More

    ಮಧ್ಯವರ್ತಿಗಳಿಗೆ ಕೊಡುವ ಗೌರವ ನಮಗೂ ನೀಡಿ

    ಅಧಿಕಾರಿಗಳ ಕಾರ್ಯವೈಖರಿಗೆ ಸದಸ್ಯರ ಬೇಸರ

    ದೊಡ್ಡಬಳ್ಳಾಪುರ ನಗರಸಭೆಯಲ್ಲಿ ವಾಗ್ದಾಳಿ

    ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
    ಸ್ವಾಮಿ ನಮ್ಮ ಬೀದಿಯಲ್ಲಿ ರಸ್ತೆ, ಚರಂಡಿ ಇಲ್ಲ. ಎಲ್ಲ ವಾರ್ಡ್‌ಗಳಿಗೂ ಸರಿಸಮನಾಗಿ ಅನುದಾನ ನೀಡಿ, ಕಂದಾಯ, ನೀರಿನ ಬಿಲ್, ತೆರಿಗೆಗಳನ್ನು ವಸೂಲಿ ಮಾಡಿ. ನಗರಸಭೆ ಕಾರ್ಯಾಲಯದಲ್ಲಿ ಮಧ್ಯವರ್ತಿಗಳಿಗೆ ನೀಡಲಾಗುವ ಗೌರವ ನಮಗೂ ನೀಡಿ…
    ಇದು, ನಗರಸಭೆಯಲ್ಲಿ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ನಗರಸಭೆ ಅಧಿಕಾರಿಗಳ ಮೇಲೆ ಸದಸ್ಯರು ವಾಗ್ದಾಳಿ ಮಾಡಿದ ಪರಿ. ಅಧಿಕಾರಿಗಳ ಕಾರ್ಯವೈಖರಿಯಿಂದಾಗಿ ಸದಸ್ಯರು ವಾರ್ಡ್‌ಗಳಲ್ಲಿ ತಲೆ ಎತ್ತಿ ಓಡಾಡದಂತಾಗಿದೆ. ಕನಿಷ್ಠ ಮೂಲಸೌಕರ್ಯಗಳಿಗಾದರೂ ಆದ್ಯತೆ ನೀಡಬೇಕು ಎಂಬ ಆಗ್ರಹ ಕೇಳಿಬಂತು.

    ಕಟ್ಟುನಿಟ್ಟಾಗಿ ಕಂದಾಯ ವಸೂಲಿ ಮಾಡಿ: ಅಧಿಕಾರಿಗಳು ಕಂದಾಯ, ನೀರಿನ ಬಿಲ್, ಇತರ ತೆರಿಗೆಗಳನ್ನು ಸಮರ್ಪಕವಾಗಿ ವಸೂಲಿ ಮಾಡುವಲ್ಲಿ ವಿಫಲರಾಗಿದ್ದಾರೆ. ಪ್ರತಿ ತಿಂಗಳ ನಿಗದಿತ ಗುರಿ ತಲುಪಿದ್ದೀರಾ ಎಂಬುದಕ್ಕೆ ಅಧಿಕಾರಿಗಳಿಂದ ಉತ್ತರ ಇಲ್ಲ. ವಾರ್ಡ್‌ಗಳಲ್ಲಿ ಕೆಲಸಗಳು ಆಗುತ್ತಿಲ್ಲ. ಯುಜಿಡಿ ಸಮಸ್ಯೆಗಳನ್ನು ಬಗೆಹರಿಸುವವರೇ ಇಲ್ಲ ಎಂದು ರವಿಕುಮಾರ್, ಶಿವಶಂಕರ್, ತ.ನ ಪ್ರಭುದೇವ, ಶಿವರಾಜು ದೂರಿದರು.
    ನಗರದಲ್ಲಿ ್ಲೆಕ್ಸ್ ಅಳವಡಿಸಲು ಶುಲ್ಕ ವಸೂಲಿ ಮಾಡುವುದಿಲ್ಲ. ನಗರದ ವಿವಿಧೆಡೆ ಆಯೋಜಿಸುವ ವಾಣಿಜ್ಯ ವಸ್ತುಪ್ರದರ್ಶನಗಳಿಂದ ಶುಲ್ಕ ಕಟ್ಟಿಸಿಕೊಳ್ಳುವುದಿಲ್ಲ. ಬೇಕಾಬಿಟ್ಟಿಯಾಗಿ ತೆರಿಗೆಗಳನ್ನು ವಸೂಲಿ ಮಾಡಲಾಗುತ್ತಿದೆ ಎಂದು ಮಲ್ಲೇಶ್ ದೂರಿದರು.
    ಪ್ರತಿ ತಿಂಗಳು ಶೇ.70 ತೆರಿಗೆ ವಸೂಲಿ ಮಾಡಲಾಗುತ್ತಿದೆ. ಮುಂದಿನ ಸಭೆಯ ವೇಳೆ ಶೇ.100 ಗುರಿಸಾಧಿಸಿ ಅಂಕಿ ಅಂಶಗಳನ್ನು ಸಭೆಗೆ ನೀಡುತ್ತೇನೆ ಎಂದು ಪೌರಾಯುಕ್ತ ಕೆ.ಪರಮೇಶ್ ಪ್ರತಿಕ್ರಿಯಿಸಿದರು.

    ಬಗೆಹರಿಯದ ಕೋರ್ಟ್ ವ್ಯಾಜ್ಯ: ನಗರದ ವಿವಿಧೆಡೆಯ ಸ್ವತ್ತುಗಳಿಗೆ ಸಂಬಂಧಿಸಿದಂತೆ ನಗರಸಭೆ ಮತ್ತು ಖಾಸಗಿ ವ್ಯಕ್ತಿಗಳ ನಡುವಿನ ಕೋರ್ಟ್ ವ್ಯಾಜ್ಯಗಳ ಬಗ್ಗೆ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ್ಯ ಹೊಂದಿದ್ದಾರೆ. ಹಲವು ದಶಕಗಳಿಂದ ಈವರೆಗೆ ಒಂದೇ ಒಂದು ಕೇಸ್ ಗೆದ್ದ ಪ್ರಕರಣ ಇಲ್ಲ. ಪ್ರಕರಣಗಳು ಯಾವ ಹಂತದಲ್ಲಿವೆ ಎಂಬ ಮಾಹಿತಿಯನ್ನು ಮೂರು ಸಾಮಾನ್ಯ ಸಭೆಗಳಿಂದಲೂ ಕೇಳುತ್ತಿದ್ದರೂ ಈವರೆಗೆ ಮಾಹಿತಿ ನೀಡಿಲ್ಲ. ವಕೀಲರ ಖರ್ಚುವೆಚ್ಚದ ಮಾಹಿತಿಯೂ ಇಲ್ಲ. ಯಾವ ಕೇಸ್‌ಗೆ ಎಷ್ಟು ವೆಚ್ಚ ಎಂದು ಸದಸ್ಯರಿಗೆ ತಿಳಿದಿಲ್ಲ. ಇದು ಅಧಿಕಾರಿಗಳ ಕಾರ್ಯವೈಖರಿಯಾಗಿದೆ ಎಂದು ಪ್ರಭಾ ನಾಗರಾಜ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts