ ಕಾಂಗ್ರೆಸ್‌ನ ಕಾಣದ ಕೈ ಕೆಲಸ ಮಾಡಿರುವುದು ಸ್ಪಷ್ಟ ಎಂದರು.
    ರಾಜ್ಯದಲ್ಲಿ ದೀರ್ಘಾವಧಿಯಿಂದ ಬಾಕಿ ಇರುವ ಸುಮಾರು 50-60 ಸಾವಿರ ಪ್ರಕರಣವಿದ್ದು, ಬೆಂಗಳೂರಿನಲ್ಲೇ ಸುಮಾರು 10 ಸಾವಿರ ಪ್ರಕರಣಗಳಿವೆ. ಎಲ್ಲರನ್ನೂ ಬಂಧಿಸಿದರೆ ಜೈಲಿನಲ್ಲಿರಿಸಲು ಜಾಗ ಇರುವುದಿಲ್ಲ. ಕಾಂಗ್ರೆಸ್‌ನವರು ಬೇಕಾದವರಿಗೆ ಕಾಫಿ ಕೊಟ್ಟು ಕಳಿಸುತ್ತಾರೆ. 1700 ಪಿಎ್ಐ ಕಾರ್ಯಕರ್ತರ ಮೇಲಿನ ದೊಂಬಿ, ಅಶಾಂತಿ ಸೃಷ್ಟಿಸುವ ಕೇಸ್ ಇದ್ದರೂ ಅದನ್ನು ಕೈಬಿಡುತ್ತಾರೆ. ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts