More

    ವಿಟ್ಲ ಪಪಂ ಐವರು ಪೌರ ಕಾರ್ಮಿಕರಿಗೆ ಕೊಕ್? ಡಿಸಿಗೆ ದೂರು ನೀಡಿದ್ದಕ್ಕೆ ಶಿಕ್ಷೆ

    | ನಿಶಾಂತ್ ಬಿಲ್ಲಂಪದವು ವಿಟ್ಲ
    ಸಿಬ್ಬಂದಿ ಕೊರತೆಯ ಮಧ್ಯೆಯೂ ವಿಟ್ಲ ಪಟ್ಟಣ ಪಂಚಾಯಿತಿಯಲ್ಲಿ ಕೆಲಸದಲ್ಲಿ ತಾರತಮ್ಯ ಮಾಡುತ್ತಿರುವ ವಿಷಯವನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದನ್ನೇ ನೆಪವಾಗಿರಿಸಿಕೊಂಡು ಐವರು ಪೌರಕಾರ್ಮಿಕರನ್ನು ಕೆಲಸಕ್ಕೆ ಬಾರದಂತೆ ತಡೆದಿರುವ ಆರೋಪ ಕೇಳಿಬಂದಿದೆ.

    ವಿಟ್ಲ ಪಟ್ಟಣ ಪಂಚಾಯಿತಿಯಲ್ಲಿ 27 ಪೌರಕಾರ್ಮಿಕರ ಅವಶ್ಯಕತೆ ಇದ್ದು, ನೇರ ಪಾವತಿಯಲ್ಲಿ 18 ಜನ ಕಾರ್ಯ ನಿರ್ವಹಿಸುತ್ತಿದ್ದಾರೆ. ಆರು ಕಸ ಸಾಗಾಟದ ವಾಹನದಲ್ಲಿ 14 ಮಂದಿ ಜವಾಬ್ದಾರಿ ನಿಭಾಯಿಸುತ್ತಿದ್ದು, ನಾಲ್ವರು ಕಚೇರಿಯಲ್ಲಿ ಬೇರೆ ಕೆಲಸಗಳನ್ನು ನಿರ್ವಹಿಸುತ್ತಿದ್ದರು. ಕಸ ವಿಲೇವಾರಿ ನಿರತ ಪೌರಕಾರ್ಮಿಕರನ್ನು ಕಚೇರಿಯಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕರು ಹೀಯಾಳಿಸುತ್ತಿದ್ದು, ಅವರನ್ನು ನಮ್ಮಂತೆ ಸ್ವಚ್ಛತೆಯ ಕೆಲಸಕ್ಕೆ ನಿಯೋಜಿಸುವಂತೆ ಕಳೆದ ತಿಂಗಳು ಐವರು ಪೌರ ಕಾರ್ಮಿಕರು ದ.ಕ. ಜಿಲ್ಲಾಧಿಕಾರಿಗೆ ದೂರು ನೀಡಿದ್ದರು.

    ಪೌರ ಕಾರ್ಮಿಕರಾಗಿದ್ದರೂ ಇತರ ಕೆಲಸಗಳನ್ನು ಮಾಡುತ್ತಿದ್ದ ನಾಲ್ವರನ್ನು ದೂರು ನೀಡಿದ ಬಳಿಕ ಸ್ವಚ್ಛತೆಯ ಕೆಲಸಕ್ಕೆ ನಿಯೋಜಿಸಲಾಗಿದೆ. ಆದರೆ, ದೂರು ನೀಡಿದ್ದರಿಂದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅಸಮಾಧಾನಗೊಂಡಿದ್ದಾರೆ. ಹಲವು ವರ್ಷಗಳಿಂದ ನೇರ ಪಾವತಿ ವ್ಯವಸ್ಥೆಯಡಿ ಸಂಬಳ ಪಡೆಯುತ್ತಿದ್ದ ಹಾಗೂ ಜಿಲ್ಲಾಡಳಿತಕ್ಕೆ ದೂರು ನೀಡಿದ್ದ ಐವರು ಸಿಬ್ಬಂದಿಗೆ ಮುಂದೆ ಕೆಲಸಕ್ಕೆ ಬಾರದಂತೆ ಸೂಚಿಸಲಾಗಿದ್ದು, ಕೆಲಸ ಕಳೆದುಕೊಂಡವರು ಕಂಗಾಲಾಗಿದ್ದಾರೆ.

    ಮೂರು ವರ್ಷದಿಂದ ಕೆಲಸ: ಜಿಲ್ಲಾಧಿಕಾರಿಗೆ ದೂರು ನೀಡಿದ ಐವರು ಕಾರ್ಮಿಕರ ವಿರುದ್ಧ ಪಟ್ಟಣ ಪಂಚಾಯಿತಿ ಬೇರೆ ಬೇರೆ ಅಸ್ತ್ರಗಳನ್ನು ಪ್ರಯೋಗಿಸುತ್ತಿದೆ. ನಿಮ್ಮನ್ನು ಕೆಲಸಕ್ಕೆ ನೇಮಕಾತಿ ಮಾಡುವ ಸಂಬಂಧ ಪಟ್ಟಣ ಪಂಚಾಯಿತಿಯಲ್ಲಿ ಯಾವುದೇ ನಿರ್ಣಯ ಆಗಿಲ್ಲ, ನೇಮಕಾತಿ ಆದೇಶ ಪತ್ರ ಹಿಡಿದು ಬನ್ನಿ ಎಂದು ವಾಪಸ್ ಕಳುಹಿಸಲಾಗಿದೆ. ಆದರೆ ಇದೇ ಐದು ಮಂದಿಗೆ ಪಟ್ಟಣ ಪಂಚಾಯಿತಿ ಗುರುತಿನ ಚೀಟಿ ನೀಡಿದೆ. ಹಾಜರಾತಿ ದಾಖಲೆಗಳಿವೆ. ಕಳೆದ ಮೂರು ವರ್ಷಗಳಿಂದ ಪಟ್ಟಣ ಪಂಚಾಯಿತಿ ಬ್ಯಾಂಕ್ ಮೂಲಕ ವೇತನ ಕೂಡ ಪಾವತಿಸಿದೆ. ಈ ಸಂದರ್ಭ ಅವರ ನೇಮಕಾತಿಯ ನಿರ್ಣಯ ಆಗಿತ್ತೇ ಎಂಬುದು ಪ್ರಶ್ನೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಪಟ್ಟಣ ಪಂಚಾಯಿತಿ ಯೋಜನಾ ನಿರ್ದೇಶಕ ಅಭಿಷೇಕ್, ಪೌರಕಾರ್ಮಿಕರನ್ನು ಕೆಲಸಕ್ಕೆ ಬಾರದಂತೆ ತಡೆಹಿಡಿದಿರುವ ಆರೋಪದ ಬಗ್ಗೆ ವಿಚಾರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

    ‘ಕಾರ್ಮಿಕರ ಸಮಸ್ಯೆ ಬಗ್ಗೆ ಪಟ್ಟಣ ಪಂಚಾಯಿತಿಗೆ ಭೇಟಿ ನೀಡಿ ಮಾತುಕತೆ ನಡೆಸಲಾಗಿದೆ. ಯೋಜನಾ ಅಧಿಕಾರಿಯವರ ಸಭೆಯ ಬಳಿಕ ಒಂದು ವಾರದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದ್ದಾರೆ’ ಎಂದು ಪೌರಕಾರ್ಮಿಕ ಮತ್ತು ಹೊರಗುತ್ತಿಗೆ ನೌಕರರ ಸಂಘದ ಕರಾವಳಿ ಭಾಗದ ಸಂಚಾಲಕ ಅಣ್ಣಪ್ಪ ಕಾರೆಕಾಡು ಪ್ರತಿಕ್ರಿಯಿಸಿದ್ದಾರೆ.

    ಈ ಬಗ್ಗೆ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ. ಪೌರ ಕಾರ್ಮಿಕರಿಗೆ ಯಾವುದೇ ರೀತಿಯಲ್ಲಿ ಅನ್ಯಾಯ ಆಗಲು ಅವಕಾಶ ನೀಡುವುದಿಲ್ಲ.
    | ಡಾ.ರಾಜೇಂದ್ರ ಕೆ.ವಿ., ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts