More

    ಕೋಟೆನಾಡು ಚಿತ್ರದುರ್ಗ ಜಿಲ್ಲೆಗೆ ಬ್ಯಾಡ್ ಫ್ರೈಡೇ

    ಚಿತ್ರದುರ್ಗ: ಜಿಲ್ಲೆಗೆ ಶುಕ್ರವಾರ ಬ್ಯಾಡ್‌ಫ್ರೈಡೇ ಆಗಿದೆ. ಚಳ್ಳಕೆರೆ ತಾಲೂಕು ಕೋಡಿಹಳ್ಳಿಯ ತಂದೆ-ಮಗಳಿಗೆ ಕೋವಿಡ್-19 ವೈರಾಣು ತಗುಲಿದೆ.

    3 ವರ್ಷದ ಬಾಲಕಿ (ಪಿ-993) ಹಾಗೂ 39 ವರ್ಷದ ಪುರುಷನಲ್ಲಿ (ಪಿ-994) ಸೋಂಕು ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ತಿಳಿಸಿದ್ದಾರೆ.

    ಖಾಸಗಿ ವಾಹನದಲ್ಲಿ ಚೆನ್ನೈನಿಂದ ಮೇ 5 ರಂದು ಒಂದೇ ಕುಟುಂಬದ ನಾಲ್ವರು ಸದಸ್ಯರು ಕೋಡಿಹಳ್ಳಿಗೆ ಬಂದಿದ್ದು, ಇವರ ಪ್ರಯಾಣಕ್ಕೆ ಅನುಮತಿ ಇತ್ತೆ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ರ‌್ಯಾಪಿಡ್ ರೆಸ್ಪಾನ್ಸ್ ತಂಡ, ಈ ಕುಟುಂಬದ ಮಾಹಿತಿಯನ್ನು ಮೇಲಧಿಕಾರಿಗೆ ತಿಳಿಸಿತ್ತು.

    ಮೇ 11ರಂದು ಕಳಿಸಿದ್ದ ಈ ನಾಲ್ವರ ಗಂಟಲು ದ್ರವದ ಮಾದರಿ ಪರೀಕ್ಷಾ ವರದಿಯಲ್ಲಿ ಇಬ್ಬರಲ್ಲಿ ಪಾಸಿಟಿವ್ ಖಚಿತವಾಗಿದೆ. ಸೋಂಕಿತನ ಪತ್ನಿಯಲ್ಲಿ ಸೋಂಕಿಲ್ಲ. ಇವರ 20 ದಿನದ ನವಜಾತ ಶಿಶುವಿನ ಗಂಟಲು ದ್ರವವನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುವುದು ಡಿಸಿ ಹೇಳಿದ್ದಾರೆ.

    ಸೀಲ್‌ಡೌನ್: ಸೋಂಕಿತ ವ್ಯಕ್ತಿ ಕೋಡಿಹಳ್ಳಿಯಿಂದ 3 ಕಿ.ಮೀ. ದೂರದಲ್ಲಿರುವ ಚಿಕ್ಕೆಹಳ್ಳಿಯಲ್ಲಿರುವ ತನ್ನ ಬಂಧುಗಳ ಮನೆಗೆ ಹೋಗಿ ಬಂದಿದ್ದ. ಆದ್ದರಿಂದಾಗಿ ಕೋಡಿಹಳ್ಳಿ, ಚಿಕ್ಕೇಹಳ್ಳಿ ಸೇರಿ 5 ಕಿ.ಮೀ. ವ್ಯಾಪ್ತಿಯನ್ನು ಕಂಟೇನ್‌ಮೆಂಟ್ ಜೋನ್ ಎಂದು ಗುರುತಿಸಿ, ಸೀಲ್‌ಡೌನ್ ಮಾಡಲಾಗಿದೆ. ಬೆಂಗಳೂರಿನ ವಾಹನ ಚಾಲಕನ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸೋಂಕಿತನ ಸಂಪರ್ಕದಲ್ಲಿದ್ದ ಎಲ್ಲರನ್ನೂ ಗುರುತಿಸಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಿಸಲು ನಿರ್ಧರಿಸಲಾಗಿದೆ.

    ಕೋವಿಡ್ 19 ಆಸ್ಪತ್ರೆಗೆ ದಾಖಲು: ಸೋಂಕಿತರಿಬ್ಬರನ್ನು ಚಿತ್ರದುರ್ಗ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂಜಾಗ್ರತೆ ಕ್ರಮವಾಗಿ ಸೋಂಕಿತನ ಪತ್ನಿ ಹಾಗೂ ಶಿಶುವನ್ನು ಇದೇ ಆಸ್ಪತ್ರೆಗೆ ದಾಖಲಿಸಲಾಗಿದೆ. ರ‌್ಯಾಪಿಡ್ ರೆಸ್ಪಾನ್ಸ್ ತಂಡದ ಉತ್ತಮ ಕಾರ್ಯದಿಂದಾಗಿ ಹೆಚ್ಚಿನ ತೊಂದರೆ ತಪ್ಪಿದೆ ಎಂದು ಡಿಸಿ ತಿಳಿಸಿದ್ದಾರೆ.

    ಸೋಂಕು ಸಂಖ್ಯೆ 9ಕ್ಕೆ ಏರಿಕೆ: ಮಾ.24ರಿಂದ ಈವರೆಗೆ ಜಿಲ್ಲೆಯಲ್ಲಿ 9 ಜನರಲ್ಲಿ ಕರೊನಾ ಸೋಂಕು ಕಾಣಿಸಿದ್ದು, ಇವರಲ್ಲಿ ಒಬ್ಬರು ಗುಣಮುಖರಾಗಿದ್ದಾರೆ. ಮೇ 8 ಮತ್ತು 9ರಂದು ತಲಾ ಮೂವರಲ್ಲಿ ಸೋಂಕಿರುವುದು ದೃಢವಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts