More

    ಜಿಲ್ಲೆಯಲ್ಲಿ ಹೆಚ್ಚುವರಿ ಹಾಸ್ಟೆಲ್ ನಿರ್ಮಾಣ

    ಚಿತ್ರದುರ್ಗ: ಜಿಲ್ಲೆಯಲ್ಲಿ ಹೆಚ್ಚುವರಿ ವಿದ್ಯಾರ್ಥಿ ನಿಲಯ ಮತ್ತು ಸಮಸ್ಯೆಗಳ ನಿವಾರಣೆಗಾಗಿ 1.75 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಸಂಸದ ಎ.ನಾರಾಯಣಸ್ವಾಮಿ ಹೇಳಿದರು.

    ನಗರದ ಕೆಲ ವಿದ್ಯಾರ್ಥಿ ನಿಲಯಗಳಿಗೆ ಶನಿವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಮಾತನಾಡಿ, ಗುಣಮಟ್ಟದ ಆಹಾರ, ಸ್ವಚ್ಛತೆ, ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳು ಹಾಗೂ ನಿಲಯ ಪಾಲಕರಿಗೆ ತಾಕೀತು ಮಾಡಿದರು.

    ಕೇಂದ್ರ ಸರ್ಕಾರ 1 ಕೋಟಿ, ರಾಜ್ಯ ಸರ್ಕಾರ 75 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದೆ. ವಿದ್ಯಾರ್ಥಿ ನಿಲಯಗಳಲ್ಲಿ ಮಕ್ಕಳಿಗೆ ಅಗತ್ಯವಿರುವ ಸವಲತ್ತು ಕಲ್ಪಿಸುವ ಉದ್ದೇಶದಿಂದ ನಾನೇ ಖುದ್ದು ಭೇಟಿ ನೀಡಿ ಪರಿಶೀಲಿಸುತ್ತಿದ್ದೇನೆ ಎಂದರು.

    ಸರ್ಕಾರಿ ವಿಜ್ಞಾನ ಕಾಲೇಜು ಮತ್ತು ಸರ್ಕಾರಿ ಕಲಾ ಕಾಲೇಜುಗಳಿಗೆ ಭದ್ರತೆ ಒದಗಿಸಲು ತಡೆಗೋಡೆ ನಿರ್ಮಿಸಲಾಗುವುದು. ಜತೆಗೆ ಕಾಲೇಜುಗಳಿಗೆ ಬೇಕಾಗಿರುವ ಪ್ರಯೋಗಾಲಯ, ಕಂಪ್ಯೂಟರ್ ಕೊಠಡಿ, ಕುರ್ಚಿ, ಟೇಬಲ್ ಪೀಠೋಪಕರಣಗಳು ಸೇರಿ ಇತರೆ ಮೂಲ ಸೌಲಭ್ಯ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

    ವಿದ್ಯಾರ್ಥಿ ನಿಲಯಗಳಲ್ಲಿ ಇ-ಗ್ರಂಥಾಲಯ, ಶೌಚಗೃಹ ದುರಸ್ತಿ, ವಿದ್ಯಾರ್ಥಿ ನಿಲಯಗಳ ಚಾವಣಿ ಭದ್ರಪಡಿಸುವುದು ಸೇರಿ ಇತರೆ ಮೂಲ ಸೌಲಭ್ಯ ಕಲ್ಪಿಸುವುದರ ಮೂಲಕ ವಿದ್ಯಾರ್ಥಿ ನಿಲಯಗಳಿಗೆ ಕಾಯಕಲ್ಪ ಕಲ್ಪಿಸಲಾಗುವುದ ಎಂದರು.

    ವಿದ್ಯಾರ್ಥಿ ನಿಲಯಗಳಿಗೆ ನ್ಯಾಯಾಧೀಶರು ಭೇಟಿ ನೀಡುತ್ತಿರುವುದರಿಂದ ಹಲವು ವಿದ್ಯಾರ್ಥಿ ನಿಲಯಗಳಲ್ಲಿ ಅನೇಕ ರೀತಿಯ ಪರಿವರ್ತನೆಗಳು ನಡೆಯುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ವಿದ್ಯಾರ್ಥಿ ನಿಲಯಗಳಲ್ಲಿ ಕಡ್ಡಾಯವಾಗಿ ಸ್ವಚ್ಛತೆ ಕಾಪಾಡಬೇಕು. ಅಗತ್ಯವಿರುವ ಕಾಮಗಾರಿ ಪೂರ್ಣಗೊಳಿಸುವುದು ಸೇರಿ ವಿದ್ಯಾರ್ಥಿ ನಿಲಯಗಳಿಗೆ ಅಗತ್ಯವಾಗಿ ಬೇಕಾಗಿರುವ ಮೂಲಸೌಲಭ್ಯ ಕಲ್ಪಿಸಲು ಬದ್ಧವಾಗಿದ್ದೇನೆ ಎಂದು ಭರವಸೆ ನೀಡಿದರು.

    ತಿಂಗಳಿಗೊಮ್ಮೆ ಹಾಸ್ಟೆಲ್‌ಗಳಿಗೆ ಭೇಟಿ ನೀಡುವ ಕೆಲಸ ಮಾಡುತ್ತೇನೆ. ಲೋಪದೋಷಗಳನ್ನು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಎರಡು ತಿಂಗಳೊಳಗೆ ಸರಿಪಡಿಸಿಕೊಳ್ಳಬೇಕು. ಸಮಸ್ಯೆಗಳಿಗೆ ಸರಿಯಾಗಿ ಅಧಿಕಾರಿಗಳು ಸ್ಪಂದಿಸುವ ಕೆಲಸ ಮಾಡಬೇಕು ಎಂದು ಸೂಚಿಸಿದರು.

    ಸರ್ಕಾರಿ ಪದವಿ ಪೂರ್ವ ಕಾಲೇಜು ಬಾಲಕರ ಬಿ, ಸರ್ಕಾರಿ ವಿಜ್ಞಾನ ಕಾಲೇಜು ವಿದ್ಯಾರ್ಥಿ ನಿಲಯ, ಸರ್ಕಾರಿ ಕಲಾ ಕಾಲೇಜು ‘ಎ’ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಂದ ಸಮಸ್ಯೆ ಕುರಿತು ಮಾಹಿತಿ ಪಡೆದರು.

    ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾಗರಾಜ್, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪರಮೇಶ್ವರಪ್ಪ ಹಾಗೂ ವಿದ್ಯಾರ್ಥಿ ನಿಲಯಗಳ ನಿಲಯ ಪಾಲಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts