More

    ನೆಗೆಟಿವ್-ಪಾಸಿಟಿವ್ ಚರ್ಚೆ

    ಚಿತ್ರದುರ್ಗ: ಗುಜರಾತ್‌ನಿಂದ ಚಿತ್ರದುರ್ಗ ಪ್ರವೇಶಿಸಿದ 15 ತಬ್ಲಿಘಿ ಜಮಾತ್ ಸದಸ್ಯರು, ಅಲ್ಲಿಂದ ಹೊರಡುವ ಮುನ್ನ ಪರೀಕ್ಷೆ ಮಾಡಿಸಿಕೊಂಡಿದ್ದು, ನೆಗಟಿವ್ ವರದಿ ಬಂದಿದೆ.

    ಆದರೆ, ಚಿತ್ರದುರ್ಗ ಪ್ರವೇಶಿಸಿದ ಬಳಿಕ ನಡೆದ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ. ಇದು ಹೇಗೆ ಸಾಧ್ಯವಾಯ್ತು…

    ಡಿಸಿ ಕಚೇರಿಯಲ್ಲಿ ಶನಿವಾರ ಜರುಗಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಭೆಯಲ್ಲಿ ಈ ಪ್ರಶ್ನೆ ಹಲವರನ್ನು ಕಾಡಿ, ಗಂಭೀರ ಚರ್ಚೆ ನಡೆಯಿತು.

    ಆದ್ದರಿಂದ ಹೊರಗಿನಿಂದ ಯಾರೇ ಬರಲಿ, ಅವರ ಬಳಿ ಯಾವುದೇ ಸರ್ಟಿಫೀಕೇಟ್ ಇರಲಿ, ಇಲ್ಲದಿರಲಿ, ಅವರೆಲ್ಲರನ್ನೂ ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಬೇಕು ಎಂದು ಉಸ್ತುವಾರಿ ಕಾರ್ಯದರ್ಶಿ ಪ್ರಕಾಶ್ ಸೂಚಿಸಿದರು.

    ಪರಿಸ್ಥಿತಿ ನಿರ್ವಣೆಗೆ ಸಜ್ಜಾಗಿ: ಹಸಿರು ವಲಯ ಚಿತ್ರದುರ್ಗದಲ್ಲಿ 6 ಪ್ರಕರಣಗಳು ದೃಢಪಟ್ಟಿರುವುದರಿಂದಾಗಿ ಯಾವುದೇ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಸಜ್ಜಾಗುವಂತೆ ಪ್ರಕಾಶ್, ಅಧಿಕಾರಿಗಳಿಗೆ ಹೇಳಿದರು.

    ಹಸಿರು ವಲಯದಿಂದ ಕಿತ್ತಳೆ ವಲಯಕ್ಕೆ ಬದಲಾಗುವ ಜಿಲ್ಲೆಗಳ ಬಗ್ಗೆ ಪ್ರಧಾನಮಂತ್ರಿ ಖುದ್ದು ಮಾಹಿತಿ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳನ್ನು ಎಚ್ಚರಿಸಿದರು.

    ಸೋಂಕು ಪೀಡಿತ ಎಲ್ಲ 6 ಜನರನ್ನು ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಹೊರ ರಾಜ್ಯ, ಜಿಲ್ಲೆಗಳಿಂದ ಬರುವ ಜನರೊಂದಿಗೆ ಚೆಕ್‌ಪೋಸ್ಟ್ ಅಧಿಕಾರಿ, ಸಿಬ್ಬಂದಿ ಎಚ್ಚರದಿಂದ ವ್ಯವಹರಿಸಬೇಕು. ಜಿಲ್ಲೆಯ ಎಲ್ಲ 11 ಸಮುದಾಯ ಆರೋಗ್ಯ ಕೇಂದ್ರ, ಹಾಸ್ಟೆಲ್, ಖಾಸಗಿ ಆಸ್ಪತ್ರೆ, ಕಲ್ಯಾಣ ಮಂಟಪಗಳ ಲಭ್ಯತೆ ಗಮನಿಸಬೇಕು ಎಂದರು.

    ಒತ್ತಡ ಸಹಜ: ಸಾಂಸ್ಥಿಕ ಕ್ವಾರಂಟೈನ್ ಸಂದರ್ಭದಲ್ಲಿ ಆಕ್ಷೇಪ, ಪ್ರಭಾವ, ಒತ್ತಡ ಸಹಜ. ಸಂಕಷ್ಟದ ಪರಿಸ್ಥಿತಿಯಲ್ಲಿ ಸಾರ್ವಜನಿಕರು, ಜನಪ್ರತಿನಿಧಿಗಳು ಸಹಕರಿಸಬೇಕು. ಅಧಿಕಾರಿಗಳು ಒತ್ತಡಗಳಿಗೆ ಒಳಗಾಗಬಾರದು. ಎಲ್ಲ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಕಡ್ಡಾಯವಾಗಿ ಕೇಂದ್ರಸ್ಥಾನದಲ್ಲಿ ಇರಬೇಕು. ನೆರೆಹೊರೆ ಜಿಲ್ಲೆಗಳಿಂದ ಓಡಾಡುವವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸೂಚಿಸಿದರು.

    ಡಿಸಿ ಆರ್.ವಿನೋತ್ ಪ್ರಿಯಾ ಮಾತನಾಡಿ, ಸೋಂಕಿತರ ಚಿಕಿತ್ಸೆ ವೇಳೆ ವೈದ್ಯರು, ವೈದ್ಯಕೀಯ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಯಾವುದೇ ಭಯ ಬೇಡ ಎಂದರು.

    ಜಿಪಂ ಸಿಇಒ ಎಸ್.ಹೊನ್ನಾಂಬ, ಡಿಎಚ್‌ಇ ಡಾ.ಸಿ.ಎಲ್.ಪಾಲಾಕ್ಷ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಾಜಶೇಖರ್, ಜಿ.ಪಂ.ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳಾದ ಡಾ.ಕುಮಾರಸ್ವಾಮಿ, ಡಾ.ರಂಗನಾಥ್, ಡಾ.ತುಳಸಿರಂಗನಾಥ್ ಇತರರಿದ್ದರು.

    ಶುಕ್ರವಾರ ಡಿಸಿ ನೀಡಿದ ಹೇಳಿಕೆ ಕುರಿತು ಚರ್ಚೆ: ಶುಕ್ರವಾರ ಸಂಜೆ 12 ಮಂದಿ ವರದಿ ನೆಗೆಟಿವ್ ಇದೆ ಎಂದು ಮಾಹಿತಿ ನೀಡಿದ್ದ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರ ಹೇಳಿಕೆ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಯಿತು. ಡಿಸಿ ಸರಿಯಾಗಿ ಮಾಹಿತ ಕೊಡಬೇಕಿತ್ತು ಎಂದು ಉಸ್ತುವಾರಿ ಕಾರ್ಯದರ್ಶಿ ಪ್ರಕಾಶ್ ಅಭಿಪ್ರಾಯಪಟ್ಟರು. 15 ಜನರ ಪೈಕಿ ಮೂವರ ವರದಿ ಪಾಸಿಟಿವ್ ಇತ್ತು, 9 ಮಂದಿ ನೆಗೆಟಿವ್, ಇನ್ನುಳಿದ ಮೂವರ ವರದಿಯನ್ನು ಪುಣೆಗೆ ಕಳಿಸಲಾಗಿತ್ತು. ಆದರೆ, ಈ ಮಾಹಿತಿ ತಿಳಿಸದೇ ಉಳಿದೆಲ್ಲರ ವರದಿ ನೆಗೆಟಿವ್ ಇದೆ ಎಂದು ಡಿಸಿ ಹೇಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts