More

    ಬಯಲು ಸೀಮೆ ಚಿತ್ರದುರ್ಗಕ್ಕೆ ಸಿಗಲಿ 371ಜೇ ಸ್ಥಾನಮಾನ

    ನಾಯಕನಹಟ್ಟಿ (ರಾಜಾಹಟ್ಟಿ ಮಲ್ಲಪ್ಪನಾಯಕ ವೇದಿಕೆ): ಶ್ರೀ ಗುರುತಿಪ್ಪೇರುದ್ರಸ್ವಾಮಿಯ ತಪೋಭೂಮಿ ನಾಯಕನಹಟ್ಟಿಯಲ್ಲಿ ಭಾನುವಾರ ಮುಕ್ತಾಯಗೊಂಡ 16ನೇ ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು 371 ಜೆ ಅಡಿ ಕಲ್ಯಾಣ ಕರ್ನಾಟಕ ವ್ಯಾಪ್ತಿಗೆ ಚಿತ್ರದುರ್ಗ ಜಿಲ್ಲೆ ಸೇರ್ಪಡೆ ಹಾಗೂ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಪ್ರಾಧಿಕಾರ ರಚನೆ ಸೇರಿ ಐದು ಪ್ರಮುಖ ನಿರ್ಣಯಗಳನ್ನು ಕೈಗೊಂಡಿದೆ.

    ಬಯಲುಸೀಮೆ ಚಿತ್ರದುರ್ಗದಲ್ಲಿ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪನೆ, ಜಿಲ್ಲಾ ವ್ಯಾಪ್ತಿಯ ಎಲ್ಲ ಕೆರೆಗಳಿಗೂ ನೀರು ತುಂಬಿಸಬೇಕು. ಜಿಲ್ಲೆಯ ಖ್ಯಾತ ಕವಿಗಳು, ಸಾಹಿತಿಗಳ ಹೆಸರಿನಲ್ಲಿ ಸ್ಮಾರಕ ಭವನಗಳ ನಿರ್ಮಾಣ. ಇನ್ನಿತರ ನಿರ್ಣಯಗಳನ್ನು ಕೈಗೊಳ್ಳಲಾಯಿತು.

    ಸಮ್ಮೇಳನಾಧ್ಯಕ್ಷ ತಿಪ್ಪಣ್ಣ ಮರಿಕುಂಟೆ, ಸಾಹಿತಿಗಳು, ಕವಿಗಳು, ಲೇಖಕರು, ಗಣ್ಯರ ಸಮ್ಮುಖದಲ್ಲಿ ನಡೆದ ಸಭೆ ಈ ನಿರ್ಣಯಗಳನ್ನು ಅಂಗೀಕರಿಸಿ ಕಾಲಮಿತಿಯಲ್ಲಿ ಅನುಷ್ಠಾನಕ್ಕೆ ತರಲು ಸರ್ಕಾರದ ಮೇಲೆ ಒತ್ತಡ ಹೇರಲು ನಿರ್ಧರಿಸಿತು.

    ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಮ್ಮೇಳನಾಧ್ಯಕ್ಷರು, ನಾವು-ನೀವು ಸೇರಿ ಕೈಗೊಂಡ ನಿರ್ಣಯಗಳ ಜಾರಿಗೆ ಎಲ್ಲರೂ ಪ್ರಯತ್ನಿಸೋಣ. ಈ ನೆಲದಲ್ಲಿ ನಡೆದ ನುಡಿ ಜಾತ್ರೆಗೆ ಸಾರ್ಥಕತೆ ತರೋಣ ಎಂದು ಮನವಿ ಮಾಡಿದರು.

    ದೇಶದಲ್ಲಿ ಹತ್ತು ಹಲವು ಭಾಷೆಗಳಿವೆ. ಅವುಗಳಲ್ಲಿ ಕನ್ನಡ ಭಾಷೆ ಸೌಂದರ್ಯದ ರಾಣಿ. ಈ ಮಾತು ನನ್ನದಲ್ಲ. ಖ್ಯಾತ ಗಾಯಕ ಸಂದರ್ಶನದಲ್ಲಿ ಹೇಳಿದ್ದೆಂದು ತಿಪ್ಪಣ್ಣ ಮರಿಕುಂಟೆ ಸ್ಮರಿಸಿಕೊಂಡರು.

    ಎಸ್.ಪಿ.ಬಾಲಸುಬ್ರಹ್ಮಣ್ಯಂ, ಪಿ.ಬಿ.ಶ್ರೀನಿವಾಸ್ ಯಾರೂ ಕನ್ನಡಿಗರಲ್ಲ. ಆದರವರು ಕನ್ನಡಿಗರ ಹೃದಯದಲ್ಲಿ ಮನೆ ಮಾತಾಗಿದ್ದಾರೆಂದರೆ ಅದು ನಮ್ಮ ಭಾಷೆಗಿರುವ ತಾಕತ್ತು. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಭಾಷೆಯ ಉಳಿವು, ಬೆಳೆವು ಕನ್ನಡಿಗರ ಕರ್ತವ್ಯ ಎಂದರು.

    ಚಿತ್ರದುರ್ಗ ಜಿಲ್ಲೆಯು ಮಧ್ಯ ಕರ್ನಾಟಕದ ಪ್ರಸಿದ್ಧ ಪುಣ್ಯನೆಲ. ಬುಡಕಟ್ಟು ಸಂಸ್ಕೃತಿಗಳ ತವರೂರು. ಇಲ್ಲಿಯೇ ಬುಡಕಟ್ಟು ಅಧ್ಯಯನ ಕೇಂದ್ರ ಸ್ಥಾಪಿಸಿದರೆ ಇಲ್ಲಿನ ಜನಪದ ಸಂಸ್ಕೃತಿ ಹಾಗೂ ಸುಪ್ತ ಪ್ರತಿಭೆಗಳು ಹೊರಬರಲು ಸಾಧ್ಯ ಎಂದು ಪ್ರತಿಪಾದಿಸಿದರು.

    ಸಮಾರೋಪ ಭಾಷಣ ಮಾಡಿದ ವಿಶ್ರಾಂತ ಪ್ರಾಧ್ಯಾಪಕ ಡಾ.ವಿ.ಬಸವರಾಜ್, ಯಾವುದೇ ಭಾಷೆಯಾಗಲಿ 10 ಸಾವಿರಕ್ಕಿಂತ ಕಡಿಮೆ ಜನರು ಮಾತನಾಡುವವರಿದ್ದರೆ ಅದು 10 ವರ್ಷಗಳಲ್ಲಿ ನಾಶವಾಗುತ್ತದೆ. ಆದರೆ, ಕನ್ನಡ ಪ್ರಾಚೀನ ಭಾಷೆಗಳಲ್ಲಿ ಒಂದು. ಅದರ ಉಳಿವು ಕನ್ನಡಿಗರ ಹೊಣೆ ಎಂದರು.

    ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಜಿಲ್ಲಾ ಕಸಾಪ ಮಂಡಿಸಿದ ನಿರ್ಣಯಗಳಲ್ಲಿ ಪ್ರಮುಖವಾಗಿ ಚಿತ್ರದುರ್ಗ ಜಿಲ್ಲೆಗೆ ಪ್ರತ್ಯೇಕ ವಿಶ್ವವಿದ್ಯಾಲಯ ಆಗಲೇಬೇಕು. ಈಗಾಗಲೇ ಸ್ಥಳ ಗುರುತಿಸಲಾಗಿದೆ. ಎಲ್ಲರೂ ಸೇರಿ ಸರ್ಕಾರದ ಮೇಲೆ ಒತ್ತಡ ತರೋಣ ಎಂದರು. ಜಿಲ್ಲಾ ರಂಗಮಂದಿರದ ಆವರಣದಲ್ಲಿ ತರಾಸು ಪ್ರತಿಮೆ ಸ್ಥಾಪನೆಗೆ ಧನ ಸಹಾಯ ಮಾಡುವುದಾಗಿ ತಿಳಿಸಿದರು.

    ಶಾಸಕ ಟಿ.ರಘುಮೂರ್ತಿ ಮಾತನಾಡಿ, ಸಾಹಿತ್ಯ ಪರಿಷತ್‌ನ ಅವಿರತ ಶ್ರಮದಿಂದ ಸಮ್ಮೇಳನ ಯಶಸ್ವಿ ಆಗಿದೆ. ಅಧ್ಯಕ್ಷರಾಗಿ ಮರಿಕುಂಟೆ ಆಯ್ಕೆಯಾದ ವಿಷಯ ವೈಯಕ್ತಿಕವಾಗಿ ನನಗೆ ಹೆಚ್ಚು ಸಂಭ್ರಮ ತಂದುಕೊಟ್ಟಿತು ಕಾರಣ ಅವರೊಬ್ಬ ಹಿರಿಯರು. ಮೇಲಾಗಿ ಗ್ರಾಮೀಣ ಭಾಗದ ಸಾಹಿತಿ. ದಶರಥ ಕಂದ, ರಾವಣನ ಕೊಂದ, ಸೀತೆಯ ತಂದ. ಈ ಮೂರು ಪದಗಳಲ್ಲಿ ರಾಮಾಯಣ ಪರಿಚಯಿಸುವ ತಿಪ್ಪಣ್ಣ ಅವರ ವಾಕ್ಚಾತುರ್ಯ ನಿಜಕ್ಕೂ ಅಚ್ಚರಿ ಎಂದು ಬಣ್ಣಿಸಿದರು.

    ಹೊಸದುರ್ಗದ ಶ್ರೀ ಪರುಷೋತ್ತಮಾನಂದ ಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಲಾಯಿತು. ಕಸಾಪ ಪದಾಧಿಕಾರಿಗಳಾದ ಚೌಳೂರು ಲೋಕೇಶ್, ಧನಂಜಯ, ಕೆ.ಪಿ.ಗಣೇಶಯ್ಯ ಇತರರಿದ್ದರು.

    ಚಿತ್ರದುರ್ಗ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳನ್ನು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಸಲ್ಲಿಸಿ, ಅನುಷ್ಠಾನಗೊಳಿಸಲು ಒತ್ತಡ ತರಲಾಗುವುದು.
    ಕೆ.ಎಂ.ಶಿವಸ್ವಾಮಿ, ಅಧ್ಯಕ್ಷರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಚಿತ್ರದುರ್ಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts