More

    ಜಿಪಂ ಸಾರಥಿ ಭಾಗ್ಯ ಯಾರಿಗೆ?

    ಚಿತ್ರದುರ್ಗ: ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಒಡಂಬಡಿಕೆಯಂತೆ ವಿಶಾಲಾಕ್ಷಿ ನಟರಾಜ್ ನೀಡಿದ್ದ ರಾಜೀನಾಮೆ ಅಂಗೀಕಾರವಾಗುತ್ತಿದ್ದಂತೆ ಇತ್ತ ಕಾಂಗ್ರೆಸ್ ಮನೆಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿವೆ.

    ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಹಿರಿಯೂರು ತಾಲೂಕು ಮಸ್ಕಲ್ ಕ್ಷೇತ್ರದ ಶಶಿಕಲಾ ಸುರೇಶ್‌ಬಾಬು ಸಹಿತ ಹಲವರು ಆಕಾಂಕ್ಷಿಗಳಾಗಿದ್ದು, ಅಧ್ಯಕ್ಷ ಸ್ಥಾನ ಯಾರಿಗೆ ಒಲಿಯಲಿದೆ ಎಂಬುದೀಗ ಕುತೂಹಲ ಮೂಡಿಸಿದೆ. ಪ್ರಸ್ತುತ ಕಾಂಗ್ರೆಸ್ ಪಕ್ಷಕ್ಕೆ ಬಹುಮತವಿದ್ದು, ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿದೆ.

    2016ರಲ್ಲಿ ಜಿಪಂ ಚುನಾವಣೆ ಮುಗಿದು ಕಾಂಗ್ರೆಸ್ ಬಹುಮತ ಪಡೆಯುತ್ತಿದ್ದಂತೆ ವರಿಷ್ಠರ ಸೂಚನೆಯಂತೆ ಜಿಲ್ಲಾ ಮುಖಂಡರು ಸಭೆ ನಡೆಸಿ ನಾಲ್ವರು ಸದಸ್ಯರಿಗೆ ಅಧಿಕಾರ ಹಂಚಿಕೆ ಮಾಡಲು ನಿರ್ಣಯಿಸಿದ್ದರು. ಮೊದಲಿಗೆ ಸೌಭಾಗ್ಯ ಬಸವರಾಜನ್‌ಗೆ ಅವಕಾಶ ಮಾಡಿಕೊಟ್ಟಿತ್ತು. ಆದರೆ, ಬಳಿಕ ಆದ ನಾನಾ ರಾಜಕೀಯ ಪ್ರಹಸನಗಳಿಂದಾಗಿ ಇನ್ನುಳಿದ ಆಕಾಂಕ್ಷಿಗಳಾದ ಜಿ.ಎಂ.ವಿಶಾಲಾಕ್ಷಿ ನಟರಾಜ್, ಶಶಿಕಲಾ ಸುರೇಶಬಾಬು, ತುರುವನೂರು ಕ್ಷೇತ್ರದ ಕೌಶಲ್ಯಾ ಮತ್ತಿತರರಿಗೆ ಅಧಿಕಾರ ಗಗನ ಕುಸುಮವಾಗುತ್ತಾ ಬಂದಿತ್ತು.

    ಸೌಭಾಗ್ಯ ಬಸವರಾಜನ್ ಅವರಿಂದ ರಾಜೀನಾಮೆ ಪಡೆಯಲು ಸಾಧ್ಯವಾಗದೆ, ಅವರ ವಿರುದ್ಧ ಅವಿಶ್ವಾಸ ಅಸ್ತ್ರ ಬಳಸಿ ಅಧಿಕಾರ ತ್ಯಜಿಸುವಂತೆ ಮಾಡುವಲ್ಲಿ ಪಕ್ಷ ಯಶಸ್ವಿಯಾಗಿತ್ತು. ಬಳಿಕ 2019 ಮಾ.23ರಂದು ಅವಿರೋಧವಾಗಿ ಆಯ್ಕೆಯಾಗಿದ್ದ ವಿಶಾಲಾಕ್ಷಿ ನಟರಾಜ್, ರಾಜೀನಾಮೆ ಕೊಡುವುದು ಕೊಂಚ ವಿಳಂಬವಾಗಿದ್ದರಿಂದಾಗಿ, ಉಳಿದಿರುವ ಅಧಿಕಾರದ ಅವಧಿ ಕುಗ್ಗಿದೆ.

    ಈಗ ಇದೇ ಅವಧಿಯನ್ನು ಇಬ್ಬರಿಗೆ ಪಕ್ಷ ಹಂಚಿಕೆ ಮಾಡಬೇಕಿದೆ. ಹೀಗೆ ಉಳಿದ ಅವಧಿಯನ್ನು ಇಬ್ಬರಿಗೆ ಹಂಚಿದರೆ, ಅದರಲ್ಲಿ ಮೊದಲಿಗೆ ಯಾರು ಅಥವಾ ಉಳಿದೆಲ್ಲ ಅವಧಿಗೆ ಒಬ್ಬರನ್ನೇ ಆಯ್ಕೆ ಮಾಡುವುದೇ ಎಂಬ ಪ್ರಶ್ನೆಗೆ ಕಾಂಗ್ರೆಸ್ ಮುಖಂಡರು ಶೀಘ್ರ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts