More

    ಸಿಇಟಿ ಸಕ್ಸಸ್​ಗೆ ಕೆಇಎ ಸೂತ್ರ; ವಿಜಯವಾಣಿ ಕ್ಲಬ್​ನಲ್ಲಿ ಕೆಇಎ ಇಡಿ ಎಸ್​.ರಮ್ಯಾ ಭರವಸೆ

    ‘ವಿಜಯವಾಣಿ’ ‘ದಿಗ್ವಿಜಯ 247 ನ್ಯೂಸ್’ ಸೋಮವಾರ ಆಯೋಜಿಸಿದ್ದ ಕ್ಲಬ್​ಹೌಸ್ ಸಂವಾದದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಭಾಗವಹಿಸಿ, ವಿದ್ಯಾರ್ಥಿಗಳು ಹಾಗೂ ಪಾಲಕರು ಕೇಳಿದ ಎಲ್ಲ ಪ್ರಶ್ನೆಗಳಿಗೂ ಸ್ಪಷ್ಟ, ಸರಳ ಹಾಗೂ ಚುಟುಕಾಗಿ ಉತ್ತರ ನೀಡುವ ಮೂಲಕ ಸಿಇಟಿ ಕುರಿತು ಇದ್ದ ಗೊಂದಲಗಳನ್ನು ಪರಿಹರಿಸಿದರು.

    ಸಿಇಟಿ ಸಕ್ಸಸ್​ಗೆ ಕೆಇಎ ಸೂತ್ರ; ವಿಜಯವಾಣಿ ಕ್ಲಬ್​ನಲ್ಲಿ ಕೆಇಎ ಇಡಿ ಎಸ್​.ರಮ್ಯಾ ಭರವಸೆವಿದ್ಯಾರ್ಥಿಗಳ ಓದಿನ ಹಂತದಲ್ಲಿ ಅತ್ಯಂತ ನಿರ್ಣಾಯಕ ತಿರುವೆಂದೇ ಪರಿಗಣಿಸಲಾಗುವ ಸಿಇಟಿ(ಸಾಮಾನ್ಯ ಪ್ರವೇಶ ಪರೀಕ್ಷೆ) ಬರೆಯುವುದರಿಂದ ರಾಜ್ಯದ ಯಾವೊಬ್ಬ ವಿದ್ಯಾರ್ಥಿಯೂ ವಂಚಿತರಾಗಬಾರದು ಎಂಬ ಕಾರಣಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೋವಿಡ್ ಇಲ್ಲದವರು, ಸೋಂಕಿನ ಲಕ್ಷಣ ಹೊಂದಿರುವವರು, ಸೋಂಕಿರುವವರಿಗೂ ಪ್ರತ್ಯೇಕ ವ್ಯವಸ್ಥೆಯಲ್ಲಿ ಪರೀಕ್ಷೆ ನಡೆಸಲಾಗುತ್ತಿದ್ದು, ವಿದ್ಯಾರ್ಥಿಗಳು ಮತ್ತು ಪಾಲಕರು ಸಹಕರಿಸಿದಲ್ಲಿ ಆ.28-30 ರವರೆಗೆ ಅತ್ಯಂತ ಯಶಸ್ವಿಯಾಗಿ ಸಿಇಟಿ ನಡೆಯುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ತಿಳಿಸಿದ್ದಾರೆ.

    ಸೋಂಕು ಹರಡದಂತೆ ಪರೀಕ್ಷೆ ನಡೆಸಲು ಕೈಗೊಂಡಿರುವ ಸಿದ್ಧತೆಗಳೇನು?

    – ರಾಜ್ಯಾದ್ಯಂತ ಈ ವರ್ಷ ಎರಡು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿದ್ದಾರೆ. ಪರೀಕ್ಷೆ ನಡೆಸಲು ಸರ್ಕಾರ ನೀಡಿರುವ ಎಲ್ಲ ಪ್ರಮಾಣಿತ ಕಾರ್ಯಾಚರಣೆ ವಿಧಾನ(ಎಸ್​ಒಪಿ) ಪಾಲನೆ ಮಾಡುತ್ತೇವೆ. ಒಂದು ಪರೀಕ್ಷಾ ಕೊಠಡಿಯಲ್ಲಿ ಗರಿಷ್ಠ 24 ವಿದ್ಯಾರ್ಥಿಗಳು ಮಾತ್ರ ಇರಲಿದ್ದಾರೆ. ಕರೊನಾ ಸೋಂಕಿನ ಲಕ್ಷಣಗಳಿಲ್ಲದ ವಿದ್ಯಾರ್ಥಿಗಳು ಒಂದೆಡೆ ಪರೀಕ್ಷೆ ಬರೆಯಲಿದ್ದಾರೆ. ಕೆಮ್ಮು, ನೆಗಡಿ, ಉಸಿರಾಟದ ಸಮಸ್ಯೆ ಮುಂತಾದ, ಸೋಂಕಿನ ಗುಣಲಕ್ಷಣಗಳಿದ್ದವರಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಸಲಾಗುತ್ತದೆ. ತಾಪಮಾನ ಪರೀಕ್ಷೆ ನಡೆಸಲಾಗುತ್ತದೆ, ವಿದ್ಯಾರ್ಥಿಗಳ ನಡುವಿನ ಅಂತರ 3 ಅಡಿಗಿಂತ ಹೆಚ್ಚಿರುತ್ತದೆ. ಪರೀಕ್ಷಾ ಮೇಲ್ವಿಚಾರಕರು ಕಡ್ಡಾಯವಾಗಿ ಮಾಸ್ಕ್, ಗ್ಲೌಸ್ ಧರಿಸಿಯೇ ಉತ್ತರ ಪತ್ರಿಕೆಗಳನ್ನು ನೀಡುತ್ತಾರೆ.

    ಆಪ್ಷನ್ ಎಂಟ್ರಿ ಪಟ್ಟಿ ಬದಲಿಸಿಕೊಳ್ಳಬಹುದೇ?

    – ವಿದ್ಯಾರ್ಥಿಗಳು ಪಡೆದ ರ್ಯಾಂಕ್ ಹಾಗೂ ಅವರು ಆಯ್ಕೆ ಮಾಡಿಕೊಂಡಿರುವ ಆದ್ಯತೆ ಆಧಾರದ ಕಾಲೇಜುಗಳಲ್ಲಿ ಸೀಟುಗಳು ಸಿಗುತ್ತವೆ. ಇಂತಿಷ್ಟೆ ಕಾಲೇಜುಗಳನ್ನು ಆಯ್ಕೆ ಮಾಡಬೇಕೆಂಬ ನಿಬಂಧನೆ ಇಲ್ಲ. ಸಿಇಟಿ ಮೂಲಕ ಸೀಟುಗಳನ್ನು ಭರ್ತಿ ಮಾಡುವ ಎಲ್ಲ ಕಾಲೇಜುಗಳನ್ನೂ ಅವರ ಆದ್ಯತೆಯ ಆಧಾರದಲ್ಲಿ ಆಪ್ಷನ್ ಎಂಟ್ರಿ ಮಾಡಬೇಕು. ಆಪ್ಷನ್ ಎಂಟ್ರಿ ಮಾಡುವಾಗ ತಪು್ಪಗಳಾಗಿದ್ದರೆ ಅಣಕು ಕೌನ್ಸೆಲಿಂಗ್​ನಲ್ಲಿ ತಿದ್ದಿಕೊಳ್ಳಲು ಅವಕಾಶವಿರಲಿದೆ. ಅಣಕು ಕೌನ್ಸೆಲಿಂಗ್​ನಲ್ಲಿ ಮಾಡಿಕೊಂಡ ಕಾಲೇಜು ಹಾಗೂ ಕೋರ್ಸ್ ಆಯ್ಕೆಯೇ ಅಂತಿಮವಾಗಿದ್ದು, ರ್ಯಾಂಕ್ ಆಧಾರದಲ್ಲಿ ಕಾಲೇಜು ಸಿಗುತ್ತದೆ. ಆಪ್ಷನ್ ಎಂಟ್ರಿ ಮಾಡುವ ಸಮಯದಲ್ಲಿ ಎಚ್ಚರಿಕೆ ವಹಿಸಬೇಕು.

    ನೀಟ್ ರಿಪೀಟರ್ಸ್ ಏನು ಮಾಡುವುದು?

    – ನೀಟ್ ಎಂಬುದು ವೈದ್ಯಕೀಯ ಶಿಕ್ಷಣಕ್ಕೆ ಹಾಗೂ ಸಿಇಟಿ ಎಂಬುದು ಇಂಜಿನಿಯರಿಂಗ್ ಶಿಕ್ಷಣಕ್ಕೆ ನಡೆಯುವ ಪರೀಕ್ಷೆ. ವಿದ್ಯಾರ್ಥಿಯು ಎರಡರಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ ಸ್ಥಿತಿ. ಆದರೂ ಸಿಇಟಿ ಬರೆಯಬಹುದು. ಸಿಇಟಿಯಲ್ಲಿ ಸೀಟು ಸಿಕ್ಕಿ ನಂತರ ನೀಟ್​ನಲ್ಲೂ ಸಿಕ್ಕರೆ ಅವರು ಆಯ್ಕೆ ಮಾಡಿಕೊಂಡು ಯಾವುದನ್ನಾದರೂ ತ್ಯಜಿಸಬಹುದು. ಸಿಇಟಿ ಮೂಲಕ ಸಿಕ್ಕ ಸೀಟನ್ನು ತ್ಯಜಿಸಿದರೆ ಆ ಸೀಟನ್ನು ಎರಡನೇ ರೌಂಡ್​ನಲ್ಲಿ ಬೇರೊಬ್ಬ ವಿದ್ಯಾರ್ಥಿಗೆ ನೀಡಲಾಗುತ್ತದೆ.

    ಎಷ್ಟು ದಿನದಲ್ಲಿ ಫಲಿತಾಂಶ ಬರುತ್ತದೆ?

    – ಪರೀಕ್ಷೆ ಮುಕ್ತಾಯವಾದ 15-20 ದಿನದಲ್ಲಿ ಫಲಿತಾಂಶ ಹೊರಬೀಳಲಿದೆ.. ಕೆಇಎ ವೆಬ್​ಸೈಟ್​ನಲ್ಲಿ ಬಂದ ಮಾಹಿತಿ ಮಾತ್ರವೇ ಅಧಿಕೃತ, ಬೇರೆ ವೆಬ್​ಸೈಟ್​ಗಳಲ್ಲ. ಸೆಪ್ಟೆಂಬರ್ ಅಂತ್ಯ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ಕೌನ್ಸೆಲಿಂಗ್ ನಡೆಯುತ್ತದೆ.

    ಸಿಇಟಿ ಸಕ್ಸಸ್​ಗೆ ಕೆಇಎ ಸೂತ್ರ; ವಿಜಯವಾಣಿ ಕ್ಲಬ್​ನಲ್ಲಿ ಕೆಇಎ ಇಡಿ ಎಸ್​.ರಮ್ಯಾ ಭರವಸೆ

    ಪರೀಕ್ಷೆಗೆ ಪೂರ್ಣ ಪಠ್ಯಕ್ರಮವೇ ಅಥವಾ ತುಂಡರಿಸಿದ ಪಠ್ಯಕ್ರಮವೇ?

    – ಪದವಿ ಪೂರ್ವ ಶಿಕ್ಷಣ ಇಲಾಖೆ ಕಡಿತ ಮಾಡಿ ನೀಡಿರುವ ಪಠ್ಯಕ್ರಮವನ್ನೇ ನಾವು ಅನುಸರಿಸುತ್ತಿದ್ದೇವೆ. ಇದರ ಸಂಪೂರ್ಣ ಪ್ರತಿಯನ್ನು ವೆಬ್​ಸೈಟ್​ನಲ್ಲಿ ಅಪ್​ಲೋಡ್ ಮಾಡಲಾಗಿದೆ. ಆ ಪ್ರಕಾರವಾಗಿಯೇ ಪ್ರಶ್ನೆಗಳು ಕೇಳಲಾಗುತ್ತದೆ.

    ಹಾಲ್ ಟಿಕೆಟ್​ಗೆ ಪ್ರಾಂಶುಪಾಲರ ಸಹಿ ಬೇಕೆ?

    – ಬೇಡ. ಪರೀಕ್ಷೆ ಬರೆಯಲು ಆಗಮಿಸಿದಾಗ ಪ್ರವೇಶ ಪತ್ರಿಕೆ ಮೇಲೆ ಪರೀಕ್ಷಾ ಮೇಲ್ವಿಚಾರಕರು ಸಹಿ ಮಾಡುತ್ತಾರೆ, ಪ್ರಾಂಶುಪಾಲರ ಸಹಿ ಬೇಡ. ಪ್ರವೇಶಪತ್ರದ ಜತೆಗೆ ವಿದ್ಯಾರ್ಥಿಯ ಭಾವಚಿತ್ರವಿರುವ ಆಧಾರ್, ಮತದಾರರ ಚೀಟಿ, ಕಾಲೇಜು ಗುರುತಿನ ಚೀಟಿ ಸೇರಿ ಯಾವುದಾದರೂ ಒಂದು ಗುರುತಿನ ಚೀಟಿ ಇರಬೇಕು. ಅಸಲಿ ಗುರುತಿನ ಚೀಟಿಯನ್ನೇ ತರಬೇಕು, ಜೆರಾಕ್ಸ್ ಪ್ರತಿಯನ್ನು ತರುವಂತಿಲ್ಲ.

    ಆನ್​ಲೈನ್​ನಲ್ಲಿ ಪರೀಕ್ಷೆ ಏಕಿಲ್ಲ?

    – ಇಷ್ಟು ದೊಡ್ಡ ಸಂಖ್ಯೆಯಲ್ಲಿ ಪರೀಕ್ಷೆಯನ್ನು ಆನ್​ಲೈನ್​ನಲ್ಲಿ ವ್ಯವಸ್ಥೆ ಮಾಡಲು ಅತ್ಯಂತ ಸದೃಢ ನೆಟ್​ವರ್ಕ್, ಅದಕ್ಕೆ ತಕ್ಕ ಉಪಕರಣಗಳನ್ನು ಒದಗಿಸಬೇಕಾಗುತ್ತದೆ. ಸೆಷನ್ ಆಧಾರದಲ್ಲಿ ನಡೆಸಿದರೆ, ಒಂದು ಬ್ಯಾಚ್​ನವರು ತಮಗೆ ಕಷ್ಟಕರ ಪ್ರಶ್ನೆಗಳು ಬಂದಿದ್ದವು ಎಂದು ನ್ಯಾಯಾಲಯದ ಮೊರೆ ಹೋಗುವ ಸಂಭವವಿರುತ್ತದೆ.

    ಸ್ಪೋರ್ಟ್ಸ್​ ಕೋಟಾ ಕೌನ್ಸೆಲಿಂಗ್ ಬೇರೆ ಆಗುತ್ತದೆಯೇ?

    – ಯಾವ ಕಾಲೇಜಿನಲ್ಲಿ ಸ್ಪೋರ್ಟ್ಸ್ ಕೋಟಾ, ಬ್ರಾಂಚ್ ಎಲ್ಲೆಲ್ಲಿ ಲಭ್ಯವಿದೆ ಎಂದು ಕೌನ್ಸೆಲಿಂಗ್ ಸಮಯದಲ್ಲಿ ಲಭ್ಯವಾಗುತ್ತದೆ.

    ಹುಟ್ಟಿದ ದಿನಾಂಕ ನಮೂದಿಸುವುದು ತಪ್ಪಾಗಿದೆ, ಈಗ ಸರಿಪಡಿಸಬಹುದೇ?

    – ಯಾವುದೇ ತಪ್ಪುಗಳಿದ್ದರೆ ಸರಿಪಡಿಸಿಕೊಳ್ಳಲು ಅವಕಾಶವನ್ನು ಈ ಹಿಂದೆಯೇ ನೀಡಲಾಗಿದ್ದರೂ ತಾವು ಬಳಸಿಕೊಂಡಿಲ್ಲ. ಈಗ ಬದಲಾವಣೆ ಮಾಡಲಾಗದು. ವಿದ್ಯಾರ್ಥಿ ಈಗ ಯಾವುದೇ ಗೊಂದಲ ಇಲ್ಲದೆ ಪರೀಕ್ಷೆ ಬರೆಯಲಿ, ರ್ಯಾಂಕ್ ಪಟ್ಟಿ ಘೋಷಣೆ ಆದ ನಂತರ ಈ ಕುರಿತು ಗಮನಹರಿಸೋಣ.

    ಸಿಇಟಿ ಸಕ್ಸಸ್​ಗೆ ಕೆಇಎ ಸೂತ್ರ; ವಿಜಯವಾಣಿ ಕ್ಲಬ್​ನಲ್ಲಿ ಕೆಇಎ ಇಡಿ ಎಸ್​.ರಮ್ಯಾ ಭರವಸೆ

    ಪರೀಕ್ಷೆಗೆ ಮುನ್ನ ವಿದ್ಯಾರ್ಥಿ ಭರ್ತಿ ಮಾಡಬೇಕಾದ ವಿಚಾರಗಳ ತರಬೇತಿ ವಿಡಿಯೋ ಬಿಡುಗಡೆ ಮಾಡಬಹುದಿತ್ತಲ್ಲ?

    – ಎಲ್ಲರೂ ಪಿಯುಸಿ ಓದಿದ ವಿದ್ಯಾರ್ಥಿಗಳೇ ಇದ್ದಾರೆ, ಹೆಚ್ಚಿನ ಮಾಹಿತಿ ನಮೂದಿಸುವ ಅಗತ್ಯವಿರುವುದಿಲ್ಲ. ಇಷ್ಟರ ನಂತರವೂ ಗೊಂದಲವಿದ್ದರೆ ಪರೀಕ್ಷಾ ಮೇಲ್ವಿಚಾರಕರು ಸಹಕರಿಸುತ್ತಾರೆ.

    ಪಾಲಕರು ವಹಿಸಬೇಕಾದ ಮುಂಜಾಗ್ರತೆ ಏನು?

    – ತಮ್ಮ ಮಕ್ಕಳು ಕೋವಿಡ್ ಗುಣಲಕ್ಷಣ ಹೊಂದಿದ್ದಾರೆಯೇ ಎಂದು ಪರೀಕ್ಷಾ ದಿನದವರೆಗೂ ನಿಗಾ ವಹಿಸಬೇಕು. ಹಾಗೇನಾದರೂ ಇದ್ದರೆ, ಯಾವುದೇ ಆತಂಕಕ್ಕೆ ಒಳಗಾಗದೆ, ಪರೀಕ್ಷಾ ಕೇಂದ್ರದ ಸಿಬ್ಬಂದಿಗೆ ತಿಳಿಸಬೇಕು. ಅವರಿಗೆ ಪ್ರತ್ಯೇಕವಾಗಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ. ವಿದ್ಯಾರ್ಥಿಗಳು ಒಮ್ಮೆಗೇ ಆಗಮಿಸಿದರೆ ಗುಂಪುಗೂಡುವ ಅಪಾಯ ಇರುತ್ತದೆ. ಪರೀಕ್ಷೆಗೆ ಎರಡು ಗಂಟೆ ಮುಂಚೆಯೇ ಕೇಂದ್ರಕ್ಕೆ ಆಗಮಿಸಬಹುದು. ಆದಷ್ಟೂ ಮೊದಲೇ ಆಗಮಿಸಿದರೆ ಯಾವುದೇ ಗುಂಪು ಆಗದಂತೆ ನಿರ್ವಹಿಸಬಹುದು. ಈ ನಿಟ್ಟಿನಲ್ಲಿ ಪಾಲಕರು ಎಚ್ಚರಿಕೆ ವಹಿಸಬೇಕು.

    ಸಿಇಟಿ ರ್ಯಾಂಕ್ ಘೋಷಣೆ ಹೇಗೆ?

    – ಸಿಇಟಿ ಪರೀಕ್ಷೆಯಲ್ಲಿ ರ್ಯಾಂಕ್ ಘೋಷಿಸಲು ಪಿಯುಸಿ ಅಂಕವನ್ನಾಗಲಿ, ಶೇಕಡಾವಾರು ಅಂಕವನ್ನಾಗಲಿ ಪರಿಗಣಿಸುವುದಿಲ್ಲ. ಸಂಪೂರ್ಣವಾಗಿ ಸಿಇಟಿ ಅಂಕದ ಆಧಾರದಲ್ಲೆ ರ್ಯಾಂಕ್ ನೀಡಲಾಗುತ್ತದೆ. ಸಿಇಟಿ ಅಂಕ ಮಾತ್ರ ಪರಿಗಣಿಸುವುದರಿಂದ ವಿದ್ಯಾರ್ಥಿಗಳಿಗೆ ಅನ್ಯಾಯ ಆಗುವುದಿಲ್ಲ.

    ಮೀಸಲಾತಿ ಪರಿಗಣನೆ ಆಗುತ್ತದೆಯೇ?

    – ಸರ್ಕಾರದಿಂದ ಆದೇಶಿಸಲಾಗುವ ಎಲ್ಲ ರೀತಿಯ ಮೀಸಲಾತಿಗಳನ್ನೂ ಪರೀಕ್ಷೆ ಮೂಲಕ ಸೀಟು ಭರ್ತಿ ವೇಳೆ ಪರಿಗಣಿಸಲಾಗುತ್ತದೆ. ಹೈದರಾಬಾದ್ ಕರ್ನಾಟಕ ಮೀಸಲಾತಿಯೂ ಪರಿಗಣಿತವಾಗುತ್ತದೆ. ಆರ್ಥಿಕ ಹಿಂದುಳಿದವರಿಗೆ(ಇಡಬ್ಲ್ಯುಎಸ್) ಮೀಸಲಾತಿ ಕುರಿತು ಕೌನ್ಸೆಲಿಂಗ್ ವೇಳೆಗೆ ನಿರ್ಧಾರವಾಗಿರುತ್ತದೆ.

    ದಾಖಲೆ ಪರಿಶೀಲನೆ ಸುಲಭವಾಗಿರಲಿದೆಯೇ?

    – ದಾಖಲೆ ಪರಿಶೀಲನೆಯನ್ನು ಆನ್​ಲೈನ್ ಅಥವಾ ಆಫ್​ಲೈನ್ ಮೂಲಕ ನಡೆಸಬೇಕೆಂಬ ಚರ್ಚೆ ನಡೆಯುತ್ತಿದ್ದರಿಂದ ಕಳೆದ ವರ್ಷ ತುಸು ವಿಳಂಬವಾಗಿತ್ತು. ಆದರೆ ಈ ವರ್ಷ ಆನ್​ಲೈನ್​ನಲ್ಲೇ ದಾಖಲೆ ಪರಿಶೀಲನೆ ನಡೆಯಲಿದೆ. ಅದಕ್ಕೆ ತಕ್ಕ ತಂತ್ರಾಂಶವೂ ಸಿದ್ಧವಾಗಿದೆ. ಯಾವುದೇ ಗೊಂದಲ, ವಿಳಂಬವಿಲ್ಲದೆ ಪ್ರಕ್ರಿಯೆ ನಡೆಯಲಿದೆ.

    ಪರೀಕ್ಷಾ ಕೇಂದ್ರ ಬದಲಿಸಲು ಅವಕಾಶವಿದೆಯೇ?

    – ಈ ಹಂತದಲ್ಲಿ ಪರೀಕ್ಷಾ ಕೇಂದ್ರ ಬದಲಿಸಲು ಅವಕಾಶವಿಲ್ಲ. ಪರೀಕ್ಷಾ ಕೇಂದ್ರದ ಆದ್ಯತೆಗಳನ್ನು ನಮೂದಿಸುವಂತೆ ವಿದ್ಯಾರ್ಥಿಗಳಿಗೆ ತಿಳಿಸಲಾಗಿತ್ತು. ಶೇ.90 ಅವರು ಸೂಚಿಸಿದ ಕೇಂದ್ರವೇ ಸಿಕ್ಕಿರುತ್ತದೆ. ಈ ನಡುವೆ ತಪ್ಪನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡಿ, ಅದರ ಕುರಿತು ಕೆಇಇಎ ವೆಬ್​ಸೈಟ್, ಮುದ್ರಣ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕವೂ ವ್ಯಾಪಕ ಪ್ರಚಾರ ನೀಡಲಾಗಿದೆ. ಹೆಚ್ಚಿನ ಮಾಹಿತಿಗೆ ಪ್ರಾಧಿಕಾರದ ವೆಬ್​ಸೈಟ್ ನೋಡುತ್ತಿರಬೇಕು.

    ಪಿ.ಸಿ.ಎಂ.ಬಿ. ನಾಲ್ಕೂ ವಿಷಯದಲ್ಲಿ ಪರೀಕ್ಷೆ ಬರೆದರೆ ರ‍್ಯಾಂಕಿಂಗ್ ವ್ಯತ್ಯಾಸವಾಗುತ್ತದೆಯೇ?

    – ಇಲ್ಲ. ಪಿ.ಸಿ.ಬಿ. ಹಾಗೂ ಪಿ.ಸಿ.ಎಂ. ವಿಷಯಗಳಲ್ಲಿ ಪ್ರತ್ಯೇಕ ರ‍್ಯಾಂಕಿಂಗ್ ನೀಡಲಾಗುತ್ತದೆ. ಒಂದೇ ಅಂಕ ಅನೇಕ ವಿದ್ಯಾರ್ಥಿಗಳಿಗೆ ಲಭಿಸಿದರೆ, ವಿಷಯವಾರು ಅಂಕಗಳ ಆಧಾರದಲ್ಲಿ ರ‍್ಯಾಂಕಿಂಗ್ ಅಂತಿಮಗೊಳಿಸಲಾಗುತ್ತದೆ.

    ಈಗ ನಾನು ಮೊದಲ ಪಿಯುಸಿಯಲ್ಲಿದ್ದೇನೆ, ಮುಂದಿನ ವರ್ಷ ಸಿಇಟಿಗೆ ಅಂಕ ಪರಿಗಣನೆ ಹೇಗಿರುತ್ತದೆ?

    – ಈಗಿನ್ನೂ ತಾವು ಪ್ರಥಮ ಪಿಯುನಲ್ಲಿದ್ದೀರಿ. ಪರೀಕ್ಷೆಗೆ ಸಾಕಷ್ಟು ಸಮಯವಿದೆ. ಆಗಿನ ಪರಿಸ್ಥಿತಿಗೆ ತಕ್ಕಂತೆ ಪರೀಕ್ಷೆ, ಅಂಕಗಳ ಪರಿಗಣನೆ ನಿರ್ಧಾರವಾಗುತ್ತದೆ. ಈಗಲೇ ಚಿಂತೆ ಬೇಡ.

    ಕ್ರೀಡಾ ಮೀಸಲಾತಿ ದಾಖಲೆ ಅಪ್​ಲೋಡ್ ಈಗ ಮಾಡಬಹುದೇ?

    – ಈ ಕುರಿತು ಮಾಹಿತಿಗೆ ಕೆಇಎ ವೆಬ್​ಸೈಟ್ ನೋಡುತ್ತಿರಿ. ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿದವರಿಗೂ ಮೀಸಲಾತಿ ಲಭ್ಯವಿದೆ.

    ಕಾಲೇಜಿಗೆ ಎಷ್ಟು ಶುಲ್ಕ ಕಟ್ಟಬೇಕು?

    – ಪ್ರತಿ ಕಾಲೇಜಿಗೆ ಕಟ್ಟಬೇಕಾದ ಶುಲ್ಕ ಪಟ್ಟಿಯನ್ನು ವೆಬ್​ಸೈಟ್​ನಲ್ಲಿ ಪ್ರಕಟಿಸಲಾಗುತ್ತದೆ. ಅಷ್ಟನ್ನು ಮಾತ್ರ ಕಟ್ಟಿ ದಾಖಲಾಗಬೇಕು.

    ನಮ್ಮ ಮಗ ಬೆಂಗಳೂರಿನಲ್ಲೆ ಓದಿದ್ದಾನೆ. ಪೋಷಕರಿಬ್ಬರೂ ಹೈ-ಕ ಭಾಗದವರು. ಮೀಸಲಾತಿ ಸಿಗುತ್ತದೆಯೇ?

    – ಹೈ-ಕ ಭಾಗದ ಸ್ಥಳೀಯ ಎಸಿಯವರಿಂದ ಪೋಷಕರ ಕುರಿತು ಪ್ರಮಾಣಪತ್ರ ತಂದರೆ ಲಭ್ಯವಿದೆ.

    ಪರೀಕ್ಷೆ ಬರೆಯಲಾಗದವರಿಗೆ ಮತ್ತೊಮ್ಮೆ ಅವಕಾಶ ಇದೆಯೇ?

    – ಇದು ಒಂದು ಬಾರಿ ನಡೆಸಲಾಗುವ ಪರೀಕ್ಷೆ. ಇದಕ್ಕೆ ಗೈರು ಹಾಜರಾದರೆ, ಮತ್ತೊಂದು ಪರೀಕ್ಷೆ ಇರುವುದಿಲ್ಲ.

    ಒಂದೇ ಅಂಕಗಳನ್ನು ಹೆಚ್ಚು ವಿದ್ಯಾರ್ಥಿಗಳು ಪಡೆದಿರುವುದರಿಂದ ರ್ಯಾಂಕ್ ಪಟ್ಟಿ ಹೇಗೆ ನೀಡುತ್ತೀರಾ?

    – ಇದಕ್ಕಾಗಿಯೇ ಪ್ರತ್ಯೇಕ ವಿಧಾನ ನಮ್ಮ ಬಳಿ ಇದೆ. ಆ ಪ್ರಕಾರವಾಗಿ ಅಂಕ ನೀಡುತ್ತೇವೆ. ವಿದ್ಯಾರ್ಥಿಗಳಿಗೆ ಆತಂಕ ಬೇಡ.

    ಸಿಇಟಿ ಸಕ್ಸಸ್​ಗೆ ಕೆಇಎ ಸೂತ್ರ; ವಿಜಯವಾಣಿ ಕ್ಲಬ್​ನಲ್ಲಿ ಕೆಇಎ ಇಡಿ ಎಸ್​.ರಮ್ಯಾ ಭರವಸೆ

    ಸೋಂಕಿತರು ಪರೀಕ್ಷೆ ಬರೆಯುವುದು ಹೇಗೆ?

    -ಸೋಂಕಿತರು ಸೇರಿ ಯಾವುದೇ ವಿದ್ಯಾರ್ಥಿ ಪರೀಕ್ಷೆ ಬರೆಯುವುದರಿಂದ ವಂಚಿತರಾಗಬಾರದು ಎಂಬುದು ಈ ಬಾರಿ ನಮ್ಮ ಧ್ಯೇಯ. ಈಗಾಗಲೆ, ಕರೊನಾ ಸೋಂಕು ಇದೆಯೆಂದು ದೃಢಪಟ್ಟಿದ್ದವರಿಗಾಗಿ ಕೆಇಎ ವೆಬ್​ಸೈಟ್​ನಲ್ಲಿ ಒಂದು ಲಿಂಕ್ ನೀಡಲಾಗಿದೆ. ಈ ಲಿಂಕ್​ನಲ್ಲಿ ಹೆಸರು, ಕರೊನಾ ಪಾಸಿಟಿವ್ ವರದಿ ಬಂದಿರುವ ಎಸ್​ಆರ್​ಎಫ್ ಐಡಿ, ಈಗ ವಾಸವಿರುವ ಮನೆಯ ವಿಳಾಸ ಹಾಗೂ ಇನ್ನಿತರೆ ವಿವರ ದಾಖಲಿಸಬೇಕು. ಪಾಸಿಟಿವ್ ಇರುವ ವಿದ್ಯಾರ್ಥಿಗಳಿಗೆಂದೇ ಕೋವಿಡ್ ಕೇರ್ ಸೆಂಟರ್ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಪರೀಕ್ಷೆಯ ದಿನ ಆಯಾ ಜಿಲ್ಲಾಡಳಿದ ಮೂಲಕ ಮನೆ ಬಾಗಿಲಿಗೆ ವಾಹನ ಆಗಮಿಸಿ ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ದು, ಪರೀಕ್ಷೆ ಮುಗಿದ ನಂತಹ ವಾಹನದಲ್ಲೆ ಮನೆಗೆ ಬಿಡಲಾಗುತ್ತದೆ.

    ಊಟದ ಬಾಕ್ಸ್ ತರಬಹುದೇ?

    – ಬೆಳಗ್ಗೆ ಪರೀಕ್ಷೆ ನಂತರ ಮತ್ತೊಂದರ ನಡುವೆ ಎರಡು ಗಂಟೆ ಸಮಯ ಇರುತ್ತದೆ. ಈ ಅವಧಿಯಲ್ಲಿ ವಿದ್ಯಾರ್ಥಿಗಳು ಮನೆಯಿಂದ ತಂದ ಆಹಾರವನ್ನು ಸೇವಿಸಬಹುದು. ಪರೀಕ್ಷಾ ಕೇಂದ್ರಕ್ಕೆ ನೀರಿನ ಬಾಟಲಿ ತರಲು ಅವಕಾಶ ಇದೆ.

    ದೇಶಾದ್ಯಂತ ನಡೆಯುತ್ತಾ ಜಾತಿ ಆಧಾರಿತ ಜನಗಣತಿ?; ಪ್ರಧಾನಿಯನ್ನು ಭೇಟಿ ಆಗಿ ಚರ್ಚಿಸಿದರು 11 ಪಕ್ಷಗಳ ಮುಖಂಡರು

    ನಾನು ಟೈಟಾಗಿದ್ದೇನೆ ಗೊತ್ತಾಗಿಲ್ಲ, ಇನ್ನೊಂದು ಕಾರ್ಡ್ ನಂಬರ್ ಕೊಡಿ ಎಂದ; 730 ರೂಪಾಯಿ ವೈನ್‌ಗೆ 1.79 ಲಕ್ಷ ರೂ. ಧೋಖಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts