More

    ರಾಮನಾಮ ದಿವ್ಯಧಾಮ: ಇಂದು ರಾಮನವಮಿ..

    ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯಮಂದಿರ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿಯ ರಾಮನವಮಿಗೆ ಇನ್ನಷ್ಟು ಸಂಭ್ರಮ. ಮರ್ಯಾದಾ ಪುರುಷೋತ್ತಮ ಶ್ರೀರಾಮ ರಾಷ್ಟ್ರಪುರುಷನೂ ಹೌದು, ಕೋಟ್ಯಂತರ ಭಕ್ತರ ಆರಾಧ್ಯದೈವನೂ ಹೌದು. ಶುದ್ಧ ಭಕ್ತಿಯಿಂದ ರಾಮನಾಮ ಜಪಿಸುತ್ತ ಸಾಗಿದಂತೆ ನಮ್ಮ ವ್ಯಕ್ತಿತ್ವವೂ ರಾಮನ ವ್ಯಕ್ತಿತ್ವವಾಗಲು ಸಾಧ್ಯವಾಗುತ್ತದೆ. ವಿಜಯವಾಣಿ-ದಿಗ್ವಿಜಯ ವಾಹಿನಿ ಆಯೋಜಿಸಿದ ಕ್ಲಬ್​ಹೌಸ್ ಸಂವಾದದಲ್ಲಿ ತಜ್ಞರು ರಾಮದರ್ಶನ- ಚಿಂತನೆ ಕುರಿತಂತೆ ಹೊಸಬೆಳಕು ಚೆಲ್ಲಿದರು.

    ಜ್ಞಾನಿಗಳ ಹೃದಯದಲ್ಲಿ ರಮಿಸುವಾತ…

    ರಾಮನಾಮ ದಿವ್ಯಧಾಮ: ಇಂದು ರಾಮನವಮಿ..‘ರಾಮ ಮಂತ್ರವ ಜಪಿಸೋ…’ ಎಂಬ ದಾಸರ ಪದವು ಪ್ರಖ್ಯಾತವಾಗಿದೆ. ಮಂತ್ರ ಹಾಗೂ ನಾಮಜಪಗಳು ನಮ್ಮ ದೇಶದ ಸಾಧನಾ ಪದ್ಧತಿಗಳಲ್ಲಿ ಪ್ರಮುಖ ಸ್ಥಾನವನ್ನು ಪಡೆದಿವೆ. ರಾಮ ತಾರಕ ಮಂತ್ರ ಹಾಗೂ ಅದರ ಜಪವಿಧಿಗಳು ಜಪಯೋಗದ ಸಾಧನಾ ಮಾರ್ಗವಾಗಿವೆ. ಕಲಿಸಂತರಣ ಉಪನಿಷತ್ತು ವಿವರಿಸುವಂಥ ‘ಹರೇ ರಾಮ ಹರೇ ಕೃಷ್ಣ’ ಮಂತ್ರವು ವಿಶ್ವದಲ್ಲಿಯೇ ಪ್ರಖ್ಯಾತವಾಗಿದೆ. ರಾಮನಾಮ ಜಪದಿಂದ ಭಕ್ತಿಯ ಪರಾಕಾಷ್ಠೆಯೇರಿದ ಮಹನೀಯರಲ್ಲಿ ವಾಗ್ಗೇಯಕಾರರಾದ ತ್ಯಾಗರಾಜರು ಚಿರಪರಿಚಿತರು. ‘ನೀನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ ನಾಮ ಒಂದಿರಲು ಸಾಕು…’ ಎಂದು ದಾಸರು ಈ ನಾಮದ ಮಹಿಮೆಯನ್ನು ಹಾಡುತ್ತಾರೆ. ಆದರೆ ಇದು ಹೇಗೆ ಸಾಧ್ಯವಾದೀತು? ರಾಮ ನಾಮಕ್ಕೂ ರಾಮನಿಗೂ ಏನು ಸಂಬಂಧ? ನಮ್ಮ ಚರಿತ್ರೆಯಲ್ಲಿ ದಶರಥನ ಪುತ್ರನಾದ ರಾಮ, ಪರಶುರಾಮ, ಕೃಷ್ಣನ ಅಣ್ಣ ಬಲರಾಮ, ಮುಂತಾದ ಅನೇಕ ರಾಮರು ಉಂಟು. ಹಾಗಾದರೆ ಈ ರಾಮ ಎಂಬ ಹೆಸರನ್ನು ಕರೆದರೆ ಸಿಗುವುದು ಯಾರು ಎಂಬೀ ಪ್ರಶ್ನೆಗಳೆಲ್ಲವೂ ಹುಟ್ಟಿಕೊಳ್ಳುತ್ತವೆ.

    ಪದ-ಪದಾರ್ಥಗಳ ಸಂಬಂಧ: ವಾಕ್ ಮತ್ತು ಅರ್ಥಗಳಿಗೆ ಅನನ್ಯವಾದ ಸಂಬಂಧ ಉಂಟು ಎಂಬುದು ಭಾರತೀಯ ಪರಂಪರೆಯಲ್ಲಿ ಬಂದಿರುವ ಮಾತು. ಯಾವುದೇ ಒಂದು ಪದ ಮತ್ತು ಆ ಪದದಿಂದ ಸೂಚಿಸಲ್ಪಡುವ ಪದಾರ್ಥದ ನಡುವೆ ಅನನ್ಯವಾದ ಸಂಬಂಧವನ್ನು ಅರಿಯುವುದು ಹೇಗೆ? ಖ್ಯಾತ ಮಿದುಳು ವಿಜ್ಞಾನಿ ವಿಲಯನೂರ್ ರಾಮಚಂದ್ರರು ವಿವರಿಸುವಂಥ ಕೆಲವು ಪ್ರಯೋಗಗಳನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಅವರು ಪ್ರಯೋಗದಲ್ಲಿ ಜನರ ಮುಂದೆ ಎರಡು ಪದಾರ್ಥಗಳನ್ನು ಇಟ್ಟರು- ಒಂದು ದುಂಡಗಿರುವಂಥ ಪದಾರ್ಥ, ಮತ್ತೊಂದು ಚೂಪಾದ ಸೂಜಿ. ಎರಡು ಕಪೋಲಕಲ್ಪಿತವಾದ ಹೆಸರುಗಳನ್ನು ಜನರಿಗೆ ಕೊಟ್ಟರು, ಬೊಬೋ ಮತ್ತು ಕಿಕಿ. ಯಾವ ಪದಾರ್ಥಕ್ಕೆ ಯಾವ ಹೆಸರು ಹೊಂದುತ್ತದೆ? ಹೇಗೆ ನಾಮಕರಣ ಮಾಡುತ್ತೀರಿ? ಎಂದು ಸಭೆಯನ್ನು ಕೇಳಿದರು. ಹೆಚ್ಚು ಜನ ದುಂಡಗಿರುವ ವಸ್ತುವಿಗೆ ಬೋಬೋ ಎಂದು ಹೆಸರಿಟ್ಟರು, ಸೂಜಿಗೆ ಕಿಕಿ ಎಂದಿಟ್ಟರು. ನಾನಾ ದೇಶ, ಭಾಷೆಗಳ ಮಾತನಾಡುವವರ ಸಮಕ್ಷದಲ್ಲಿ ಈ ಪ್ರಯೋಗವನ್ನು ನಡೆಸಿದಾಗಲೂ ಫಲಿತಾಂಶ ಒಂದೇ ಆಗಿತ್ತು. ದುಂಡಗಿರುವ ಪದಾರ್ಥಕ್ಕೆ ಬೋಬೋ ಎಂಬ ಹೆಸರು ಹೊಂದುತ್ತದೆ, ಕಿಕಿ ಎಂಬ ಹೆಸರು ಚೂಪಾಗಿರುವಂತಹ ಪದಾರ್ಥಕ್ಕೆ ಹೊಂದುತ್ತದೆ ಎಂಬುದು ಸಿದ್ಧವಾಯಿತು. ಪ್ರತಿಯೊಂದು ಪದವಾಗಲಿ, ಪದಾರ್ಥವಾಗಲಿ ನಮ್ಮ ಮೇಲೆ ಒಂದು ಸೂಕ್ಷ್ಮವಾದ ಪರಿಣಾಮ ಬೀರುತ್ತದೆ. ಅವೆರಡೂ ನಮ್ಮಲ್ಲಿ ಒಂದೇ ರೀತಿಯ ಭಾವತರಂಗಗಳನ್ನು ಎಬ್ಬಿಸಿದಾಗ, ಆ ಪದ-ಪದಾರ್ಥಗಳ ಜೋಡಿ ತುಂಬ ಹೊಂದುತ್ತೆ. ಪದಾರ್ಥದ ಅರಿವು ಅನುಭವ ನಮಗೆ ಚೆನ್ನಾಗಿ ಇದ್ದಾಗ ಅಲ್ಲಿಗೆ ಹೊಂದುವ ಪದಪುಂಜಗಳನ್ನು ಹುಡುಕಿ ಪದಾರ್ಥಕ್ಕೆ ಹೆಸರಿಸುವಂಥ ಕಾರ್ಯ ಸಾಧ್ಯ. ಇಂಥ ಅನೇಕ ಪದ-ಪದಾರ್ಥಗಳ ಜೋಡಿಗಳು ಸಂಸ್ಕೃತವನ್ನು ತಾಯಿಬೇರಾಗಿ ಇಟ್ಟುಕೊಂಡು ಬಂದಿರುವ ಭಾರತೀಯ ಭಾಷೆಗಳಲ್ಲಿ ಲಭ್ಯವಿವೆ.

    ಯೋಗಾನುಭವ…: ಜ್ಞಾನಿಗಳ ಹೃದಯದಲ್ಲಿ ರಮಿಸುವುದರಿಂದ ಅವನು ರಾಮ. ಈ ರಾಮ ಐತಿಹಾಸಿಕವಾದ ವ್ಯಕ್ತಿ ಮಾತ್ರವಲ್ಲ. ಶ್ರೀರಂಗ ಮಹಾಗುರುಗಳು ಹೇಳಿರುವಂತೆ- ‘ರಾಮನು ಸ್ಥೂಲದೃಷ್ಟಿಗೆ ಮನುಷ್ಯ, ಸೂಕ್ಷ್ಮದೃಷ್ಟಿಗೆ ದೇವತೆ, ಪರಾದೃಷ್ಟಿಗೆ ಪರಂಜ್ಯೋತಿ’. ಅವನು ಒಂದು ವ್ಯಕ್ತಿತ್ವ, ಗುಣಗಳ ಸಮೂಹ, ಶಕ್ತಿ. ಜ್ಞಾನಿಗಳು ಹೃದಯದಲ್ಲಿ ಕಂಡರಿದು ಆನಂದಿಸುವಂಥ, ಸೀತಾ ಸಮೇತನಾಗಿ ಕೋದಂಡವನ್ನು ಧರಿಸಿರುವ ಒಂದು ರೂಪ, ಒಂದು ಯೋಗಾನುಭವ. ರಾಮ ಎಂಬ ನಾಮವನ್ನು ಉಚ್ಚರಿಸಿ ಜಪಿಸಿದವರಿಗೆ ರಾಮನ ಗುಣಗಳು ಸಂಕ್ರಾಂತವಾಗುತ್ತವೆ. ಸತ್ಯಪರತೆ, ಧರ್ಮದಲ್ಲಿ ನಿಷ್ಠೆ ಮತ್ತು ಆತ್ಮಗುಣಗಳು ಸಿದ್ಧಿಸುತ್ತವೆ. ನಮ್ಮ ಜೀವನವನ್ನು ಧರ್ಮಮಯವಾಗಿ ಮಾಡುತ್ತದೆ.

    ಮಂತ್ರ ಮಹಿಮೆ: ಮಂತ್ರಗಳೂ ಅಂತಹ ವಿಶೇಷವಾದಂಥ ಪದಪುಂಜಗಳು. ಅದರ ಜೋಡಣೆ, ಅದರಲ್ಲಿ ಉಪಯೋಗಿಸುವಂಥ ಸ್ವರ-ವ್ಯಂಜನಗಳು, ಅವುಗಳನ್ನು ಉಚ್ಚರಿಸುವ ಸ್ವರಸ್ಥಾಯಿ, ಮಾತ್ರಾಕಾಲಗಳು, ಬಲ, ಪ್ರಯತ್ನಗಳು ಎಲ್ಲವೂ ಕೂಡಿ ಉಚ್ಚರಿಸಿದವರಿಗೆ ಆ ಪದಾರ್ಥದ ಅನುಭವವನ್ನೇ ಮಾಡಿಸಿಬಿಡುತ್ತದೆ. ದೇವತಾ ಸಾನ್ನಿಧ್ಯವನ್ನು ತಂದುಕೊಡುವಂಥ ಇಂಥ ವಿಶಿಷ್ಟವಾದ ಪದಪುಂಜಗಳನ್ನು ಲೋಕಕ್ಕೆ ಕೊಟ್ಟವರು ಋಷಿಗಳು-ಕವಿಗಳು ಅನಿಸಿಕೊಳ್ಳುತ್ತಾರೆ. ವಾಲ್ಮೀಕಿ ಮಹರ್ಷಿಗಳು ಅಂತಹ ಕವಿವರೇಣ್ಯರು. ಅವರ ಕೃತಿಯೇ ಆದಿಕಾವ್ಯ. ಅಲ್ಲಿ ವರ್ಣಿತವಾದ ಪದಾರ್ಥವೇ ಸೀತಾ-ರಾಮರ ತತ್ತ್ವ.

    ಗಾಯನದ ಸೊಬಗು

    ರಾಮನಾಮ ದಿವ್ಯಧಾಮ: ಇಂದು ರಾಮನವಮಿ..ಶ್ರೀರಾಮನ ಹಾಡುಗಳು- ಕೀರ್ತನೆಗಳು ಭಕ್ತಿಸಾಹಿತ್ಯವನ್ನು ಸಿರಿವಂತಗೊಳಿಸಿವೆ. ಇಂಥ ಕೆಲ ವಿಶಿಷ್ಟ ರಾಮ ಗೀತೆಗಳನ್ನು ಪ್ರಸ್ತುತಪಡಿಸಿ, ಕಾರ್ಯಕ್ರಮದ ಸೊಬಗು ಹೆಚ್ಚಿಸಿದರು ಸಂಗೀತಗಾರ್ತಿ, ಸಂಸ್ಕೃತ ಉಪನ್ಯಾಸಕಿ ಭವಾನಿ ಹೆಗಡೆ ಮತ್ತು ಯಕ್ಷಗಾನ ಭಾಗವತ ಅನಂತ ದಂತಳಿಕೆ.

    ಸದಾ ಬೆಳಗಲಿ ಪ್ರೇರಣೆ: ವಾಲ್ಮೀಕಿ ರಚಿಸಿದ ಶ್ರೀರಾಮಾಯಣ ಅಪೂರ್ವವಾದ ಕಾವ್ಯ. ಇದನ್ನು ನಮ್ಮ ಪರಂಪರೆಯಲ್ಲಿ ಕಾವ್ಯವಾಗಿ ಮಾತ್ರವಲ್ಲದೆ, ಶಾಸ್ತ್ರವಾಗಿಯೂ ಪರಿಗಣಿಸಲಾಗಿದೆ. ಹಾಗಾಗಿ ಇದೊಂದು ಶಾಸ್ತ್ರಕಾವ್ಯ. ಶ್ರೀರಾಮನನ್ನು ವ್ಯಕ್ತಿಯಾಗಿ ಮಾತ್ರವಲ್ಲದೆ ಪರಮಾತ್ಮ, ಪರಬ್ರಹ್ಮ, ಸಂಸಾರ ಮಂಡಳದಲ್ಲಿ ಮುಳುಗಿದವರನ್ನು ಎತ್ತಿ ಮುಕ್ತಿಧಾಮಕ್ಕೆ ಕೊಂಡೊಯ್ಯುವ ಪರಂಧಾಮ ಪುರುಷೋತ್ತಮನನ್ನಾಗಿ ವಾಲ್ಮೀಕಿ ರಾಮಾಯಣ ದರ್ಶಿಸಿದೆ. ಇದರಲ್ಲಿ ರಾಮನ ಮಾನುಷ ಮುಖವಿದ್ದರೂ ಅದರೊಳಗೆ ದಿವ್ಯಜೋತಿಯಂತೆ ಅಡಗಿರುವ ಪರಾತ್ಪರ ಸ್ವರೂಪವನ್ನು ವಾಲ್ಮೀಕಿ ವಿಸ್ತಾರವಾಗಿ ಪರಿಚಯಿಸಿದ್ದಾರೆ.

    ಮಹಾಮಹಿಮ ಸ್ತ್ರೀಯರುರಾಮನಾಮ ದಿವ್ಯಧಾಮ: ಇಂದು ರಾಮನವಮಿ..

    ರಾಮಾಯಣದಲ್ಲಿ ಬರುವ ಸ್ತ್ರೀ ಪಾತ್ರಗಳಲ್ಲಿ ಆಸುರ ವರ್ಗದ ಸ್ತ್ರೀಯರು, ಜ್ಞಾನಿಗಳಾದ ಸ್ತ್ರೀಯರು, ರಾಮಭಕ್ತೆಯರಾದ ಸ್ತ್ರೀಯರು ಎಂದು ವಿಂಗಡಣೆ ಮಾಡಲಾಗಿದೆ. ಅದರಲ್ಲಿ ಬ್ರಹ್ಮತತ್ತ್ವ ಅರಿತ ಸ್ತ್ರೀಯರ ಪರಿಚಯ ತಿಳಿಯೋಣ.

    ಮಹಾತಪಸ್ವಿನಿ ಸುಮಿತ್ರಾ

    ರಾಮನಾಮ ದಿವ್ಯಧಾಮ: ಇಂದು ರಾಮನವಮಿ..ರಾಮ ವನವಾಸಕ್ಕೆ ತೆರಳುವಾಗ ಲಕ್ಷ್ಮಣನೊಡನೆ ಸುಮಿತ್ರಾ ಆಡುವ ಮಾತುಗಳು, ಕೌಸಲ್ಯೆ ರಾಮವಿರಹದಿಂದ ಪರಿತಪಿಸುತ್ತಿದ್ದಾಗ ಅವಳನ್ನು ಮೃದು, ಮಧುರ ಮಾತುಗಳಿಂದ ಸುಮಿತ್ರಾ ಸಾಂತ್ವನಿಸುವ ಮಾತುಗಳು ನಿಜಕ್ಕೂ ಅನನ್ಯ. ಹಾಗಾಗಿಯೇ ಅವಳನ್ನು ವಾಲ್ಮೀಕಿ, ‘ಧರ್ಮಶೀಲಳಾದ ಸುಮಿತ್ರಾ, ಧರ್ಮವನ್ನು ಅರಿತವಳು, ಧರ್ಮದಲ್ಲಿ ನೆಲೆನಿಂತವಳು ಎಂದು ಪರಿಚಯಿಸಿ, ಆಕೆ ಮಹಾತಪಸ್ವಿನಿ ಎಂದೂ ಹೇಳಿದ್ದಾರೆ. ಸುಮಿತ್ರಾ ಕೌಸಲ್ಯೆಗೆ ಹೇಳುತ್ತಾಳೆ- ‘ಯಾಕೆ ದುಃಖಿಸುತ್ತಿದ್ದೀಯ? ಈ ದುಃಖಕ್ಕೆ ಅರ್ಥವೇ ಇಲ್ಲ. ಯಾವ ಕಾರಣಕ್ಕೂ ಸೂರ್ಯ ನಿನ್ನ ಮಗನನ್ನು ಸುಡಲಾರ. ರಾಮನ ದೇಹವನ್ನು ತನ್ನ ಕಿರಣಗಳಿಂದ ಪೀಡಿಸಲಾರ. ಅರಣ್ಯಗಳಿಂದ ಬೀಸುವ ವಾಯು ಸರ್ವ ಋತುಗಳಲ್ಲಿ ಸುಖವಾಗಿ ರಾಘವನನ್ನು ಸೇವಿಸುತ್ತದೆ. ರಾತ್ರಿ ರಾಮ ನಿದ್ರಿಸುವಾಗ ಚಂದ್ರನ ಶೀತಲ ಕಿರಣಗಳು ಆತನನ್ನು ಆಲಂಗಿಸುತ್ತವೆ. ಕಾಡಿನಲ್ಲಿ ರಾಮನಿಗೆ ಯಾವುದೇ ವಿಧದ ಸಂಕಟ ಕಾಡುವುದಿಲ್ಲ’. ಈ ಮಾತುಗಳ ಮೂಲಕ ಅವಳ ಬ್ರಹ್ಮತತ್ತ್ವಜ್ಞಾನವನ್ನು ವಿವರಿಸಲಾಗಿದೆ.

    ರಾಮಭಕ್ತೆ ಶಬರಿ

    ರಾಮನಾಮ ದಿವ್ಯಧಾಮ: ಇಂದು ರಾಮನವಮಿ..ದೀರ್ಘಕಾಲ ರಾಮನಿಗಾಗಿ ಕಾದು ಕುಳಿತ ವೃದ್ಧೆ ಶಬರಿ ಧರ್ಮನಿಪುಣೆ. ಅವಳ ರಾಮಭಕ್ತಿ ಅಪೂರ್ವವಾದುದು. ಅಸುರರ ವಧೆಯಲ್ಲಿ ರಾಮನಿಂದ ವಧೆಯಾದ ಕಬಂಧ ಶಾಪ ವಿಮೋಚನೆಗೊಂಡ ವೇಳೆ ರಾಮನಿಗೆ ಹೇಳುತ್ತಾನೆ- ಮತಂಗ ಋಷಿಗಳ ಶಿಷ್ಯೆ ಶಬರಿ ನಿನ್ನನ್ನು ಸತ್ಕರಿಸಲು ಕಾಯುತ್ತಿದ್ದಾಳೆ. ರಾಮ-ಲಕ್ಷ್ಮಣರು ಮತಂಗ ಮುನಿಗಳ ಆಶ್ರಮಕ್ಕೆ ಬರುತ್ತಿದ್ದಂತೆ ಅವರ ಪಾದಗಳನ್ನು ತೊಳೆದು ತೀರ್ಥವನ್ನು ಪ್ರೋಕ್ಷಣೆ ಮಾಡಿಕೊಂಡು ಸೇವಿಸುತ್ತಾಳೆ ಶಬರಿ. ಅವರಿಗೆ ಹಣ್ಣುಹಂಪಲು ನೀಡಿ ಎಲ್ಲ ರೀತಿಯಿಂದಲೂ ಆತಿಥ್ಯ ಮಾಡುತ್ತಾಳೆ. ರಾಮನು ತನ್ನ ಆತಿಥ್ಯದಿಂದ ಸಂತೃಪ್ತಗೊಂಡನ್ನು ನೋಡಿ, ಆತನನ್ನು ಅರಿಂದಮಾ ಎಂದು ಸಂಬೋಧಿಸುತ್ತ, ‘ನನ್ನ ಶತ್ರುಗಳನ್ನು ನಾಶ ಮಾಡಿದೆ. ಇನ್ನು ನಾನು ಇಲ್ಲಿ ಇರುವುದಿಲ್ಲ. ಹಿಂದಿರುಗಿ ಬಾರದ ಮೋಕ್ಷ ಲೋಕಕ್ಕೆ ಹೋಗುತ್ತೇನೆ. ಮತ್ತೆ ಎಂದೂ ಶರೀರ ಧಾರಣೆ ಮಾಡಿ ಈ ಲೋಕಕ್ಕೆ ಬರುವುದಿಲ್ಲ ರಾಮ…’ ಎಂದು ಹೇಳುತ್ತಾಳೆ. ತನ್ನ ಯೋಗಶಕ್ತಿಯಿಂದ ಮೋಕ್ಷಲೋಕಕ್ಕೆ ಹೋಗುತ್ತಾಳೆ. ಅದಕ್ಕೆ ರಾಮನು ಸಾಕ್ಷಿಯಾಗಿ ನಿಲ್ಲುತ್ತಾನೆ. ಹೀಗೆ ರಾಮಕಟಾಕ್ಷ ವೈಭವ ಅರಿತ ಶಬರಿ ನಿಜವಾದ ಬ್ರಹ್ಮಜ್ಞಾನಿ.

    ಬುದ್ಧಿಮಾತು ಹೇಳಿದ್ದ ತಾರಾ

    ರಾಮನಾಮ ದಿವ್ಯಧಾಮ: ಇಂದು ರಾಮನವಮಿ..ವಾಲಿ ಮತ್ತು ಸುಗ್ರೀವರ ಪತ್ನಿ ತಾರಾ. ವಾಲಿ ಸುಗ್ರೀವನ ವಿರುದ್ಧ ಯುದ್ಧಕ್ಕೆ ಹೋಗುವಾಗ, ‘ಬೇಡ. ಯಾರೋ ಇಬ್ಬರು ಯುವಕರು ಬಂದಿದ್ದಾರೆ ಎಂದು ಅಂಗದ ಬಂದು ಹೇಳಿದ್ದಾನೆ. ನಿನ್ನನ್ನು ಕಂಡು ದಶದಿಕ್ಕುಗಳಿಗೆ ಓಡುತ್ತಿದ್ದ ಸುಗ್ರೀವ ನಿನ್ನ ಗುಹೆಯ ಬಾಗಿಲ್ಲಲಿ ಬಂದು ನಿನ್ನನ್ನು ಯುದ್ಧಕ್ಕೆ ಆಹ್ವಾನಿಸುತ್ತಿದ್ದಾನೆ ಎಂದರೆ ಅವನ ಬೆನ್ನ ಹಿಂದೆ ಯಾರೋ ಇದ್ದಾರೆ. ಯುದ್ಧಕ್ಕೆ ಹೋಗಬೇಡ’ ಎಂದು ಹೇಳುತ್ತಾಳೆ. ಅದನ್ನು ಕೇಳದ ವಾಲಿ, ‘ರಾಮ ನೀನು ಹೇಳುವ ಹಾಗೆ ಇಕ್ಷಾಕು ವಂಶದ ರಾಜಕುಮಾರನೇ ಆಗಿದ್ದರೆ, ಅಂಗದ ತಂದ ಸುದ್ದಿ ನಿಜವಾಗಿದ್ದರೆ ಆತ ನನಗೆ ಏನು ಮಾಡುತ್ತಾನೆ? ಅವನು ಸುಗ್ರೀವನ ಹಿಂದೆ ಇದ್ದರೆ ಇರಲಿ. ನನ್ನ ಸುಗ್ರೀವನ ಮಧ್ಯೆ ಆತ ಏಕೆ ಬರುತ್ತಾನೆ?’ ಎಂದು ಕೇಳುತ್ತಾನೆ. ಆಗ ತಾರಾ ರಾಮತತ್ತ್ವವನ್ನು ವಿವರಿಸುತ್ತ- ‘ಸಾಧುಗಳಿಗೆ ಆಶ್ರಯವೃಕ್ಷನಾಗಿ ಇರುವವನು, ದುಃಖಿತರಾದವರಿಗೆ ಆಶ್ರಯನಾದವನು, ಸಮಸ್ತ ಕೀರ್ತಿಗೂ ಪಾತ್ರನಾದವನು’ ಎಂದು ಹೇಳುತ್ತಾಳೆ. ತಾರಾಳ ಮಾತನ್ನು ಕೇಳದೆ ಸುಗ್ರೀವನ ವಿರುದ್ಧ ಯುದ್ಧಕ್ಕೆ ಹೋಗುವ ವಾಲಿಯನ್ನು ರಾಮನು ವಧಿಸಿದಾಗ ಶೋಕಾರ್ಥಳಾಗಿ ವಾಲಿಯ ಶವವನ್ನು ತೊಡೆಯ ಮೇಲೆ ಇರಿಸಿಕೊಂಡು ರೋದಿಸುತ್ತಾಳೆ. ಆಗ ರಾಮನನ್ನು ನೋಡಿ, ‘ನಿನ್ನಲ್ಲಿ ಯಾವ ಅಪರಾಧ, ಕೇಡನ್ನು ಬಯಸದ ನನ್ನ ಪತಿಯನ್ನು ಕೊಂದೆಯಲ್ಲ’ ಎಂದು ನಿಂದಿಸಲು ಬಂದಿರುತ್ತಾಳೆ. ಆದರೆ ಅವಳು ರಾಮನನ್ನು ಕಾಣುತ್ತಲೇ, ‘ಅಪ್ರಮೇಯ, ಯಾರಿಂದಲೂ ಜಯಿಸಲಾಗದವನು, ಧನುರ್ಭಾಣಗಳನ್ನು ಹಿಡಿದು ಸಾಮಾನ್ಯನಂತೆ ನಿಂತಿರುವ ನೀನು ಉತ್ತಮ ಧಾರ್ವಿುಕ. ಎಂದೂ ಅಳಿಯದ ಕೀರ್ತಿಯನ್ನು ಹೊಂದಿರುವವನು, ಜ್ಞಾನವಿಜ್ಞಾನ ಸಂಪನ್ನ’ ಎಂದು ರಾಮನಲ್ಲಿ ಅಡಗಿರುವ ಪರಮಾತ್ವ ತತ್ತ್ವವನ್ನು ವಿವರಿಸುತ್ತಾಳೆ. ಹಾಗಾಗಿ, ತಾರಾಳನ್ನು ಬ್ರಹ್ಮಜ್ಞಾನ ಹೊಂದಿರುವವಳು ಎಂದು ಹೇಳಲಾಗಿದೆ.

    ಪುಣ್ಯವಂತೆ ಮಂಡೋದರಿ

    ರಾಮನಾಮ ದಿವ್ಯಧಾಮ: ಇಂದು ರಾಮನವಮಿ..ಸೀತೆಯನ್ನು ಅನ್ವೇಷಿಸಿ ಬರುವ ಹನುಮಂತ ರಾವಣನ ಪತ್ನಿಯಾದ ಮಂಡೋದರಿಯನ್ನು ಕಾಣುತ್ತಾನೆ. ಅಲೌಕಿಕ ಕಾಂತಿಯನ್ನು ಹೊಂದಿರುವ ಮಂಡೋದರಿ ಬ್ರಹ್ಮಜ್ಞಾನದ ಪ್ರಭೆ. ರಾವಣನನ್ನು ಕಳೆದುಕೊಂಡ ಮಂಡೋದರಿ ವಿಲಾಪ ಬಹುದೊಡ್ಡ ಸರ್ಗ. ರಾಮನು ಮಂಡೋದರಿಗೆ ಶಂಖ, ಚಕ್ರ ಸಮೇತ ದರ್ಶನ ನೀಡುತ್ತಾನೆ. ಆ ಮೂಲಕ ರಾಮನನ್ನು ಶ್ರೀಮನ್ನಾರಾಯಣ ಸ್ವರೂಪದಲ್ಲಿ ಕಂಡ ಮಹಾಪುಣ್ಯವಂತೆ ಮಂಡೋದರಿ. ಆಗ ರಾಮನನ್ನು ಕುರಿತು ಮಂಡೋದರಿ- ‘ಹುಟ್ಟು ಇಲ್ಲದವನು, ಅಂತ್ಯವಿಲ್ಲದವನು ನೀನು. ನಿತ್ಯ ಲೋಕದಲ್ಲಿ ದಿವ್ಯತೇಜಸ್ಸಿನಿಂದ ಬೆಳಗುವವನು, ಸೀತೆ ಅಶೋಕವನದಲ್ಲಿ ಇಲ್ಲ. ಶ್ರೀಮನ್ನಾರಾಯಣ ಸ್ವರೂಪಿಯಾಗಿರುವ ರಾಮನ ವಕ್ಷಸ್ತಳದಲ್ಲಿ ಸೀತೆ ರಾರಾಜಿಸುತ್ತಿದ್ದಾಳೆ’ ಎಂದು ಶ್ಲಾಘಿಸಿದಳು. ಪರಬ್ರಹ್ಮಸ್ಥಾನದಿಂದ ಎಂದೂ ಇಳಿಯದ ಪರಮಾತ್ಮನ ದಿವ್ಯಸ್ವರೂಪವನ್ನು ರಾಮನ ಮೂಲಕ ಕಂಡಳು. ಆ ಮೂಲಕ ಮಂಡೋದರಿ ಬ್ರಹ್ಮತತ್ತ್ವವನ್ನು ಹೊಂದಿರುವುದನ್ನು ಅರಿಯಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts