More

    ಕೇಸರಿ ಮಯವಾಗಿದ್ದ ನಗರ್ತಪೇಟೆ: ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣ

    ಬೆಂಗಳೂರು: ಅಜಾನ್ ಸಮಯದಲ್ಲಿ ಮೊಬೈಲ್ ಅಂಗಡಿಯಲ್ಲಿ ಭಜನೆ ಹಾಡು ಹಾಕಿದ ವಿಚಾರಕ್ಕೆ ಯುವಕರ ಗುಂಪೊಂದು ಅಂಗಡಿ ಮಾಲೀಕನ ಜತೆಗೆ ಜಗಳ ತೆಗೆದು ಹಲ್ಲೆ ಮಾಡಿದ್ದ ಘಟನೆಯನ್ನು ಖಂಡಿಸಿ, ಮಂಗಳವಾರ ನಗರ್ತಪೇಟೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದರಿಂದ ಸ್ಥಳದಲ್ಲಿ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

    ಬಿಜೆಪಿ ಕಾರ್ಯಕರ್ತರು, ಹಿಂದು ಕಾರ್ಯಕರ್ತರು, ಹನುಮಭಕ್ತರು, ವರ್ತಕಯರು, ಸ್ಥಳೀಯ ನಿವಾಸಿಗಳು ಸೇರಿ ಸಾವಿರಕ್ಕೂ ಹೆಚ್ಚು ಪ್ರತಿಭಟನಾಕಾರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಇಡೀ ನಗರ್ತಪೇಟೆ ಕೇಸರಿ ಮಯವಾಗಿತ್ತು. ಕೇಸರಿ ಶಾಲು, ಭಗವಾಧ್ವಜ ಹಿಡಿದು ಜೈ ಶ್ರೀರಾಮ, ವಂದೇ ಮಾತರಂ, ಜೈ ಹನುಮಾನ್ ಘೋಷಣೆಗಳನ್ನು ಮೊಳಗಿಸಿದರು. ನಗರ್ತಪೇಟೆಯ ಬಹುತೇಕ ವರ್ತಕರು ಸ್ವಯಂ ಪ್ರೇರಿತರಾಗಿ ಮಧ್ಯಾಹ್ನದವರೆಗೆ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

    ಧರ್ಮರಾಯ ದೇವಸ್ಥಾನ ರಸ್ತೆ, ಎಸ್.ಪಿ.ರಸ್ತೆ, ಸಿದ್ದಣ್ಣ ಗಲ್ಲಿ ಸೇರಿ ಇಡೀ ನಗರ್ತಪೇಟೆಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಘಟನೆ ನಡೆದ ಕೃಷ್ಣ ಟೆಲಿಕಾಂ ಅಂಗಡಿ ಮತ್ತು ಜುಮ್ಮಾ ಮಸೀದಿ ಸೇರಿ ಇಡೀ ನಗರ್ತಪೇಟೆಗೆ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಹಲ್ಲೆಗೊಳಗಾದ ಮುಖೇಶ್ ಮೊಬೈಲ್ ಅಂಗಡಿಯಿಂದ ಹನುಮಾನ್ ಚಾಲೀಸ್ ಪಠಿಸಿಕೊಂಡು ನಗರ್ತಪೇಟೆಯಲ್ಲಿ ಮೆರವಣಿಗೆ ನಡೆಸಲು ಪ್ರತಿಭಟನಾಕಾರರು ಮುಂದಾದರು. ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ.ಮೋಹನ್, ಶೋಭಾ ಕರಂದ್ಲಾಜೆ, ಶಾಸಕ ಸುರೇಶ್ ಕುಮಾರ್, ಸಿ.ಕೆ.ರಾಮಮೂರ್ತಿ ಸೇರಿ ಬಿಜೆಪಿಯ ಹಲವು ಮುಖಂಡರು, ಹಿಂದು ಮುಖಂಡರು, ಹನುಮಂತರ ಭಕ್ತರು ಸೇರಿ ಭಾರೀ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

    ನೂಕಾಟ-ತಳ್ಳಾಟ:
    ಅನುಮತಿ ಇಲ್ಲದೆ ಮೆರವಣಿಗೆ ನಡೆಸಲು ಪೊಲೀಸರು ಅವಕಾಶ ನಿರಾಕರಿಸಿದ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಬಿಜೆಪಿ ಮುಖಂಡರ ನಡುವೆ ಕೆಲ ಕಾಲ ವಾಗ್ವಾದ ನಡೆಯಿತು. ತಾವು ಇದ್ದ ರಸ್ತೆಯಲ್ಲಿ ಕುಳಿತು ಜೈ ಶ್ರೀರಾಮ್ ಘೋಷಣೆ ಕೂಗಿ, ಭಜನೆ ಮಾಡಲು ಮುಂದಾದರು. ಶಾಂತಿಯುತ ಮೆರವಣಿಗೆ ನಡೆಸಲು ಅನುಮತಿ ನೀಡಬೇಕು ಎಂದು ಆಗ್ರಹಿಸಿದರು. ಏಕಾಏಕಿ ಅನುಮತಿ ನೀಡಲು ಸಾಧ್ಯವಿಲ್ಲ. ಪೂರ್ವಾನುಮತಿ ಇಲ್ಲದೆ ಯಾವುದೇ ಮೆರವಣಿಗೆ ನಡೆಸಲು ಬಿಡುವುದಿಲ್ಲ ಎಂದು ಪೊಲೀಸರು ಹೇಳಿದರು.ಇದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು, ಅನುಮತಿ ನೀಡಲೇಬೇಕು ಎಂದು ಪಟ್ಟು ಹಿಡಿದರು. ಪೊಲೀಸರ ವರ್ತನೆ ವಿರುದ್ಧ ಕಿಡಿಕಾರಿದರು. ಈ ವೇಳೆ ಪರಿಸ್ಥಿತಿ ಬಿಗಡಾಯಿಸುತ್ತಿರುವುದನ್ನು ಅರಿತ ಪೊಲೀಸರು ಮತ್ತಷ್ಟು ಪೊಲೀಸರನ್ನು ಸ್ಥಳಕ್ಕೆ ಕರೆಸಿಕೊಂಡು ಮೆರವಣಿಗೆ ನಡೆಸದಂತೆ ತಡೆದರು. ಆಗ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಕೆಲ ಕಾಲ ನೂಕಾಟ-ತಳ್ಳಾಟ ನಡೆಯಿತು.

    ಸುರೇಶ್ ಕುಮಾರ್‌ನನ್ನು ಎಳೆದಾಡಿದರು:
    ಹನುಮಾನ್ ಚಾಲೀಸ್ ಪಠಿಸಿಕೊಂಡು ಮೆರವಣಿಗೆ ಮಾಡಲು ಸಿದ್ಧರಾಗಿದ್ದ ಪ್ರತಿಭಟನಾಕಾರರ ಜತೆಗೆ ಹಲ್ಲೆಗೊಳಗಾದ ಯುವಕ ಮುಖೇಶ್ ಸಹ ಭಾಗವಹಿಸಿದ್ದ. ಈತ ಸ್ಥಳದಲ್ಲಿಯೇ ಇದ್ದರೆ ಪರಿಸ್ಥಿತಿ ಕೈ ಮೀರುವುದನ್ನು ಅರಿತ ಪೊಲೀಸರು, ಮುಂಜಾಗೃತ ಕ್ರಮವಾಗಿ ಆತನನ್ನು ವಶಕ್ಕೆ ಪಡೆದು ಕರೆದೊಯ್ದರು. ಈ ವೇಳೆ ಪ್ರತಿಭಟನಾಕಾರರು ಆಕ್ರೋಶ ಮುಗಿಲು ಮುಟ್ಟಿತು. ಪೊಲೀಸರ ವಿರುದ್ಧವೇ ಘೋಷಣೆ ಕೂಗಿ ಕೆಂಡಕಾರಿದರು. ಮುಖೇಶ್‌ನನ್ನು ಪೊಲೀಸರು ವಶಕ್ಕೆ ಪಡೆದು ಪೊಲೀಸ್ ಜೀಪಿಗೆ ಹತ್ತಿಸಿಕೊಂಡು ಕರೆದೊಯ್ಯಲು ಮುಂದಾದಾಗ, ಶಾಸಕ ಸುರೇಶ್ ಕುಮಾರ್ ಅವರು ಪೊಲೀಸ್ ಜೀಪಿಗೆ ಅಡ್ಡ ನಿಂತು ಪ್ರತಿಭಟಿಸಿದರು. ಈ ವೇಳೆ ಪೊಲೀಸರು ಸುರೇಶ್ ಕುಮಾರ್ ಅವರ ಕೈಗಳನ್ನು ಹಿಡಿದು ಕೆಲ ಕಾಲ ಎಳೆದಾಡಿದ ಪ್ರಸಂಗವೂ ನಡೆಯಿತು. ಇದರಿಂದ ಪ್ರತಿಭಟನಾಕಾರರು ಮತ್ತಷ್ಟು ಕೋಪಗೊಂಡು ಪೊಲೀಸರ ಜತೆಗೆ ವಾಗ್ವಾದಕ್ಕೆ ಇಳಿದರು. ಆದರೂ ಪೊಲೀಸರು, ಸುರೇಶ್ ಕುಮಾರ್ ಅವರನ್ನು ಜೀಪಿನ ಎದುರಿನಿಂದ ಪಕ್ಕಕ್ಕೆ ಎಳೆದು ಮುಖೇಶ್‌ನನ್ನು ಕರೆದೊಯ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts