More

    ಜಾಗೃತಿ ಸಾಕು, ದಾಳಿ ನಡೆಸಿ

    ಚಿತ್ರದುರ್ಗ: ತಂಬಾಕು ನಿಯಂತ್ರಣ ಕುರಿತಂತೆ ಎರಡ್ಮೂರು ವರ್ಷಗಳಿಂದಲೂ ಜಿಲ್ಲೆಯಲ್ಲಿ ವ್ಯಾಪಕವಾಗಿ ಜಾಗೃತಿ ಮೂಡಿಸಿದ್ದು ಸಾಕು, ಇನ್ಮೇಲೆ ದಾಳಿ ನಡೆಸಿ, ಪ್ರಕರಣ ದಾಖಲಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಸೂಚಿಸಿದ್ದಾರೆ.

    ಡಿಸಿ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ತ್ರೈಮಾಸಿಕ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದರು.

    ರಾಜ್ಯದಲ್ಲಿ ಗುಟ್ಕಾಕ್ಕೆ ನಿಷೇಧವಿದ್ದರೂ ಪಾನ್‌ಮಸಾಲ ಮಾರಾಟದ ಹೆಸರಿನಲ್ಲಿ ವಿವಿಧ ಕೋಡ್‌ವರ್ಡ್ ಬಳಸಿ ಮಾರಾಟ ಮಾಡಲಾಗುತ್ತಿದೆ. ತಂಬಾಕು ಉತ್ಪನ್ನ ಮಾರಾಟ ಹೆಚ್ಚಿದ್ದು, ಜಗಿಯುವ ತಂಬಾಕು ಮಾರಾಟಕ್ಕೆ ಅವಕಾಶವೇ ಇಲ್ಲ. ಆದರೆ, ಈವರೆಗೂ ಯಾವುದೇ ಪ್ರಕರಣಗಳನ್ನು ಪತ್ತೆ ಹಚ್ಚಿ, ಕೇಸ್ ದಾಖಲಿಸಿಲ್ಲವೆಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

    ಕಾಯ್ದೆ ಉಲ್ಲಂಘನೆಯ ಪ್ರಮಾದಕ್ಕೆ ದಂಡ ವಿಧಿಸಿದರೆ ಸಾಲದು ಪ್ರಕರಣ ದಾಖಲಿಸಬೇಕು. ತಂಬಾಕು ಉತ್ಪನ್ನಗಳ ಬಳಕೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು. ತಂಬಾಕು ಮುಕ್ತ ಶಾಲೆ, ತಂಬಾಕು ಮುಕ್ತ ಗ್ರಾಮಗಳ ನಿರ್ಮಾಣಕ್ಕೆ ಶಿಕ್ಷಣ ಇಲಾಖೆ ಮುಂದಾಗಬೇಕು ಎಂದು ಸೂಚಿಸಿದರು.

    ಕೋವಿಡ್-19 ಸೋಂಕು ಹರಡದಂತೆ ತಡೆಗಟ್ಟುವ ಸಲುವಾಗಿ ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಉಗುಳುವುದನ್ನು ನಿಷೇಧಿಸಲಾಗಿದೆ. ಉಲ್ಲಂಘಿಸಿದರೆ ದಂಡ ವಿಧಿಸಿ ಎಂದು ತಹಸೀಲ್ದಾರ್, ಪೊಲೀಸ್, ನಗರ ಸ್ಥಳೀಯ ಸಂಸ್ಥೆ ಅಧಿಕಾರಿಗಳಿಗೆ ಸೂಚಿಸಿದರು.

    ಡಿಡಿಪಿಐ ಕೆ.ರವಿಶಂಕರರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿರುವ ಶಾಲೆಗಳಲ್ಲಿ ಜಾಗೃತಿ ಬರಹ ಬರೆಸಲಾಗುತ್ತಿದೆ, 2412 ಶಾಲೆಗಳ ಪೈಕಿ, 215 ಶಾಲೆಗಳು ಬರೆಸುವುದು ಬಾಕಿ ಇದೆ ಎಂದರು.

    ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರ ಬಿ.ಎಂ.ಪ್ರಭುದೇವ್, ಜಿಪಂ ಸಿಇಒ ಎಸ್.ಹೊನ್ನಾಂಬ, ಎಎಸ್ಪಿ ಎಂ.ಬಿ.ನಂದಗಾವಿ, ಜಿಲ್ಲಾ ಕಾರ್ಮಿಕ ಅಧಿಕಾರಿ ವಿನುತಾ, ತಹಸೀಲ್ದಾರ್ ಜೆ.ಸಿ.ವೆಂಕಟೇಶಯ್ಯ ಮತ್ತಿತರ ಅಧಿಕಾರಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts