More

    ಕರೊನಾದ ಬಗ್ಗೆ ಬಾಯಿ ಬಿಟ್ಟ ಚೀನಾ ಶ್ವೇತ ಪತ್ರ ಬಿಡುಗಡೆ ಮಾಡಿ ಹೇಳಿದ್ದೇನು?

    ಬೀಜಿಂಗ್​: ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಕರೊನಾ ಮಾನವ ನಿರ್ಮಿತವಾಗಿದ್ದು, ಚೀನಾದ ವುಹಾನ್‌ ಪ್ರಯೋಗಾಲಯದಿಂದಲೇ ಈ ವೈರಸ್​ ಹುಟ್ಟಿಕೊಂಡಿರುವುದಾಗಿ ಅಮೆರಿಕ ಆರೋಪ ಮಾಡುತ್ತಿದ್ದರೆ, ಈ ಆರೋಪವನ್ನು ಬೆಂಬಲಿಸುವ ಯಾವುದೇ ಸಾಕ್ಷಿಗಳು ನಮಗೆ ದೊರೆತಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತ ಬಂದಿದೆ. ವುಹಾನ್‌ ಮಾರುಕಟ್ಟೆ ವನ್ಯಜೀವಿಗಳ ಮಾಂಸ ಮಾರಾಟಕ್ಕೆ ಖ್ಯಾತಿ ಪಡೆದಿದ್ದು, ಅಲ್ಲಿನ ಮಾರಾಟಗಾರನಿಂದ ಈ ವೈರಸ್​ ಎಲ್ಲೆಡೆ ಹರಡಿರಬಹುದು ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಅದೇ ಇನ್ನೊಂದೆಡೆ ಇವೆಲ್ಲಾ ಆರೋಪಗಳನ್ನು ಅಲ್ಲಗಳೆಯುತ್ತ ಬಂದಿದ್ದ ಚೀನಾ, ಕರೊನಾ ವೈರಸ್​ಗೆ ತನ್ನ ದೇಶ ಕಾರಣವಲ್ಲ ಎಂದೇ ಹೇಳುತ್ತ ಬಂದಿದೆ.

    ಆದರೆ ಇದೀಗ ವುಹಾನ್​ನಲ್ಲಿ ಈ ವೈರಸ್​ ಮೊದಲು ಕಾಣಿಸಿಕೊಂಡಿರುವ ಬಗ್ಗೆ ಚೀನಾ ಅಂತೂ ಒಪ್ಪಿಕೊಂಡಿದ್ದು, ಈ ಕುರಿತು ಶ್ವೇತ ಪತ್ರವನ್ನು ಬಿಡುಗಡೆ ಮಾಡಿದೆ.
    ಕರೊನಾ ವೈರಸ್ ಪ್ರಕರಣಗಳ ಮಾಹಿತಿ ಮತ್ತು ಅಂಕಿ-ಅಂಶಗಳ ಕುರಿತು ವರದಿ ಮಾಡುವಲ್ಲಿ ವಿಳಂಬ ನೀತಿ ಅನುಸರಿಸಿದೆ ಎನ್ನುವ ಜಾಗತಿಕ ಆರೋಪಕ್ಕೆ ಪ್ರತಿಯಾಗಿ ಶ್ವೇತ ಪತ್ರ ಬಿಡುಗಡೆ ಮಾಡಿರುವ ಚೀನಾ, ಎಲ್ಲರ ಬಾಯಿ ಮುಚ್ಚಿಸಲು ಯತ್ನಿಸಿದೆ.

    ಡಿಸೆಂಬರ್​ ತಿಂಗಳಿನಲ್ಲಿಯೇ ಈ ವೈರಸ್​ ಬಗ್ಗೆ ತಿಳಿದಿದ್ದ ಚೀನಾ, ಇಡೀ ವಿಶ್ವಕ್ಕೆ ವೈರಸ್​ ವ್ಯಾಪಿಸುವವರೆಗೆ ಬಾಯಿ ಮುಚ್ಚಿಕೊಂಡಿತ್ತು, ವೈರಸ್​ ಬಗ್ಗೆ ಚಕಾರ ಎತ್ತಲಿಲ್ಲ, ಅಷ್ಟೇ ಅಲ್ಲದೇ ಕರೊನಾ ವೈರಸ್​ನಿಂದ ತನ್ನ ದೇಶದಲ್ಲಿ ಉಂಟಾಗಿರುವ ಸಾವು-ನೋವಿನ ಲೆಕ್ಕ ಸರಿಯಾಗಿ ಕೊಟ್ಟಿಲ್ಲ ಎಂಬ ಆರೋಪಗಳು ವ್ಯಾಪಕ ಆಗುತ್ತಿರುವ ಹಿನ್ನೆಲೆಯಲ್ಲಿ, ವಿಶ್ವದ ಬಾಯಿ ಮುಚ್ಚಿಸಲು ಶ್ವೇತಪತ್ರ ಬಿಡುಗಡೆ ಮಾಡಿದೆ.

    ಶ್ವೇತಪತ್ರದಲ್ಲಿ ಏನಿದೆ?:

    2019ರ ಡಿಸೆಂಬರ್ 27ರಂದು ವುಹಾನ್‌ನಲ್ಲಿ ಮೊದಲ ಬಾರಿಗೆ ನ್ಯುಮೋನಿಯಾ ವೈರಸ್ ಕಂಡುಬಂದಿತು. ಇದು ಮನುಷ್ಯನಿಂದ ಮನುಷ್ಯನಿಗೆ ಹರಡಬಲ್ಲದು ಎಂಬುದು ನಮಗೆ ತಿಳಿದದ್ದು ಜನವರಿ 19ರಂದು. ಕೂಡಲೇ ಎಚ್ಚೆತ್ತುಕೊಂಡಿರುವ ಸರ್ಕಾರ ಅದನ್ನು ತಡೆಗಟ್ಟಲು ತುರ್ತು ಕ್ರಮಗಳನ್ನು ತೆಗೆದುಕೊಂಡಿತು. ಈ ಹಿನ್ನೆಲೆಯಲ್ಲಿ ಅತಿ ಶೀಘ್ರದಲ್ಲಿಯೇ ಚೀನಾದಲ್ಲಿ ಅದನ್ನು ನಿಯಂತ್ರಣ ಮಾಡಲು ಸಾಧ್ಯವಾಯಿತು ಎಂದು ಚೀನಾ ತಿಳಿಸಿದೆ.

    ಇದನ್ನೂ ಓದಿ: ಆಸ್ಪತ್ರೆಯ ಒಂದು ಎಡವಟ್ಟು: 500ಕ್ಕೂ ಹೆಚ್ಚು ಜನರ ಜೀವಕ್ಕೆ ಕರೊನಾ ಕುತ್ತು!

    ಇದು ಸಾಂಕ್ರಾಮಿಕ ಸೋಂಕು ಎಂದು ಜನವರಿಯಲ್ಲಿ ತಿಳಿಯುವ ಮೊದಲೇ ಅಂದರೆ ಡಿಸೆಂಬರ್​ ತಿಂಗಳಿನಲ್ಲಿಯೇ ಸರ್ಕಾರವು ರೋಗಿಗಳ ಸ್ಥಿತಿಗತಿ-ಪ್ರಕರಣಗಳ ವಿಶ್ಲೇಷಣೆ, ಸಾಂಕ್ರಾಮಿಕ ರೋಗದ ಪತ್ತೆ ಹಚ್ಚುವಿಕೆ ಮತ್ತು ಪ್ರಾಥಮಿಕ ಪ್ರಯೋಗಾಲಯ ಪರೀಕ್ಷೆಗಳ ಫಲಿತಾಂಶದ ಅಧ್ಯಯನ ನಡೆಸಲು ತಜ್ಞರ ತಂಡವನ್ನು ನಿಯೋಜಿಸುವ ಮೂಲಕ ಎಲ್ಲ ಕ್ರಮಗಳನ್ನು ತೆಗೆದುಕೊಂಡಿದೆ. ಅಂತಿಮವಾಗಿ ಇದು ವೈರಲ್ ನ್ಯೂಮೊನಿಯಾ ಎನ್ನುವ ನಿರ್ಣಯಕ್ಕೆ ತಂಡ ಬಂದಿತ್ತು ಎಂಬ ಬಗ್ಗೆ ಅದರಲ್ಲಿ ಉಲ್ಲೇಖಿಸಲಾಗಿದೆ.

    ಈ ಕುರಿತಂತೆ ರಾಷ್ಟ್ರೀಯ ಆರೋಗ್ಯ ಆಯೋಗ (ಎನ್‌ಎಚ್‌ಸಿ) ಆಯೋಜಿಸಿದ್ದ ಉನ್ನತ ಮಟ್ಟದ ತಜ್ಞರು ಮತ್ತು ಸಂಶೋಧಕರ ತಂಡವು ಸಾಕಷ್ಟು ಸಂಶೋಧನೆ ನಡೆಸಿತು. ಒಂದು ತಿಂಗಳ ಸಂಪೂರ್ಣ ಅಧ್ಯಯನದ ನಂತರ ಅಂದರೆ ಜನವರಿ 19ರಂದು ಈ ತಂಡ ಒಂದು ನಿರ್ಧಾರಕ್ಕೆ ಬಂದಿತು. ಅದೇನೆಂದರೆ, ಈ ವೈರಸ್ ಮನುಷ್ಯರಿಂದ ಮನುಷ್ಯರಿಗೆ ಹರಡಬಲ್ಲದು ಎಂಬುದನ್ನು ಅದು ದೃಢಪಡಿಸಿತ್ತು ಎಂದು ಶ್ವೇತ ಪತ್ರದಲ್ಲಿ ವಿವರಿಸಲಾಗಿದೆ.

    ಇದನ್ನೂ ಓದಿ: ವಿಧ್ವಂಸಕ ಕೃತ್ಯಗಳ ರೂವಾರಿ ‘ಲೇಡಿ ಡಾನ್’ಗೆ ಕರೊನಾ ಸೋಂಕು

    ವುಹಾನ್‌ನಲ್ಲಿ ಸಮುದಾಯ ಮಟ್ಟದಲ್ಲಿ ಕರೊನಾ ಸೋಂಕು ಹರಡುವಿಕೆ ಮತ್ತು ಪ್ರಕರಣಗಳ ಸಂಖ್ಯೆ ಹೆಚ್ಚಾದ ಬಳಿಕ, ಚೀನಾ ದೇಶಾದ್ಯಂತ ಇತರ ಪ್ರದೇಶಗಳಲ್ಲೂ ಈ ಸೋಂಕು ಹರಡಿರುವ ಪ್ರಕರಣ ಬೆಳಕಿಗೆ ಬಂತು. ಆಗ ಕರೊನಾ ವೈರಸ್‌ ಎಲ್ಲೆಡೆ ಹರಡುತ್ತಿದೆ ಎಂಬುದು ಖಾತ್ರಿಯಾಯಿತು. ಆ ನಂತರ ಸಾಂಕ್ರಾಮಿಕ ರೋಗ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕುರಿತು ರಾಷ್ಟ್ರವ್ಯಾಪಿ ಕಾರ್ಯಕ್ರಮವನ್ನು ಆರಂಭಿಸಲಾಯಿತು ಎಂದು ಶ್ವೇತ ಪತ್ರದಲ್ಲಿ ಚೀನಾ ಹೇಳಿದೆ.

    ಆದರೆ ವುಹಾನ್​ನಲ್ಲಿ ಕಾಣಿಸಿಕೊಂಡಿತ್ತು ಎನ್ನುವುದನ್ನು ಬಿಟ್ಟರೆ, ಅದು ಹೇಗೆ ಸೃಷ್ಟಿಯಾಯಿತು. ಅಮೆರಿಕ ಆರೋಪ ಮಾಡುತ್ತಿರುವಂತೆ ಇದು ಮಾವನ ನಿರ್ಮಿತವೇ ಅಥವಾ ಇದಕ್ಕೆ ಕಾರಣ, ವುಹಾನ್​ ವೆಟ್​ ಮಾರ್ಕೆಟೇ ಎಂಬ ಅಂಶವನ್ನು ಅಲ್ಲಗಳೆಯಲೂ ಹೋಗಿಲ್ಲ, ಅದನ್ನು ಒಪ್ಪಿಕೊಂಡೂ ಇಲ್ಲ ಚೀನಾ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts