More

    ಮಕ್ಕಳೇ ನಡೆಸುವ ‘ಚಿರಾಯು ಸ್ಟೂಡೆಂಟ್ಸ್ ಕ್ಲಬ್’

    ಗಣೇಶ್ ಮಾವಂಜಿ ಸುಳ್ಯ

    ಕರೊನಾ ಕಾರಣದಿಂದ ಶಾಲೆಯ ಭೌತಿಕ ತರಗತಿಯಿಲ್ಲದೆ ಮನೆಯಲ್ಲೇ ಉಳಿದ ಮಕ್ಕಳು ಕಲಿಕೆ ಪ್ರಕ್ರಿಯೆಯಿಂದ ದೂರವಾಗಿದ್ದಾರೆ ಎಂಬುದು ಎಲ್ಲ ಪಾಲಕರ ದೂರು…

    ತರಗತಿಗಳನ್ನು ನಡೆಸಲು ಸಾಧ್ಯವೇ ಇಲ್ಲವೆಂದಾಗ ಶಿಕ್ಷಣ ಇಲಾಖೆ ಆನ್‌ಲೈನ್ ಕ್ಲಾಸ್‌ಗೆ ಅವಕಾಶ ಒದಗಿಸಿದ ಬಳಿಕ ಚಿಕ್ಕ ಮಕ್ಕಳೂ ಮೊಬೈಲ್ ಹಿಡಿಯುವುದು ಅನಿವಾರ್ಯವಾಯಿತು. ಜತೆಗೆ ಅವರ ಮೊಬೈಲ್ ಒಡನಾಟವೂ ಹೆಚ್ಚುವಂತಾಯಿತು. ಇದರಿಂದ ಬಾಲ್ಯದ ಸಹಜ ಚಟುವಟಿಕೆಗಳು ದೂರವಾದಂತಾಗಿ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗಳು ಕುಂಠಿತವಾಗುತ್ತವೆ. ಇದಕ್ಕೊಂದು ಮುಕ್ತಿ ಹಾಡಲು ಪ್ರಾರಂಭಗೊಂಡ ಮಕ್ಕಳ ಗುಂಪೇ ‘ಚಿರಾಯು ಸ್ಟೂಡೆಂಟ್ಸ್ ಕ್ಲಬ್’.

    ಇದು ಮಕ್ಕಳಿಂದ, ಮಕ್ಕಳಿಗಾಗಿ, ಮಕ್ಕಳೇ ಪ್ರಾರಂಭಿಸಿದ ಮಕ್ಕಳ ಕೂಟ. ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಕಣೆಮರಡ್ಕ ಭಾಗದಲ್ಲಿ ಹುಟ್ಟಿಕೊಂಡ ಈ ಕ್ಲಬ್‌ನಲ್ಲಿ ನಿರಂತರ ಚಟುವಟಿಕೆಗಳು ನಡೆಯುತ್ತವೆ. ಇಲ್ಲಿ ಅಂಗನವಾಡಿ ಮಕ್ಕಳಿಂದ ತೊಡಗಿ ಪದವಿ ವ್ಯಾಸಂಗ ಮಾಡುವ ಮಕ್ಕಳಿದ್ದಾರೆ. ಇಲ್ಲಿ ದೈಹಿಕ ಆಟದ ಜತೆಗೆ ಮಾನಸಿಕ ಕಸರತ್ತಿಗೆ ಪ್ರಾಶಸ್ತ್ಯ ಹೆಚ್ಚು. ವಾರಕ್ಕೆ ಒಂದು ಬಾರಿ ಒಂದುಗೂಡುವ ಈ ಮಕ್ಕಳಿಗೆ ದೊಡ್ಡ ಮಕ್ಕಳು ವಿವಿಧ ಚಟುವಟಿಕೆಗಳನ್ನು ನೀಡುತ್ತಾರೆ. ಅದರಂತೆ ಮಕ್ಕಳು ಆ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ.

    ವಾರದ ರಜಾದಿನ ಭಾನುವಾರ ಅಪರಾಹ್ನ ಎರಡು ಗಂಟೆಗೆ ಅದೇ ಪರಿಸರದ ಯಾವುದಾದರೊಂದು ಮನೆಯಲ್ಲಿ ಒಂದುಗೂಡುತ್ತಾರೆ. ಒಟ್ಟು 20 ಜನರಿರುವ ಈ ಮಕ್ಕಳನ್ನು ವಯಸ್ಸಿಗೆ ಸಂಬಂಧಿಸಿದಂತೆ ಮೂರು ವಿಭಾಗ ಮಾಡಿ, ಮಕ್ಕಳ ನಡುವೆ ಭಾಷಣ, ಹಾಡು, ಕ್ವಿಜ್, ಪ್ರಬಂಧ, ಆಶುಭಾಷಣ, ಚೆಸ್, ಪ್ರಾಜೆಕ್ಟ್ ವರ್ಕ್ಸ್ ಮೊದಲಾದ ಚಟುವಟಿಕೆಗಳೊಂದಿಗೆ ಕೆಲವೊಂದು ದೈಹಿಕ ಶ್ರಮ ಬೇಡುವ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಸ್ಪರ್ಧೆ ಬಳಿಕ ಸಭಾ ಕಾರ್ಯಕ್ರಮ ನಡೆಸಿ ಅಲ್ಲಿ ಮಕ್ಕಳಿಂದಲೇ ಪ್ರಾರ್ಥನೆ, ಸ್ವಾಗತ, ವಂದನಾರ್ಪಣೆ ಸಲ್ಲಿಕೆಯಾಗುತ್ತದೆ. ಸ್ಪರ್ಧೆಯಲ್ಲಿ ಗೆದ್ದ ಮಕ್ಕಳನ್ನು ಆರಿಸಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಿಗರ ಘೋಷಣೆ ಮಾಡಲಾಗುತ್ತದೆ. ಸ್ಥಾನ ಪಡೆಯಲು ವಿಫಲರಾದವರಿಗೆ ಮುಂದಿನ ಬಾರಿ ಮತ್ತೊಂದು ಚಟುವಟಿಕೆ ನೀಡಿ ಅವರು ಮೊದಲ ಸ್ಥಾನ ಪಡೆಯುವಂತೆ ಹುರಿದುಂಬಿಸಲಾಗುತ್ತದೆ.

    ಪ್ರತೀ ವಾರ ನಡೆಯುವ ಈ ಪ್ರಕ್ರಿಯೆಗಳಲ್ಲಿ ಕ್ಲಬ್‌ನ ಪ್ರತಿಯೊಬ್ಬ ಸದಸ್ಯನೂ ಪಾಲ್ಗೊಳ್ಳುವಂತೆ ಮಾಡಲಾಗುತ್ತದೆ. ಸಮಯ ಸಂದರ್ಭ ದೊರೆತಾಗ ಕ್ಲಬ್‌ನ ಸದಸ್ಯರೆಲ್ಲರೂ ಜತೆಯಾಗಿ ಪರಿಸರ ಶುಚಿಗೊಳಿಸುವ, ಕೃಷಿ ಚಟುವಟಿಕೆ ಹಾಗೂ ಇನ್ನಿತರ ಕೆಲಸಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ.

    ಅಂಗಡಿಗೆ ಹೋಗಿ ವೃಥಾ ಹಾಳು ಮೂಳು ಖರೀದಿಸಿ ಹಣ ವ್ಯಯಿಸುವ ಬದಲು ವಾರಕ್ಕೊಮ್ಮೆ ಸೇರಿದಾಗ ಪ್ರತಿ ಮಕ್ಕಳು ಹತ್ತು ರೂ. ಉಳಿಸುವ ಧ್ಯೇಯವನ್ನೂ ಈ ಕ್ಲಬ್ ಮಾಡಿದ್ದು, ಈಗಾಗಲೇ ಐದು ಸಾವಿರ ರೂ. ಉಳಿಕೆ ಮಾಡಲಾಗಿದೆ. ಮುಂದೆ ಅದನ್ನು ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ವಿನಿಯೋಗಿಸುವ ಚಿಂತನೆ ಇರಿಸಿಕೊಂಡಿದೆ.

    ಪ್ರಾರಂಭಗೊಂಡದ್ದು ಹೇಗೆ?: ವಿಜ್ಞಾನ ಪದವೀಧರೆ ಪ್ರಶ್ವಿಜಾ ಕೆ.ಎಸ್. ಹಾಗೂ ಈಗಷ್ಟೇ ಎಸ್ಸೆಸ್ಸೆಲ್ಸಿ ಪೂರೈಸಿದ ಪ್ರೀತೇಶ್ ಕೆ.ಎಸ್. ಅವರು ವಿದ್ಯಾರ್ಥಿಗಳ ಮಕ್ಕಳ ಮೊಬೈಲ್ ಗೀಳನ್ನು ದೂರ ಮಾಡಲು ಪ್ರಾರಂಭಿಸಿದ ಪ್ರಯೋಗವಿದು. ಏಪ್ರಿಲ್‌ನಲ್ಲಿ ಪ್ರಾರಂಭಗೊಂಡ ಈ ಕ್ಲಬ್ ಈಗ ನಾಲ್ಕು ತಿಂಗಳ ಹಸುಗೂಸಷ್ಟೇ. ಮಕ್ಕಳ ಈ ಚಟುವಟಿಕೆಗಳನ್ನು ನೋಡಿ ಈಗ ಸನಿಹದ ಇನ್ನೊಂದು ಭಾಗದಲ್ಲಿರುವ ಮಕ್ಕಳ ಪಾಲಕರು ತಮ್ಮ ಭಾಗದಲ್ಲೂ ಇದೇ ರೀತಿ ಕ್ಲಬ್ ನಡೆಸಲು ಬೇಡಿಕೆ ಇಟ್ಟಿದ್ದಾರೆ ಎನ್ನುತ್ತಾರೆ ಚಿರಾಯು ಕ್ಲಬ್ ಅಧ್ಯಕ್ಷೆ ಪ್ರಶ್ವಿಜಾ ಕೆ.ಎಸ್.

    ಕ್ಲಬ್ ವತಿಯಿಂದ ಅಮ್ಮಂದಿರ ದಿನದಂದು ಸದಸ್ಯರ ಅಮ್ಮಂದಿರನ್ನು ಕರೆಸಿ ಅವರಿಗೆ ಪ್ರೀತಿಯ ಉಡುಗೊರೆ ನೀಡಿ ಆಶೀರ್ವಾದ ಬೇಡಿದ್ದೇವೆ. ಕೆಲ ದಿನಗಳ ಹಿಂದೆ ನಡೆದ ಓಣಂ ಹಬ್ಬದ ಸಂದರ್ಭ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ರೂಪದಲ್ಲಿ ಪಠ್ಯ ಸಾಮಗ್ರಿಗಳನ್ನು ನೀಡಿದ್ದೇವೆ. ಗಿಡಗಳನ್ನು ನೀಡಿ ಎಳೆಯ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವ ಪ್ರಯತ್ನವನ್ನೂ ಮಾಡಿದ್ದೇವೆ.
    – ಪ್ರೀತೇಶ್ ಕೆ.ಎಸ್.
    ಚಿರಾಯು ಸ್ಟೂಡೆಂಟ್ಸ್ ಕ್ಲಬ್ ಸಂಯೋಜಕ

    ಮಕ್ಕಳನ್ನು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಅವರನ್ನು ಕಿಂಚಿತ್ತಾದರೂ ಮೊಬೈಲ್‌ನಿಂದ ದೂರವಿರಿಸುವಂತೆ ಮಾಡಲು ಸಾಧ್ಯವಾಗಿದೆ. ಈಗ ನಮ್ಮ ಕ್ಲಬ್‌ನ ಮಕ್ಕಳು ಸಭಾ ಕಂಪನವಿಲ್ಲದೆ ವೇದಿಕೆ ಏರಿ ಮಾತನಾಡುವಷ್ಟು ಸಮರ್ಥರಾಗಿದ್ದಾರೆ. ಎಲ್ಲ ಮಕ್ಕಳೂ ಸ್ವತಂತ್ರವಾಗಿ ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸಿದರೂ ಉತ್ತಮ ನಿರ್ವಹಣೆ ತೋರುವಷ್ಟರ ಮಟ್ಟಿಗೆ ಬೆಳೆದಿದ್ದಾರೆ.
    -ಪ್ರಶ್ವಿಜಾ ಕೆ.ಎಸ್. ಚಿರಾಯು ಸ್ಟೂಡೆಂಟ್ಸ್ ಕ್ಲಬ್ ಅಧ್ಯಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts