More

    ಜನತಾ ಕರ್ಫ್ಯೂಗೆ ಚಿತ್ರದುರ್ಗ ಸ್ಪಬ್ಧ

    ಚಿತ್ರದುರ್ಗ: ಕರೊನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಹೊರಡಿಸಿದ್ದ ಭಾನುವಾರದ ಕರ್ಫ್ಯೂ ಆದೇಶಕ್ಕೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿತು. ಇಡೀ ಜಿಲ್ಲೆ ಅಕ್ಷರಶಃ ಸ್ತಬ್ಧಗೊಂಡಿತ್ತು.

    ಎಂದಿನಂತೆ ಬೆಳಗ್ಗೆ 7ರ ವರೆಗೆ ಹಾಲು, ತರಕಾರಿ ಬಿಟ್ಟರೆ ಉಳಿದ ಎಲ್ಲ ವ್ಯಾಪಾರ-ವಹಿವಾಟು ಸ್ಥಗಿತಗೊಂಡಿತ್ತು. ವಾಣಿಜ್ಯ ಮಳಿಗೆಗಳು, ಆರ್ಥಿಕ ಚಟುವಟಿಕೆ ಬ್ರೇಕ್ ಬಿದ್ದಿತ್ತು. ಆದರೆ, ಮಾಂಸ ಮಾರಾಟ ಮಾತ್ರ ಭರ್ಜರಿಯಾಗಿತ್ತು. ತುರ್ತು, ಅಗತ್ಯ ಸೇವೆಗಳ ಹೊರತಾಗಿ ಉಳಿದೆಲ್ಲ ವಹಿವಾಟು ಸ್ತಬ್ದವಾಗಿತ್ತು.

    ಬೆಳಗ್ಗೆ ಸಾರ್ವಜನಿಕರು ಕೆಲ ಕಾಲ ಬೈಕ್‌ಗಳಲ್ಲಿ ಸಂಚರಿಸಿದರೆ, ಮಧ್ಯಾಹ್ನ ಓಡಾಟಕ್ಕೆ ಸ್ವಯಂ ಬ್ರೇಕ್ ಹಾಕಿಕೊಂಡಿದ್ದರು. ಹೀಗಾಗಿ ಮಧ್ಯಾಹ್ನದ ವೇಳೆಗೆ ರಸ್ತೆಗಳೆಲ್ಲ ಬಿಕೋ ಎನ್ನುತ್ತಿದ್ದವು.

    ಜಿಲ್ಲಾದ್ಯಂತ ಎಲ್ಲ ರೀತಿಯ ವ್ಯಾಪಾರ-ವಹಿವಾಟಿಗೆ ನಿರ್ಬಂಧ ಹೇರಿದ್ದ ಜಿಲ್ಲಾಡಳಿತ ಚಿಕನ್, ಮಟನ್, ಮೀನು ಮಾರಾಟಕ್ಕೆ ಅವಕಾಶ ನೀಡಿತ್ತು. ಕರ್ಫ್ಯೂ ಹಿನ್ನೆಲೆಯಲ್ಲಿ ಎಲ್ಲಿಯೂ ಹೋಗದ ಬಾಡೂಟ ಪ್ರಿಯರು ಮಾಂಸದಂಗಡಿಗಳಿಗೆ ಲಗ್ಗೆಯಿಟ್ಟಿದ್ದರು.

    ಲಾಕ್‌ಡೌನ್ ಎಫೆಕ್ಟ್‌ನಿಂದ ಸಮರ್ಪಕವಾಗಿ ಕೋಳಿಗಳು ಪೂರೈಕೆ ಆಗದ ಕಾರಣ ಕೋಳಿ ದರ ಗಗನಕ್ಕೇರಿತ್ತು. ಅಲ್ಲದೆ ರಂಜಾನ್ ಹಿನ್ನೆಲೆಯೂ ದರ ಏರಿಕೆಗೆ ಕಾರಣವಾಗಿತ್ತು.

    ವಾಸವಿ ಮಹಲ್ ಸಮೀಪದ ಮಟನ್, ಚಿಕನ್ ಮಾರ್ಕೆಟ್, ಜೋಗಿಮಟ್ಟಿ ರಸ್ತೆ, ಬುರುಜನಹಟ್ಟಿ ಸೇರಿ ವಿವಿಧೆಡೆ ಕುರಿ ಹಾಗೂ ಕೋಳಿ ಮಾಂಸಕ್ಕಾಗಿ ಬೆಳಗ್ಗಿನಿಂದಲೇ ಬೇಡಿಕೆ ಹೆಚ್ಚಿತ್ತು.

    ಕೆಎಸ್‌ಆರ್‌ಟಿಸಿ ಬಸ್‌ಗಳು ರಸ್ತೆಗಿಳಿಯಲಿಲ್ಲ. ಆಟೋ, ಕ್ಯಾಬ್‌ಗಳ ಸಂಚಾರ ಕಾಣೆಯಾಗಿತ್ತು. ಹೀಗಾಗಿ ರೋಗಿಗಳು ಅವರ ಸಂಬಂಧಿಗಳಿಗೆ ಓಡಾಡಲು ಸಮಸ್ಯೆಯಾಗಿತ್ತು.

    ಭಾನುವಾರ ರಜಾ ದಿನವಾದ್ದರಿಂದ ಬಹುತೇಕ ಕ್ಲಿನಿಕ್‌ಗಳು ಬಾಗಿಲು ತೆರೆದಿರಲಿಲ್ಲ. ಕೆಲವೆಡೆ ಔಷಧ ಅಂಗಡಿಗಳು ಕೂಡ ಮುಚ್ಚಿದ್ದವು. ಸಲೂನ್, ಬ್ಯೂಟಿಪಾರ್ಲರ್‌ಗಳು ಷಟರ್ಸ್ ಎಳೆದಿದ್ದವು. ಕೆಲವೆಡೆ ನಂದಿನಿ ಪಾರ್ಲರ್‌ಗಳು ವ್ಯಾಪಾರದ ಗೋಜಿಗೆ ಹೋಗಲಿಲ್ಲ.

    ಎಪಿಎಂಸಿ, ತರಕಾರಿ ಮಾರುಕಟ್ಟೆ ಬಂದ್ ಆಗಿತ್ತು. ಸುತ್ತಮುತ್ತಲ ಪ್ರದೇಶ ಹಾಗೂ ಬಡಾವಣೆಗಳಲ್ಲಿ ತಳ್ಳುವ ಗಾಡಿಗಳಲ್ಲಿ ವರ್ತಕರು ತರಕಾರಿ-ಸೊಪ್ಪು ವ್ಯಾಪಾರ ಮಾಡಿದರು. ಪೆಟ್ರೋಲ್ ಬಂಕ್‌ಗಳು ಎಂದಿನಂತೆ ಕಾರ್ಯ ನಿರ್ವಹಿಸಿದರೂ ವಾಹನ ಸವಾರರ ಕೊರತೆ ಕಾಡಿತು.

    ಜಿಲ್ಲಾಡಳಿತ ಅನುಮತಿಸಿದ್ದ, ಮದುವೆ ಕಾರ್ಯಗಳು ಜಿಲ್ಲೆಯಲ್ಲಿ ಷರತ್ತಿನನ್ವಯ ಜರುಗಿದವು. ಮದುವೆ ಮನೆಗಳಲ್ಲಿ ವಧು-ವರರು, ಕುಟುಂಬದವರು ಮಾಸ್ಕ್ ಧರಿಸಿದ್ದು ಕಂಡುಬಂತು.

    ಲಾಕ್‌ಡೌನ್ ಸಡಿಲದ ಬಳಿಕ ಸಾರ್ವಜನಿಕರು ನಿರ್ಭೀತಿಯಿಂದ ಓಡಾಡುತ್ತಿದ್ದರು. ಆದರೆ, ಭಾನುವಾರದ ಕರ್ಫ್ಯೂ ಎಲ್ಲರಿಗೂ ಕೊಂಚಮಟ್ಟದ ರಿಲೀಫ್ ಕೊಟ್ಟಿತು. ಎಲ್ಲರೂ ಸ್ವಯಂ ಪ್ರೇರಿತವಾಗಿ ಕರ್ಫ್ಯೂಗೆ ಬೆಂಬಲ ಕೊಟ್ಟಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts