More

    ಚಿತ್ರದುರ್ಗಕ್ಕೆ ಆಗಮಿಸಿದ 24 ಸಾವಿರ ಮಂದಿ ಮೇಲೆ ನಿಗಾ

    ಚಿತ್ರದುರ್ಗ: ರಾಜ್ಯ, ಹೊರ ರಾಜ್ಯ, ವಿದೇಶಗಳಿಂದ ಚಿತ್ರದುರ್ಗ ಜಿಲ್ಲೆಗೆ ಆಗಮಿಸಿದ 24084ಜನರ ಮೇಲೆ ನಿಗಾ ಇಡಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಹೇಳಿದರು.

    24084ರಲ್ಲಿ 84ಮಂದಿ ವಿದೇಶಗಳಿಂದ ಆಗಮಿಸಿದವರು. ಇವರೆಲ್ಲರೂ ಹೋಂ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ್ದು ಆರೋಗ್ಯವಾಗಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾಹಿತಿ ನೀಡಿದರು.

    ಜಿಲ್ಲಾಡಳಿತ ರಚಿಸಿದ ಗ್ರಾಪಂ ಟಾಸ್ಕ್‌ಪೋರ್ಸ್ ಸಮಿತಿ ರಾಜ್ಯ, ಹೊರ ರಾಜ್ಯಗಳಿಂದ ಬಂದ 24 ಸಾವಿರ ಜನರನ್ನು ಪತ್ತೆ ಮಾಡಿದ್ದು ಅವರೆಲ್ಲರ ಪೂರ್ಣ ಮಾಹಿತಿ ನಮ್ಮ ಬಳಿ ಇದೆ ಎಂದು ತಿಳಿಸಿದರು.

    ರಾಜ್ಯಸರ್ಕಾರ ಕಳಿಸಿದ ಹೈ ರಿಸ್ಕ್ ಪಟ್ಟಿಯಲ್ಲಿ ಜಿಲ್ಲೆಯ ಮೂವರ ಹೆಸರಿತ್ತು. ಇವರಲ್ಲಿಬ್ಬರು ನಿಜಾಮುದ್ದೀನ್ ಸಭೆಯಲ್ಲಿ ಭಾಗವಹಿಸಿದ್ದರು. ಈ ಪೈಕಿ ಒಬ್ಬರು ಹೊಸದಿಲ್ಲಿಯಲ್ಲೇ ಉಳಿದಿದ್ದು ಒಬ್ಬರು ಜಿಲ್ಲೆಗೆ ಮರಳಿದ್ದಾರೆ.

    ಮತ್ತೊಬ್ಬ ವ್ಯಕ್ತಿ ನಿಜಾಮುದ್ದೀನ್ ಪ್ರದೇಶದಲ್ಲಿ ರೈಲ್ವೆ ಉದ್ಯೋಗಿಯಾಗಿದ್ದು ಇವರಿಗೂ ಸಭೆ ಗೂ ಯಾವುದೇ ಸಂಬಂಧವಿಲ್ಲ ಎಂದು ಮಾಹಿತಿ ನೀಡಿದರು.

    ಕತಾರ್‌ನಿಂದ ಮುಂಬಯಿ,ಬೆಂಗಳೂರು ಮಾರ್ಗವಾಗಿ ಹಿರಿಯೂರಿಗೆ ಬಂದ 8 ಜನರು ಗಂಟಲದ್ರವದ ಪರೀಕ್ಷಾ ವರದಿ ಶೀಘ್ರ ಕೈ ಸೇರಲಿದೆ. ಈ ಮಧ್ಯೆ ಅಹಮದಬಾದ್‌ಗೆ ಹೋಗಿ ಬಂದಿದ್ದ ಚಳ್ಳಕೆರೆಯ 11 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗುತ್ತಿದೆ.

    ಹೊಸದಿಲ್ಲಿಯಿಂದ ಬಂದ ಇಬ್ಬರು, ಕತಾರ್‌ನಿಂದ ಆಗಮಿಸಿದ 8, ಅಹಮದಾಬಾದಿನಿಂದ ಬಂದ 11 ಸೇರಿ 21 ಜನರು ಸರ್ಕಾರಿ ಹೋಂ ಕ್ವಾರಂಟೈನ್‌ನಲ್ಲಿ ಇದ್ದಾರೆ. ಯಾವುದೇ ಗಾಬರಿ ಪಡುವ ಸನ್ನಿವೇಶವಿಲ್ಲ ಎಂದು ತಿಳಿಸಿದರು.

    ಜಿಲ್ಲೆಯಲ್ಲಿ ಪಾಸಿಟಿವ್ ಪತ್ತೆಯಾಗಿದ್ದ ಗ್ರಾಮದ ಸುತ್ತ ಯಾವುದೇ ಆತಂಕದ ವಾತಾವರಣ ಇಲ್ಲ. ಜಿಲ್ಲೆಯ ಎಲ್ಲ ಗಡಿಗಳಲ್ಲೂ ತಪಾಸಣೆ ಮುಂದುವರಿದಿದೆ. ಎಂಸಿಎಚ್ ಹೊಸ ಕಟ್ಟಡದಲ್ಲಿ ಕೋವಿಡ್-19 ಆಸ್ಪತ್ರೆ ಸ್ಥಾಪಿಸಲಾಗುವುದು ಎಂದರು.

    ಇಂಧನ ಮಾರಾಟದ ಮೇಲೆ ನಿಯಂತ್ರಣ: ಪೆಟ್ರೋಲ್ ಮಾರಾಟದ ಮೇಲೆ ನಿಯಂತ್ರಣ ವಿಧಿಸಲಾಗುವುದು. ದ್ವಿ ಚಕ್ರವಾಹನಗಳಿಗೆ ದಿನ ಬಿಟ್ಟು ದಿನ ಹಾಗೂ ಅಗತ್ಯ ಸೇವೆಗಳಿಗೆ ಬಳಸುವ ವಾಹನಗಳಿಗೆ ಮಾತ್ರ ಇಂಧನಕ್ಕೆ ಅವಕಾಶ ಮಾಡಿಕೊಡಲಾಗುವುದು. ಖಾಸಗಿ ಕಾರು, ಆಟೋ ಮೊದಲಾದ ವಾಹನಗಳಿಗೆ ಇಂಧನ ಮಾರಾಟ ಮಾಡದಂತೆ ಆದೇಶಿಸುವುದಾಗಿ ಡಿಸಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts