More

    ನೇರ ರೈಲು ಮಾರ್ಗದ ನಿಲ್ದಾಣಗಳಿಗೆ ಮಾಡರ್ನ್ ಟಚ್

    ಚಿತ್ರದುರ್ಗ: ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗಕ್ಕಾಗಿ 5 ಪ್ಯಾಕೇಜ್‌ಗಳಲ್ಲಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ನೈಋತ್ಯ ರೈಲ್ವೆ ಇಲಾಖೆ ಭೂ ಕೋರಿಕೆ ವಿಭಾಗದ ಸೀನಿಯರ್ ಸೆಕ್ಷನ್ ಇಂಜಿನಿಯರ್ ಶಶಿಧರ್ ಹೇಳಿದರು.

    ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನೇರ ರೈಲು ಮಾರ್ಗದ ಹಿರಿಯೂರು ತಾಲೂಕಿಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಪುನರ್ವಸತಿ ಮತ್ತು ಪುನರ್ನಿರ್ಮಾಣ ಸಮಿತಿ ಸಭೆಯಲ್ಲಿ ಮಾತನಾಡಿದರು.

    ತುಮಕೂರು ಜಿಲ್ಲೆಯಲ್ಲಿ ಅಗತ್ಯವಿರುವ ಅರ್ಧ ಜಮೀನನ್ನು ಸರ್ಕಾರ ಇಲಾಖೆಗೆ ಹಸ್ತಾಂತರಿಸಿದ್ದು, ಕಾಮಗಾರಿ ಆರಂಭವಾಗಿದೆ. ಚಿತ್ರದುರ್ಗದಲ್ಲೂ ಭೂಮಿ ಹಸ್ತಾಂತರಿಸಿದರೆ ಟೆಂಡರ್ ಕರೆಯಲಾಗುವುದು. ಹಿರಿಯೂರಿನ ಆನೆಸಿದ್ರಿ, ಪಾಲವ್ವನಹಳ್ಳಿ, ಐಮಂಗಲದಲ್ಲಿ ರೈಲ್ವೆ ನಿಲ್ದಾಣಗಳು ಆಧುನಿಕ ಶೈಲಿಯಲ್ಲಿ ನಿರ್ಮಾಣವಾಗಲಿವೆ. ರೈಲ್ವೆ ಮಾರ್ಗದಲ್ಲಿ ಗೇಟ್‌ಗಳಿಲ್ಲದಂತೆ ಮೇಲು ಹಾಗೂ ಕೆಳ ಸೇತುವೆ ಗಳನ್ನು ನಿರ್ಮಿಸಲಾಗುವುದು ಎಂದರು.

    ಹಿರಿಯೂರು ತಾಲೂಕಿನ 19 ಗ್ರಾಮಗಳ 475.36 ಎಕರೆ ಭೂಸ್ವಾಧೀನಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಪುನರ್ವಸತಿ ಮತ್ತು ಪುನರ್ ನಿರ್ಮಾಣ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಡಿಸಿ ಆರ್.ವಿನೋತ್‌ಪ್ರಿಯಾ ಹೇಳಿದರು.

    ನೇರ ರೈಲು ಮಾರ್ಗವು 201.47 ಕಿ.ಮೀ ಇರಲಿದ್ದು, ಈ ಮಾರ್ಗಕ್ಕಾಗಿ ಹಿರಿಯೂರು ತಾಲೂಕಲ್ಲಿ 639.23 ಎಕರೆ ಅಗತ್ಯವಿದೆ. ಐಮಂಗಲ, ಕಸಬಾ ಮತ್ತು ಜವಗೊಂಡನಹಳ್ಳಿ ಹೋಬಳಿಗಳ 19 ಗ್ರಾಮಗಳಲ್ಲಿ 475.36 ಎಕರೆ ಬೇಕಿದೆ. ಹಿರಿಯೂರು ತಾಲೂಕಿನಲ್ಲಿ 5 ನಿಲ್ದಾಣಗಳನ್ನು ಪ್ರಸ್ತಾಪಿಸಲಾಗಿದ್ದು, ಇಲ್ಲಿ 55.06 ಕಿ.ಮೀ. ರೈಲು ಮಾರ್ಗವಿರಲಿದೆ ಎಂದರು.

    ಗ್ರಾಮಸಭೆ ನಡೆಸಿ ಅಹವಾಲುಗಳನ್ನು ಸ್ವೀಕರಿಸಲಾಗಿದೆ. ಶೇ.50 ಕ್ಕಿಂತ ಹೆಚ್ಚು ಭೂಮಿ ಕಳೆದುಕೊಳ್ಳುವ 4 ಕುಟುಂಬಗಳಿಗೆ ಹೆಚ್ಚುವರಿ ಪರಿಹಾರ ಹಾಗೂ ಸರ್ಕಾರಿ ಹುದ್ದೆಗಳ ಮೀಸಲಿಗಾಗಿ ಯೋಜನಾ ನಿರಾಶ್ರಿತ ದೃಢೀಕರಣ ಪತ್ರ ವಿತರಿಸುವುದಾಗಿ ಹೇಳಿದರು.

    ಮನೆ, ತೋಟ ಮತ್ತಿತರ ಆಸ್ತಿ-ಪಾಸ್ತಿ ಕಳೆದುಕೊಳ್ಳುವವರಿಗೂ ಪರಿಹಾರ ದೊರೆಯಲಿದೆ. ಮನೆ ಕಳೆದುಕೊಳ್ಳುವವರಿಗೆ ಇಂದಿರಾ ಆವಾಸ್ ಯೋಜನೆಯಡಿ ಮನೆ ನಿರ್ಮಿಸಲು ಅವಕಾಶವಿದೆ ಎಂದ ಡಿಸಿ, ಭವಿಷ್ಯದ ಜನ ಸಂಖ್ಯೆಗೆ ಅನುಗುಣವಾಗಿ ರೈಲ್ವೆ ಮೇಲ್ಸೇತುವೆ ಹಾಗೂ ಕೆಳ ಸೇತುವೆಗಳು ಎತ್ತರ ಹಾಗೂ ಅಗಲವಿರಬೇಕೆಂದು ರೈಲ್ವೆ ಇಲಾಖೆ ಅಧಿಕಾರಿಗೆ ತಾಕೀತು ಮಾಡಿದರು.

    ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ, ಮನೆ ಕಳೆದುಕೊಳ್ಳುವವರಿಗೆ ಬೇರೆಡೆ ಮನೆ ಕಟ್ಟಿಕೊಡಬೇಕು. ಈ ವಿಷಯಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಹಾಗೂ ನಗರ ಪ್ರದೇಶ ಸಂತ್ರಸ್ತರಿಗೆ ಇರುವ ಪರಿಹಾರ ನಿಯಮಗಳೇನು ಎಂಬುದನ್ನು ಸ್ಪಷ್ಟ ಪಡಿಸಬೇಕು, ಸಂತ್ರಸ್ತರಿಗೆ ಅನ್ಯಾಯವಾಗಬಾರದು ಎಂದರು.

    ಎಡಿಸಿ ಸಿ.ಸಂಗಪ್ಪ ಮಾತನಾಡಿ, ಯೋಜನೆಯಡಿ ತಾಲೂಕಿನಲ್ಲಿ 19 ಗ್ರಾಮಗಳ 475 ಕುಟುಂಬಗಳು ಬಾಧಿತವಾಗಲಿವೆ. 3 ತಿಂಗಳ ಒಳಗೆ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ಹೇಳಿದರು.

    ಎಸಿ ಸಿ.ಪ್ರಸನ್ನಕುಮಾರ್, ಜಿಪಂ ಅಧ್ಯಕ್ಷೆ ಜಿ.ಎಂ.ವಿಶಾಲಾಕ್ಷಿ ನಟರಾಜ್, ಮುಖ್ಯಯೋಜನಾಧಿಕಾರಿ ಶಶಿಧರ್, ವಿವಿಧ ಗ್ರಾಪಂ ಅಧ್ಯಕ್ಷರು, ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts