More

    ಜಿಲ್ಲಾಸ್ಪತ್ರೆಗೆ ಚಿಕಿತ್ಸೆ ನೀಡದ ಆರೋಗ್ಯ ಸಚಿವ

    ಚಿತ್ರದುರ್ಗ: ಜಿಲ್ಲೆಯ ಉಸ್ತುವಾರಿಯೂ ಆಗಿರುವ ಆರೋಗ್ಯ ಸಚಿವ ಬಿ.ಶ್ರೀರಾಮುಲು ಜಿಲ್ಲಾಸ್ಪತ್ರೆಯಲ್ಲಿ ಗುರುವಾರ ರಾತ್ರಿ ವಾಸ್ತವ್ಯ ಹೂಡಿದ್ದರೂ ಫಲಿತಾಂಶ ಮಾತ್ರ ಶೂನ್ಯ.

    ವಾಸ್ತವ್ಯದ ಮೂಲಕ ಜಿಲ್ಲಾಸ್ಪತ್ರೆ ಸಮಸ್ಯೆಗಳಿಗೆ ಆರೋಗ್ಯ ಸಚಿವರು ಚಿಕಿತ್ಸೆ ನೀಡಲಿದ್ದಾರೆ ಎಂಬ ಜನರ ನಂಬಿಕೆ ಹುಸಿ ಆಗಿದೆ. ಅವರು ನಡೆಸಿದ ಕುಂದು ಕೊರತೆ ಪರಿಶೀಲನೆ, ವಿಚಾರಣೆ ನಾಮ್ ಕೇ ವಾಸ್ತೆ ಎಂಬಂತಾಯಿತು.

    ಗುರುವಾರ ರಾತ್ರಿ ನಿಗದಿತ ಅವಧಿಗಿಂತ ಒಂದೂವರೆ ತಾಸು ವಿಳಂಬವಾಗಿ ಮಧ್ಯರಾತ್ರಿ 12 ಗಂಟೆಗೆ ಆಗಮಿಸಿ ಜಿಲ್ಲಾಸ್ಪತ್ರೆಯಲ್ಲಿ ತಂಗಿದ್ದ ಸಚಿವರು, ಶುಕ್ರವಾರ ಬೆಳಗ್ಗೆ 6.15ಕ್ಕೆ ಎದ್ದು ನಗರದ ಭೋವಿ ಮಠಕ್ಕೆ ತೆರಳಿ ಸ್ನಾನ, ಶಿವಲಿಂಗ ಪೂಜೆ ಹಾಗೂ ಉಪಹಾರ ಸ್ವೀಕರಿಸಿ ಆಸ್ಪತ್ರೆಗೆ ಮರಳಿದ್ದು ಬೆಳಗ್ಗೆ 11.12ಕ್ಕೆ.

    ಡಿಎಚ್‌ಒ, ಡಿಎಸ್, ವೈದ್ಯರು ಹಾಗೂ ಸಿಬ್ಬಂದಿ ಎರಡು ತಾಸಿಗೂ ಅಧಿಕ ಕಾದು ಸಚಿವರನ್ನು ಈ ವೇಳೆ ಬರ ಮಾಡಿಕೊಂಡರು. ಬೆಳಗ್ಗೆ 9ಕ್ಕೆ ಬರುತ್ತೇನೆಂದು ಹೇಳಿದ್ದ ಸಚಿವರು, ತಡವಾಗಿ ಆಗಮಿಸಿ ಅವಸರದಲ್ಲಿ ಎರಡು ಎಮರ್ಜೆನ್ಸಿ ವಾರ್ಡ್‌ಗಳಿಗೆ ಭೇಟಿ ನೀಡಿ ರೋಗಿಗಳ ಯೋಗಕ್ಷೇಮ ವಿಚಾರಿಸಿ ಚಳ್ಳಕೆರೆಗೆ ತೆರಳಿದರು.

    ಗುರುವಾರ ರಾತ್ರಿ ಪುರುಷರ ವಾರ್ಡ್‌ಗೆ ಭೇಟಿ ಕೊಟ್ಟಿದ್ದನ್ನು ಹೊರತುಪಡಿಸಿದರೆ, ಅವರೇ ತಿಳಿಸಿದಂತೆ ಎಲ್ಲ ರೋಗಿಗಳನ್ನು ಮಾತನಾಡಿಸಲು ಸಚಿವರಿಂದ ಸಾಧ್ಯವಾಗಲಿಲ್ಲ.

    ಈ ವೇಳೆ ಕಾರು ಅಡ್ಡಗಟ್ಟಿದ್ದ ಅಂಗವಿಕಲ ಪಾಪಯ್ಯ ಹಾಯ್ಕಲ್, ವೈದ್ಯರು ರೋಗಿಗಳಿಂದ ಲಂಚ ಪಡೆಯುತ್ತಾರೆಂಬ ದೂರಿಗೆ ಸ್ಪಂದಿಸಿ, ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಿಎಚ್‌ಒಗೆ ಸಚಿವರು ಸೂಚಿಸಿದರು.

    ಜಿಲ್ಲಾ ಸರ್ಜನ್ ಡಾ.ಎಚ್.ಜೆ.ಬಸವರಾಜಪ್ಪ, ಡಿಎಚ್‌ಒ ಡಾ.ಎಚ್‌ಸಿ ಪಾಲಾಕ್ಷಪ್ಪ, ಆರ್‌ಎಂಒ ಡಾ.ಆನಂದಪ್ರಕಾಶ್, ಡಾ.ಸತೀಶ್, ಡಾ.ರಂಗನಾಥ್, ಡಾ.ದೇವರಾಜ್, ಡಾ.ಕುಮಾರಸ್ವಾಮಿ, ಜಿಪಂ ಮಾಜಿ ಸದಸ್ಯ ಜಯಪಾಲಯ್ಯ ಇತರರಿದ್ದರು.

    ವಾಸ್ಯವ್ಯದಿಂದ ಜನರಲ್ಲಿ ನಂಬಿಕೆ ಹೆಚ್ಚಳ: ಜನರಲ್ಲಿ ಸರ್ಕಾರಿ ಆಸ್ಪತ್ರೆ ಬಗ್ಗೆ ವಿಶ್ವಾಸ ಬರಬೇಕೆಂಬ ಕಾರಣಕ್ಕೆ ಆಸ್ಪತ್ರೆಯಲ್ಲಿ ವಾಸ್ತವ್ಯ ನಡೆಸುತ್ತಿರುವುದಾಗಿ ತಮ್ಮ ನಡೆ ಸಮರ್ಥಿಸಿಕೊಂಡ ಸಚಿವರು, ನಾನು ಬರುತ್ತೇನೆ ಎಂದು ಆಸ್ಪತ್ರೆ ಕ್ಲೀನ್ ಆಗಿದೆ. ಆದರೆ, ಇದು ಒಂದೆರಡು ದಿನಗಳಿಗೆ ಸೀಮಿತವಾಗಬಾರದು. ಜಡ್ಡುಗಟ್ಟಿದ್ದ ಅಧಿಕಾರಿ, ಗುತ್ತಿಗೆದಾರರು ಚುರುಕಾಗಬೇಕಿದೆ ಎಂದು ತಿಳಿಸಿದರು.

    ಸರ್ಕಾರಿ ಮೆಡಿಕಲ್ ಕಾಲೇಜ್ ಆರಂಭಕ್ಕೆ ಯತ್ನ: ಕೂಡಲೇ ಆಸ್ಪತ್ರೆಗೆ ಅಗತ್ಯವಿರುವ ರೆಡಿಯಾಲಿಜಿಸ್ಟ್ ನೇಮಿಸಲಾಗುವುದು. ಆಲ್ಟ್ರಾ ಸೌಂಡ್ ಸ್ಕಾೃನ್‌ಗೆ ಬಸವೇಶ್ವರ ಆಸ್ಪತ್ರೆಯೊಂದಿಗೆ ಒಪ್ಪಂದವಾಗಿದೆ. ಸರ್ಕಾರಿ ಮೆಡಿಕಲ್ ಕಾಲೇಜು ಆರಂಭಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ದಾನಿಗಳ ಅಥವಾ ಸರ್ಕಾರದಿಂದ ಇಲ್ಲಿ ಕ್ಯಾಂಟಿನ ಸಹಿತ ರೋಗಿ ಸಂಬಂಧಿಕರ ವಸತಿಗೆ ಡಾರ್ಮಿಂಟರಿ ಕಟ್ಟಿಸುವುದಾಗಿ ಶ್ರೀರಾಮುಲು ಹೇಳಿದರು.

    ಹಾಸಿಗೆ ಸಾಮರ್ಥ್ಯ ಹೆಚ್ಚಳದ ಭರವಸೆ: 450 ಹಾಸಿಗೆ ಜಿಲ್ಲಾಸ್ಪತ್ರೆಯ ಸಾಮರ್ಥ್ಯವನ್ನು ಒಂದು ಸಾವಿರಕ್ಕೆ ಹೆಚ್ಚಿಸಲಾಗುವುದು ಎಂದು ಭರವಸೆ ನೀಡಿದ ಶ್ರೀರಾಮುಲು, ಈಗಾಗಲೇ ಇಲ್ಲಿರುವ ಲವೆಲ್-2 ಟ್ರಾಮಾ ಕೇರ್ ಸೆಂಟರ್‌ನ್ನು ಮೇಲ್ದರ್ಜೆಗೆ ಏರಿಸಲಾಗುವುದು ಹಾಗೂ ಸಿಟಿ ಸ್ಕಾೃನ್ ದುರಸ್ತಿಗೆ ತಕ್ಷಣ ಹಣ ಬಿಡುಗಡೆ ಮಾಡುವುದಾಗಿ ಹೇಳಿದರು.

    ವೈದ್ಯರ ಎಡವಟ್ಟು, ಗರ್ಭದಲ್ಲಿ ಮಗು ಸಾವು ಆರೋಪ: ಆಸ್ಪತ್ರೆ ವೈದ್ಯರ ಎಡವಟ್ಟಿನಿಂದ ಮಗುವನ್ನು ಕಳೆದುಕೊಂಡಿದ್ದೇ ಎಂದು ಸಚಿವರೆದರು ಗುರುವಾರ ರಾತ್ರಿ ವ್ಯಕ್ತಿಯೊಬ್ಬ ಅಳಲು ತೋಡಿಕೊಂಡ. ವ್ಯಕ್ತಿಯ ಪತ್ನಿಯ ಹೆರಿಗೆಗೆ ಇನ್ನು 15 ದಿನಗಳ ಕಾಲಾವಧಿ ಇದೆ ಎಂದು ಹೇಳಿದ್ದ ವೈದ್ಯರು ಆತನ ಪತ್ನಿಯನ್ನು ಆಸ್ಪತ್ರೆಗೆ ಅಡ್ಮಿಟ್ ಮಾಡಿಕೊಳ್ಳದೆ ಹಿಂದಕ್ಕೆ ಕಳಿಸಿದ್ದರು. ಆದರೆ, ಮರು ದಿನವೇ ಮಗು ಗರ್ಭದಲ್ಲೇ ಪ್ರಾಣ ಬಿಟ್ಟಿತ್ತು ಎಂದು ಆರೋಪಿಸಿದ ವ್ಯಕ್ತಿ ಕಣ್ಣೀರು ಹಾಕಿದರು. ಸಾಂತ್ವನ ಹೇಳಿದ ಸಚಿವರು, ಇಂತಹ ಪ್ರಕರಣ ಮರುಕಳಿಸದಂತೆ ಕ್ರಮಕೈಗೊಳ್ಳಿ ವೈದ್ಯಾಧಿಕಾರಿಗೆ ಎಚ್ಚರಿಕೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts