More

    ಚಿತ್ರದುರ್ಗದಲ್ಲಿ ಚಿಕ್ಕಮಗಳೂರು ಮಾದರಿ ಕನಕ ಭವನ

    ಚಿತ್ರದುರ್ಗ: ನಗರದ ಧವಳಗಿರಿ ಬಡಾವಣೆಯಲ್ಲಿ ಚಿಕ್ಕಮಗಳೂರು ಮಾದರಿ ಕನಕ ಭವನ ನಿರ್ಮಾಣವಾಗಲಿದೆ ಎಂದು ಹೊಸದುರ್ಗದ ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿದರು.

    ನಗರದ ಮಠದ ಕುರುಬರಹಟ್ಟಿಯಲ್ಲಿ ಮಂಗಳವಾರ ಶ್ರೀಗುರು ರೇವಣಸಿದ್ದೇಶ್ವರ ಬಳಗ, ಭವನಕ್ಕಾಗಿ ಮಠದ ಕುರುಬರಹಟ್ಟಿ ಹಾಲುಮತ ಸಮುದಾಯದಿಂದ ಸಂಗ್ರಹಿಸಿದ್ದ ದೇಣಿಗೆ ಸಮರ್ಪಣಾ ಸಮಾರಂಭದಲ್ಲಿ ಮಾತನಾಡಿ, ಚಿಕ್ಕಮಗಳೂರಂತೆ ಇಲ್ಲೂ ಕೂಡ ಉತ್ತಮ ಭವನ ನಿರ್ಮಿಸಲು ಇಂಜಿನಿಯರ್‌ಗಳಿಗೆ ಸೂಚಿಸಲಾಗಿದೆ.

    ಅಂದಾಜು 6 ಕೋಟಿ ರೂ. ವೆಚ್ಚದ ಭವನಕ್ಕೆ ದೇಣಿಗೆ ಸಂಗ್ರಹಿಸಲಾಗುತ್ತಿದೆ. ಸರ್ಕಾರದಿಂದ 4 ಕೋಟಿ ರೂ. ಅನುದಾನ ಮಂಜೂರು ಕೋರಿ ಚಿತ್ರದುರ್ಗ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರಿಗೆ ಮನವಿ ಮಾಡಲಾಗಿದೆ. ಪಕ್ಷ ರಾಜಕಾರಣ ಏನೇ ಇರಲಿ, ಸಮುದಾಯದ ವಿಚಾರದಲ್ಲೂ ಎಲ್ಲರೂ ಒಂದಾಗಬೇಕು. ಕುರುಬರ ಸಂಘದ ಮುಖಂಡರಲ್ಲಿದ್ದ ಭಿನ್ನಾಭಿಪ್ರಾಯಗಳು ದೂರವಾಗಿರುವುದು ಸಂತಸದ ಸಂಗತಿ ಎಂದರು.

    ಜ.15 ರ ನಂತರ ದೇಣಿಗೆ ಸಂಗ್ರಹ ಕುರಿತಂತೆ ಚಿತ್ರದುರ್ಗದಲ್ಲಿ ಮತ್ತೊಂದು ಸಭೆ ನಡೆಯಲಿದೆ. ಕಾಗಿನೆಲೆ ಕನಕಗುರು ಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಹೊಸದುರ್ಗ ಕೆಲ್ಲೋಡು ಕನಕಗುರು ಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಮಾರ್ಗದರ್ಶನದಲ್ಲಿ ಶೀಘ್ರದಲ್ಲೇ ಭವನಕ್ಕೆ ಶಂಕುಸ್ಥಾಪನೆ ನೆರವೇರಲಿದ್ದು, ಪ್ರತಿ ಪೈಸೆಗೂ ಲೆಕ್ಕ ಸಿಗಲಿದೆ ಎಂದರು.

    ಸಾನ್ನಿಧ್ಯ ವಹಿಸಿದ್ದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ಕುರುಬ ಸಮುದಾಯ ಬುಡಕಟ್ಟು ಸಂಸ್ಕೃತಿಯಿಂದ ಶ್ರೀಮಂತ ವಾಗಿದೆ. ಕುರುಬರು ಕೂಡಿ ಕಟ್ಟಿದ್ದಾರೆ ಎನ್ನುವುದಕ್ಕೆ ರಾಜ್ಯದ ನಾನಾ ಕಡೆಗಳಲ್ಲಿರುವ ಮಠಗಳು ಹಾಗೂ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದೇ ಸಾಕ್ಷಿ. ಕಾಗಿನೆಲೆ ಗುರು ಪೀಠಕ್ಕೆ ತನ್ನದೇ ಆದ ಶಕ್ತಿಯಿದೆ. ಸಮುದಾಯದ ಆಸ್ತಿ ಯಾರೊಬ್ಬರ ಸ್ವತ್ತಲ್ಲ ಎಂದು ಹೇಳಿದರು.

    ಮುಖಂಡ ಕೆ.ಜಿ.ನಾಗೇಂದ್ರಪ್ಪ ಮಾತನಾಡಿ, ಮಠದ ಕುರುಬರಹಟ್ಟಿಯಲ್ಲಿ ಸಮುದಾಯದ ಅನೇಕರು ಕೃಷಿ ಕಾರ್ಮಿಕರಾಗಿದ್ದರೂ ಉದಾರ ದೇಣಿಗೆ ಕೊಟ್ಟಿದ್ದಾರೆ ಎಂದರು.

    ರಾಜ್ಯ ಕುರುಬರ ಸಂಘದ ನಿರ್ದೇಶಕರಾದ ಬಿ.ಟಿ.ಜಗದೀಶ್, ರಜನಿ ಲೇಪಾಕ್ಷಿ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಶ್ರೀರಾಮ್,ಪಾಪಣ್ಣ, ರಾಧಮ್ಮ, ಮೀನಾಕ್ಷಮ್ಮ, ಬಿ.ಜಗನ್ನಾಥ್, ಜಿ.ಟಿ.ಪರಮೇಶ್ವರಪ್ಪ, ಗೋ.ತಿಪ್ಪೇಶ್, ಎನ್.ಬಿ.ಗೌಡ್ರು, ಬಿ.ಜಿ.ವೆಂಕಟೇಶ್,ನಾಗರಾಜಪ್ಪ, ಜಿ.ಎಸ್.ನಾಗರಾಜ್, ಪೈಲ್ವಾನ್ ತಿಪ್ಪೇಸ್ವಾಮಿ, ಸಂಪತ್ ಕುಮಾರ್, ಗಂಗಾಧರ್ ಹಾಗೂ ಶ್ರೀ ಗುರು ರೇವಣಸಿದ್ದೇಶ್ವರ ಬಳಗದ ಪದಾಧಿಕಾರಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts