More

    ಯುಜಿಡಿ ಕಾಮಗಾರಿಗೆ ಅನುಮೋದನೆ

    ಕೊರ‌್ಲಕುಂಟೆ ತಿಪ್ಪೇಸ್ವಾಮಿ ಚಳ್ಳಕೆರೆ: ಬಹುವರ್ಷಗಳ ಬೇಡಿಕೆಯಾಗಿದ್ದ ನಗರ ವ್ಯಾಪ್ತಿಯ ಒಳಚರಂಡಿ (ಯುಜಿಡಿ) ಯೋಜನೆಗೆ ರಾಜ್ಯ ಸರ್ಕಾರದಿಂದ ಕೊನೆಗೂ ಅನುಮೋದನೆ ಸಿಕ್ಕಿದೆ.

    27 ವಾರ್ಡ್‌ಗಳ ಚಳ್ಳಕೆರೆ ಪುರಸಭೆ, ಈಗ 31 ವಾರ್ಡುಗಳ ವಿಸ್ತರಣೆಯೊಂದಿಗೆ ನಗರಸಭೆಯಾಗಿ ಮೇಲ್ದರ್ಜೆಗೇರಿದೆ.

    ಅಲ್ಲದೆ ರಸ್ತೆ ವಿಸ್ತರಣೆ ಒಳಗೊಂಡಂತೆ ಮಿನಿ ವಿಧಾನಸೌಧ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ರಂಗ ಮಂದಿರ, ಇಂಜಿನಿಯರಿಂಗ್ ಕಾಲೇಜು, ಯಾತ್ರಿ ನಿವಾಸ, ಬಹು ಮಹಲುಗಳ ಸಮುದಾಯ ಭವನಗಳ ನಿರ್ಮಾಣ ಹೀಗೆ ನಾನಾ ರೀತಿಯ ಅಭಿವೃದ್ಧಿ ಕಂಡಿದೆ.

    ಸುವ್ಯವಸ್ಥಿತ ಒಳಚರಂಡಿ ಸೌಲಭ್ಯಕ್ಕಾಗಿ 2014ರಲ್ಲಿ ಶಾಸಕ ಟಿ.ರಘುಮೂರ್ತಿ, 112 ಕೋಟಿ ರೂ. ವೆಚ್ಚದ ಯೋಜನಾ ವರದಿ ತಯಾರಿಸಿ ಅಂದಿನ ಕಾಂಗ್ರೆಸ್ ಸರ್ಕಾರಕ್ಕೆ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಿದ್ದರು. ಈ ವಿಚಾರ ಶುಕ್ರವಾರ ವಿಧಾನಸೌಧದ ಕಲಾಪದಲ್ಲಿ ಪ್ರಸ್ತಾಪವಾಗಿದ್ದು, ಶಾಸಕರ ಬೇಡಿಕೆಯಂತೆ ಪ್ರಸ್ತುತ ಬೆಲೆ ಪಟ್ಟಿ ಅನುಸಾರ 186 ಕೋಟಿ ರೂ. ವೆಚ್ಚದ ಯುಜಿಡಿ ಯೋಜನೆಗೆ ಅನುಮೋದನೆ ನೀಡಲು ಪರಿಶೀಲನೆ ನಡೆಸುವುದಾಗಿ ನಗರಾಭಿವೃದ್ಧಿ ಸಚಿವ ಬಿ.ಎಸ್.ಬಸವರಾಜ ಒಪ್ಪಿಗೆ ನೀಡಿದ್ದಾರೆ.

    ಬರಗಾಲದ ಹಿನ್ನೆಲೆಯಲ್ಲಿ ಆರು ವರ್ಷಗಳ ಕಾಲ ನನೆಗುದಿಗೆ ಬಿದ್ದಿದ್ದ ಯುಜಿಡಿ ಯೋಜನೆ ಪ್ರಸ್ತಾಪವನ್ನು ಕೈಗೆತ್ತಿಕೊಂಡಿರುವ ಸದನ, ಅಂದಾಜು 186 ಕೋಟಿ ರೂ. ಮೊತ್ತವನ್ನು ಎರಡು-ಮೂರು ಹಂತದಲ್ಲಿ ಬಿಡುಗಡೆ ಮಾಡಿ ಕಾಮಗಾರಿ ಪೂರೈಸುವುದಾಗಿ ನಗರಾಭಿವೃದ್ಧಿ ಸಚಿವರು ತಿಳಿಸಿದ್ದಾರೆ.

    ಶಾಸಕ ಟಿ.ರಘುಮೂರ್ತಿ ಹೇಳಿಕೆ: ಈ ವರ್ಷದಲ್ಲೇ ಕಾಮಗಾರಿ ಆರಂಭವಾಗಲಿದೆ. ನಗರದ ಪ್ರತಿ ಮನೆಯ ಶೌಚ ಮತ್ತು ಚರಂಡಿ ನೀರು ಒಳಭಾಗದಲ್ಲಿ ಹರಿದು ಹೋಗುವ ಯೋಜನೆ ಇದಾಗಿದೆ. ಈ ಯೋಜನೆಯಡಿಯೇ ಒಳಚರಂಡಿ ನೀರು ಸಂಸ್ಕರಣಾ ಘಟಕ ಸ್ಥಾಪನೆ ಮಾಡಲಾಗುತ್ತದೆ. ಈ ಕಾಮಗಾರಿಯಲ್ಲಿ ಚರಂಡಿ ಮತ್ತು ರಸ್ತೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದರಿಂದ ನಗರದ ಮತ್ತಷ್ಟು ರಸ್ತೆಗಳು ವಿಸ್ತರಣೆಯಾಗಿ ಸ್ವಚ್ಛತೆ ಹೆಚ್ಚಲಿದೆ.

    ಚಳ್ಳಕೆರೆ ನಗರಸಭೆ ಇಂಜಿನಿಯರ್ ಶ್ಯಾಮಲಾ ಹೇಳಿಕೆ: ಯುಜಿಡಿ ಯೋಜನೆ ಜಾರಿಗೆ ಪ್ರಮುಖವಾಗಿ ನೀರಿನ ವ್ಯವಸ್ಥೆ ಇರಬೇಕು. ನಗರ ವ್ಯಾಪ್ತಿಯ ಪ್ರತಿ ವ್ಯಕ್ತಿಗೆ ದಿನಕ್ಕೆ 135 ಲೀಟರ್ ಲಭ್ಯತೆಯಂತೆ ಈಗಾಗಲೇ ವಿವಿ ಸಾಗರದಿಂದ ಕುಡಿವ ನೀರಿನ ಅನುಕೂಲ ಇರುವುದರಿಂದ ಯುಜಿಡಿ ಯೋಜನೆ ಕಾಮಗಾರಿಗೆ ಆದ್ಯತೆ ಸಿಕ್ಕಿದೆ. ನಗರ ವ್ಯಾಪ್ತಿಯ 10 ಕಿಮೀ ಸುತ್ತಳತೆಯಂತೆ ಒಳಚರಂಡಿ ನಿರ್ಮಾಣ ಮಾಡಿಕೊಂಡು ತಗ್ಗು ಪ್ರದೇಶ ಇರುವೆಡೆ ನೀರು ಹರಿಯುವ ವ್ಯವಸ್ಥೆ ಮಾಡಲಾಗುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts