More

    ವೈದ್ಯಕೀಯ ಕ್ಷೇತ್ರದ ಬದಲಾವಣೆ ಅರಿಯಿರಿ

    ಚಿತ್ರದುರ್ಗ: ವೈದ್ಯಕೀಯ ವಿಭಾಗದಲ್ಲಿ ಉದ್ಯೋಗ ಗಳಿಸಲು ಈ ಕ್ಷೇತ್ರದಲ್ಲಿ ಆಗಿರುವ ಬದಲಾವಣೆಗಳನ್ನು ಅರಿತುಕೊಳ್ಳಬೇಕು ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಉದ್ಯೋಗಾಕಾಂಕ್ಷಿಗಳಿಗೆ ಸಲಹೆ ನೀಡಿದರು.

    ಎಸ್ಸಿ, ಎಸ್ಟಿ ಅಭ್ಯರ್ಥಿಗಳ ಕೌಶಲಾಭಿವೃದ್ಧಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿ, ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ತರಬೇತಿ ಪಡೆದರೆ ಉತ್ತಮ ಅವಕಾಶಗಳು ಒದಗುತ್ತವೆ ಎಂದರು.

    ಅರೆ ವೈದ್ಯಕೀಯ ಕೋರ್ಸ್‌ಗಳಾದ ಎಎನ್‌ಎಂ, ಜಿಎನ್‌ಎಂ, ಬಿಎಸ್ಸಿ ನರ್ಸಿಂಗ್, ಹೆಲ್ತ್‌ಇನ್ಸ್‌ಪೆಕ್ಟರ್ ಸೇರಿ ಅನೇಕ ವೃತ್ತಿಪರ ಕೋರ್ಸ್‌ಗಳಿಗೆ ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ಕೇರಳದ ಶೇ.70 ಮಂದಿ ವಿದೇಶಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಮೇಳದಲ್ಲಿ ಅವಕಾಶ ಸಿಗದಿರುವವರು ನಿರಾಶರಾಗಬೇಕಿಲ್ಲ. ಮುಂದಿನ ದಿನಗಳಲ್ಲಿ ಹೆಚ್ಚಿನ ಭವಿಷ್ಯವಿದೆ ಎಂಬ ವಿಶ್ವಾಸವನ್ನು ಹೊಂದಬೇಕು ಎಂದು ಕಿವಿಮಾತು ಹೇಳಿದರು.

    ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಮಾತನಾಡಿ, ಶಿಕ್ಷಣ ಪಡೆದ ಎಲ್ಲರಿಗೂ ಉದ್ಯೋಗ ಸಿಗುತ್ತದೆ ಎನ್ನಲಾಗದು. ಆದ್ದರಿಂದ ಶಿಕ್ಷಣ ಜತೆಗೆ ಕೌಶಲ ರೂಢಿಸಿಕೊಂಡರೆ ಉದ್ಯೋಗ ತಾನಾಗಿಯೇ ದೊರೆಯಲಿದೆ. ವಿದ್ಯಾರ್ಥಿಗಳು ವ್ಯಾಸಂಗ ಅವಧಿ ಉತ್ತಮ ವೃತ್ತಿಪರ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

    ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಸರ್ಕಾರ ಉದ್ಯೋಗ ಮೇಳಗಳನ್ನು ನಿರಂತರ ನಡೆಸುತ್ತಿದೆ. ಈ ಮೇಳದಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನ ಪ್ರತಿಷ್ಠಿತ 3 ಆಸ್ಪತ್ರೆಗಳಲ್ಲಿ ಶಿಷ್ಯವೇತನದೊಂದಿಗೆ ತರಬೇತಿ ಸಿಗಲಿದ್ದು, ಉದ್ಯೋಗದ ಭರವಸೆ ದೊರೆಯಲಿದೆ ಎಂದರು.

    ಡಿಎಚ್‌ಒ ಡಾ.ಪಾಲಾಕ್ಷ ಮಾತನಾಡಿ, ಪ್ರಸಕ್ತ ಸಾಲಿಗೆ ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ ಕನಿಷ್ಟ 800 ಹಾಸಿಗೆಯುಳ್ಳ ಎನ್‌ಎಬಿಎಚ್ ಮಾನ್ಯತೆ ಪಡೆದ ಆಸ್ಪತ್ರೆಗಳಲ್ಲಿ ಕನಿಷ್ಠ ಶೇ.75 ಹುದ್ದೆ ಮೀಸಲಿರಿಸುವ ಭರವಸೆ ಮೇರೆಗೆ ಕೌಶಲ ಅಭಿವೃದ್ಧಿ ತರಬೇತಿಗೆ ಸಂದರ್ಶನ ನಡೆಯಲಿದ್ದು, ಆಯ್ಕೆಯಾಗುವ 80 ಅಭ್ಯರ್ಥಿಗಳಿಗೆ 3ರಿಂದ 9 ತಿಂಗಳ ವರೆಗೆ ತರಬೇತಿ ಇರುತ್ತದೆ ಎಂದರು.

    ಜಿಪಂ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಅನಂತ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಕೆ.ನಾಗರಾಜ್, ಡಾ.ರಂಗನಾಥ್, ಡಾ.ಗಿರೀಶ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಚಿದಾನಂದಪ್ಪ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಮಂಜುನಾಥ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts