More

    ಬೆಳೆ ಸರ್ವೇ ವೇಳೆ ಗಾಂಜಾ ಮೇಲಿರಲಿ ನಿಗಾ: ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಸೂಚನೆ

    ಚಿತ್ರದುರ್ಗ: ಬೆಳೆ ಸರ್ವೇ, ಸಮೀಕ್ಷೆ ಕೈಗೊಳ್ಳುವಾಗ ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಗಾಂಜಾ ಬೆಳೆಯ ಬಗ್ಗೆ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಸೂಚಿಸಿದರು.

    ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ, ಕರ್ನಾಟಕ ಲೋಕಾಯುಕ್ತ ಕಾಯ್ದೆ 1984ರ ಕುರಿತು ಜಿಪಂ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

    ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ಎಂ.ಮನಗೂಳಿ ಪ್ರೇಮಾವತಿ ಅವರು, ಕಂದಾಯ ಇಲಾಖೆ ವತಿಯಿಂದ ಬೆಳೆ ಸರ್ವೇ ಕೈಗೊಳ್ಳುವಾಗ ಗಾಂಜಾ ಬೆಳೆಯುವ ಬಗ್ಗೆ ನಿಗಾ ವಹಿಸುವಂತೆ ಸೂಚಿಸಿದ್ದಾರೆ. ಅದನ್ನು ನಮ್ಮ ಅಧಿಕಾರಿಗಳು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

    ಗ್ರಾಮಲೆಕ್ಕಾಧಿಕಾರಿಗಳು ಬೆಳೆ ಸರ್ವೇ ಸಂದರ್ಭದಲ್ಲಿ ರೈತರ ಹೊಲಗಳನ್ನು ಸಂಪೂರ್ಣವಾಗಿ ಪರಿಶೀಲಿಸಬೇಕು. ಪಿಡಿಒ ಮತ್ತು ಕೃಷಿ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ಕಟ್ಟು ನಿಟ್ಟಾಗಿ ಕೆಲಸ ಮಾಡಿದರೆ ಗಾಂಜಾ ಬೆಳೆ, ಮಾರಾಟ, ಸೇವನೆ ಎಲ್ಲವೂ ಸ್ಥಗಿತಗೊಳ್ಳುತ್ತದೆ ಎಂದು ಹೇಳಿದರು.

    ಗಾಂಜಾ ಬೆಳೆಯುವುದು ನಿಂತರೆ, ಗಾಂಜಾ ಮಾರಾಟದ ಸರಪಳಿ ತುಂಡಾಗುತ್ತದೆ. ರೈತರೂ ಗಾಂಜಾ ಬೆಳೆಯುವುದನ್ನು ಸ್ವಯಂ ಆಗಿ ಅರಿತುಕೊಂಡು ನಿಲ್ಲಿಸಬೇಕು. ಯಾರೂ ಕಾನೂನು ಚೌಕಟ್ಟು ಮೀರಬಾರದು. ಅಧಿಕಾರಿಗಳು ಸಾರ್ವಜನಿಕರ ಸೇವೆಯನ್ನು ನಿಷ್ಪಕ್ಷಪಾತವಾಗಿ ಮಾಡಬೇಕು ಎಂದು ಹೇಳಿದರು.

    ಕಾನೂನು ಬಲ್ಲವನಿಗೆ ಸಮಸ್ಯೆ ಇಲ್ಲ:

    ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ಎಂ.ಮನಗೂಳಿ ಪ್ರೇಮಾವತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾತು ಬಲ್ಲವನಿಗೆ ಜಗಳವಿಲ್ಲ. ಊಟ ಬಲ್ಲವನಿಗೆ ರೋಗವಿಲ್ಲ. ಅದೇರೀತಿ ಕಾನೂನು ಬಲ್ಲವನಿಗೆ ಸಮಸ್ಯೆ ಇಲ್ಲ; ಗೌರವಿಸಿ ಪಾಲಿಸುವವರಿಗೆ ಕಾನೂನು ಸದಾ ರಕ್ಷಣೆ ನೀಡುತ್ತದೆ ಎಂದು ಹೇಳಿದರು.

    ಲೋಕಾಯುಕ್ತ ಒಂದು ಸ್ವತಂತ್ರ ಸಂಸ್ಥೆ. ನ್ಯಾಯಮೂರ್ತಿ ಸಂತೋಷ್ ಹೆಗಡೆ, ವೆಂಕಟಾಚಲಯ್ಯ ಅವರು ಜನಮಾನಸದಲ್ಲಿ ಕರ್ನಾಟಕ ಲೋಕಾಯುಕ್ತ ಹೆಸರುಳಿಯುವಂತಹ ಕಾರ್ಯ ಮಾಡಿದ್ದಾರೆ. ಸರ್ಕಾರಿ ನೌಕರರು ಲೋಕಾಯುಕ್ತ ಕಾರ್ಯಾಚರಣೆ ಬಗ್ಗೆ ಹಾಗೂ ಅದರ ಕಾರ್ಯ ವೈಖರಿ, ಕಾನೂನು ಉಲ್ಲಂಘನೆಗೆ ಯಾವ ಶಿಕ್ಷೆ ಎನ್ನುವುದನ್ನು ತಿಳಿದುಕೊಳ್ಳಬೇಕು ಎಂದರು.

    ಲೋಕಾಯುಕ್ತ ಯಾವ ರೀತಿಯ ಪ್ರಕರಣಗಳನ್ನು ದಾಖಲು ಮಾಡಿಕೊಳ್ಳುತ್ತದೆ. ಯಾವ ರೀತಿ ಪರಿಶೀಲನೆ ಮಾಡುತ್ತದೆ. ಅದರ ಪರಿಣಾಮವೇನು? ಎಂಬುದನ್ನು ತಿಳಿದು ಕರ್ತವ್ಯ ನಿರ್ವಹಿಸಬೇಕು. ಕಾನೂನನ್ನು ಪರಿಪಾಲಿಸಿ ಉತ್ತಮ ಸೇವೆ ನೀಡಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

    ಕಾರ್ಯಕ್ರಮದಲ್ಲಿ ಶಿವಮೊಗ್ಗ ಕರ್ನಾಟಕ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಎನ್.ಮೃತ್ಯುಂಜಯ ಕರ್ನಾಟಕ ಲೋಕಾಯುಕ್ತ ಕಾಯ್ದೆ 1984ರ ಕುರಿತು ಉಪನ್ಯಾಸ ನೀಡಿದರು. ಜಿಲ್ಲಾ ಲೋಕಾಯುಕ್ತ ಎಸ್‌ಪಿ ಎನ್.ವಾಸುದೇವರಾಮ, ಜಿಪಂ ಉಪ ಕಾರ್ಯದರ್ಶಿ ಡಾ. ರಂಗಸ್ವಾಮಿ, ವಕೀಲರ ಸಂಘದ ಉಪಾಧ್ಯಕ್ಷ ಬಿ.ಸಿ.ದಯಾನಂದ, ಕಾರ್ಯದರ್ಶಿ ಎಂ.ಮೂರ್ತಿ, ಲೋಕಾಯುಕ್ತ ವಿಶೇಷ ಅಭಿಯೋಜಕ ಬಿ.ಮಲ್ಲೇಶಪ್ಪ, ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಜಿ.ಮಂಜುನಾಥ ಇತರರಿದ್ದರು.

    ಅಕ್ರಮಕ್ಕೆ ಹೊಣೆ ಆಗದಂತೆ ಕೆಲಸ ಮಾಡಿ

    ಅಕ್ರಮಗಳು ಬೆಳಕಿಗೆ ಬಂದಾಗ ಮೊದಲು ಪಿಡಿಒಗಳೇ ನೇರ ಹೊಣೆಗಾರರಾಗುತ್ತಾರೆ. ಆತ್ಮಸಾಕ್ಷಿಗೆ ಬದ್ಧವಾಗಿ ಕೆಲಸ ನಿರ್ವಹಿಸಬೇಕು. ಜನರು ಮತ್ತು ಜನಪ್ರತಿನಿಧಿಗಳ ನಡುವೆ ಕೆಲಸ ಮಾಡುವ ಅವಕಾಶ ಪಿಡಿಒಗಳಿಗಿದೆ. ಕಾನೂನಿಗೆ ಬದ್ಧರಾಗಿ ಕೆಲಸ ನಿರ್ವಹಿಸಿದರೆ ಯಾವುದೇ ತೊಂದರೆ ಬರುವುದಿಲ್ಲ. ಕಾನೂನುಗಳನ್ನು ಈ ನೆಲ-ಜಲದ ರಕ್ಷಣೆಗಾಗಿ ಮಾಡಲಾಗಿದೆ. ಕಾನೂನು ಪಾಲಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಸರ್ಕಾರಿ ನೌಕರರು ಕಾನೂನಿನ ಅರಿವಿದ್ದೂ ತಪ್ಪು ಮಾಡುವ ಸಂಭವವಿದೆ. ಹೀಗಾಗಬಾರದು. ಗ್ರಾಮೀಣ ಜನರಿಗೆ ಕೆಲಸ ನೀಡುವ ದೃಷ್ಟಿಯಿಂದ ನರೇಗಾ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ ಎಂದು ವಕೀಲರ ಸಂಘದ ಜಿಲ್ಲಾಧ್ಯಕ್ಷ ಸಿ.ಶಿವು ಯಾದವ್ ಹೇಳಿದರು.

    ಜನರು ಸಮಸ್ಯೆಗಳನ್ನು ಹೊತ್ತು ಲೋಕಾಯುಕ್ತ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಬರದ ಹಾಗೆ ಅಧಿಕಾರಿಗಳು ಕೆಲಸ ನಿರ್ವಹಿಸಬೇಕು. ಕಾಯ್ದೆ ಕಾನೂನು ಭಯದಿಂದ ಕಾರ್ಯ ನಿರ್ವಹಿಸದೆ, ಸ್ವ ಇಚ್ಛೆಯಿಂದ ಕೆಲಸ ಮಾಡಿದರೆ, ಜನರೇ ನಿಮ್ಮನ್ನು ಗುರುತಿಸುತ್ತಾರೆ. ಸರ್ಕಾರಿ ನೌಕರರೇ ಕಾಯ್ದೆ ಉಲಂಘಿಸಿದರೆ ಕಠಿಣ ಪರಿಸ್ಥಿತಿಗಳಿಗೆ ಸಿಲುಕಬೇಕಾಗುತ್ತದೆ.
    ಬಿ.ಕೆ.ಗಿರೀಶ್, ನ್ಯಾಯಾಧೀಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts