More

    ಎಂಎಸ್‌ಐಎಲ್ ಮಳಿಗೆ ಲೈಸೆನ್ಸ್

    ವಿಜಯವಾಣಿ ವಿಶೇಷ ಚಿತ್ರದುರ್ಗ: ಕರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಮತ್ತೆ ಚಾಲನೆ ಪಡೆದಿರುವ ಮದ್ಯ ಮಾರಾಟ ಹಾಗೂ ಸೇವನೆಯನ್ನು ನಿಷೇಧಿಸ ಬೇಕು ಅಥವಾ ಬೇಡವೆಂಬ ಚರ್ಚೆಗಳ ನಡುವೆ, ಎಂಎಸ್‌ಐಎಲ್ ಮಳಿಗೆಗಳ ಆರಂಭಕ್ಕೆ ಜನಪ್ರತಿನಿಧಿಗಳ ಮಾತಿಗೆ ಮನ್ನಣೆ ಕೊಡ ಬೇಕೆಂಬ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಸದ್ದಿಲ್ಲದೆ ಬದಿಗೆ ಸರಿಸಿದೆ.

    ರಾಜ್ಯದ ವಿವಿಧೆಡೆ ಮದ್ಯದ ಮಳಿಗೆಗಳನ್ನು ಆರಂಭಿಸಲು ಎಂಎಸ್‌ಐಎಲ್‌ಗೆ ಅಬಕಾರಿ ಇಲಾಖೆ 2009ರಲ್ಲಿ 463 ಹಾಗೂ 2016ರಲ್ಲಿ 900ಕ್ಕೆ ಒಪ್ಪಿಗೆ ಕೊಟ್ಟಿತ್ತು. ಈ ಪೈಕಿ ಮೊದಲ ಹಂತದಲ್ಲಿ ಬಹುತೇಕ ಎಲ್ಲ ಮಳಿಗೆಗಳು ಈಗಾಗಲೇ ವಹಿವಾಟು ನಡೆಸುತ್ತಿವೆ.

    2ನೇ ಹಂತದಲ್ಲೂ ನೂರಾರು ಮಳಿಗೆಗಳು ಕಾರ್ಯಾರಂಭ ಮಾಡಿವೆ. ಆದರೆ, ಮೊದಲ ಮತ್ತು 2ನೇ ಹಂತದ ಅನುಮತಿಗಳಡಿಯಲ್ಲಿ ಬಾಕಿ ಇರುವ ಮಳಿಗೆಗಳನ್ನು ತೆರೆಯಲು ಸರ್ಕಾರ ಈಗ ಮುಂದಾಗಿದೆ.

    ಎಂಎಸ್‌ಐಎಲ್ ಮಳಿಗೆ ಆರಂಭಕ್ಕೆ ಸಂಬಂಧಿಸಿದಂತೆ 2016 ನವೆಂಬರ್ 7ರಂದು ಹೊರಡಿಸಿದ್ದ ಸುತ್ತೋಲೆಯಲ್ಲಿದ್ದ ಶಾಸಕರು, ಜನಪ್ರತಿನಿಧಿಗಳ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕೆಂಬ ಸೂಚನೆಯನ್ನು (ಸಂಖ್ಯೆ-5) ಕೈ ಬಿಡುವಂತೆ ರಾಜ್ಯ ಸರ್ಕಾರ ಕಳೆದ ಮಾರ್ಚ್ 30ರಂದು ಅಬಕಾರಿ ಇಲಾಖೆಗೆ ಆದೇಶಿಸಿದೆ.

    ರಾಜ್ಯ ರಾಜಸ್ವದ ಹಿತ ರಕ್ಷಿಸುವ ದೃಷ್ಟಿಯಿಂದ ಬಾಕಿ ಎಂಎಸ್‌ಐಎಲ್ ಮಳಿಗೆ (ಸಿಎಲ್ 11-ಸಿ) ತ್ವರಿತ ಆರಂಭಕ್ಕಾಗಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ, ಕಳೆದ ಏಪ್ರಿಲ್ 30ರಂದು ರಾಜ್ಯದೆಲ್ಲ ಜಿಲ್ಲೆಗಳ ಅಬಕಾರಿ ಉಪಯುಕ್ತರಿಗೆ, ಇಲಾಖೆ ಆಯುಕ್ತರು ಸೂಚಿಸಿದ್ದಾರೆ.

    ಜನಪ್ರತಿನಿಧಿಗಳ ಮಾತಿಗಿನ್ನು ಕಿಮ್ಮತ್ತಿಲ್ಲ: ಸರ್ಕಾರದ ಈ ನಿರ್ಧಾರದಿಂದಾಗಿ, ಶಾಸಕರು, ಜನಪ್ರತಿನಿಧಿಗಳ ಮಾತಿಗೆ ಅಥವಾ ಜನಾಭಿಪ್ರಾಯಕ್ಕೆ ಇನ್ನು ಕಿಮ್ಮತ್ತು ಇಲ್ಲದಂತಾಗಲಿದೆ. ಅಧಿಕಾರಿಗಳ ತೀರ್ಮಾನವೇ ಅಂತಿಮವಾಗಲಿದೆ. ಇಲಾಖೆಗೆ ಪ್ರಸಕ್ತ ವರ್ಷ 25789 ಕೋಟಿ ರೂ. ಆದಾಯ ಸಂಗ್ರಹ ಗುರಿ ಇದೆ. ಇಂಥ ಸಮಯದಲ್ಲಿ ಇನ್ನುಳಿದ ಎಂಎಸ್‌ಐಎಲ್ ಮಳಿಗೆಗಳ ಆರಂಭಿಸುವುದು ಅನಿವಾರ್ಯವೆಂಬುದು ಇಲಾಖೆ ಅಧಿಕಾರಿಗಳ ವಾದವಾಗಿದೆ.

    1991ರ ನಂತರ ಲೈಸೆನ್ಸ್ ಕೊಟ್ಟಿಲ್ಲ: ರಾಜ್ಯದಲ್ಲಿ 1991ರ ನಂತರದಲ್ಲಿ ಮದ್ಯದಂಗಡಿ ಹಾಗೂ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳನ್ನು ಹೊಸದಾಗಿ ಆರಂಭಿಸಲು ಪರವಾನಗಿ ಕೊಟ್ಟಿಲ್ಲ. ಅಂದಿದ್ದ ಜನಸಂಖ್ಯೆ ಈಗಿನ ಜನಸಂಖ್ಯೆಗೂ ಅಜಗಜಾಂತರ ವ್ಯತ್ಯಾಸವಿದೆ. ರಾಜ್ಯದಲ್ಲಿ ಸಾರಾಯಿ ಮಾರಾಟ ನಿಷೇಧ ಇರುವುದರಿಂದಾಗಿ ಸಹಜವಾಗಿಯೇ ಮದ್ಯದ ಬೇಡಿಕೆ ಹೆಚ್ಚಿದೆ. ಇಂಥ ಸನ್ನಿವೇಶದಲ್ಲಿ ಮದ್ಯಂದಗಡಿಗಳ ಸಂಖ್ಯೆ ಹೆಚ್ಚಬೇಕೆಂಬ ಅಭಿಪ್ರಾಯವನ್ನು ಮಂಡಿಸುವ ಅಧಿಕಾರಿಗಳು, ಪರೋಕ್ಷವಾಗಿ ಅಕ್ರಮ ಮದ್ಯ ಮಾರಾಟವನ್ನು ಸಮರ್ಥಿಸಲು ಮುಂದಾಗಿದ್ದಾರೆ.

    ರಾಜ್ಯದಲ್ಲಿ ಪ್ರಸ್ತುತ ಸನ್ನದ್ದುಗಳ ಸಂಖ್ಯೆ-11212
    ಮದ್ಯದಂಗಡಿಗಳು-3954
    ಬಾರ್ ಆ್ಯಂಡ್ ರೆಸ್ಟೊರೆಂಟ್-3616
    ಎಂಎಸ್‌ಐಎಲ್ ಮಳಿಗೆಗಳ ಸಂಖ್ಯೆ-829
    ಬೋರ್ಡಿಂಗ್ ಆ್ಯಂಡ್ ಲಾಡ್ಜಿಂಗ್-1400
    ಸ್ಟಾರ್‌ಹೋಟೆಲ್ ಮದ್ಯ ಮಾರಾಟ ಪರವಾನಗಿ-78
    ಕ್ಲಬ್‌ಗಳು-250

    ಎಂಎಸ್‌ಐಎಲ್ ಮಳಿಗೆ ಆರಂಭಕ್ಕೆ ಶಾಸಕರು, ಜನಪ್ರತಿನಿಧಿಗಳ ಅಭಿಪ್ರಾಯಕ್ಕೆ ಇದ್ದ ಮನ್ನಣೆಯನ್ನು ಕೈಬಿಡುವಂತೆ ಇಲಾಖೆ ಸೂಚಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವಿಸುವಂಥವರಿಗೆ ಇಲಾಖೆ 5 ಸಾವಿರ ರೂ. ವರೆಗೆ ದಂಡ ವಿಧಿಸಲಿದ್ದು, ನಾಳೆಯಿಂದಲೇ ಸಿಬ್ಬಂದಿ ಗಸ್ತು ಹೆಚ್ಚಿಸಲಾಗುವುದು.
    ನಾಗಶಯನ
    ಅಬಕಾರಿ ಡಿಸಿ, ಚಿತ್ರದುರ್ಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts