More

    ನಿತ್ಯ 10 ತಾಸು ಕೆಲಸ, 3 ದಿನ ಹಳ್ಳಿ ಪ್ರವಾಸ: ಮುಖ್ಯಮಂತ್ರಿ ಬೊಮ್ಮಾಯಿ ಖಡಕ್ ಸೂಚನೆ; ಆಡಳಿತದಲ್ಲಿ ಚುರುಕು ತರಲು ಅಧಿಕಾರಿಗಳಿಗೆ ಚಾಟಿ

    ಬೆಂಗಳೂರು: ಆಡಳಿತದಲ್ಲಿ ಚುರುಕುತನ ಮೂಡಿಸಲು ಸಿಎಂ ಬಸವರಾಜ ಬೊಮ್ಮಾಯಿ ಜಿಲ್ಲಾ ಮಟ್ಟದ ಅಧಿಕಾರಿ ವೃಂದ ಮೈಕೊಡವಿ ಎದ್ದುನಿಲ್ಲುವಂತೆ ಬಿಸಿಮುಟ್ಟಿಸಿ ಗುರಿ ನಿಗದಿ ಮಾಡಿದ್ದಾರೆ. ಹಾಗೆಯೇ ಮುಂದಿನ ದಿನಗಳಲ್ಲಿ ಜಿಲ್ಲಾಪಂಚಾಯಿತಿ ಹಾಗೂ ಸಿಇಓಗಳ ಕಾರ್ಯನಿರ್ವಹಣೆಗೆ ಜಿಲ್ಲಾವಾರು ಶ್ರೇಯಾಂಕ ನೀಡುವುದಾಗಿ ಘೋಷಿಸಿದ್ದಾರೆ.

    ನಿತ್ಯ ಹತ್ತು ತಾಸು ಕೆಲಸ ಮಾಡಿ, ವಾರದಲ್ಲಿ ಮೂರು ದಿನ ಪ್ರವಾಸ ಹೊರಡಿ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿ ಕಾರಿಗಳಿಗೆ ವಿಶೇಷ ಟಾಸ್ಕ್ ನೀಡಿದ್ದು, ಪ್ರತಿ ತಿಂಗಳೂ ಪ್ರಗತಿಪರಿಶೀಲನಾ ವರದಿ ತರಿಸಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ. ಹಾಗೆಯೇ, ಉತ್ತಮ ಕಾರ್ಯಕ್ಕೆ ಶಬ್ಬಾಸ್ ಗಿರಿಯನ್ನೂ ನೀಡಿದ್ದಾರೆ.

    ಜಿಲ್ಲಾ ಪಂಚಾಯಿತಿ ಸಿಇಒಗಳ ಸಭೆ ನಡೆಸಿ ವಿವಿಧ ವಿಷಯಗಳ ಬಗ್ಗೆ ರ್ಚಚಿಸಿದರು. ವಾರದಲ್ಲಿ ಮೂರು ದಿನ ಹಳ್ಳಿಗಳಿಗೆ ಭೇಟಿ ನೀಡಲೇಬೇಕು. ದಿಢೀರ್ ಭೇಟಿ ನೀಡಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲಿಸಬೇಕು, ತಳಹಂತದ ಅಧಿಕಾರಿ, ಸಿಬ್ಬಂದಿ ಮೇಲೆ ಹತೋಟಿ ಹೊಂದಿರಬೇಕು ಎಂದರು. ಜಲಜೀವನ್ ಮಿಷನ್ ಯೋಜನೆ ಎಚ್ಚರಿಕೆ ನೀಡಿದ ಅವರು ಈ ಯೋಜನೆ ಯಶಸ್ಸು, ವೈಫಲ್ಯ ಎರಡಕ್ಕೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೇ ಹೊಣೆ. ಯಶಸ್ವಿಯಾದವರಿಗೆ ಮನ್ನಣೆ ನೀಡಲಾಗುವುದು, ವಿಫಲರಾದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಸಿಇಓಗಳು ಜಿಲ್ಲಾ ವ್ಯಾಪ್ತಿಯಲ್ಲಿ ಕನಿಷ್ಠ ಶೇ.1 ಕೃಷಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಿದರೆ, ಗ್ರಾಮೀಣ ಜನರ ಜೀವನದಲ್ಲಿ ಬದಲಾವಣೆ ತಂದಂತಾಗುತ್ತದೆ. ಜನರಿಗೆ ಇದರಿಂದ ವ್ಯವಸ್ಥೆಯ ಮೇಲೆ ವಿಶ್ವಾಸ ಮೂಡಿಸಲು ಸಾಧ್ಯ ಎಂದು ತಿಳಿಸಿದರು.

    ಗ್ರಾಮ ಒನ್ ಯೋಜನೆಯಡಿ 30 ನಾಗರಿಕ ಸೇವೆಗಳನ್ನು ಪಂಚಾಯಿತಿ ಮಟ್ಟದಲ್ಲಿ ಒದಗಿಸಲಾಗುವುದು. ಅಂತೆಯೇ ಜನಸ್ಪಂದನದಡಿ ದಾಖಲಾದ ದೂರುಗಳ ನಿವಾರಣೆಗೆ, ಸಮಸ್ಯೆ ಪರಿಹಾರಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

    ಹತ್ತು ಸಾವಿರ ಶಿಕ್ಷಕರ ನೇಮಕಾತಿಗೆ ಆರ್ಥಿಕ ಇಲಾಖೆಯಿಂದ ಅನುಮತಿ ನೀಡಲಾಗಿದೆ. ಜಿಲ್ಲೆಗಳಲ್ಲಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು. ಕಲ್ಯಾಣ ಕರ್ನಾಟಕದ ಭಾಗಕ್ಕೆ 16000 ಹುದ್ದೆಗಳನ್ನು ಮಂಜೂರು ಮಾಡಿದ್ದು, ಇದರಲ್ಲಿ 5000 ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ತ್ವರಿತವಾಗಿ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಸೂಚಿಸಿದರು. ಎಂಜಿನಿಯರಿಂಗ್ ವಿಭಾಗದ ಮೇಲೆ ಹತೋಟಿ ಹೊಂದಿರಬೇಕು. ಎಂಜಿನಿಯರುಗಳು ಸಮರ್ಪಕವಾಗಿ ಕೆಲಸ ನಿರ್ವಹಿಸದ ಕುರಿತು ನೀವು ವರದಿ ಸಲ್ಲಿಸಿದರೆ ಮುಲಾಜಿಲ್ಲದೆ ಕ್ರಮ ವಹಿಸಲಾಗುವುದು ಎಂದು ಸಿಇಒಗಳಿಗೆ ತಿಳಿಸಿದರು.

    ಸಿಇಓಗಳು ಜನಸಂಪರ್ಕ ಹೊಂದಬೇಕು. ಮಾನವೀಯತೆಯಿಂದ ಸಮಸ್ಯೆಗಳಿಗೆ ಪರಿಹಾರ ನೀಡಬೇಕು. ರಾಜ್ಯ ತಲಾವಾರು ಆದಾಯದಲ್ಲಿ 4ನೇ ಸ್ಥಾನದಲ್ಲಿದೆ. ತಲಾವಾರು ಆದಾಯಕ್ಕೆ ಶೇ.30 ಜನ ಮಾತ್ರ ಕೊಡುಗೆ ನೀಡುತ್ತಿದ್ದಾರೆ. ಉಳಿದವರು ದಿನನಿತ್ಯದ ಬದುಕಿಗೆ ದುಡಿಯುವುದಾಗಿದೆ. ಈ ವರ್ಗದವರಿಗೆ ಆರ್ಥಿಕ ನೆರವು, ತರಬೇತಿ ನೀಡಿದರೆ ಅವರ ಜೀವನ ಮಟ್ಟ ಸುಧಾರಿಸುತ್ತದೆ.

    | ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

    ಅಸಮಾಧಾನ: ರಾಜ್ಯದಲ್ಲಿ ಬಡ ರೋಗಿಗಳಿಗೆ ನಗದು ರಹಿತ ಚಿಕಿತ್ಸೆ ಸೌಲಭ್ಯ ನೀಡಲು ಅನುವಾಗುವಂತೆ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಕಾರ್ಡಗಳ ವಿತರಣೆಯಲ್ಲಿ ಪ್ರಗತಿ ಕಡಿಮೆ ಇದ್ದು, ಈ ಕಾರ್ಡಗಳನ್ನು ವಿತರಿಸಲು ಅಭಿಯಾನ ಹಮ್ಮಿಕೊಳ್ಳುವಂತೆ ಸಿಎಂ ಸೂಚಿಸಿದರು. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಆಯುಷ್ಮಾನ್ ಪ್ರಗತಿಯಲ್ಲಿ ಕುಂಠಿತವಾಗಿರುವುದಕ್ಕೆ ಸಿಎಂ ಸಿಡಿಮಿಡಿಗೊಂಡರೆಂದು ಗೊತ್ತಾಗಿದೆ.

    ಯು ಶುಡ್ ಪ್ಲೇ ಟು ವಿನ್…: ಸಿಎಂ ಸಭೆಯಲ್ಲಿ ಅಧಿಕಾರಿಗಳನ್ನು ಪ್ರೇರೇಪಿಸುವ ಮತ್ತು ತೀಕ್ಷ್ಣ ಸ್ವರೂಪದಲ್ಲಿ ಎಚ್ಚರಿಸುವ ಮಾತನ್ನಾಗಿದ್ದಾರೆ. ‘ಯು ಶುಡ್ ಪ್ಲೇ ಟು ವಿನ್’ (ನೀವು ಗೆಲ್ಲುವುದಕ್ಕಾಗಿ ಆಡಬೇಕು) ಎಂಬಂತೆ ಕರ್ತವ್ಯ ನಿರ್ವಹಿಸಬೇಕು ಎಂದು ಹುರಿದುಂಬಿಸಿದರೆ, ಅನಿಶ್ಚಿತತೆ ಪ್ಲೇಗ್ ಇದ್ದಂತೆ. ವಿಳಂಬ ಧೋರಣೆ ಅತ್ಯಂತ ದುಬಾರಿಯಾಗಲಿದೆ. ಅಧಿಕಾರಿಗಳ ವಿಳಂಬ ಧೋರಣೆ ಜನರನ್ನು ಸಂಕಷ್ಟಕ್ಕೀಡು ಮಾಡುತ್ತದೆ ಎಂದು ಎಚ್ಚರಿಸಿದ್ದಾರೆ. ‘ಪರಿಸ್ಥಿತಿ ಸುಧಾರಿಸುವ ಪ್ರಯತ್ನದಲ್ಲಿ ನಾನೂ ಹೊರತಲ್ಲ, ನೀವೂ ಹೊರತಲ್ಲ. ಎಲ್ಲರೂ ಒಟ್ಟಿಗೆ ಹೋಗಬೇಕು’, ‘ನಾನು ಮತ್ತು ಸಚಿವ ಸಂಪುಟದ ಸದಸ್ಯರು ನಿಮ್ಮ ತಂಡದ ಸದಸ್ಯರು, ಎಲ್ಲರ ಜತೆಯಾಗಿ ಹೋಗೋಣ, ಸಮಸ್ಯೆಗಳಿಗೆ ಪರಿಹಾರ ಹುಡುಕೋಣ’ ಎಂದು ಕರೆ ನೀಡಿದರು. ಜನರ ಸುತ್ತ ಅಭಿವೃದ್ಧಿಯಾಗಬೇಕೇ ಹೊರತು ಅಭಿವೃದ್ಧಿ ಸುತ್ತ ಜನರು ಓಡಾಡಬಾರದು. ವ್ಯವಸ್ಥೆ ಪರಿಣಾಮಕಾರಿಯಾಗಿ ಕೆಲಸಮಾಡಬೇಕು. ಜನರು ಹೆಚ್ಚಿನ ಸಂಖ್ಯೆಯಲ್ಲಿ ನಿಮ್ಮ ಹತ್ತಿರ ಬರುತ್ತಾರೆ ಎಂದರೆ ತಳಹಂತದಲ್ಲಿ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಅರ್ಥ ಎಂದು ಝಾಡಿಸಿದ್ದಾರೆ.

    ಹತ್ತಂಶದ ಗುರಿ ನಿಗದಿ

    1. ಗ್ರಾಮೀಣಾಭಿವೃದ್ಧಿ ಸಚಿವರು ಹಾಗೂ ಅಪರ ಮುಖ್ಯ ಕಾರ್ಯದರ್ಶಿ ರಾಜ್ಯಾದ್ಯಂತ ಪ್ರವಾಸ ಮಾಡಿ ಜಲಜೀವನ್ ಯೋಜನೆಯ ಪ್ರಗತಿ, ಕಾಮಗಾರಿ ಗುಣಮಟ್ಟ ಪರಿಶೀಲನೆ ಮಾಡಲು ಸೂಚನೆ.
    2. ಯಾದಗಿರಿ, ಕಲ್ಬುರ್ಗಿ, ರಾಯಚೂರು ಜಿಲ್ಲೆಗಳಲ್ಲಿ ಪ್ರಾಶಸ್ತ್ಯ ಮೇಲೆ ಜಲಜೀವನ್ ಮಿಷನ್ ಕಾಮಗಾರಿ ಪೂರ್ಣಗೊಳ್ಳಬೇಕು. ತುಮಕೂರು ಜಿಲ್ಲೆಯಲ್ಲಿ ಸಮಗ್ರ ಯೋಜನೆ ರೂಪಿಸುವುದು ಮತ್ತು ಚಾಮರಾಜನಗರ ಜಿಲ್ಲೆಯ ಗಡಿ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲು ವಿಶೇಷ ಯೋಜನೆ ರೂಪಿಸಲು ಸೂಚನೆ.
    3. ಅತಿವೃಷ್ಠಿ, ಪ್ರವಾಹದಿಂದಾಗಿ ಹಾನಿಗೊಳಗಾದ ಶಾಲಾ ಕೊಠಡಿಗಳ ದುರಸ್ತಿ ಕಾರ್ಯ ಜನವರಿ ಅಂತ್ಯದೊಳಗೆ ಪೂರ್ಣಗೊಳ್ಳಬೇಕು. ನಿರ್ಮಾಣ ಅಂದಾಜು ಸಿದ್ಧಪಡಿಸಿ ಪ್ರಸ್ತಾವನೆಯನ್ನು ಶೀಘ್ರವಾಗಿ ಸಲ್ಲಿಸಬೇಕು.
    4. ಅಧಿಕಾರ ವಿಕೇಂದ್ರೀಕರಣದ ಉದ್ದೇಶದಿಂದ ಎಕ್ಸಿಕ್ಯುಟಿವ್ ಇಂಜಿನಿಯರ್​ಗೆ 1 ಕೋಟಿ ಮೊತ್ತದ ಕಾಮಗಾರಿ, ಅಧೀಕ್ಷಕ ಇಂಜಿನಿಯರ್​ಗೆ 2.5 ಕೋಟಿ ಮೊತ್ತದ ಕಾಮಗಾರಿಗಳನ್ನು ಪರಿಶೀಲನೆ ಮಾಡುವ ಅಧಿಕಾರ ನೀಡಲು ಅವಕಾಶ.
    5. ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಆಡಿಟ್ ಹಾಗೂ ಜಲಜೀವನ್ ಮಿಷನ್ ಯೋಜನೆಯಡಿ ನೀರಿನ ಆಡಿಟ್ (ಹಂಚಿಕೆ ಮತ್ತು ಬಳಕೆಗೆ ಸಂಬಂಧಿಸಿದಂತೆ)ಗೆ ಕ್ರಮ.
    6. ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳು ಜಂಟಿಯಾಗಿ ವಿವಿಧ ಆಯಾಮಗಳಿಂದ ಅಪೌಷ್ಟಿಕ ಮಕ್ಕಳ ಸಮೀಕ್ಷೆಯನ್ನು ನಡೆಸಬೇಕು. ಹಾಗೂ ಅಪೌಷ್ಟಿಕತೆ ನಿವಾರಣೆಗೆ ಸಮಗ್ರ ಯೋಜನೆ ರೂಪಿಸುವುದು.
    7. ಅಪೌಷ್ಟಿಕತೆ ನಿವಾರಣೆಗೆ ಕಾರ್ಯಕ್ರಮಗಳಿಗೆ ಇರುವ ಮಾನದಂಡಗಳನ್ನು ಪುನಾರಚನೆಯಾಗಬೇಕು. ಪೌಷ್ಟಿಕತೆ ಹೆಚ್ಚಿಸಲು ವಿಶೇಷ ಕಾರ್ಯಕ್ರಮ.
    8. ಅಮೃತ ವಸತಿ ಯೋಜನೆಯಡಿ 750 ಗ್ರಾಮಪಂಚಾಯ್ತಿಗಳಲ್ಲಿ ಫಲಾನುಭವಿಗಳ ಆಯ್ಕೆಯನ್ನು ಶೀಘ್ರವಾಗಿ ಪೂರ್ಣಗೊಳ್ಳಬೇಕು. ಅತ್ಯಂತ ಕಡಿಮೆ ಪ್ರಗತಿ ಇರುವ ಜಿಲ್ಲೆಗಳಲ್ಲಿ ಮಾರ್ಚ್ ಅಂತ್ಯದೊಳಗೆ ಶೇ.75 ಹಾಗೂ ಜೂನ್ ಒಳಗೆ ಶೇ.100 ಪ್ರಗತಿ ಆಗಬೇಕು.
    9. ಈ ಸರ್ಕಾರದ ಅವಧಿಯಲ್ಲಿ ಘೊಷಣೆಯಾಗಿರುವ 4 ಲಕ್ಷ ಮನೆಗಳು ನಿಗದಿತ ಅವಧಿಯೊಳಗೆ ಪೂರ್ಣಗೊಳ್ಳಲೇಬೇಕು. ಈ ಸರ್ಕಾರದ ಅವಧಿಯಲ್ಲಿಯೇ ಫಲಾನುಭವಿಗಳಿಗೆ ಮನೆಗಳು ದೊರಕುವಂತಾಗಬೇಕು.
    10. ವಿದ್ಯಾರ್ಥಿ ವೇತನ ತಲುಪಿಸಲು ಆಧಾರ್ ಕಾರ್ಡ್ ಜೋಡಣೆ ಕಾರ್ಯ ತ್ವರಿತವಾಗಿ ಪೂರ್ಣಗೊಳಿಸಬೇಕು. ವಿದ್ಯಾರ್ಥಿ ವೇತನ ಡಿಬಿಟಿ ಮೂಲಕ ತಲುಪಿಸಲು ಆಧಾರ್ ಕಾರ್ಡ್ ಬ್ಯಾಂಕುಗಳಿಗೆ ಲಿಂಕ್ ಮಾಡಿಸುವ ಕಾರ್ಯವೂ ತ್ವರಿತವಾಗಿ ಆಗಬೇಕು.

    ಇದು ವಾಟ್ಸ್​ಆ್ಯಪ್​ ಅಡ್ಮಿನ್ಸ್​ ಓದಲೇಬೇಕಾದ ವಿಚಾರ; ಗ್ರೂಪ್​ ಸದಸ್ಯರ ಪೋಸ್ಟ್​ಗಳಿಗೆ ಸಂಬಂಧಿಸಿದಂತೆ ಮತ್ತದೇ ಆದೇಶ ಪುನರುಚ್ಚಾರ..

    ಕನ್ನಡದ ಪರವಾಗಿ ಮತ್ತೊಮ್ಮೆ ದನಿ ಎತ್ತಿದ ರಾಜ್ಯಸಭಾ ಸದಸ್ಯ; ವಿಜಯವಾಣಿ ವರದಿ ಪ್ರಸ್ತಾಪಿಸಿ ಸಿಎಂ ಗಮನ ಸೆಳೆದ ಚಂದ್ರಶೇಖರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts