More

    ಟಿಬೆಟ್​ನಲ್ಲಿ ನದಿ ಹರಿವಿನ ದಿಕ್ಕನ್ನೇ ಬದಲಿಸಿರುವ ಚೀನಾ, ನೇಪಾಳ ಬಹುತೇಕ ಭಾಗ ಕಬಳಿಕೆ

    ನವದೆಹಲಿ: ಟಿಬೆಟ್​ನ ಸ್ವಾಯತ್ತ ಪ್ರದೇಶದಲ್ಲಿ ಚೀನಾ ಕೈಗೊಂಡಿರುವ ರಸ್ತೆ ಅಭಿವೃದ್ಧಿ ಯೋಜನೆಗಳು ಮುಂದೊಂದು ದಿನ ನೇಪಾಳಕ್ಕೆ ಮುಳುಗು ನೀರು ತರುವುದು ಖಚಿತವಾಗಿದೆ. ಅಲ್ಲದೆ, ಅದರ ಈ ಕ್ರಮ ಭವಿಷ್ಯದಲ್ಲಿ ಭಾರತಕ್ಕೂ ಭಾರಿ ಗಂಡಾಂತರ ಉಂಟು ಮಾಡುವ ಶಂಕೆ ಮೂಡಿಸುತ್ತಿದೆ.

    ಟಿಬೆಟ್​ನಲ್ಲಿ ಚೀನಾ ಕೈಗೊಂಡಿರುವ ರಸ್ತೆ ಅಭಿವೃದ್ಧಿ ಕಾರ್ಯಗಳಿಂದಾಗಿ 11 ನದಿಗಳ ಹರಿವಿನ ದಿಕ್ಕೇ ಬದಲಾಗಿದೆ. ಇದರಿಂದಾಗಿ ಬರಡು ಭೂಮಿಯಾಗಿ ಉಳಿದಿರುವ ನೇಪಾಳದ ಪ್ರದೇಶವನ್ನು ಇಂಚಿಂಚಾಗಿ ಚೀನಾ ಕಬಳಿಸುತ್ತಿದೆ. ಈ ರೀತಿಯಾಗಿ ಅದು ಇದುವರೆಗೆ ನೇಪಾಳದ 36 ಹೆಕ್ಟೇರ್​ ಭೂಮಿಯನ್ನು ತನ್ನದಾಗಿಸಿಕೊಂಡಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ನೇಪಾಳದ ಕೃಷಿ ವಲಯಕ್ಕೆ ಭಾರಿ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ ಎಂದು ಕೆ.ಪಿ. ಓಲಿ ನೇತೃತ್ವದ ನೇಪಾಳ ಸರ್ಕಾರಕ್ಕೆ ನೇಪಾಳ ಕೃಷಿ ಇಲಾಖೆ ಎಚ್ಚರಿಕೆ ನೀಡಿದೆ.

    ಇಂದು ಕೇವಲ 36 ಹೆಕ್ಟೇರ್​ ಭೂಮಿಯನ್ನು ಚೀನಾ ಕಬಳಿಸಿರಬಹುದು. ಮುಂದೆ ಅದು ನೂರಾರು ಹೆಕ್ಟೇರ್​ ಪ್ರದೇಶವನ್ನು ಕಬಳಿಸುವ ಸಾಧ್ಯತೆ ಇದೆ. ಅಲ್ಲೆಲ್ಲ ತನ್ನ ವೀಕ್ಷಣಾ ಗೋಪುರಗಳನ್ನು ನಿರ್ಮಿಸಿ, ಆ ಪ್ರದೇಶಗಳನ್ನು ತನ್ನದಾಗಿ ಅದು ಮಾಡಿಕೊಂಡಲ್ಲಿ ನೇಪಾಳದ ಗತಿ ಅಧೋಗತಿಯಾಗುವುದರಲ್ಲಿ ಅನುಮಾನವಿಲ್ಲ ಎಂದು ಆತಂಕ ವ್ಯಕ್ತಪಡಿಸಿದೆ.

    ಇದನ್ನೂ ಓದಿ: ಭಾರತೀಯ ಇಂಜಿನಿಯರ್​ ಅನ್ನು ಜಾಗತಿಕ ಉಗ್ರನನ್ನಾಗಿಸಲು ಪಾಕ್​ ಯತ್ನ; ಅಮೆರಿಕ ಅಡ್ಡಗಾಲು

    ನೇಪಾಳದ ಉತ್ತರ ಭಾಗದಲ್ಲಿ ಚೀನಾದ ಗಡಿ ಹಾದು ಹೋಗುತ್ತದೆ. ಈ ಪ್ರದೇಶದಲ್ಲಿ ಪೂರ್ವದಿಂದ ಪಶ್ಚಿಮದವರೆಗೆ ಒಟ್ಟು 43 ಪರ್ವತಶ್ರೇಣಿಗಳಿವೆ. ಈ ಪರ್ವತಶ್ರೇಣಿಗಳೇ ಉಭಯ ರಾಷ್ಟ್ರಗಳ ನಡುವಿನ ನೈಸರ್ಗಿಕ ಗಡಿಯಾಗಿವೆ. ಉಭಯ ರಾಷ್ಟ್ರಗಳು ಈ ಪ್ರದೇಶದಲ್ಲಿ ಒಟ್ಟು 6 ಕಡೆ ಚೆಕ್​ಪೋಸ್ಟ್​ಗಳನ್ನು ನಿರ್ಮಿಸಿಕೊಂಡಿದ್ದು, ವಾಣಿಜ್ಯ-ವಹಿವಾಟಿಗೆ ಸಹಕಾರಿಯಾಗಿದೆ.

    ಆದರೆ, ನೇಪಾಳದ ಕೃಷಿ ಇಲಾಖೆಯ ಭೂಮಾಪನಾ ಇಲಾಖೆಯ ಪ್ರಕಾರ ಟಿಬೆಟ್​ನಲ್ಲಿ 11 ನದಿಗಳ ಹರಿವಿನ ದಿಕ್ಕನ್ನೇ ಚೀನಾ ಬದಲಿಸಿದೆ. ತನ್ಮೂಲಕ ಅದು ನೇಪಾಳದ ಹುಮ್ಲಾ, ರಸುವಾ, ಸಿಂಧುಪಾಲ್​ಚೌಕ್​ ಮತ್ತು ಶಂಕುವಾಸಭಾ ಜಿಲ್ಲೆಗಳಲ್ಲಿನ 36 ಹೆಕ್ಟೇರ್​ ಅಥವಾ 0.36 ಚದರ ಕಿ.ಮೀ. ಭೂಮಿಯನ್ನು ತನ್ನದಾಗಿಸಿಕೊಂಡಿದೆ.

    ಕಳೆದ ವರ್ಷವೇ ನೇಪಾಳದಲ್ಲಿ ಈ ವಿಷಯ ಬಹಿರಂಗಗೊಂಡು, ಕೆ.ಪಿ. ಶರ್ಮ ಓಲಿ ನೇತೃತ್ವದ ಸರ್ಕಾರದ ವಿರುದ್ಧ ಸಾರ್ವಜನಿಕ ಪ್ರತಿಭಟನೆಗಳು ನಡೆದಿದ್ದವು. ಆದರೆ, ಈ ವಿಷಯವಾಗಿ ಏನೂ ಆಗಿಯೇ ಇಲ್ಲ ಎಂಬಂತೆ ಬಿಂಬಿಸಿಕೊಂಡ ಕೆ.ಪಿ. ಶರ್ಮ ಓಲಿ, ಪ್ರತಿಭಟನೆಗಳನ್ನು ಹತ್ತಿಕ್ಕುವಲ್ಲಿ ಯಶಸ್ವಿಯಾಗಿದ್ದರು.

    ಇದನ್ನೂ ಓದಿ: ಮರ್ಯಾದೆ ಹತ್ಯೆ ಆಧಾರಿತ ಚಿತ್ರವನ್ನು ಬೇರೆ ರೀತಿ ಬಿಂಬಿಸಲು ಹೊರಟ ಆರ್​ಜಿವಿ ವಿರುದ್ಧ ಆಕ್ರೋಶ!

    ಜತೆಗೆ, ತಮ್ಮ ದೇಶದೆಲ್ಲಡೆ ರಾಷ್ಟ್ರೀಯ ಪ್ರಜ್ಞೆ ಮೂಡುವಂತೆ ಮಾಡಿ, ಅದನ್ನು ಭಾರತ ವಿರೋಧಿ ಮನೋಭಾವವಾಗಿ ತಿರುಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಕಳೆದ ನವೆಂಬರ್​ನಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದ್ದ ಭಾರತ ಜಮ್ಮು ಮತ್ತು ಕಾಶ್ಮೀರವನ್ನು ಪ್ರತ್ಯೇಕ ರಾಜ್ಯವನ್ನಾಗಿಯೂ, ಲಡಾಖ್​ ಅನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಿದ ನಂತರದಲ್ಲಿ ಭಾರತ ತಮ್ಮ ದೇಶದ ಭೂಭಾಗವನ್ನು ಕಬಳಿಸಿದೆ ಎಂಬ ಸುಳ್ಳು ಮಾಹಿತಿಗೆ ಹೆಚ್ಚಿನ ಪ್ರಚಾರ ನೀಡಿ, ತಮ್ಮ ಜನರಲ್ಲಿ ಭಾರತೀಯ ವಿರೋಧಿ ಮನೋಭಾವ ಹೆಚ್ಚಾಗುವಂತೆ ಮಾಡಿದ್ದರು.

    ಈ ವರ್ಷದ ಏಪ್ರಿಲ್​ನಲ್ಲಿ ಕೆ.ಪಿ. ಓಲಿ ಶರ್ಮ ವಿರುದ್ಧ ಅವರದ್ದೇ ಪಕ್ಷದಲ್ಲಿ ಭಿನ್ನಮತ ಎದ್ದಿತ್ತು. ಈ ಭಿನ್ನಮತವನ್ನು ಶಮನಗೊಳಿಸಿ, ತಮ್ಮ ಅಧಿಕಾರಿ ಉಳಿಸಿಕೊಳ್ಳುವಂತೆ ಮಾಡುವಲ್ಲಿ ಚೀನಾದ ಸಹಕಾರ ಪಡೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರು ಚೀನಾಕ್ಕೆ ವಿರುದ್ಧವಾಗಿ ತಮ್ಮ ಸರ್ಕಾರ ರೂಪಿಸಿದ್ದ ಎರಡು ಮಸೂದೆಗಳನ್ನು ಕೈಬಿಟ್ಟು, ಲಿಂಪಿಯಾಧುರಾ, ಕಾಲಾಪಾನಿ ಮತ್ತು ಲಿಪುಲೇಖ್​ ಪ್ರದೇಶದಲ್ಲಿನ ಭಾರತೀಯ ಪ್ರದೇಶಗಳನ್ನು ತಮ್ಮದಾಗಿಸಿಕೊಂಡು ಹೊಸ ನಕ್ಷೆ ರೂಪಿಸಿ, ಸಂಸತ್​ನ ಎರಡೂ ಮನೆಗಳಲ್ಲಿ ಅನುಮೋದನೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ತನ್ಮೂಲಕ ತಮ್ಮ ದೇಶದ ಜನರ ದೃಷ್ಟಿಯನ್ನು ಬೇರೆಡೆಗೆ ತಿರುವಂತೆ ಮಾಡಿದ್ದಾರೆ.

    ಪರಿಷ್ಕೃತ ನಕ್ಷೆಗೆ ಅವರು ಅನುಮೋದನೆ ಪಡೆದುಕೊಳ್ಳುವ ಮುನ್ನ ಭಾರತ ಈ ವಿಷಯವಾಗಿ ದ್ವಿಪಕ್ಷೀಯ ಮಾತುಕತೆಯ ಪ್ರಸ್ತಾಪ ಇರಿಸಿತ್ತು. ಆದರೆ, ಭಾರತ ಮಾತುಕತೆಯ ಯಾವುದೇ ಪ್ರಸ್ತಾಪ ಇರಿಸಿಲ್ಲ ಎಂದು ಬಿಂಬಿಸಿಕೊಂಡು, ತರಾತುರಿಯಲ್ಲಿ ಪರಿಷ್ಕೃತ ನಕ್ಷೆಗೆ ಸಂಸತ್​ನ ಎರಡೂ ಮನೆಗಳಲ್ಲಿ ಅನುಮೋದನೆ ಪಡೆದುಕೊಳ್ಳುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಅವರ ಈ ಕ್ರಮದಿಂದ ಭವಿಷ್ಯದಲ್ಲಿ ಭಾರತಕ್ಕೆ ತೊಂದರೆಯನ್ನುಂಟು ಮಾಡುವ ಸಾಧ್ಯತೆ ಹೆಚ್ಚಾಗಿದೆ.

    VIDEO| ಹಾಸ್ಯಮಯ ವಿಡಿಯೋದೊಂದಿಗೆ ಕರೊನಾ ವದಂತಿಗೆ ಬ್ರೇಕ್​ ಹಾಕಿದ ನಯನತಾರಾ-ವಿಘ್ನೇಶ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts