More

    ಅಕ್ರಮವಾಗಿ ಅಕ್ಕಿ ಮಾರಿದ್ರೆ ಕ್ರಮ ; ಆಹಾರ ಸಚಿವ ಕೆ.ಗೋಪಾಲಯ್ಯ ಎಚ್ಚರಿಕೆ

    ತುಮಕೂರು : ಪಡಿತರ ಅಕ್ಕಿ ಪಾಲಿಷ್ ಮಾಡಿಸಿ ಕಾಳಸಂತೆಯಲ್ಲಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳಿದ್ದು ಪೊಲೀಸ್, ಕಂದಾಯ ಹಾಗೂ ಆಹಾರ ಇಲಾಖೆ ಅಧಿಕಾರಿಗಳಿಂದ ಜಂಟಿ ಕಾರ್ಯಾಚರಣೆಗೆ ಸೂಚಿಸಲಾಗಿದೆ ಎಂದು ಆಹಾರ ಸಚಿವ ಕೆ.ಗೋಪಾಲಯ್ಯ ತಿಳಿಸಿದರು.

    ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯಾದ್ಯಂತ 20 ದಿನಗಳಲ್ಲಿ ನಡೆದಿರುವ ಕಾರ್ಯಾಚರಣೆಯಲ್ಲಿ ಪಡಿತರ ಅಂಗಡಿಗಳಲ್ಲಿಯೇ ಅಕ್ರಮ ಬಯಲಾಗಿದೆ ಎಂದರು. ಯಾವುದೇ ಅಂಗಡಿಗಳಲ್ಲಿ ಸೂಕ್ತ ದಾಖಲೆ, ರಸೀದಿ ಇಲ್ಲದೆ ಅಕ್ಕಿ ಹಾಗೂ ಮತ್ತಿತರ ಪಡಿತರ ಧಾನ್ಯಗಳನ್ನು ಶೇಖರಿಸಿಟ್ಟಿರುವುದು ಕಂಡು ಬಂದಲ್ಲಿ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

    ನ್ಯಾಯಬೆಲೆ ಅಂಗಡಿ ಅಮಾನತು: ತೂಕದಲ್ಲಿ ವ್ಯತ್ಯಾಸ, ಪಡಿತರ ದುರ್ಬಳಕೆ, ಗ್ರಾಹಕರಿಗೆ ಮೋಸ, ಅಕ್ರಮ ದಾಸ್ತಾನು, ಹಣ ದುರುಪಯೋಗ ಮಾಡುತ್ತಿದ್ದ 180 ನ್ಯಾಯಬೆಲೆ ಅಂಗಡಿಗಳನ್ನು ಅಮಾನತಿನಲ್ಲಿಡಲಾಗಿದೆ. ಈ ಪೈಕಿ ಸಣ್ಣಪುಟ್ಟ ಲೋಪ ಆರೋಪವಿರುವ ಮೂರ‌್ನಾಲ್ಕು ಅಂಗಡಿಗಳನ್ನು ಅಮಾನತಿನಿಂದ ಕೈಬಿಟ್ಟು, ಲೋಪ ಸರಿಪಡಿಸಿಕೊಳ್ಳಲು ಸೂಚಿಸಿದ್ದೇವೆ ಎಂದು ಸಚಿವರು ತಿಳಿಸಿದರು.

    ನ್ಯಾಯಬೆಲೆ ಅಂಗಡಿಗಳನ್ನು ಆಯಾ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಸಲು ಆದೇಶ ನೀಡಲಾಗಿದ್ದು, ತನಿಖೆ ಪ್ರಕ್ರಿಯೆ ನಡೆಯುತ್ತಿದೆ ಎಂದರು. ವಿತರಣೆಯಲ್ಲಿ ವ್ಯತ್ಯಾಸವಿರುವುದು ಕಂಡು ಬಂದರೆ ಗ್ರಾಹಕರು ಯಾವುದೇ ಕಾರಣಕ್ಕೂ ಮಣಿಯದೆ ಪ್ರತಿಭಟಿಸಬೇಕು. ಇಲ್ಲವೆ ಇಲಾಖೆ ಸಹಾಯವಾಣಿ ಸಂಖ್ಯೆ 1967ಕ್ಕೆ ದೂರು ನೀಡಿದಲ್ಲಿ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು. ಸಂಸದ ಜಿ.ಎಸ್.ಬಸವರಾಜು, ಮಾಜಿ ಸಚಿವ ಎಸ್.ಶಿವಣ್ಣ, ಆಹಾರ ಇಲಾಖೆ ಜೆಡಿ ಶ್ರೀನಿವಾಸಯ್ಯ ಇದ್ದರು.

    ಸ್ವಪ್ರೇರಿತರಾಗಿ ಕಾರ್ಡ್ ಹಿಂದಿರುಗಿಸಿ! : ತೆರಿಗೆ ಪಾವತಿದಾರರು, ಸ್ವಂತ ಕಾರು, ಮೋಟಾರು ವಾಹನ ಹೊಂದಿದವರು, ಸರ್ಕಾರಿ ಹಾಗೂ ನಿವೃತ್ತ ಸರ್ಕಾರಿ ನೌಕರರು ಉಚಿತ ಪಡಿತರ ಪಡೆಯಲು ಅರ್ಹರಲ್ಲ. ಬಡತನ ರೇಖೆಗಿಂತ ಮೇಲಿರುವವರು ಬಿಪಿಎಲ್ ಕಾರ್ಡ್ ಹೊಂದಿದ್ದಲ್ಲಿ ಕೂಡಲೇ ಸ್ವಯಂಪ್ರೇರಿತರಾಗಿ ಜೂನ್ ಅಂತ್ಯದೊಳಗೆ ಇಲಾಖೆಗೆ ಒಪ್ಪಿಸಬೇಕು. ಇಲ್ಲದಿದ್ದಲ್ಲಿ ಕ್ರಮ ಜರುಗಿಸಲಾಗುವುದು ಎಂದು ಆಹಾರ ಸಚಿವರು ಎಚ್ಚರಿಸಿದರು. ಜೂ.8ರ ನಂತರ ಆಹಾರ ಇಲಾಖೆ ಅಧಿಕಾರಿಗಳು ರಾಜ್ಯಾದ್ಯಂತ ಗೋದಾಮು, ಪಡಿತರ ಅಂಗಡಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಲಿದ್ದಾರೆ ಎಂದರು.

    ವಲಸೆ ಕುಟುಂಬಕ್ಕೆ ಪಡಿತರ: ಕರೊನಾ ಹಿನ್ನೆಲೆಯಲ್ಲಿ ಹಸಿವಿನಿಂದ ಬಳಲಬಾರದೆಂಬ ಕಾತರಣಕ್ಕೆ ವಲಸೆ ಕಾರ್ಮಿಕರು, ಪಡಿತರ ಚೀಟಿ ಹೊಂದಿಲ್ಲದ ಕುಟುಂಬಗಳಿಗೆ ತಲಾ 2 ಕೆಜಿ ಕಡಲೆ ಕಾಳು, ಕುಟುಂಬ ಸದಸ್ಯರಿಗೆ ತಲಾ 10 ಕೆಜಿ ಅಕ್ಕಿಯನ್ನು 4 ಲಕ್ಷಕ್ಕಿಂತ ಹೆಚ್ಚು ವಲಸೆ ಕುಟುಂಬಗಳಿಗೆ ವಿತರಿಸಲಾಗಿದೆ ಎಂದು ಸಚಿವರು ತಿಳಿಸಿದರು.

    ಕಲಬುರಗಿ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ಅಕ್ರಮವಾಗಿ ಪಡಿತರ ದಾಸ್ತಾನು ಮಾಡಿದ್ದ ಅಂಗಡಿಗಳ ಮೇಲೆ ದಾಳಿ ಮಾಡಿ 4000 ಕ್ವಿಂಟಾಲ್ ಅಕ್ಕಿ ವಶಪಡಿಸಿಕೊಂಡು ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ.
    ಕೆ.ಗೋಪಾಲಯ್ಯ ಆಹಾರ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts