More

    ಗೋವು ಮಾರಾಟ ನಿಯಂತ್ರಿಸಲು ಗೋ ಶಾಲೆ

    ಚಿತ್ರದುರ್ಗ: ಬರಗಾಲದಂಥ ಕಠಿಣ ಸಂದರ್ಭದಲ್ಲಿ ಕಸಾಯಿಖಾನೆಗೆ ಗೋವುಗಳು ಮಾರಾಟವಾಗುವುದನ್ನು ನಿಯಂತ್ರಿಸಲು ಸಿರಿಗೆರೆ ಶಾಂತಿವನದ 50 ಎಕರೆ ಪ್ರದೇಶದಲ್ಲಿ ಗೋ ಶಾಲೆ ಸ್ಥಾಪಿಸಲಾಗಿದೆ ಎಂದು ಸಿರಿಗೆರೆ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ಹೊಳಲ್ಕೆರೆ ತಾಲೂಕಿನ ಕುಡಿಯುವ ನೀರಿನಕಟ್ಟೆ ಶ್ರೀ ಸೇವಾಮೃತ ಬಯೋಫಾರ್ಮ್‌ನಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ 6 ನೇ ಭಾರತೀಯ ಗೋತಳಿ ಸಂರಕ್ಷಕರ ಸಮಾವೇಶ-2020 ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

    ರಾಜ್ಯದಲ್ಲಿ ಕಾಣಿಸಿದ ಬರಗಾಲದ ವೇಳೆ ಜನರಿಗಿಂತ ಜಾನುವಾರು ಹೆಚ್ಚಿನ ತೊಂದರೆಗೆ ಒಳಗಾಗಿವೆ. ಈ ಹಿನ್ನೆಲೆಯಲ್ಲಿ ಗೋ ಶಾಲೆ ಸ್ಥಾಪಿಸಲಾಗಿದ್ದು, ರಾಜ್ಯದ ಯಾವುದೇ ಭಾಗದ ರೈತರು ಬರಗಾಲ ಸನ್ನಿವೇಶದಲ್ಲಿ ರಾಸುಗಳನ್ನು ತಂದುಬಿಡಬಹುದು. ಮತ್ತೆ ಅನುಕೂಲ ಸನ್ನಿವೇಶದಲ್ಲಿ ಮರಳಿ ಕೊಂಡೊಯ್ಯಬಹುದು. ಇದಕ್ಕಾಗಿ ವಾಹನ ಸೌಕರ್ಯ ಕಲ್ಪಿಸಿದ್ದು, ಗೋಶಾಲೆ ನಿರ್ವಹಣೆಗಾಗಿ ಮಠ 2 ಕೋಟಿ ರೂ. ಮೀಸಲಿಟ್ಟಿದೆ ಎಂದರು.

    ಅನಾದಿ ಕಾಲದಿಂದ ನಾವು ಗೋವುಗಳಿಗೆ ವಿಶೇಷ ಸ್ಥಾನ ಕೊಟ್ಟಿದ್ದೇವೆ. ಶ್ರೀ ಮಠ ಭ್ರಷ್ಟಾಚಾರದ ವಿರೋಧಿ ಆಗಿದೆ. ಇಬ್ಬರು ಮುಖಂಡರು 2 ಹಸುಗಳನ್ನು ದಾನ ಮಾಡಿದ್ದರೂ, ಚುನಾವಣೆ ಸಂದರ್ಭ ಎಂಬ ಕಾರಣಕ್ಕೆ 2 ಹಸುಗಳಿಗೆ ತಲಾ 75 ಸಾವಿರ ರೂ. ಕೊಟ್ಟಿದ್ದೆವು ಎಂದರು.

    ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತೀಯ ವ್ಯವಸ್ಥಾನ ಪ್ರಮುಖ ಮಂಗೇಶ್ ಭೇಂಡೆ ಮಾತನಾಡಿ, ಗೋ ರಕ್ಷಣೆ ಮಹತ್ವದರಿವು ಈ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ಇರಲಿಲ್ಲ. ಆವರ ವಿದೇಶಿ ಚಿಂತನೆಗಳಿಂದಾಗಿ ಭಾರತ ದಲ್ಲಿ ಗೋ ಸಂತತಿಗಳ ನಾಶಕ್ಕೆ ಕಾರಣವಾಯಿತು ಎಂದರು.

    ಆದರೂ ನಾವಿಂದು ದೇಸಿ, ನೆಲ, ಜಲ, ಭಾಷೆ ಹಾಗೂ ನಮ್ಮ ಸಂಸ್ಕೃತಿಯನ್ನು ಮರೆತು ವಿದೇಶಿ ಸಂಸ್ಕೃತಿಗೆ ಮಾರು ಹೋಗುತ್ತಿದ್ದೇವೆ. ಪ್ರಕೃತಿ ರಕ್ಷಣೆ ನಮ್ಮ ಕೆಲಸವಾದರೆ, ವಿದೇಶಿಯರು ಸಂಸ್ಕೃತಿ ಹಾಗೂ ಪ್ರಕೃತಿಯನ್ನು ಶೋಷಿಸುವ ಕೆಲಸ ಮಾಡುತ್ತಾರೆ. ಪ್ರಕೃತಿಯಲ್ಲಿರುವ ಮನುಷ್ಯನಂತೆ ಗೋವು ಕೂಡ ಪ್ರಕೃತಿ ಒಂದು ಭಾಗ. ಜಗತ್ತಿನಲ್ಲಿ ಭಾರತೀಯ ಪಶು ತಳಿಯಂಥ ಶ್ರೇಷ್ಠ ತಳಿಯನ್ನು ಎಲ್ಲೂ ಕಾಣಲ್ಲ. ವಿದೇಶಿ ಆಕಳು ಹೆಚ್ಚು ಹಾಲು ನೀಡುತ್ತವೆ ಎನ್ನುವ ತಪ್ಪು ಕಲ್ಪನೆ ನಮ್ಮ ತಳಿಗಳ ನಾಶಕ್ಕೂ ಕಾರಣವಾಗುತ್ತಿದೆ ಎಂದು ಬೇಸರಿಸಿದರು.

    ಸಾವಯವ ಮಿಷನ್ ಮುಖ್ಯಸ್ಥರಾದ ನಂಜುಂಡಪ್ಪ ಮಾತನಾಡಿ, ರಸಾಯನ ಗೊಬ್ಬರದಿಂದ ಭೂಮಿ ವಿಷವಾಗಿದೆ. ನೀರು ಹಾಲು ಆಹಾರ ವಿಷಯುಕ್ತ್ತವಾಗಿದೆ. ಸಾವಯವ ಕೃಷಿ ಪದ್ಧತಿಯಿಂದ ಭೂಮಿಯನ್ನು ವಿಷಮುಕ್ತವನ್ನಾಗಿ ಮಾಡಬೇಕು. ಈ ನಿಟ್ಟಿನಲ್ಲಿ ಸರಕಾರ ಸಾವಯವ ಕೃಷಿಗೆ ಪ್ರೋತ್ಸಾಹ ನೀಡಬೇಕೆಂದರು.

    ಡಾ.ಎನ್.ಬಿ.ಶ್ರೀಧರ್, ರಾಜ್ಯ ಸಾವಯವ ಕೃಷಿ ಮಿಷನ್ ಅಧ್ಯಕ್ಷ ಆನಂದ, ಡಾ.ಟಿ.ವಿ. ಗಿರೀಶ್, ಶ್ರೀ ಸೇವಾಮೃತ ಬಯೋಫಾರ್ಮ್ ಮುಖ್ಯಸ್ಥ ಡಾ.ಲೋಕನಾಥ ದಂಪತಿ, ವ್ಯವಸ್ಥಾಪಕ ಡಾ.ಜಯಸಿಂಹ ಇದ್ದರು. ಡಾ.ಶ್ರೀಪತಿ ಸ್ವಾಗತಿಸಿದರು. ಅನಿಲ್ ಕುಮಾರ್ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts