More

    ಪ್ರಕೃತಿ ಸಂಪತ್ತಿನ ನಾಶ ಭವಿಷ್ಯಕ್ಕೆ ಮಾರಕ: ಪ್ರೊ.ಆರ್.ಕೆ.ರಂಗಸ್ವಾಮಿ ಆತಂಕ

    ಚಿತ್ರದುರ್ಗ: ಪ್ರಕೃತಿ ಸಂಪತ್ತಿನ ಮನಸೋಇಚ್ಛೆ ಬಳಕೆಯಿಂದ ಭವಿಷ್ಯದಲ್ಲಿ ಸಕಲ ಜೀವರಾಶಿಗಳಿಗೆ ಆಪತ್ತು ಎದುರಾಗುವ ಆತಂಕವಿದೆ ಎಂದು ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಚಾರ್ಯ ಪ್ರೊ.ಆರ್.ಕೆ.ರಂಗಸ್ವಾಮಿ ಆತಂಕ ವ್ಯಕ್ತಪಡಿಸಿದರು.

    ಮಳೆ ನೀರು ಸಂರಕ್ಷಣೆ ಕುರಿತು ‘ನ್ಯಾಷನಲ್ ವಾಟರ್ ಮಿಷನ್’ ಅಡಿ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಜಲ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ನೀರಿಲ್ಲದ ಜೀವನವನ್ನು ಊಹಿಸಲೂ ಆಗದು. ಹೀಗಾಗಿ ಮಳೆ ನೀರನ್ನು ವ್ಯರ್ಥವಾಗಲು ಬಿಡದೆ ಹಿಡಿದಿಡುವ ಕೆಲಸ ಆಗಬೇಕು. ಈ ಕುರಿತು ಪ್ರತಿಯೊಬ್ಬರಲ್ಲೂ ಅರಿವು ಮೂಡಿಸಬೇಕು ಎಂದರು.

    ಜೀವಜಲ ಕಲುಷಿತಗೊಳ್ಳಲು ನಾವೇ ಕಾರಣ. ನಗರದ ಹೊರವಲಯದ ಮಲ್ಲಾಪುರ ಕೆರೆ ಇದಕ್ಕೆ ತಾಜಾ ಉದಾಹರಣೆ. ತ್ಯಾಜ್ಯ ತುಂಬಿದ ಕಾರಣ ಮಲ್ಲಾಪುರ ಕೆರೆಯ ನೀರು ಬಳಕೆ ಆಗುತ್ತಿಲ್ಲ. ವೈಜ್ಞಾನಿಕ ಪದ್ಧತಿಯಡಿ ತ್ಯಾಜ್ಯ ಮುಕ್ತ ಕೆರೆ ನಿರ್ಮಿಸಲು ಮನವಿ ಮಾಡಿದರು.

    ಜಲ ಸಾಕ್ಷರತೆ ಕೊರತೆಗೆ ಬೇಸರ
    ಅಂತರ್ಜಲ ತಜ್ಞ ಎನ್.ಜೆ.ದೇವರಾಜರೆಡ್ಡಿ ಮಾತನಾಡಿ, ನಾಗರಿಕರಲ್ಲಿ ಜಲಸಾಕ್ಷರತೆಯ ಕೊರತೆಯಿದೆ ಜಾಗೃತಿಯೇ ಮೊದಲ ಆದ್ಯತೆ ಆಗಬೇಕು ಎಂದರು.

    ದೇಶದಲ್ಲಿಯೇ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಕೇರಳ ಆಗಿದ್ದರೂ ನೀರಿನ ಮಿತಬಳಕೆ ಕುರಿತು ಅಲ್ಲಿ ತಿಳವಳಿಕೆ ಹೆಚ್ಚಿದೆ ಎಂದು ತಿಳಿಸಿದರು.

    ಪ್ರಕೃತಿ ವಿಕೋಪ, ಹವಾಮಾನ ವೈಪರೀತ್ಯದಿಂದ ಮಳೆ ಪ್ರಮಾಣ ಮತ್ತು ಕಾಲಮಾನದಲ್ಲಿ ಏರುಪೇರಾಗುತ್ತಿದೆ.ಯಾವುದೇ ಸಬ್ಸಿಡಿಗೆ ಕಾಯದೆ ಯುದ್ಧೋಪಾದಿಯಲ್ಲಿ ಜಲಸಂರಕ್ಷಣೆಗೆ ಮುಂದಾಗಬೇಕು ಎಂದರು. ಪಠ್ಯಕ್ರಮದಲ್ಲೂ ಈ ವಿಷಯ ಸೇರಿಸಬೇಕು. ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಮಳೆ ನೀರು ಸುಗ್ಗಿ ಕೋಶ ಸ್ಥಾಪಿಸಬೇಕು ಎಂದು ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts