More

    ಸಿಎಎ ಬೆಂಬಲಿಸಿ ಜನರಿಂದ ಮಿಸ್ಡ್‌ಕಾಲ್

    ಚಿತ್ರದುರ್ಗ: ರಾಜ್ಯದ 58 ಸಾವಿರ ಬೂತ್‌ಗಳಲ್ಲಿ ಜ.26ರಂದು ಪಕ್ಷದ ಬೂತ್ ಮಟ್ಟದ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಸಿಎಎ ಜಾರಿಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿಯನ್ನು ಅಭಿನಂದಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಹೇಳಿದರು.

    ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೂತ್‌ಮಟ್ಟದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಬಳಿಕ, ಕಾರ್ಯಕರ್ತರು 88662 88662 ದೂರವಾಣಿಗೆ ಸಂಖ್ಯೆಗೆ ಲಕ್ಷಾಂತರ ಮಿಸ್ಡ್‌ಕಾಲ್ ಹಾಗೂ ಪತ್ರದ ಮೂಲಕ ಪ್ರಧಾನಿ ಬೆಂಬಲಿಸಲಿದ್ದಾರೆ. ಸಿಎಎನ್ನು ದೇಶದ ಶೇ.99 ನಾಗರಿಕರು ಸ್ವಾಗತಿಸಿದ್ದಾರೆ ಎಂದರು.

    ಆದರೆ, ಪ್ರತಿಪಕ್ಷಗಳು ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ವಿರೋಧಿಸುತ್ತಿವೆ. ನೆಹರು ಜಾರಿಗೊಳಿಸಿದ್ದ ಹಾಗೂ ಇಂದಿರಾ, ರಾಜೀವ್‌ಗಾಂಧಿ ಮೊದಲಾದ ಕಾಂಗ್ರೆಸ್ ನಾಯಕರು ಸ್ವಾಗತಿಸಿದ್ದ ಈ ಕಾಯ್ದೆಯನ್ನು ವಿರೋಧಿಸುವುದರೊಂದಿಗೆ ರಾಹುಲ್‌ಗಾಂಧಿ, ಸೋನಿಯಾ ಗಾಂಧಿ ಪಾಕಿಸ್ತಾನದ ಪರವಾಗಿದ್ದಾರೆ ಎಂಲದು ದೂರಿದರು.

    ಸಿಎಎ ಹಳೇ ಕಾಯ್ದೆ, ಪೌರತ್ವ ಪಡೆಯಲು ಇದ್ದ 11 ವರ್ಷದ ಸಮಯವನ್ನು 5 ವರ್ಷಕ್ಕೆ ಕಡಿತಗೊಳಿಸಲಾಗಿದೆ ಹಾಗೂ ಕಟ್ ಆಫ್ ಡೇಟ್‌ನ್ನು 2014 ಡಿ.31ಕ್ಕೆ ನಿಗದಿಗೊಳಿಸಿದ್ದನ್ನು ಹೊರತು ಪಡಿಸಿ ಕಾಯ್ದೆಯಲ್ಲಿ ಯಾವುದೇ ಬದಲಾವಣೆ ಕೇಂದ್ರ ಮಾಡಿಲ್ಲ. ಅಂದು ಕಾಯ್ದೆ ಪರ ಮಾತನಾಡಿದ್ದ ಮಾಜಿ ಪ್ರಧಾನಿ ಮನ್‌ಮೋಹನ್‌ಸಿಂಗ್ ಇಂದು ಮೌನವಾಗಿದ್ದಾರೆ ಎಂದು ಟೀಕಿಸಿದರು.

    ಲಕ್ಷಾಂತರ ನಿರಾಶ್ರಿತರಿಗೆ ಅನುಕೂಲ ಮಾಡಿಕೊಡುವಂಥ ಈ ಕಾಯ್ದೆಯನ್ನು ವಿರೋಧಿಸುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯರ ಸಮಾಜವಾದ ಎಲ್ಲಿ ಹೋಯಿತು? ಕಾಯ್ದೆ ವಿರೋಧಿಸುವ ಭರದಲ್ಲಿ ಕಾಂಗ್ರೆಸ್ ಮುಖಂಡರು ಜನರಿಗೆ ಸುಳ್ಳು ಹೇಳುತ್ತಿದ್ದಾರೆ, ಅಮಾನವೀಯವಾಗಿ ನಡೆದುಕೊಳ್ಳುತ್ತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.

    ಪಕ್ಷದ ಪ್ರಭಾರಿ ಜಿ.ಎಂ.ಸುರೇಶ್, ಜಿಲ್ಲಾಧ್ಯಕ್ಷ ಎ.ಮುರುಳಿ, ಮಾಜಿ ಅಧ್ಯಕ್ಷ ನರೇಂದ್ರನಾಥ್, ಮುಖಂಡರಾದ ಎಂ.ಎ.ಸೇತೂರಾಂ, ಶಿವಪ್ರಕಾಶ್ ದಗ್ಗೆ, ನಾಗರಾಜ್ ಬೇಂದ್ರೆ ಇತರರಿದ್ದರು.

    ಕಾಂಗ್ರೆಸ್ಸಿಗರಿಗೆ ಕಾಣುತ್ತಿಲ್ಲ: ಪಾಕಿಸ್ತಾನದಲ್ಲಿ ಹಿಂದುಗಳ ಸಂಖ್ಯೆ ಗಣನೀಯವಾಗಿ ಕುಸಿದಿದೆ, ಸಿಎಎ ವಿರೋಧಿಸುವ ಕಾಂಗ್ರೆಸ್ಸಿಗರಿಗೆ, ಪಾಕಿಸ್ತಾನ ಸರ್ಕಾರ ಅಲ್ಲಿಯ ಸಂಸತ್ತಿಗೆ ಅಲ್ಪಸಂಖ್ಯಾತರನ್ನು ನಾಮಕರಣ ಮಾಡುವಂಥ ಕಾನೂನಿಗೆ ತಂದಿರುವ ತಿದ್ದುಪಡಿ ಇವರಿಗೆ ಕಾಣುವುದಿಲ್ಲವೇ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಪ್ರಶ್ನಿಸಿದರು.

    ದುರ್ಗಕ್ಕೆ ಮತ್ತೊಬ್ಬ ಮಂತ್ರಿ: ಈ ತಿಂಗಳವೊಳಗೆ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ಹೇಳಿದ ರವಿಕುಮಾರ್, ಚಿತ್ರದುರ್ಗಕ್ಕೆ ಮತ್ತೊಂದು ಮಂತ್ರಿ ಸ್ಥಾನ ಸಿಗಬಹುದು. ನಾನಾ ಕಾರಣಗಳಿಂದಾಗಿ ಸಂಪುಟ ವಿಸ್ತರಣೆ ಮುಂದಕ್ಕೆ ಹೋಗಿತ್ತು. ಆದರೆ, ಈಗ ಶೀಘ್ರ ವಿಸ್ತರಣೆಯಾಗಲಿದೆ, ಜಿಲ್ಲೆಯ ಮತ್ತೊಬ್ಬ ಶಾಸಕರು ಮಂತ್ರಿ ಆಗಬಹುದೆಂದು ವಿಶ್ವಾಸ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts