ಜಮಾಲ್​ ಕುಡು ಹಾಡೇನೋ ಚೆನ್ನಾಗಿದೆ ಆದ್ರೆ ಅರ್ಥವೇನು? ಮೊದಲು ಹಾಡಿದ್ದೆಲ್ಲಿ? ಇಲ್ಲಿದೆ ಇಂಟ್ರೆಸ್ಟಿಂಗ್​ ಉತ್ತರ…

Jamal Jamaloo Kudu
Published on

ಮುಂಬೈ: ಬಾಲಿವುಡ್​ ನಟ ರಣಬೀರ್​ ಕಪೂರ್​ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಅನಿಮಲ್​​ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ 650ಕ್ಕೂ ಅಧಿಕ ಕೋಟಿ ರೂ. ಬಾಚುವ ಮೂಲಕ ನಿರ್ಮಾಪಕರ ಮುಖದಲ್ಲಿ ಮಂದಹಾಸ ಮೂಡಿಸಿದೆ. ರಣಬೀರ್​ ಕಪೂರ್​ ಸಿನಿ ಕೆರಿಯರ್​ನಲ್ಲೇ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಇದಾಗಿದೆ. ಚಿತ್ರದಲ್ಲಿ ಹಿಂಸೆಯನ್ನು ವೈಭವೀಕರಿಸಲಾಗಿದೆ ಎಂಬ ಆರೋಪವಿದ್ದರೂ ಕೂಡ ಗಳಿಕೆಯಲ್ಲಿ ಈ ಸಿನಿಮಾ ಹಿಂದೆ ಬೀಳಲಿಲ್ಲ.

ಈ ಚಿತ್ರದ ಎಲ್ಲ ಪಾತ್ರಗಳು ಕೂಡ ಸಿನಿ ರಸಿಕರ ಮನದಲ್ಲಿ ಉಳಿದಿದೆ. ಅದರಲ್ಲೂ ಚಿತ್ರದ ಅಬ್ರಾರ್​ ಹಕ್ (ಬಾಬಿ ಡಿಯೋಲ್)​ ಖಳನಟನ ಪಾತ್ರವು ವೀಕ್ಷಕರ ಗಮನ ಸೆಳೆದಿದೆ. ಅದಕ್ಕೆ ಕಾರಣ ಅವರ ಇಂಟ್ರಡಕ್ಷನ್‌ಗೆ ಬಳಸಿದ ಜಮಾಲ್​ ಕುಡು ಹಾಡು. ಸಾಮಾಜಿಕ ಜಾಲತಾಣದಲ್ಲಿ ಎತ್ತ ನೋಡಿದರೂ ಬರೀ ಜಮಾಲ್​ ಕುಡು ಹಾಡೇ ಮೊಳಗುತ್ತಿದೆ. ಸಿನಿಮಾದ ಕಲೆಕ್ಷನ್​ ತಗ್ಗಿದರೂ ಜಮಾಲ್​ ಕುಡು ಅಬ್ಬರ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಜಾಲತಾಣದಲ್ಲಿ ರಣಬೀರ್​ಗಿಂತ ಬಾಬಿ ಡಿಯೋಲ್​ ದರ್ಶನವೇ ಜಾಸ್ತಿಯಾಗಿದೆ. ಅಷ್ಟರ ಮಟ್ಟಿಗೆ ಜಮಾಲ್​ ಕುಡು ಹಾಡು ವೈರಲ್​ ಆಗಿದ್ದು, ಸಾಕಷ್ಟು ಮಂದಿ ಈ ಹಾಡಿಗೆ ರೀಲ್ಸ್​ ಮತ್ತು ಶಾರ್ಟ್ಸ್​ ಮಾಡಿ ಹರಿಬಿಟ್ಟಿದ್ದಾರೆ.

ಹಾಡಿನ ಮೂಲವೇನು?

ಜಮಾಲ್​ ಕುಡು ಹಾಡೇನೋ ತುಂಬಾ ಚೆನ್ನಾಗಿದೆ. ಯಾರನ್ನೇ ಕೇಳಿದರೂ ಸಖತ್ತಾಗಿದೆ ಎಂದು ಹೇಳುತ್ತಾರೆ. ಆದರೆ, ಅದರ ಅರ್ಥವೇನು ಎಂದು ಪ್ರಶ್ನೆ ಮಾಡಿದರೆ ಬಹುತೇಕರು ಉತ್ತರಿಸಲಾರರು. ಆದರೆ, ಅದಕ್ಕೆ ಉತ್ತರ ಇಲ್ಲಿದೆ. ಜಮಾಲ್​ ಕುಡು ಎಂಬುದು ಒಂದು ಇರಾನಿಯನ್​ ಹಾಡಾಗಿದೆ. ಸಂಗೀತ ಸಂಯೋಜಕ ಹರ್ಷವರ್ಧನ್ ರಾಮೇಶ್ವರ್ ಅವರು ಅನಿಮಲ್​ ಚಿತ್ರದಲ್ಲಿ ಈ ಹಾಡಿಗೆ ಆಧುನಿಕ ಸ್ಪರ್ಶ ನೀಡಿದ್ದಾರೆ. ಮೂಲತಃ ಈ ಹಾಡನ್ನು ಇರಾನ್​ನ ಖತರೆಹ್ ಗುಂಪು ಸಂಯೋಜನೆ ಮಾಡಿದೆ. 1950ರ ದಶಕದಲ್ಲಿ ಖರಾಜೆಮಿ ಗರ್ಲ್ಸ್ ಹೈಸ್ಕೂಲ್‌ನಲ್ಲಿ ಮೊದಲ ಬಾರಿಗೆ ಈ ಹಾಡನ್ನು ಹಾಡಲಾಯಿತು. ಅಂದಹಾಗೆ ಜಮಾಲ್ ಜಮಾಲೂ ಕುಡು ಹಾಡು ಪ್ರಸಿದ್ಧ ಇರಾನಿನ ಕವಿ ಬಿಜನ್ ಸಮಂದರ್ ಬರೆದ ಕವಿತೆಯ ರೂಪಾಂತರವಾಗಿದೆ. ಅನಿಮಲ್​ ಸಿನಿಮಾದಲ್ಲಿ ಈ ಪ್ರಸಿದ್ಧವಾದ ಬೆನ್ನಲ್ಲೇ ಹಾಡಿನ ಹಳೆಯ ವರ್ಷನ್​ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಮತ್ತೆ ಶೇರ್ ಮಾಡಲಾಗುತ್ತಿದ್ದು, ಸಿನಿಮಾದಲ್ಲಿ ಬಳಸಿರುವ ಹೊಸ ಹಾಡಿಗಿಂತ ಹಳೆಯ ಹಾಡನ್ನೇ ಜನರು ಹೆಚ್ಚು ಆನಂದಿಸುತ್ತಿದ್ದಾರೆ.

ಹಾಡಿನ ಅರ್ಥವೇನು?

ಜಮಾಲ್​ ಜಮಾಲೇಕ್​ ಜಮಾಲೂ ಜಮಲ್​ ಕುಡು ಎಂದು ಆರಂಭವಾಗುವ ಹಾಡಿನ ಮೊದಲ ಸಾಲಿನ ಅರ್ಥವೇನೆಂದರೆ, ಓ ನನ್ನ ಪ್ರೀತಿಯೇ, ನನ್ನ ಪ್ರೀತಿಯೇ, ನನ್ನ ಸಿಹಿಯಾದ ಪ್ರೀತಿಯೇ! ಎಂಬುದಾಗಿದೆ.

* ಅಹಯ್ ಸಿಯಾಹ್ ಜಂಗಿ, ಡೆಲಾಮೊ ನಕೋನ್ ಖುನ್ (ಓಹ್ ನನ್ನ ಮೋಹನಾಂಗಿ, ನನ್ನ ಹೃದಯದೊಂದಿಗೆ ಆಟವಾಡಬೇಡ)

* ವೋಯ್ ತೊ ರಫ್ತಿ ಕೋಜಾ, ಮನಮ್ ಚೊ ಮಜ್ನುನ್ (ನೀನು ಹೊರಟು ಪ್ರಯಾಣ ಪ್ರಾರಂಭಿಸುತ್ತಿರುವೆ ಆದರೆ ನಾನು ಮಜ್ನುವಿನಂತೆ ಹುಚ್ಚನಾಗುತ್ತಿದ್ದೇನೆ)

* ಅಹಯ್ ಸಿಯಾಹ್ ಜಂಗಿ, ಡೆಲಾಮೊ ನಕೋನ್ ಖುನ್ (ಓಹ್ ನನ್ನ ಮೋಹನಾಂಗಿ, ನನ್ನ ಹೃದಯದೊಂದಿಗೆ ಆಟವಾಡಬೇಡ)

* ವೋಯ್ ತೊ ರಫ್ತಿ ಕೋಜಾ, ಮನಮ್ ಚೊ ಮಜ್ನುನ್ (ನೀವು ಹೊರಟು ಪ್ರಯಾಣ ಪ್ರಾರಂಭಿಸುತ್ತಿರುವೆ ಆದರೆ ನಾನು ಮಜ್ನುವಿನಂತೆ ಹುಚ್ಚನಾಗುತ್ತಿದ್ದೇನೆ)

* ಜಮಾಲ್​ ಜಮಾಲೇಕ್​ ಜಮಾಲೂ ಜಮಲ್​ ಕುಡು ಎಂದು ಆರಂಭವಾಗುವ ಹಾಡಿನ ಮೊದಲ ಸಾಲಿನ ಅರ್ಥವೇನೆಂದರೆ, ಓ ನನ್ನ ಪ್ರೀತಿಯೇ, ನನ್ನ ಪ್ರೀತಿಯೇ, ನನ್ನ ಸಿಹಿಯಾದ ಪ್ರೀತಿಯೇ! ಎಂಬುದಾಗಿದೆ.

ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಅನಿಮಲ್ ಚಿತ್ರವು ಡಿಸೆಂಬರ್​ 1ರಂದು ಚಿತ್ರಮಂದಿರಕ್ಕೆ ಅಪ್ಪಳಿಸಿತು. ಚಿತ್ರದಲ್ಲಿ ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ, ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈವರೆಗೂ 650 ಕೋಟಿ ರೂಪಾಯಿಗೂ ಅಧಿಕ ಗಳಿಕೆಯೊಂದಿಗೆ ಗಲ್ಲಾಪೆಟ್ಟಿಗಯಲ್ಲಿ ಅನಿಮಲ್​ ಸಿನಿಮಾ ಕಮಾಲ್​ ಮಾಡುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net