More

    ಮುಚ್ಚುವ ಭೀತಿಯಲ್ಲಿ ರಾಜ್ಯದ ಡಯಾಲಿಸಿಸ್ ಕೇಂದ್ರಗಳು

    ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ: ನಗರದ ಜಿಲ್ಲಾಸ್ಪತ್ರೆ ಸಹಿತ ತಾಲೂಕು ಕೇಂದ್ರಗಳಲ್ಲಿ ಡಯಾಲಿಸಿಸ್ ಔಷಧೋಪಕರಣ ಕೊರತೆ ಎದುರಾಗಿದ್ದು, ರೋಗಿಗಳೇ ಅವುಗಳನ್ನು ತಂದು ಚಿಕಿತ್ಸೆ ಪಡೆಯಬೇಕಾದ ಅನಿವಾರ್ಯತೆ ಎದುರಾಗಿದೆ.

    23 ಜಿಲ್ಲಾ ಕೇಂದ್ರಗಳು ಹಾಗೂ ತಾಲೂಕು ಕೇಂದ್ರಗಳ 123 ಡಯಾಲಿಸಿಸ್ ಕೇಂದ್ರಗಳ ನಿರ್ವಹಣೆಗೆ ಕಂಪನಿಯೊಂದಕ್ಕೆ ಗುತ್ತಿಗೆ ನೀಡಲಾಗಿದೆ. ಆದರೆ ಕಂಪನಿಗೆ ಸರ್ಕಾರದಿಂದ ಅಂದಾಜು 20 ಕೋಟಿ ರೂ. ಬಾಕಿ ಬರಬೇಕಿದೆ. ಸರ್ಕಾರ ಹಣ ನೀಡದ ಕಾರಣ ತಮ್ಮ ಮೇಲೆ ಹೊರೆ ಬೀಳುತ್ತಿದೆ ಎಂಬುದು ರೋಗಿಗಳ ಅಳಲು.

    ಕೋವಿಡ್ ಪೂರ್ವದಲ್ಲೇ ಡಯಾಲಿಸ್ ಕೇಂದ್ರಗಳಲ್ಲಿ ಉಂಟಾಗಿದ್ದ ತೊಂದರೆ, ತಾಪತ್ರಯಗಳು ಈಗ ಅಧಿಕವಾಗುತ್ತಿವೆ. ಮೊದಲು ನಾರ್ಮಲ್ ಸಲೈನ್ ತರುವಂತೆ ಹೇಳುತ್ತಿದ್ದ ಸಿಬ್ಬಂದಿ, ಈಗ 800 ರೂ.ಗಳಿಂದ 1800 ರೂ.ಬೆಲೆ ಬಾಳುವ ಡಯಾಲಿಸಿಸ್ ಟ್ಯೂಬ್ ಸಹ ತರುವಂತೆ ಸೂಚಿಸುತ್ತಿದ್ದಾರೆ. ರಕ್ತ ಸೋಂಕು ಕಾಯಿಲೆಗಳಿಂದ ಬಳಲುತ್ತಿರುವವರಿಗೆ (ಪಾಸಿಟಿವ್)ಪ್ರತ್ಯೇಕವಾಗಿ ಡಯಾಲಿಸಿಸ್ ಟ್ಯೂಬ್ ಬಳಸ ಬೇಕಾಗುತ್ತದೆ. ಇವರೊಂದಿಗೆ ನೆಗೆಟಿವ್ ಇರುವಂಥ ರೋಗಿಗಳೂ ನಾರ್ಮಲ್ ಸಲೈನ್ ಹಾಗೂ ಹೆಫ್ರಿನ್ ಔಷಧವನ್ನು ತರುವುದು ಅನಿವಾರ‌್ಯವಾಗಿದೆ ಎನ್ನಲಾಗಿದೆ.

    ಸದ್ಯ ಚಿತ್ರದುರ್ಗ ಜಿಲ್ಲಾ ಕೇಂದ್ರದಲ್ಲಿ 3 ಯಂತ್ರಗಳು ಪಾಸಿಟಿವ್, ಆರು ಯಂತ್ರಗಳು ನೆಗೆಟಿವ್ ಹಾಗೂ ತಾಲೂಕು ಕೇಂದ್ರಗಳಲ್ಲಿ ನೆಗೆಟಿವ್ ಇರುವ ರೋಗಿಗಳಿಗೆ ಮಾತ್ರ ತಲಾ 2 ಯಂತ್ರಗಳು ಕಾರ‌್ಯನಿರ್ವಹಿಸುತ್ತಿವೆ. ಜಿಲ್ಲಾಸ್ಪತ್ರೆಯಲ್ಲಿ ನಿತ್ಯ 25 ಕ್ಕೂ ಹೆಚ್ಚು ರೋಗಿಗಳಿಗೆ ಡಯಾಲಿಸಿಸ್ ಮಾಡಲಾಗುತ್ತಿದೆ. ರೋಗಿಗಳ ಸಂಖ್ಯೆ ಹೆಚ್ಚಾದರೆ ಯಂತ್ರಗಳ ಅಥವಾ ಪಾಳಿ ಹೆಚ್ಚಿಸಬೇಕು. ಆದರೆ ಈ ಸಂಖ್ಯೆ ಹೆಚ್ಚಾಗುವುದಿರಲಿ, ಇರುವ ಸೌಲಭ್ಯವೇ ಕಡಿತವಾಗುತ್ತಿವೆ ಎಂಬ ಬೇಸರವನ್ನು ರೋಗಿಗಳು ವ್ಯಕ್ತಪಡಿಸುತ್ತಾರೆ.

    ಬದಲಿ ಟೆಂಡರ್?: ಚಿತ್ರದುರ್ಗ ಜಿಲ್ಲಾಸ್ಪತ್ರೆ ಮೂಲಗಳ ಪ್ರಕಾರ ಟ್ಯೂಬ್, ಸಲೈನ್ ಪೂರೈಕೆಯಲ್ಲಿ ತೊಂದರೆಯಾಗಿದೆ. ಆರೋಗ್ಯ ಇಲಾಖೆ ಗುತ್ತಿಗೆ ಕಂಪನಿ ಬದಲಿಸಲು ನಿರ್ಣಯಿಸಿದೆ ಎಂದು ಗೊತ್ತಾಗಿದೆ. ಸದ್ಯಕ್ಕೆ ಜಿಲ್ಲಾಸ್ಪತ್ರೆಯಿಂದಲೇ ಟ್ಯೂಬ್ ತರಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.

    ಬೆಂಗಳೂರು ಆರೋಗ್ಯ ಇಲಾಖೆ ಡಯಾಲಿಸಿಸ್ ಕೇಂದ್ರಗಳ ನೋಡೆಲ್ ಅಧಿಕಾರಿ ಡಾ.ಚೆಲುವರಾಜ್ ಮಾತನಾಡಿ, ರಾಜ್ಯದ ಡಯಾಲಿಸಿಸ್ ಕೇಂದ್ರಗಳ ನಿರ್ವಹಣೆ ಕುರಿತಂತೆ ಆರೋಗ್ಯ ಸಚಿವ ಕೆ.ಸುಧಾಕರ್ ಅಧಿಕಾರಿಗಳ ಸಭೆ ಕರೆದಿದ್ದಾರೆ. ಇದರಲ್ಲಿ ಸಮಸ್ಯೆಗಳಿಗೆ ಪರಿಹಾರೋಪಾಯಗಳ ನಿಟ್ಟಿನಲ್ಲಿ ಸ್ಪಷ್ಟ ಚಿತ್ರಣ ಸಿಗಬಹುದು ಎಂದು ಹೇಳಿದರು.

    ಆರೋಗ್ಯ ಇಲಾಖೆ ಆಯುಕ್ತ ಪಂಕಜ್‌ಕುಮಾರ್ ಪಾಂಡೆ ಮಾತನಾಡಿ, ಯಾವುದೇ ಕಾರಣಕ್ಕೂ ಡಯಾಲಿಸಿಸ್ ಸೇವೆಗಳಲ್ಲಿ ವ್ಯತ್ಯಯವಾಗಲು ಬಿಡುವುದಿಲ್ಲ, ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.

    ಚಿತ್ರದುರ್ಗ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಮಾತನಾಡಿ, ಜಿಲ್ಲಾಸ್ಪತ್ರೆ ಡಯಾಲಿಸ್ ಕೇಂದ್ರಗಳಲ್ಲಿರುವ ತೊಂದರೆಗಳ ಕುರಿತಂತೆ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ. ಈಗಿರುವ ಸಮಸ್ಯೆಗಳ ಕುರಿತಂತೆ ನನ್ನ ಗಮನಕ್ಕೆ ಬಂದಿರಲಿಲ್ಲ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts