More

    ಸರ್ಕಾರ ಸೂಚಿಸಿದರೆ ಸೇವೆಗೆ ಕೆಎಸ್‌ಆರ್‌ಟಿಸಿ ಸಿದ್ಧ

    ಚಿತ್ರದುರ್ಗ: ರಾಜ್ಯ ಸರ್ಕಾರ ನಿರ್ದೇಶಿಸಿದರೆ ಮೇ 3ರ ಬಳಿಕ ಜಿಲ್ಲೆ- ಅಂತರ ಜಿಲ್ಲೆಗಳಲ್ಲಿ ಬಸ್ ಓಡಿಸಲು ಸಾರಿಗೆ ನಿಗಮಗಳು ಸಿದ್ಧವಿವೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ಹೇಳಿದರು.

    ನಗರದ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿ, ಸರ್ಕಾರ, ಆಯಾ ಜಿಲ್ಲಾಡಳಿತಗಳ ಸೂಚನೆ ಆಧರಿಸಿ ಬಸ್ ಸಂಚಾರ ಆರಂಭಿಸಲಾಗುವುದು. ಆರೋಗ್ಯ ತಪಾಸಣೆ ಬಳಿಕವೇ ಸಿಬ್ಬಂದಿ ನಿಯೋಜಿಸಲಾಗುವುದು ಎಂದರು.

    ಲಾಕ್‌ಡೌನ್ ಅವಧಿ ಮುಗಿದರೂ ಕರೊನಾ ಭೀತಿ ಮುಕ್ತಾಯ ಆಗುವವರೆಗೆ ಬಸ್‌ಗಳಲ್ಲಿ ಶೇ.40 ಪ್ರಯಾಣಿಕರಿಗೆ ಮಾತ್ರ ಅವಕಾಶ ಇರಲಿದೆ. ಹಾಗಂತ ಪ್ರಯಾಣ ದರ ಹೆಚ್ಚಿಸುವುದಿಲ್ಲ. ಈಗಿನ ದರದಲ್ಲೇ ಕಡಿಮೆ ಸಂಖ್ಯೆಯ ಪ್ರಯಾಣಿಕರಿಗೆ ಸೇವೆ ಒದಗಿಸಲಾಗುವುದು.

    ಸಾವಿರ ಕೋಟಿಗೂ ಅಧಿಕ ನಷ್ಟ: ಲಾಕ್‌ಡೌನ್‌ನಿಂದ ಈವರೆಗೆ ರಾಜ್ಯದ 4 ರಸ್ತೆ ಸಾರಿಗೆ ನಿಗಮಗಳಿಗೆ ಒಂದು ಸಾವಿರ ಕೋಟಿ ರೂ.ಗೂ ಅಧಿಕ ನಷ್ಟವಾಗಿದೆ. ನಿಗಮಗಳ 1.32 ಲಕ್ಷ ಸಿಬ್ಬಂದಿಯ ಸಂಬಳಕ್ಕೂ ಸಮಸ್ಯೆಯಾಗಿದೆ. ಚಿತ್ರದುರ್ಗ ವಿಭಾಗವೊಂದರಲ್ಲೇ 1200 ಸಿಬ್ಬಂದಿಗೆ ಮಾಸಿಕ 3 ಕೋಟಿ ರೂ.ಅಗತ್ಯವಿದೆ. ನೆರವು ಕೋರಿ ಸಿಎಂಗೆ ಮನವಿ ಮಾಡಲಾಗಿದೆ ಎಂದರು.

    ತೆರಿಗೆ ವಿನಾಯಿತಿಗೆ ಮನವಿ: ಕನಿಷ್ಠ ಆರು ತಿಂಗಳು ರಸ್ತೆ ತೆರಿಗೆಯಿಂದ ವಿನಾಯಿತಿ ಹಾಗೂ ನಿಗಮಗಳ ನೌಕರರಿಗೆ ವಿಮಾ ಸೌಲಭ್ಯ ಕಲ್ಪಿಸಲು ಸರ್ಕಾರವನ್ನು ಕೋರಲಾಗಿದೆ. 6 ತಿಂಗಳ ಅವಧಿಗೆ ಟೋಲ್‌ವಿನಾಯಿತಿಗೂ ಕೇಂದ್ರಕ್ಕೆ ಮನವಿ ಮಾಡಲಾಗಿದೆ.

    ಕೆಎಸ್‌ಆರ್‌ಟಿಸಿಯೊಂದೇ ರಾಜ್ಯ ದಲ್ಲಿ ವರ್ಷಕ್ಕೆ 64 ಕೋಟಿ ರೂ.ಟೋಲ್ ಶುಲ್ಕ ಪಾವತಿಸುತ್ತಿದೆ. ಮಾಸಿಕ ಪಾಸ್ ಖರೀದಿಸಿರುವ ಪ್ರಯಾಣಿಕರಿಗೆ ಉಳಿದ ಪ್ರಯಾಣ ದಿನಗಳ ಬಳಕೆಗೆ ಅವಕಾಶ ಮಾಡಿಕೊಡುವುದಾಗಿ ತಿಳಿಸಿದರು.

    ಹೊಳಲ್ಕೆರೆಯಲ್ಲಿ ಕೆಎಸ್‌ಆರ್‌ಟಿಸಿ ತರಬೇತಿ ಕೇಂದ್ರಕ್ಕೆ ಶೀಘ್ರ ಚಾಲನೆ ನೀಡಲಾಗುವುದು. ಚಿತ್ರದುರ್ಗದಲ್ಲಿ ಹೈಟೆಕ್ ನಿಲ್ದಾಣ ನಿರ್ಮಾಣ ಕರಿತು ಸದ್ಯಕ್ಕೆ ಭರವಸೆ ಇಟ್ಟುಕೊಳ್ಳುವಂತಿಲ್ಲ. ಹೊಳಲ್ಕೆರೆ,ಹಿರಿಯೂರು, ಮೊಳಕಾಲ್ಮೂರುಗಳಲ್ಲಿ ಡಿಪೋಗಳ ಆರಂಭಿಸಲಾಗುವುದು ಎಂದರು. ವಿಭಾ ಗೀಯ ನಿಯಂತ್ರಣಾಧಿಕಾರಿ ವಿಜಯಕುಮಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts