More

    ಕಸ ಸಂಗ್ರಹ ವಾಹನಕ್ಕೆ ಜಿಪಿಎಸ್ ಕಣ್ಗಾವಲು

    ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ: ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮನೆ, ಮನೆಯಿಂದ ಕಸ ಸಂಗ್ರಹಿಸುವ ವಾಹನಗಳಿಗೆ ಇನ್ನುಮುಂದೆ ಜಿಪಿಎಸ್ ಕಣ್ಗಾವಲಲ್ಲಿ ಸಂಚರಿಸಲಿವೆ.

    ಸದ್ಯಕ್ಕೆ ಪ್ರಾಯೋಗಿಕವಾಗಿ ಮೊಳಕಾಲ್ಮೂರು, ಹೊಸದುರ್ಗದ ನಾಲ್ಕು ವಾರ್ಡ್ ಹಾಗೂ ಹೊಳಲ್ಕೆರೆಯ ಒಂದು ವಾರ್ಡ್‌ನಲ್ಲಿ ಈ ವ್ಯವಸ್ಥೆ ಜಾರಿಗೆ ತರಲು ಜಿಲ್ಲಾ ಗರಾಭಿವೃದ್ಧಿ ಕೋಶ ಮುಂದಾಗಿದೆ.

    ಇದರ ಸಾಧಕ-ಬಾಧಕ ಗಮನಿಸಿದ ಬಳಿಕ ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು, ನಾಯಕನಹಟ್ಟಿಯಲ್ಲಿ ಈ ಹೊಸ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತದೆ.

    ಲಭ್ಯವಾಹನಗಳು, ಪೌರಕಾರ್ಮಿಕರ ಸಂಖ್ಯೆಯನ್ನಾಧರಿಸಿ ದಿನಕ್ಕೊಮ್ಮೆ ಅಥವಾ ಎರಡು ದಿನಗಳಿಗೊಮ್ಮೆ ಪ್ರತಿ ಮನೆಯಿಂದ ಕಸ ಸಂಗ್ರಹಿಸಲಾಗುತ್ತಿದೆ. ನಿವಾಸಿಗಳು ಐದು ವಿಧದಲ್ಲಿ ಕಸವನ್ನು ಪ್ರತ್ಯೇಕಿಸಿ ವಾಹನಗಳಿಗೆ ಕೊಡಬೇಕು. ಆದರೆ, ಅನೇಕರು ಬೇರ್ಪಡಿಸುವುದಿಲ್ಲ. ಇನ್ನು ಕೆಲವರು ಹಸಿ, ಒಣ ಕಸ ಬೇರೆ ಮಾಡಿ ವಾಹನಗಳಿಗೆ ಹಾಕುವುದು ನಡೆದಿದೆ.

    ಜಿಪಿಎಸ್ ಟ್ರಾೃಕಿಂಗ್: ಕಸ ಸಂಗ್ರಹಿಸಲು ಅನೇಕ ವಾಹನಗಳು ಮನೆ ಬಾಗಿಲಿಗೆ ಹೋಗುವುದಿಲ್ಲ ಎಂಬ ದೂರು ನಿವಾರಿಸಲು ಹಾಗೂ ಸಮರ್ಪಕವಾಗಿ ಪೌರ ಕಾರ್ಮಿಕರ ಸೇವೆ ಬಳಸಿಕೊಳ್ಳಲು ಕಸ ಸಂಗ್ರಹ ವಾಹನಗಳಿಗೆ ಜಿಪಿಎಸ್ ಟ್ರಾೃಕಿಂಗ್ ಸಿಸ್ಟಮ್ ಅಳವಡಿಸಲಾಗುತ್ತಿದೆ. ಇದರಿಂದ ವಾಹನಗಳ ಸಂಚಾರ ವಾಚ್ ಮಾಡಿ ದಾಖಲಿಸಲು ಅನುಕೂಲವಾಗಲಿದೆ.

    ಕ್ಯುಆರ್ ಕೋಡ್: ಪ್ರತಿ ಮನೆ ನಿವಾಸಿ ವಿಳಾಸ, ಮೊಬೈಲ್ ನಂಬರ್‌ಗಳನ್ನು ಕಂಪ್ಯೂಟರ್‌ಗೆ ಅಪ್‌ಲೋಡ್ ಮಾಡಲಾಗುತ್ತಿದ್ದು, ಒಂದು ವಾರ್ಡ್‌ಗೆ ವಾಹನ ಹೊರಡುತ್ತಿದ್ದಂತೆ ಅಲ್ಲಿನ ನಿವಾಸಿಗಳಿಗೆ ಮೊಬೈಲ್ ಸಂದೇಶ ರವಾನೆ ಆಗುತ್ತದೆ. ಜತೆಗೆ ಮೊಬೈಲ್‌ನಲ್ಲಿರುವ ಸ್ವಚ್ಛತಾ ಆ್ಯಪ್ ಬಳಸಿ ವಾಹನದೊಂದಿಗೆ ತೆರಳುವ ಸಿಬ್ಬಂದಿ ಮನೆ ಮುಂದಿರುವ ಕ್ಯುಆರ್ ಕೋಡ್‌ನ್ನು ಸ್ಕಾೃನ್ ಮಾಡಬೇಕಾಗುತ್ತದೆ.
    ಇದರಿಂದಾಗಿ ಕಸ ತೆಗೆದುಕೊಂಡು ಹೋಗಿಲ್ಲವೆಂಬ ದೂರು ತಪ್ಪುತ್ತದೆ ಮತ್ತು ಸ್ವಚ್ಛತೆ ಕಾರ್ಯವೂ ಸಮರ್ಪಕವಾಗುತ್ತದೆ ಎಂಬ ಆಶಯದೊಂದಿಗೆ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ. ಜಿಪಿಎಸ್ ಅಳವಡಿಸಿರುವ ಹೊಸ ವಾಹನಗಳು ಕಸ ಸಂಗ್ರಹಣೆಗೆ ಸ್ಥಳೀಯ ಸಂಸ್ಥೆಗಳಿಗೆ ಶೀಘ್ರದಲ್ಲೇ ಪೂರೈಕೆ ಆಗಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts