More

    7 ತಿಂಗಳ ಬಳಿಕ ತೆರೆಯಲಿವೆ ಥಿಯೇಟರ್ ; ಮುಖಗವಸು, ಸ್ಯಾನಿಟೈಸಿಂಗ್ ಕಡ್ಡಾಯ

    ತುಮಕೂರು : ಏಳು ತಿಂಗಳ ಬಳಿಕ ಮತ್ತೆ ಚಿತ್ರಪ್ರದರ್ಶನಕ್ಕೆ ಸಿನಿಮಾ ಮಂದಿರಗಳು ಮೈಕೊಡವಿಕೊಂಡು ಸಿದ್ಧಗೊಳ್ಳುತ್ತಿವೆ. ಕೋವಿಡ್ ಮಾರ್ಗಸೂಚಿ ಅನುಸರಿಸುವುದು ದುಬಾರಿ ಹೊರೆಯಾಗಿರುವುದಲ್ಲದೆ, ಸದ್ಯಕ್ಕೆ ಯಾವುದೇ ಹೊಸ ಚಿತ್ರಗಳ ಬಿಡುಗಡೆ ಇಲ್ಲದ ಕಾರಣ ಕೆಲವು ಸಿನಿಮಾ ಮಂದಿರಗಳು ಚಿತ್ರಪ್ರದರ್ಶನವನ್ನೂ ಮುಂದೂಡಿವೆ.

    ಅನ್‌ಲಾಕ್ 5.0 ಘೋಷಣೆಯಲ್ಲಿ ಅ.15ರಿಂದ ಸಿನಿಮಾ ಮಂದಿರಗಳಲ್ಲಿ ಚಿತ್ರ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಕರೊನಾ ಹಿನ್ನೆಲೆಯಲ್ಲಿ ಕಳೆದ ಮಾರ್ಚ್‌ನಲ್ಲಿ ಬಂದ್ ಆಗಿದ್ದ ಚಿತ್ರಮಂದಿರ ಬಾಗಿಲುಗಳು 7ತಿಂಗಳ ಬಳಿಕ ತೆರೆಯುತ್ತಿದ್ದು ಜಿಲ್ಲೆಯಲ್ಲಿಯೂ ಚಿತ್ರಪ್ರದರ್ಶನಕ್ಕೆ ಸಿನಿಮಾ ಮಂದಿರಗಳನ್ನು ಅಣಿಗೊಳಿಸಲಾಗುತ್ತಿದೆ.

    24 ಚಿತ್ರಮಂದಿರಗಳು: ಜಿಲ್ಲೆಯಲ್ಲಿ ಒಟ್ಟು 24 ಚಿತ್ರಮಂದಿರಗಳಿವೆ. ಜಿಲ್ಲಾಕೇಂದ್ರ ತುಮಕೂರಿನಲ್ಲಿ 6 ಥಿಯೇಟರ್‌ಗಳಿದ್ದು, ಸದ್ಯಕ್ಕೆ ಮಾರುತಿ ಹಾಗೂ ಪ್ರಶಾಂತ್ ಚಿತ್ರಮಂದಿರಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿ ಶುಕ್ರವಾರದಿಂದ ಮತ್ತೆ ಸಿನಿಮಾ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

    ಕುಣಿಗಲ್ ತಾಲೂಕು ಕೇಂದ್ರದಲ್ಲಿ 1 ಸಿನಿಮಾ ಮಂದಿರವಿದ್ದು ತಹಸೀಲ್ದಾರ್, ಕಂದಾಯ ನಿರೀಕ್ಷಕರು ಸ್ಥಳಕ್ಕೆ ತೆರಳಿ ಸಿದ್ಧತೆಯನ್ನು ಪರಿಶೀಲಿಸಿದ್ದಾರೆ. ಶೇ.50 ಆಸನ ವ್ಯವಸ್ಥೆಗಳಿಗೆ ಅನುಗುಣವಾಗಿ ಚಿತ್ರಪ್ರದರ್ಶನಕ್ಕೆ ಅನುವು ಮಾಡಿಕೊಟ್ಟಿದ್ದು ಗುರುವಾರದಿಂದಲೇ ಚಿರಂಜೀವಿ ಸರ್ಜಾ ನಟಿಸಿರುವ ಶಿವಾರ್ಜುನ್ ಪ್ರದರ್ಶನ ಇರಲಿದೆ.

    ಪ್ರತಿ ಶೋಗೂ ಸ್ಯಾನಿಟೈಸಿಂಗ್ ಕಡ್ಡಾಯ: ಚಿತ್ರಮಂದಿರಗಳನ್ನು ಸ್ವಚ್ಛಗೊಳಿಸಿ ಸ್ಯಾನಿಟೈಸಿಂಗ್ ಮಾಡಲಾಗಿದೆ. ಜತೆಗೆ ಅಂತರ ಕಾಪಾಡಲು ಶೇ.50 ಆಸನ ವ್ಯವಸ್ಥೆಗಾಗಿ ಪ್ರತೀ ಸೀಟಿನ ಬಳಿಕ ಟೇಪ್ ಹಾಕಲಾಗಿದೆ. ಇದಲ್ಲದೆ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಜತೆಗೆ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಸಹ ಮಾಡಿಕೊಳ್ಳಲಾಗಿದೆ. ಸಿನಿರಸಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಿನಿಮಾ ಮಂದಿರ ಪ್ರವೇಶಿಸುವ ವೇಳೆ ಪ್ರತಿಯೊಬ್ಬರನ್ನು ಥರ್ಮಲ್ ಸ್ಕ್ರೀನಿಂಗ್ ಒಳಪಡಿಸಲಾಗುವುದು. ಇದರ ಜತೆಗೆ ಪ್ರತಿ ಪ್ರದರ್ಶನ ಬಳಿಕ ಚಿತ್ರಮಂದಿರವನ್ನು ಸ್ಯಾನಿಟೈಸರ್ ಮಾಡಲಿದ್ದು ಸಿಬ್ಬಂದಿಗೆ ಗ್ಲೌಸ್, ಶೂ, ಮಾಸ್ಕ್ ಕಡ್ಡಾಯ ಧರಿಸಲು ಸೂಚಿಸಲಾಗಿದೆ ಎನ್ನುತ್ತಾರೆ ಮಾರುತಿ ಚಿತ್ರಮಂದಿರದ ಮಾಲೀಕ ಗಣೇಶ್.

    ಲವ್ ಮಾಕ್‌ಟೇಲ್ ಚಿತ್ರ ಮತ್ತೆ ಮರುಬಿಡುಗಡೆ : ಅಮೆಜಾನ್ ಪ್ರೈಮ್ ಮೂವಿಸ್‌ನಲ್ಲಿ ಧೂಳೆಬ್ಬಿಸಿರುವ ಲವ್ ಮಾಕ್‌ಟೇಲ್ ಚಿತ್ರ ಮರುಬಿಡುಗಡೆ ಮಾಡಲಾಗುತ್ತಿದ್ದು, ತುಮಕೂರಿನ ಪ್ರಶಾಂತ್ ಥಿಯೇಟರ್‌ನಲ್ಲಿ 2 ಪ್ರದರ್ಶನ ಇರಲಿದೆ. ಜತೆಗೆ ಕಾಣದಂತೆ ಮಾಯವಾದನು ಚಿತ್ರ 2 ಪ್ರದರ್ಶನ ಇರಲಿದೆ. ಮಾರುತಿ ಚಿತ್ರಮಂದಿರದಲ್ಲಿ ಚಿರಂಜೀವಿ ಸರ್ಜಾ ನಟಿಸಿರುವ ಶಿವಾರ್ಜುನ್ ಚಿತ್ರ ಪ್ರದರ್ಶನ ಇರಲಿದೆ.

    ಕರೊನಾ ಹರಡದಂತೆ ಚಿತ್ರ ಪ್ರದರ್ಶನಕ್ಕೆ ಹಲವಾರು ಮಾರ್ಗಸೂಚಿಗಳನ್ನು ಕಡ್ಡಾಯ ಪಾಲಿಸಿಕೊಂಡು ಚಿತ್ರಮಂದಿರ ನಡೆಸುವುದು ಕಷ್ಟಸಾಧ್ಯ. ಸದ್ಯದ ಪರಿಸ್ಥಿತಿಯಲ್ಲಿ ಹಾಗೂ ಸರ್ಕಾರ ವಿಧಿಸಿರುವ ನಿಯಮಗಳನ್ನು ಪಾಲಿಸಿದ್ದೇ ಆದಲ್ಲಿ ನಷ್ಟವಾಗಲಿದೆ. ಅದರ ಬದಲು ಚಿತ್ರಮಂದಿರ ತೆರೆಯದೇ ಇರಲು ನಿರ್ಧರಿಸಿದ್ದೇವೆ.
    ಟಿ.ಬಿ.ಹರೀಶ್ ಮಾಲೀಕ, ಜೈಭಾರತ್

    ಕೋವಿಡ್ ಮಾರ್ಗಸೂಚಿ ಅನ್ವಯದಂತೆ ಸಿನಿಮಾ ಮಂದಿರವನ್ನು ಅಣಿಗೊಳಿಸಲಾಗಿದೆ. ಸದ್ಯಕ್ಕೆ ಹೊಸ ಸಿನಿಮಾಗಳು ಬಿಡುಗಡೆ ಇಲ್ಲದೇ ಇರುವುದರಿಂದ ಈ ವಾರ ಚಿತ್ರ ಪ್ರದರ್ಶನ ಆರಂಭಿಸಿಲ್ಲ.
    ರುದ್ರಪ್ಪ ಮಾಲೀಕ ಗಾಯತ್ರಿ ಚಿತ್ರಮಂದಿರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts