More

    ರಾಜ್ಯದಲ್ಲಿ ನಿಯಮ ಉಲ್ಲಂಘಿಸಿ ಬೇಕಾಬಿಟ್ಟಿ ಸಿಎಲ್7 ಮದ್ಯದಂಗಡಿ ಮಂಜೂರು

    ಬೆಂಗಳೂರು: ರಾಜ್ಯದಲ್ಲಿ ಅಬಕಾರಿ ನಿಯಮ ಉಲ್ಲಂಘಿಸಿ ಬೇಕಾಬಿಟ್ಟಿ ಹೊಸ ಸಿಎಲ್7(ಹೋಟೆಲ್ ಮತ್ತು ವಸತಿ ಗೃಹ) ಮದ್ಯದಂಗಡಿ ತೆರೆಯಲು ಪರವಾನಗಿ ನೀಡಲಾಗುತ್ತಿದೆ. ರಾಜ್ಯದಲ್ಲೇ ಅತಿ ಹೆಚ್ಚು ಸಿಎಲ್ 7 ಮದ್ಯದಂಗಡಿಗಳು ಬೆಂಗಳೂರಿನಲ್ಲಿದ್ದು, ಮೊದಲ ಸ್ಥಾನದಲ್ಲಿದೆ. ಹಾಸನ 2ನೇ ಸ್ಥಾನದಲ್ಲಿದೆ.

    ರಾಜ್ಯದ ಗಲ್ಲಿಗಲ್ಲಿಗಳಲ್ಲಿ ನಾಯಿಕೊಡೆಗಳಂತೆ ಸಿಎಲ್7 ಮದ್ಯದಂಗಡಿಗಳು ತಲೆ ಎತ್ತುತ್ತಿವೆ. 2020-21ರಲ್ಲಿ 1,572 ಸಿಎಲ್7 ಮದ್ಯದಂಗಡಿಗಳಿತ್ತು, ಆದರೆ, 2022-23ರಲ್ಲಿ ಇವುಗಳ ಸಂಖ್ಯೆ 2,382ಕ್ಕೇರಿದೆ. ಪ್ರಸಕ್ತ ಸಾಲಿನಲ್ಲಿ ಹೊಸ ಸಿಎಲ್7 ಪರವಾನಗಿ ಕೋರಿ ಸಾವಿರಾರು ಅರ್ಜಿಗಳು ಇಲಾಖೆ ಸಲ್ಲಿಕೆಯಾಗಿವೆ. ಮುಂದಿನ ಎರಡು ವರ್ಷಗಳಲ್ಲಿ ಇವುಗಳ ಸಂಖ್ಯೆ ನಾಲ್ಕು ಸಾವಿರ ಗಡಿ ದಾಟುವ ನಿರೀಕ್ಷೆ ಇದೆ. ಇದರೊಂದಿಗೆ 3,988 ವೈನ್‌ಶಾಪ್(ಸಿಎಲ್2) ಹಾಗೂ 3,634 ಸಿಎಲ್9 (ಬಾರ್ ಆ್ಯಂಡ್ ರೆಸ್ಟೋರೆಂಟ್) ಮದ್ಯದಂಗಡಿಗಿಂತ ಅತಿ ಹೆಚ್ಚು ಸಿಎಲ್7 ಮದ್ಯದಂಗಡಿಗಳು ಇರುವಂತಾಗಲಿದೆ.

    ಪ್ರತಿ ವರ್ಷ ಅಬಕಾರಿ ಇಲಾಖೆ ಸರಾಸರಿ ಹೊಸದಾಗಿ ಅಂದಾಜು 500-600 ಸಿಎಲ್7 ತೆರೆಯಲು ಪರವಾನಗಿ ಮಂಜೂರು ಮಾಡುತ್ತಿದೆ. ಮೈಸೂರು, ಬೆಂಗಳೂರು, ಮಂಡ್ಯ, ಹಾಸನ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ ಮತ್ತು ಬಾಗಲಕೋಟೆ ಸೇರಿ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಅತಿ ಹೆಚ್ಚು ಸಿಎಲ್7 ಅಂಗಡಿಗಳನ್ನು ತೆರೆಯಲಾಗಿದೆ. ರಾಜಕೀಯ ಮುಖಂಡರು, ಶಾಸಕರು, ಸಚಿವರು ಹಾಗೂ ಅವರ ಬೆಂಬಲಿಗರೇ ಹೆಚ್ಚಾಗಿ ಮದ್ಯದಂಗಡಿಗಳನ್ನು ತೆರೆಯುತ್ತಿದ್ದಾರೆ.

    ಬೇಕಾದಂತೆ ನಿಯಮ:
    ಇಲಾಖೆಯಿಂದ ಮದ್ಯದಂಗಡಿಗಳಿಗೆ ಅನುಮತಿ ನೀಡುವಂತೆ ಶಿಫಾರಸ್ಸು ಮಾಡುವ ವೇಳೆ ಅಧಿಕಾರಿಗಳು ತಮಗೆ ಬೇಕಾದಂತೆ ನಿಯಮಗಳನ್ನು ತಿರುಚುತ್ತಿದ್ದಾರೆ. ರೂಲ್ 5ರಂತೆ ಗೆಜೆಟೆಡ್ ಅಧಿಕಾರಿಯಿರುವ ಸರ್ಕಾರಿ ಕಚೇರಿಗೆ ಮಾತ್ರವೇ 100 ಮೀಟರ್ ನಿಯಮ ಅನ್ವಯವಾಗುತ್ತದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಆದರೆ, ಅಬಕಾರಿ ನಿಯಮ 5ರಂತೆ ಮದ್ಯದಂಗಡಿಗೆ ಅನುಮತಿ ನೀಡುವ ಸ್ಥಳದಿಂದ 100 ಮೀಟರ್ ಅಂತರದಲ್ಲಿ ಯಾವುದೇ ಧಾರ್ಮಿಕ ಕೇಂದ್ರಗಳು, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆ, ಕೇಂದ್ರ ಅಥವಾ ರಾಜ್ಯ ಸರ್ಕಾರದ ಯಾವುದೇ ಕಚೇರಿ ಅಥವಾ ಸ್ಥಳೀಯ ಸಂಸ್ಥೆಗಳ ಕಾರ್ಯಾಲಯಗಳು ಇರುವಂತಿಲ್ಲ. ವಸತಿ ಪ್ರದೇಶಗಳು, ಪರಿಶಿಷ್ಟ ಜಾತಿ(ಎಸ್ಸಿ) ಪರಿಶಿಷ್ಟ ಪಂಗಡ (ಎಸ್ಟಿ) ಕಾಲನಿಗಳು ಇರಬಾರು. ರಾಜ್ಯ ಅಥವಾ ರಾಷ್ಟ್ರೀಯ ಹೆದ್ದಾರಿಯಿಂದ 220 ಮೀಟರ್ ವ್ಯಾಪ್ತಿಯಲ್ಲಿ ಇರಬಾರದೆಂಬ ನಿಯಮವಿದೆ. ಆದರೆ, ಕೆಲ ಅಬಕಾರಿ ಅಧಿಕಾರಿಗಳು ಈ ಮೇಲಿನ ನಿಯಮಗಳನ್ನು ಉಲ್ಲಂಸಿ ಯದ್ವಾತದ್ವಾ ಸಿಎಲ್7 ಮಂಜೂರು ಮಾಡಲಾಗುತ್ತಿದೆ.

    2.5 ಕೋಟಿ ರೂ.ಬೇಕು:
    ಹೊಸದಾಗಿ ಸಿಎಲ್7 ಮದ್ಯದಂಗಡಿ ತೆರೆಯಲು ಅಂದಾಜು 2 ಕೋಟಿ ರೂ.ಬೇಕು. ಕರ್ನಾಟಕ ಅಬಕಾರಿ (ದೇಶಿ ಮತ್ತು ವಿದೇಶ ಮದ್ಯ ಮಾರಾಟ) ನಿಯಮ 1968ರ ರೂಲ್3(7) ಪ್ರಕಾರ ವಸತಿ ಗೃಹದಲ್ಲಿ ತಂಗುವ ಗ್ರಾಹಕರಿಗೆ ಹಾಗೂ ಅವರ ಸಂದರ್ಶಕರಿಗೆ ಮದ್ಯ ಸರಬರಾಜು ಮಾಡಲು ಅವಕಾಶವಿದೆ. ಆದ್ದರಿಂದ, ಮಹಾನಗರ ಪಾಲಿಕೆಯ ಪ್ರದೇಶದ ವಸತಿ ಗೃಹದಲ್ಲಿ ಕನಿಷ್ಠ 15 ಡಬಲ್ ಕೊಠಡಿ, ಇತರೆ ಪ್ರದೇಶಗಳಲ್ಲಿನ ವಸತಿ ಗೃಹದಲ್ಲಿ ಕನಿಷ್ಠ 10 ಕೊಠಡಿ, ಹಾಲ್, ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಗೃಹ ಹೊಂದಿರಬೇಕು. ಇಲಾಖೆಯ ಅಧಿಕಾರಿಗಳಿಂದ ಹಿಡಿದು ಸಚಿವರಿಗೆ ಲಕ್ಷಾಂತರ ರೂ.ಲಂಚ ಸೇರಿ ಇತರೆ ಖರ್ಚು ವೆಚ್ಚಕ್ಕೆ 2.5 ಕೋಟಿ ರೂ.ಆಗಲಿದೆ. ದುಡ್ಡಿನ ಕುಳಗಳು ಹೆಚ್ಚಾಗಿ ಪರವಾನಗಿ ಪಡೆದು ಮದ್ಯದಂಗಡಿ ತೆರೆಯತ್ತಿದ್ದಾರೆ.

    ಜಿಲ್ಲಾವಾರು ಸಿಎಲ್7 ವಿವರ:
    ಬೆಂಗಳೂರು 534, ಹಾಸನ 211, ಮೈಸೂರು 199, ಉಡುಪಿ 108, ಬೆಳಗಾವಿ 107, ದಕ್ಷಿಣ ಕನ್ನಡ 99, ಕೋಲಾರ 82, ಕಲಬುರಗಿ 82, ತುಮಕೂರು 78, ಮಂಡ್ಯ 72, ಬಾಗಲಕೋಟೆ 71, ಬೆಂ. ಗ್ರಾಮಾಂತರ 61, ಕೊಪ್ಪಳ 60, ಶಿವಮೊಗ್ಗ 52, ಕೊಡಗು 48, ವಿಜಯಪುರ 47, ರಾಯಚೂರು 45, ಧಾರವಾಡ 45, ಬೀದರ್ 43, ಗದಗ 40, ಚಿಕ್ಕಮಗಳೂರು 39, ಬಳ್ಳಾರಿ 33, ಹಾವೇರಿ 31, ಚಿಕ್ಕಬಳ್ಳಾಪುರ 31, ಉತ್ತರ ಕನ್ನಡ 30, ಚಾಮರಾಜನಗರ 27, ಯಾದಗಿರಿ 27, ಚಿತ್ರದುರ್ಗ 26, ರಾಮನಗರ 19, ವಿಜಯನಗರ 18, ದಾವಣಗೆರೆ 17.

    12,614 ಮದ್ಯದಂಗಡಿ:
    ರಾಜ್ಯದಲ್ಲಿ ಸದ್ಯ 12,614 ಮದ್ಯದಂಗಡಿಗಳಿವೆ. ರಾಜ್ಯದ ಇತರೆ ಜಿಲ್ಲೆಗಳಕ್ಕಿಂತ ಬೆಂಗಳೂರಲ್ಲೇ ಅತಿ ಹೆಚ್ಚು ಶೇ.45 ಮದ್ಯದಂಗಡಿಗಳಿವೆ. 3,988 ವೈನ್‌ಶಾಪ್(ಸಿಎಲ್2), 279 ಕ್ಲಬ್ (ಸಿಎಲ್4), 78 ಸ್ಟಾರ್ ಹೋಟೆಲ್ ( ಸಿಎಲ್6ಎ), 2,382 ಹೋಟೆಲ್ ಮತ್ತು ವಸತಿ ಗೃಹ, 68 ಮಿಲಿಟರಿ ಕ್ಯಾಂಟಿನ್ ಮಳಿಗೆ (ಸಿಎಲ್8), 3,634 ಬಾರ್ ಆ್ಯಂಡ್ ರೆಸ್ಟೋರೆಂಟ್ (ಸಿಎಲ್9), 1,041 ಎಂಎಸ್‌ಐಎಲ್ (ಸಿಎಲ್11ಸಿ), 745 ಆರ್‌ವಿಬಿ ಸೇರಿ ಒಟ್ಟಾರೆ 12,614 ಮದ್ಯದಂಗಡಿಗಳಿವೆ. ಸಿಎಲ್2 ಹಾಗೂ ಸಿಎಲ್9 ಹೊರತುಪಡಿಸಿ ಉಳಿದ ಮಾದರಿಯ ಮದ್ಯದಂಗಡಿಗಳನ್ನು ತೆರೆಯಲು ಇಲಾಖೆ ಲೈಸೆನ್ಸ್ ನೀಡುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts