More

    ಟ್ರಯಲ್‌ನಲ್ಲೇ ಮುಗ್ಗುರಿಸುತ್ತಿದೆ ನಮ್ಮಭೂಮಿ

    ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ: ಭೂ ದಾಖಲೆಗಳ ನಿರ್ವಹಣೆಗಾಗಿ ರಾಜ್ಯದಲ್ಲಿ ಜಾರಿಗೊಳಿಸಲು ಉದ್ದೇಶಿಸಿರುವ ಉನ್ನತೀಕರಿಸಿದ ಭೂಮಿ ತಂತ್ರಾಂಶ ಮುಗ್ಗರಿಸ ತೊಡಗಿದೆ.

    ಸುಧಾರಿತ ತಂತ್ರಾಂಶವನ್ನು ನಮ್ಮ ಭೂಮಿ ಹೆಸರಿಂದ ರಾಜ್ಯದ ಎಲ್ಲ ತಾಲೂಕುಗಳಲ್ಲೂ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ಪ್ರಾಯೋಗಿಕವಾಗಿ ತುಮಕೂರು ಜಿಲ್ಲೆಯ ಗುಬ್ಬಿ, ಚಿತ್ರದುರ್ಗ ತಾಲೂಕು ಆಯ್ಕೆ ಮಾಡಿಕೊಳ್ಳಲಾಗಿದೆ.

    ಇದರಿಂದಾಗಿ ಈ ಮೊದಲು ಆಫ್‌ಲೈನ್‌ನಲ್ಲಿದ್ದ ಗಣಕೀಕೃತ ದಾಖಲೆಗಳ ಸೇವೆ, ಆನ್‌ಲೈನ್‌ಗೆ ಪರಿವರ್ತನೆಯಾಗಲಿದೆ ಹಾಗೂ ತಾಲೂಕು ಕೇಂದ್ರದಿಂದ ಹೋಬಳಿ ಮಟ್ಟದವರೆಗೂ ವಿಸ್ತರಿಸಲಾಗುತ್ತಿದೆ.

    ಈ ಎರಡೂ ತಾಲೂಕುಗಳಲ್ಲಿ ನಮ್ಮ ಭೂಮಿ ತಂತ್ರಾಂಶದಡಿ ಕಳೆದ ಡಿಸೆಂಬರ್ 10ರಿಂದ ಭೂ ದಾಖಲೆಗಳ ನಿರ್ವಹಣೆ ಪ್ರಯತ್ನ ನಡೆದಿದೆ. ರಾಜ್ಯದಲ್ಲಿ ಈಗಾಗಲೇ ಜಾರಿಯಲ್ಲಿರುವ ಭೂಮಿ ತಂತ್ರಾಂಶದಡಿ ಪಹಣಿ, ಮ್ಯೂಟೇಷನ್, ಖಾತೆ ಬದಲಾವಣೆ, ಪೌತಿ ಖಾತೆ,ಪೋಡಿ ದುರಸ್ತಿ ಇತ್ಯಾದಿ ಅಗತ್ಯ ದಾಖಲೆಗಳನ್ನು ರೈತರು, ಖಾತೆದಾರರು ತ್ವರಿತಗತಿಯಲ್ಲಿ ಭೂಮಿ ಕೇಂದ್ರ, ನಾಡಕಚೇರಿ, ಗ್ರಾಪಂ ಅಥವಾ ವೆಬ್‌ಸೈಟ್‌ನಿಂದ ಪಡೆಯಲು ಸಾಧ್ಯವಾಗಲಿದೆ. ಲಾಗ್‌ಇನ್‌ಗೆ ಬೆರಳಚ್ಚು ಕೊಡಲು ಗ್ರಾಮ ಲೆಕ್ಕಿಗರು, ಆರ್‌ಐಗಳು ಹಾಗೂ ತಾಲೂಕು ಕೇಂದ್ರಕ್ಕೆ ಬರುವುದೂ ತಪ್ಪಲಿದೆ.

    ಪ್ರಸ್ತುತ ಸಮಸ್ಯೆಗಳೇನು: ಚಿತ್ರದುರ್ಗ ತಾಲೂಕಿನಲ್ಲಿ ಜಾರಿಯಾಗಿರುವ ನಮ್ಮಭೂಮಿಯಡಿ ಪಡೆಯುವ ದಾಖಲೆಗಳಲ್ಲಿ ಕೆಲ ದೋಷಗಳು ಕಂಡು ಬರುತ್ತಿವೆ. ನೋಂದಣಿ, ಇಸ್ಸೆ, ದಾನ ಇತ್ಯಾದಿ ಭೂ ದಾಖಲೆ ನಿರ್ವಹಣೆಗಳು ನೋಂದಣಿ ಇಲಾಖೆ ಕಾವೇರಿ ತಂತ್ರಾಂಶದಲ್ಲಿ ಸರಿ ಇದ್ದರೂ, ಕಂದಾಯ ಇಲಾಖೆ ದಾಖಲೆಗಳಲ್ಲಿ ಸರಿಯಾಗಿ ಪ್ರಕಟವಾಗುತ್ತಿಲ್ಲ.
    ಇದರಿಂದ ಆಸ್ತಿ ಮಾಲೀಕರು, ರೈತರು ನಿತ್ಯವೂ ಭೂಮಿ ಕೇಂದ್ರಕ್ಕೆ ಅಲೆದಾಡುವಂತಾಗಿದೆ. ಜಮೀನು ಪಾಲು ವಿಭಾಗದ ಬಳಿಕ ಪಡೆಯ ಬೇಕಿರುವ ಅಗತ್ಯ ದಾಖಲೆಗಳಿಗೆ ಹತ್ತಾರು ದಿನಗಳಿಂದ ಓಡಾಡುತ್ತಿದ್ದೇನೆ, ಆದರೂ ಕೆಲಸವಾಗಿಲ್ಲವೆಂದು ರೈತರೊಬ್ಬರ ಅಸಮಧಾನ ಯೋಜನೆ ಮುಗ್ಗರಿಸುತ್ತಿರುವುದಕ್ಕೆ ಸಾಕ್ಷಿ ಎನ್ನಬಹುದು.

    ಲಾಗಿನ್‌ದೇ ಸಮಸ್ಯೆ: ತಹಸೀಲ್ದಾರ್, ಶಿರಸ್ತೇದಾರ್, ಕಂದಾಯ ನಿರೀಕ್ಷಕ ಹಾಗೂ ಗ್ರಾಮಲೆಕ್ಕಿಗರ ಲಾಗಿನ್‌ಗೂ ನಮ್ಮ ಭೂಮಿಯಲ್ಲಿ ಸಮಸ್ಯೆ ಉಂಟಾಗುತ್ತಿದ್ದು, ತಾಲೂಕು ಕಚೇರಿ ಅಧಿಕಾರಿ, ಸಿಬ್ಬಂದಿ ಪರದಾಡುತ್ತಿದ್ದಾರೆ. ನಿತ್ಯದ ದೋಷಗಳನ್ನು ಭೂಮಿ ನಿರ್ವಹಣಾ ಕೋಶಕ್ಕೆ (ಬಿಎಂಸಿ) ತಿಳಿಸಲಾಗುತ್ತಿದ್ದರೂ ವ್ಯವಸ್ಥೆ ಸುಧಾರಿಸುತ್ತಿಲ್ಲವೆಂಬ ಅಸಮಾಧಾನ ಕಂಡು ಬಂದಿದೆ.

    ಒಟಿಪಿಯದ್ದೂ ಗೋಳೆ: ಸುಧಾರಿತ ತಂತ್ರಾಂಶ ಸಮಸ್ಯೆಗಳು ಒಂದಾದರೆ,ಇನ್ನು ಆಸ್ತಿ ನೋಂದಣಿಗೆ ಫೆ.5ರಿಂದ ರಾಜ್ಯಾದ್ಯಂತ ಕಡ್ಡಾಯಗೊಳಿಸಿರುವ ಒಟಿಪಿ ವ್ಯವಸ್ಥೆಯಿಂದಾಗಿ ನೋಂದಣಿ ಪ್ರಕ್ರಿಯೆ ವಿಳಂಬವಾಗುತ್ತಿದೆ. ಇದರಿಂದಾಗಿ ನಮ್ಮ ಭೂಮಿಯಿಂದ ದಾಖಲೆ ಪಡೆಯುವ ಕೆಲಸವೂ ನಿಧಾನವಾಗುತ್ತಿದೆ.

    ವಿಳಂಬವಾಗುತ್ತಿದೆ: ಆಸ್ತಿ ನೋಂದಣಿಗೆ ಒಟಿಪಿ ಕಡ್ಡಾಯಗೊಳಿಸುವ ಪ್ರಾಯೋಗಿಕ ಯೋಜನೆ ಈಗ ರಾಜ್ಯಾದ್ಯಂತ ಜಾರಿಯಾಗಿದ್ದು, ಇದರಿಂದ ನೋಂದಣಿ ವಿಳಂಬವಾಗುತ್ತಿದೆ ವಿನಾ ಕಾವೇರಿ ತಂತ್ರಾಂಶದಲ್ಲಿ ಯಾವುದೇ ತೊಡಕು ಉಂಟಾಗಿಲ್ಲ ಎನ್ನುತ್ತಾರೆ ಉಪ ನೋಂದಣಿಧಿಕಾರಿ ಪಿ.ವೆಂಕಟೇಶ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts