More

    ಕಾವ್ಯ ತಪಸ್ವಿ ಎಚ್ಚೆಸ್ವಿ: ಸ್ವಧರ್ಮ ಸಾಧನೆಯ ಹಿರಿಯಣ್ಣ ಎಚ್ಚೆಸ್ವಿ

    ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇದೇ ತಿಂಗಳ 5ರಿಂದ 7ರವರೆಗೆ ಕಲಬುರಗಿಯಲ್ಲಿ ನಡೆಯಲಿದೆ. ಕಾವ್ಯ, ನಾಟಕ, ಕತೆ, ಕಾದಂಬರಿ, ಪ್ರಬಂಧ, ಜೀವನಚಿತ್ರ, ಆತ್ಮಚರಿತ್ರೆ, ವಿಮರ್ಶೆ, ಮಕ್ಕಳ ಸಾಹಿತ್ಯ ಹೀಗೆ ಎಲ್ಲ ಸಾಹಿತ್ಯಪ್ರಕಾರಗಳಲ್ಲೂ ಕೃಷಿ ಮಾಡಿರುವ ಎಚ್.ಎಸ್. ವೆಂಕಟೇಶಮೂರ್ತಿ ಅವರು ಈ ಸಮ್ಮೇಳನದ ಸರ್ವಾಧ್ಯಕ್ಷರು. ಅವರೊಂದಿಗಿನ ಒಡನಾಟದ ಕ್ಷಣಗಳನ್ನು ನಾಡಿನ ನಾನಾ ಕ್ಷೇತ್ರಗಳ ಸಾಧಕರು ಇಲ್ಲಿ ಮೆಲುಕು ಹಾಕಿದ್ದಾರೆ.

    ನಾನು ಅವರನ್ನೊಮ್ಮೆ ಸಂದರ್ಶಿಸುತ್ತಿದ್ದಾಗ ಹಠಾತ್ತನೆ ಅವರೊಳಗಿಂದ ಎದ್ದುಬಂದ ಮಾತು ‘ಸಾಹಿತ್ಯ ನನ್ನ ಸ್ವಧರ್ಮ’ ಎಂಬುದು. ಆ ಮಾತಿಗೆ ಅರ್ಥದ ಹಲವು ಪಲುಕುಗಳಿವೆ. ಧರ್ಮ ಯಾವುದು, ಅಧರ್ಮ ಯಾವುದು ಎಂಬುದೇ ಸಂಕೀರ್ಣ ವಿಷಯವಾಗಿರುವಾಗ ಕವಿ ಸ್ವಧರ್ಮದ ಮಾತನಾಡುತ್ತಿದ್ದಾರೆ. ಎಷ್ಟು ಸ್ಪಷ್ಟತೆ ಇತ್ತು ಆ ಮಾತುಗಳಲ್ಲಿ!

    ಕಾವ್ಯ ತಪಸ್ವಿ ಎಚ್ಚೆಸ್ವಿ: ಸ್ವಧರ್ಮ ಸಾಧನೆಯ ಹಿರಿಯಣ್ಣ ಎಚ್ಚೆಸ್ವಿನಾನು ಏನು ಮಾಡುವುದಿದ್ದರೂ ಸಾಹಿತ್ಯದಲ್ಲೇ ಮಾಡಬೇಕು, ಅದು ನನ್ನ ಮಾಧ್ಯಮ ಎಂದು ಅವರು ಮುಂದೆ ಆ ಮಾತನ್ನು ವಿಸ್ತರಿಸಿಯೂ ಹೇಳಿದ್ದರು. ಸ್ವಧರ್ಮ ಶ್ರೇಯಸ್ಸಿನ ಹಾದಿ. ಈ ಎಲ್ಲ ಅರಿವು ಇಲ್ಲದಾಗ ನಾವು ಸಾಹಿತ್ಯದಲ್ಲಿ ರಾಜಕೀಯ ಮಾಡುತ್ತೇವೆ, ಮಾವಿನ ಹಣ್ಣು ದಾಳಿಂಬದಂತೆ ಯಾಕಿಲ್ಲ ಎಂದೆಲ್ಲ ಯೋಚಿಸುತ್ತೇವೆ.

    ಇರಲಿ, ಸ್ವಧರ್ಮ ಸಾಧನೆಯಲ್ಲಿ ಈ ಹಿರಿಯಣ್ಣ ಏನೆಲ್ಲ ಮಾಡಿದ್ದಾರೆ ಎಂದೊಮ್ಮೆ ನೋಡಿದರೆ ಹರ್ಷ ತಾನಾಗಿ ಉಕ್ಕುತ್ತದೆ. ಬೆಳಗ್ಗೆ ನಾಲ್ಕೂವರೆಗೆ ಎದ್ದು ಬರೆಯಲು ತೊಡಗುತ್ತಾರೆ, ಅದು ಅಂತರಂಗ ತನ್ನನ್ನು ತಾನು ತೆರೆದುಕೊಳ್ಳುವ ಅಮೃತಮುಹೂರ್ತ. ಈ ಕ್ರಮವನ್ನು 30 ವರ್ಷಗಳಿಂದ ಪಾಲಿಸುತ್ತಿದ್ದಾರೆ.

    ಲೋಕದ ಎಲ್ಲ ಸಂಗತಿಗಳೂ ಅವರ ಸಾಹಿತ್ಯದ ಜೀರ್ಣಾಗ್ನಿಯಲ್ಲಿ ಬೇಯುತ್ತವೆ. ‘ಇರುಳ ಸಮಯ ಸುರಿಮಳೆಯೊಳಗೆ, ದೋಣಿಗಳಿಳಿದಿವೆ ಹೊಳೆಯೊಳಗೆ’ ಭಾವಗೀತೆ ಇರಬಹುದು, ಧಾರಾವಾಹಿಯ ಶೀರ್ಷಿಕೆ ಗೀತೆ ಇರಬಹುದು, ‘ಅಮ್ಮ ಅಮ್ಮಾ ನನ್ನ ತೋಳಿಗೆ ರೆಕ್ಕೆ ಹಚ್ಚು’ ಎಂಬಂಥ ಮಕ್ಕಳಪದ್ಯ ಇರಬಹುದು, ಪೃಥಾದಂಥ ಸಂಕೀರ್ಣ ಪದ್ಯ ಇರಬಹುದು- ಎಲ್ಲೆಲ್ಲೂ ಅಪ್ಪಟ ಕವಿಯ ಅಂತರಂಗ ಲೋಕದೊಡನೆ ಬೆರೆಯುವ ಒಂದು ರಸಮಯ ಪಥವಿದೆ. ನಾಟಕ, ಅನುವಾದ, ಅನುಸರಣ, ಕಥೆ, ಕಾದಂಬರಿ.. ಎಚ್ಚೆಸ್ವಿ ಮುಟ್ಟದ ಕ್ಷೇತ್ರವಿಲ್ಲ. ಈ ನಿರಂತರ ಅಕ್ಷರ ಅನುಸಂಧಾನವೇ ಕವಿಯನ್ನು ಎಲ್ಲರಿಗೂ ಪ್ರಿಯವಾಗಿಸಿದೆ. ಒಮ್ಮೆ ನಾನು, ಎಚ್ಚೆಸ್ವಿ ಅದೆಲ್ಲೋ ಹೋಗಿದ್ದೆವು. ಅಂದು ಬೆಳಗ್ಗೆ ತಿಂಡಿ ತಿಂದೆವು, ಪದ್ಯ ಓದಿದೆವು. ಆಮೇಲೆ ಆಫೀಸಿನ ಸಮಯವಾಯ್ತೆಂದು ನಾನು ಎದ್ದೆ. ಅವರು ಇನ್ನಾರನ್ನೋ ಕಾಯಬೇಕಾಗಿತ್ತು.

    ಇನ್ನೂ ಅರ್ಧ ಮುಕ್ಕಾಲು ಗಂಟೆ ಇತ್ತು. ತಾಳಿ, ನಾನೂ ನಿಮ್ಮೊಡನೆ ಬರುತ್ತೇನೆ ಎಂದು ನನ್ನೊಡನೆ ಅವರು ಆಫೀಸ್ ವರೆಗೂ ಬಂದು ಅದೇ ಆಟೋದಲ್ಲೇ ವಾಪಸು ಹೊರಟ ಜಾಗಕ್ಕೇ ಮರಳಿದರು. ನನಗೆ ಮೋಜೆನಿಸಿತು. ‘ಹೀಗೆ ಈ ಓಡಾಟ ಸುಮ್ಮನೇ ಆಯಿತಲ್ಲವೆ?’ಎಂದೆ. ‘ಸುಮ್ಮನೆ ಅಲ್ಲವಲ್ಲ. ನಿಮ್ಮೊಡನೆ ಇದ್ದೆ ತಾನೆ? ನಾನು ಅರ್ಧ ಗಂಟೆ ಒಬ್ಬನೇ ಹಾಗೆ ಕಾಯುತ್ತ ಕೂರಲಾರೆ’ ಎಂದರು.

    ಜೀವನದ ಪ್ರತಿಕ್ಷಣವೂ ಹೀಗೆ ಚಟುವಟಿಕೆಯಿಂದಿರಬೇಕು, ಉಲ್ಲಾಸದಿಂದಿರಬೇಕು ಎಂಬುದೂ ಒಂದು ಯೋಗವೇ. ಅದನ್ನು ಎಚ್ಚೆಸ್ವಿ ಸಾಧಿಸಿದ್ದಾರೆ. ಅವರ ಈ ಪಯಣದಲ್ಲಿ ನಾವು ಸಹಪ್ರಯಾಣಿಕರಾಗಿದ್ದೇವಲ್ಲ, ಅದೇ ನಮ್ಮೆಲ್ಲರ ಸಂತೋಷ.

    | ಚಿಂತಾಮಣಿ ಕೊಡ್ಲೆಕೆರೆ ಹಿರಿಯ ಕವಿ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts