More

    ಸಿನಿ ಯುಗಾದಿ: ತಾರೆಯರ ಮನದ ತುಂಬ ಹರುಷದ ಹೂರಣ

    ಮತ್ತೊಂದು ಯುಗಾದಿ ಬಂದಿದೆ. ಕರೊನಾ ಎರಡನೆಯ ಅಲೆಯ ಭಯ ಎಲ್ಲರಲ್ಲೂ ಸಹಜವಾಗಿಯೇ ಇದ್ದು, ಅದರ ಜತೆಗೆ ಹಬ್ಬದ ಸಂಭ್ರಮ ಸಹ ಮನೆ ಮಾಡಿದೆ. ಈ ಹೊಸ ವರ್ಷವನ್ನು ಹೇಗೆ ಆಚರಿಸುತ್ತಾರೆ ಎಂಬ ಪ್ರಶ್ನೆಯನ್ನು ಕನ್ನಡದ ಹಿರಿತೆರೆ ಮತ್ತು ಕಿರುತೆರೆಯ ಮೂವರು ಜನಪ್ರಿಯ ನಟಿಯರ ಮುಂದಿಟ್ಟಾಗ, ಸಿಕ್ಕ ಉತ್ತರ ಹೀಗಿದೆ.

    ಈ ಬಾರಿ ಸರಳ ಆಚರಣೆ

    ಸಹಜವಾಗಿ ನಮ್ಮ ಮನೆಯಲ್ಲಿ ಹಬ್ಬ ಅಂದರೆ ಕೊಂಚ ಅದ್ದೂರಿಯಾಗಿಯೇ ಆಚರಣೆ ಇರುತ್ತದೆ. ಪ್ರತಿ ಬಾರಿ ಅಜ್ಜಿ ಮನೆಗೆ ಹೋಗುತ್ತಿದ್ದೆವು. ನಮ್ಮ ಸಂಬಂಧಿಕರೆಲ್ಲ ಒಂದೆಡೆ ಸೇರಿ ಎಲ್ಲ ಹಬ್ಬವನ್ನು ಆಚರಿಸುತ್ತಿದ್ದೆವು. ಆದರೆ, ಇದೀಗ ಕೋವಿಡ್ ಎರಡನೇ ಅಲೆ ಹೆಚ್ಚುತ್ತಿದೆ. ಹಾಗಾಗಿ, ಸಾಧ್ಯವಾದಷ್ಟು ಸರಳವಾಗಿಯೇ ಆಚರಣೆ ಮಾಡಲಿದ್ದೇವೆ. ಹೊರಗಡೆ ಹೋಗುವುದನ್ನು ಬಿಟ್ಟು ಮನೆಯಲ್ಲೇ ಆಚರಣೆ ಇರಲಿದೆ. ಮನೆಯಲ್ಲಿ ಹಬ್ಬದ ಊಟ ಮಾತ್ರ ಭರ್ಜರಿಯಾಗೆಯೇ ಇರಲಿದೆ. ನನಗೆ ಅಡುಗೆ ಮಾಡಲು ಬರುವುದಿಲ್ಲ. ನನ್ನದೇನಿದ್ದರೂ, ಬ್ಯಾಟಿಂಗ್ ಮಾತ್ರ.

    | ನಿಶ್ವಿಕಾ ನಾಯ್ಡು

    ಚಿತ್ರೀಕರಣದಲ್ಲೇ ಹಬ್ಬ

    ಹಬ್ಬದ ವಿಷಯಕ್ಕೆ ಬಂದರೆ, ನಮಗೆ ಪ್ರಮುಖವಾಗಿ ಎರಡು ಹಬ್ಬಗಳಿವೆ. ಒಂದು ಓಣಂ. ಇನ್ನೊಂದು ವಿಶು. ಹಾಗಂತ ಬೇರೆ ಹಬ್ಬಗಳನ್ನು ಮಾಡುವುದಿಲ್ಲ ಎಂದೇನಲ್ಲ. ಎಲ್ಲ ಹಬ್ಬಗಳನ್ನೂ ಆಚರಿಸುತ್ತೇವೆ. ಅದೇ ತರಹ ಯುಗಾದಿ ಹಬ್ಬವನ್ನು ಸಹ ಆಚರಿಸುತ್ತೇನೆ. ಮನೆಯಲ್ಲಿ ಅದಕ್ಕಾಗಿ ವಿಶೇಷ ಪೂಜೆಯೇನೂ ಇರುವುದಿಲ್ಲ. ಬಹಳ ನಾರ್ಮಲ್ ಆಗಿ ಪೂಜೆ ನಡೆಯುತ್ತದೆ. ಮನೆಯಲ್ಲಿ ಇದ್ದರೆ, ಅಮ್ಮನಿಗೆ ಸಹಾಯ ಮಾಡುತ್ತಿದ್ದೆ. ಪೂಜೆ ಮತ್ತು ಅಡುಗೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದೆ. ಆದರೆ, ಈ ವರ್ಷದ ಹಬ್ಬದಲ್ಲಿ ಭಾಗಿಯಾಗುವುದಕ್ಕೆ ಸಾಧ್ಯವಾಗುತ್ತಿಲ್ಲ. ಕಾರಣ ಶೂಟಿಂಗ್. ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವುದರಿಂದ, ಸೆಟ್​ನಲ್ಲೇ ಹಬ್ಬ ಆಚರಣೆ ಮಾಡಲಿದ್ದೇನೆ.

    | ನಿಶಾ

    ಕುಟುಂಬದವರ ಜತೆಗೆ ಹಬ್ಬ

    ಹಬ್ಬ ಅಂದರೆ ಅದೊಂದು ಸಂಭ್ರಮ. ನಮ್ಮ ಮನೆಯಲ್ಲಿ ಪ್ರತಿ ಹಬ್ಬದ ಆಚರಣೆ ಮಿಕ್ಕವರಿಗಿಂತ ಒಂದು ಪಟ್ಟು ಹೆಚ್ಚೇ ಇರುತ್ತದೆ. ಇದೀಗ ಯುಗಾದಿ ಬಂದಿದೆ. ಬೇವು-ಬೆಲ್ಲ ಸವಿಯುವುದರ ಜತೆಗೆ ಬಾಳೆ ಎಲೆ ಊಟವೂ ಮಜವೆನಿಸುತ್ತದೆ. ನಮ್ಮ ಮನೆಯ ಹಬ್ಬದ ವಿಶೇಷತೆ ಏನೆಂದರೆ, ಇಡೀ ಕುಟುಂಬ ಒಟ್ಟಿಗೆ ಸೇರುವುದು. ಅಡುಗೆ ಮನೆಯ ಜವಾಬ್ದಾರಿ ಅಮ್ಮ ವಹಿಸಿಕೊಂಡರೆ, ನನ್ನದೇನಿದ್ದರೂ ಪೂಜೆಯ ಉಸ್ತುವಾರಿ. ಪೂಜಾ ಅಲಂಕಾರದಿಂದ ಹಿಡಿದು, ಹಾಡು ಹೇಳುವುದು … ಹೀಗೆ ಎಲ್ಲವನ್ನು ನಾನು ಮಾಡುತ್ತೇನೆ. ಬಳಿಕ ನೈವೇದ್ಯ, ದೇವಸ್ಥಾನಕ್ಕೂ ತೆರಳುತ್ತೇವೆ. ಇದೀಗ ನಾನೇ ಸಂಪಾದನೆ ಮಾಡುತ್ತಿದ್ದರೂ ಈಗಲೂ ಅಮ್ಮನೇ ನನಗೆ ಬಟ್ಟೆ ಕೊಡಿಸುತ್ತಾರೆ.

    | ಚಂದನಾ ಅನಂತಕೃಷ್ಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts