More

    ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಫಲಿತಾಂಶ ಬೇಕು

    ಚಿತ್ರದುರ್ಗ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಉತ್ತಮ ಫಲಿತಾಂಶ ಬರಲೇ ಬೇಕು, ಹಾಗಾಂಥ ನಕಲು ಮಾಡಲು ಅವಕಾಶ ಕೊಟ್ಟರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಸಂಬಂಧಿಸಿದವರಿಗೆ ಎಚ್ಚರಿಕೆ ನೀಡಿದರು.

    ಮಾರ್ಚ್ 27ರಿಂದ ಏಪ್ರಿಲ್ 9ರ ವರೆಗೆ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಹಿನ್ನೆಲೆಯಲ್ಲಿ ಡಿಸಿ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಪೂರ್ವ ಸಿದ್ಧತಾ ಪರೀಶಿಲನಾ ಸಭೆಯಲ್ಲಿ ಮಾತನಾಡಿದರು.

    ಗುಣಮಟ್ಟದ ಅಭ್ಯಾಸದೊಂದಿಗೆ ಹೆಚ್ಚಿನ ಅಂಕ ಪಡೆದು ಜಿಲ್ಲೆಗೆ ಫಲಿತಾಂಶ ದೊರಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಶಿಕ್ಷಕರು ಪ್ರೋತ್ಸಾಹಿಸಬೇಕು. ಪರೀಕ್ಷಾ ಕೇಂದ್ರಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಪ್ರಶ್ನೆ ಪತ್ರಿಕೆ ತಲುಪಬೇಕು. ಶುದ್ಧ ಕುಡಿಯುವ ನೀರು, ಸೂಕ್ತ ಆಸನದ ವ್ಯವಸ್ಥೆ ಸೇರಿ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದರು.

    ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರವಿಶಂಕರರೆಡ್ಡಿ ಮಾತನಾಡಿ, ಪರೀಕ್ಷೆ ನಡೆಸಲು ಸರ್ಕಾರಿ ಶಾಲೆ-32, ಅನುದಾನಿತ ಶಾಲೆ-47 ಹಾಗೂ ಅನುದಾನ ರಹಿತ-8 ಸಹಿತ 87 ಶಾಲೆಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ 87 ಪರೀಕ್ಷಾ ಕೇಂದ್ರಗಳಿದ್ದು, 22567 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಕೇಂದ್ರಗಳಿಗೆ ನಿಗದಿತ ಸಮಯದಲ್ಲಿ ಪ್ರಶ್ನೆ ಪತ್ರಿಕೆಗಳನ್ನು ತಲುಪಿಸಲು 36 ಮಾರ್ಗಾಧಿಕಾರಿಗಳನ್ನು ನೇಮಿಸಲಾಗಿದೆ ಎಂದು ತಿಳಿಸಿದರು.

    ನಕಲು ತಡೆಗೆ 87 ಜಾಗೃತದಳ ಅಧಿಕಾರಿಗಳನ್ನು ಹಾಗೂ 66 ವೀಕ್ಷಕರನ್ನು ನೇಮಿಸಲಾಗಿದೆ. ಜಿಲ್ಲೆಯಲ್ಲಿ ಯಾವುದೇ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಕೇಂದ್ರಗಳು ಇಲ್ಲವೆಂದು ಹೇಳಿದರು.

    ಖಜಾನೆ ಇಲಾಖೆ ಉಪ ನಿರ್ದೇಶಕಿ ಎಸ್.ಪ್ರಭಾವತಿ ಸೇರಿ ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts