More

    ಗ್ರಾಪಂ ಚುನಾವಣೆ ಮೇಲೆ ಕರೊನಾ ಕರಿ ನೆರಳು

    ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ: ರಾಜ್ಯದ ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆ ಮೇಲೆ ಕರೊನಾ ಕರಿನ ನೆರಳು ಆವರಿಸಿಕೊಂಡಿದೆ.

    2020 ಮೇನಲ್ಲಿ ಚುನಾವಣೆ ನಡೆಸುವ ನಿರೀಕ್ಷೆಯೊಂದಿಗೆ ರಾಜ್ಯ ಚುನಾವಣಾ ಆಯೋಗ ಮತಪಟ್ಟಿ ತಯಾರಿಕೆ ಹಾಗೂ ಗ್ರಾಮ ಪಂಚಾಯಿತಿಗಳ ಕ್ಷೇತ್ರ ರಚನೆಗೆ ಸಂಬಂಧಿಸಿದಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಮಾ.7ರಂದು ಪತ್ರ ಬರೆದಿತ್ತು.

    ಆದರೆ, ಈಗ ಏಕಾಏಕಿ ಕರೊನಾ ಭೀತಿ ಆವರಿಸಿ, ಇಡೀ ರಾಜ್ಯಕ್ಕೆ ರಾಜ್ಯವೇ ಲಾಕ್ ಆಗಿದೆ. ಎಲ್ಲ ಜಿಲ್ಲೆಗಳಲ್ಲೂ ಮಹಾಮಾರಿ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳು ತೀವ್ರಗೊಂಡಿವೆ.

    ಕರೊನಾ ವೈರಸ್ ತಡೆಗಾಗಿ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ಉಸ್ತುವಾರಿಯಲ್ಲಿ ಕಂದಾಯ ಇಲಾಖೆ, ಆರೋಗ್ಯ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಫೀಲ್ಡಿಗೆ ಇಳಿದಿದ್ದಾರೆ.

    ಈ ಮಧ್ಯೆ 2020 ಜೂನ್‌ನಲ್ಲಿ ಅವಧಿ ಪೂರ್ಣಗೊಳಿಸಲಿರುವ ರಾಜ್ಯದ 6068 ಗ್ರಾಪಂ ಚುನಾವಣೆ ಮೇ ತಿಂಗಳಲ್ಲಿ ನಡೆಸಲು ಆಯೋಗ ಸಜ್ಜಾಗುತ್ತಿತ್ತು. ಆದರೆ, ಈಗ ಅಂದುಕೊಂಡಂತೆ ಚುನಾವಣೆ ನಡೆಸಲು ಸಾಧ್ಯವಾಗಷ್ಟು ಅಧಿಕಾರಿಗಳು ಕರೊನಾ ವೈರಸ್ ತಡೆಯಲ್ಲಿ ಮಗ್ನರಾಗಿದ್ದಾರೆ.

    ಮಾ.9ರಿಂದ ಏ.18ರ ವರೆಗೆ ಮತಪಟ್ಟಿಗೆ ಸಂಬಂಧಿಸಿದ ನಾನಾ ಕಾರ್ಯಗಳಲ್ಲಿ ಆಯೋಗ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ತೊಡಗಿಸಿಕೊಳ್ಳ ಬೇಕಿತ್ತು. ಗ್ರಾಪಂ ಕ್ಷೇತ್ರ ವ್ಯಾಪ್ತಿ ಮತದಾರರ ಗುರುತಿಸುವಿಕೆ, ಕ್ಷೇತ್ರ ವ್ಯಾಪ್ತಿಯ ಮನೆ, ಮನೆ ಭೇಟಿ, ಮತದಾರರ ಗುರುತಿಸಿ ಪಟ್ಟಿಯನ್ನು ಮುದ್ರಕರಿಗೆ ಕೊಡುವುದು, ಚೆಕ್‌ಲಿಸ್ಟ್ ಪರಿಶೀಲನೆ, ಮುದ್ರಕರಿಂದ ಕರಡು ಪ್ರತಿ ಪಡೆಯುವುದು ಹಾಗೂ ಮಾ.31ರಂದು ಕರಡು ಪ್ರತಿ ಪ್ರಕಟಿಸುವುದು.

    ಆಕ್ಷೇಪಣೆ, ಆಕ್ಷೇಪಣೆಗಳ ಇತ್ಯರ್ಥ ಹಾಗೂ ಮತ್ತೊಮ್ಮೆ ಪರಿಶೀಲನೆ ಬಳಿಕ ಏ.20ರಂದು ಗ್ರಾಪಂ ಚುನಾವಣೆಗೆ ಸಂಬಂಧಿಸಿದಂತೆ ಆಯಾ ಗ್ರಾಪಂ ಕಚೇರಿಗಳು, ತಾಪಂ, ತಾಲೂಕು ಹಾಗೂ ಜಿಲ್ಲಾಧಿಕಾರಿ ಕಚೇರಿಗಳಲ್ಲಿ ಅಂತಿಮ ಮತದಾರರ ಪಟ್ಟಿ ಪ್ರಕಟಿಸಬೇಕೆಂದು ಆಯೋಗ ತಿಳಿಸಿತ್ತು.

    ಈ ಕಾರ್ಯದಲ್ಲಿ ನೇರ ಉಸ್ತುವಾರಿ ಹೊತ್ತಿರುವ ಉಪ ವಿಭಾಗಾಧಿಕಾರಿಗಳು, ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಕರೊನಾ ನಿಯಂತ್ರಣದಲ್ಲಿ ಬ್ಯುಸಿಯಾಗಿದ್ದಾರೆ.

    ರಾಜ್ಯ, ದೇಶವೇ ಕರೊನಾ ಸೋಂಕಿನ ಭೀತಿಯಲ್ಲಿರುವಂಥ ಈ ಸನ್ನಿವೇಶದಲ್ಲಿ, ಅವಸರದಲ್ಲಿ ಮತಪಟ್ಟಿ ಪರಿಶೀಲನೆಯ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗದು. ಆದ್ದರಿಂದ ಗ್ರಾಪಂ ಚುನಾವಣೆಗಳು ಮುಂದೂಡುವುದು ಅನಿವಾರ್ಯವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

    ಉಪವಿಭಾಧಿಕಾರಿ ವಿ.ಪ್ರಸನ್ನಕುಮಾರ್ ಹೇಳಿಕೆ: ರಾಜ್ಯದಲ್ಲಿ ಉಂಟಾಗಿರುವ ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ನಿಗದಿತ ಸಮಯದಲ್ಲಿ ರಾಜ್ಯದಲ್ಲಿ ಗ್ರಾಪಂಗಳಿಗೆ ಸಾರ್ವತ್ರಿಕ ಚುನಾವಣೆ ನಡೆಯುವುದು ಅಸಾಧ್ಯವೆನಿಸುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts