More

    ಯಶಸ್ವಿ ಮುಕ್ತಾಯ ಕಂಡ ಸೀಬಾರ ದನಗಳ ಜಾತ್ರೆ

    ಚಿತ್ರದುರ್ಗ: ನಗರ ಸಮೀಪ ಸೀಬಾರದ 36 ಎಕರೆ ವಿಸ್ತಾರದಲ್ಲಿ ಎಲ್ಲಿ ಕಣ್ಣು ಹಾಯಿಸಿದರಲ್ಲಿ ಹುರಿಕಟ್ಟಿದ ರಾಸುಗಳು, ಅವುಗಳ ಮಾರಾಟ, ಖರೀದಿ ಅಥವಾ ಸಾಟಿಯಲ್ಲಿ ಬ್ಯುಸಿಯಾಗಿದ್ದ ರೈತರು, ಬಂದಂಥ ರೈತರ ದಣಿವಾರಿಸಲು ಹೋಟೆಲ್, ಹಣ್ಣು, ಹಂಪಲು ಅಂಗಡಿಗಳನ್ನು ತೆರೆದಿದ್ದ ವರ್ತಕರು.

    ನಿತ್ಯ ಸರಾಸರಿ 500 ರೈತರು, ಸಾವಿರಾರು ರಾಸುಗಳು ಪಾಲ್ಗೊಂಡಿದ್ದ ಹಾಗೂ ಫೆ.23 ರಿಂದ ಆರಂಭವಾಗಿದ್ದ ಸೀಬಾರ ದನಗಳ ಜಾತ್ರೆ ಮಂಗಳವಾರ ಮುಕ್ತಾಯಗೊಂಡಿತು. ಮುರುಘಾ ಮಠದ ಪೀಠಾಧಿಪತಿಗಳಾಗಿದ್ದ ಶ್ರೀ ಜಗದ್ಗುರು ಜಯದೇವ ಹಾಗೂ ಜಯವಿಭವ ಶ್ರೀಗಳು 65 ವರ್ಷಗಳ ಹಿಂದೆ, ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ಮತ್ತು ಶ್ರೀ ಜಗದ್ಗುರು ಗುರುಪಾದ ಮುರುಘರಾಜೇಂದ್ರ ಸ್ವಾಮೀಜಿ ಸ್ಮರಣಾರ್ಥ ಸೀಬಾರದಲ್ಲಿ ದನಗಳ ಜಾತ್ರೆ ಆರಂಭಿಸಿದ್ದರು.

    ಶಿವರಾತ್ರಿ ಮುಕ್ತಾಯವಾಗುತ್ತಿದ್ದಂತೆ ಇಲ್ಲಿ ಜಾತ್ರೆ ನಡೆಯುತ್ತದೆ. ಬರಗಾಲದ ಹಿನ್ನೆಲೆಯಲ್ಲಿ 2017 ಹಾಗೂ 2019 ರಲ್ಲಿ ರಥೋತ್ಸವ ಹೊರತು ಪಡಿಸಿ, ದನಗಳ ಜಾತ್ರೆ ನಡೆದಿರಲಿಲ್ಲ. ಪ್ರಚಾರ ಕೊರತೆ ಅಥವಾ ಕೃಷಿಯಲ್ಲಿ ಕುಂದಿರುವ ರಾಸುಗಳ ಬಳಕೆ ಹಾಗೂ ಗೋ ಸಂತತಿ ಕ್ಷೀಣಿಸಿರುವುದರಿಂದಲೊ ಏನೋ ಜಾತ್ರೆಗೆ ಬರುವ ರಾಸುಗಳ ಸಂಖ್ಯೆ ಕಡಿಮೆ ಆಗುತ್ತಿದೆಯಂತೆ.

    ಜಾತ್ರೆಗೆ ಆಂಧ್ರಪ್ರದೇಶ, ತಮಿಳುನಾಡು ಮೊದಲಾದ ಹೊರ ರಾಜ್ಯಗಳು ಹಾಗೂ ಕರ್ನಾಟಕದ ಹೊರ ಜಿಲ್ಲೆಗಳಿಂದ ಅತ್ಯುತ್ತಮ ತಳಿಗಳೊಂದಿಗೆ ರೈತರು ಬರುವುದು ವಾಡಿಕೆ. ತುಮಕೂರು, ಬೆಂಗಳೂರು, ಮಾಗಡಿ, ಮಧುಗಿರಿ, ತಮಿಳುನಾಡು, ಆಂಧ್ರಪ್ರದೇಶ ಮತ್ತಿತರ ಕಡೆಗಳಿಂದ ಜರ್ಸಿ, ಗಿರ್, ಅಮೃತ್‌ಮಹಲ್, ಹಳ್ಳಿಕಾರ, ಡಾಗಿ, ಮುದ್ರ ಸಹಿತ ಸಾವಿರಕ್ಕೂ ಹೆಚ್ಚು ರಾಸುಗಳೊಂದಿಗೆ ಈ ಬಾರಿ ರೈತರು ಭಾಗವಹಿಸಿದ್ದರು.

    ಅತಿ ಹೆಚ್ಚು 2.20 ಲಕ್ಷ ರೂ.ಗೆ ಮಾರಾಟವಾದ ರಾಸು ಸೇರಿದಂತೆ 50 ಸಾವಿರ ರೂ.ಗಳಿಂದ 2.60 ಲಕ್ಷ ರೂ. ವರೆಗಿನ ರಾಸುಗಳಿದ್ದು,ನೂರಾರು ಜತೆ ರಾಸು ಮಾರಾಟವಾಗಿ ಲಕ್ಷಾಂತರ ರೂ.ವಹಿವಾಟು ನಡೆದಿದೆ. ಒಂದು ಜತೆ ರಾಸುವಿಗೆ 50 ರೂ.ಪ್ರವೇಶ, ಮಾರಾಟ ವಾದ ರಾಸುವಿಗೆ ಖರೀದಿದಾರರು ಮತ್ತು ಮಾರಾಟಗಾರರಿಂದ ತಲಾ 50 ರೂ.ಚಹರೆ ಪಟ್ಟಿ ಪಡೆಯಲಾಗುತ್ತಿದೆ.

    ಮಧುಗಿರಿ, ಮಳವಳ್ಳಿ ದನಗಳ ಜಾತ್ರೆಗಳ ಬಳಿಕ ಸೀಬಾರಕ್ಕೆ ಆಗಮಿಸುವ ರೈತರು ಇಲ್ಲಿಂದ ಕೋಡಗುಡ್ಡ ಹಾಗೂ ಕಡ್ಲೇದವರಪುರದ ದನಗಳ ಜಾತ್ರೆಗಳಲ್ಲೂ ಭಾಗವಹಿಸುತ್ತಾರೆ. ಶ್ರೀಮಠ ಕೊಟ್ಟಿರುವ ಜಾಗದಲ್ಲಿ ಸರ್ಕಾರ ಪಶುವೈದ್ಯ ಆಸ್ಪತ್ರೆಯನ್ನು ಸ್ಥಾಪಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts