More

    ಕರೊನಾ​ಗೆ ಬಲಿಯಾದ ಚೀನಾ ವೈದ್ಯನ ಸಾವಿಗೆ ಕ್ಷಮೆಯಾಚಿಸಿದ ಸರ್ಕಾರ: ತನಿಖಾ ವರದಿಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗ

    ವುಹಾನ್​: ಚೀನಾದಲ್ಲಿ ಕರೊನಾ ವೈರಸ್​ ಹರಡುವಿಕೆ ಬಗ್ಗೆ ಮೊದಲು ಎಚ್ಚರಿಕೆ ನೀಡಿ, ವದಂತಿ ಹಬ್ಬಿಸುವ ಆರೋಪದಲ್ಲಿ ಬಂಧಿಯಾಗಿ ಅದೇ ಕರೊನಾ ವೈರಸ್​ ಸೋಂಕಿನಿಂದ ಸಂಶಯಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದ ಚೀನಾ ವೈದ್ಯನ ಮರಣ ಕುರಿತು ಚೀನಾ ಸರ್ಕಾರ ವೈದ್ಯನ ಕುಟುಂಬದ ಬಳಿ ಕ್ಷಮೆಯಾಚಿಸಿದೆ.

    ವೈದ್ಯ ಲಿ ವೆನ್​ಲಿಯಾಂಗ್​ ಸಾವಿನ ತನಿಖಾ ವರದಿಯಲ್ಲಿ ಉಲ್ಲೇಖವಾಗಿರುವಂತೆ ವೆನ್​ಲಿಯಾಂಗ್ ಯಾವುದೇ ವದಂತಿಯನ್ನು ಹಬ್ಬಿಸುವ ಮೂಲಕ ಸಾರ್ವಜನಿಕ ಆದೇಶಕ್ಕೆ ಭಂಗ ಉಂಟುಮಾಡಿಲ್ಲ. ಇದರ ಬದಲಾಗಿ ಕರೊನಾ ವೈರಸ್​ ವಿರುದ್ಧ ಧೈರ್ಯವಾಗಿ ಹೋರಾಡಿದರು ಎಂದು ಹೇಳಲಾಗಿದೆ.​ ಅಲ್ಲದೆ ವೈದ್ಯನ ವಿರುದ್ಧದ ಖಂಡನೆಗಳನ್ನು ಹಿಂಪಡೆಯುವಂತೆ ವರದಿಯು ಶಿಫಾರಸು ಮಾಡಿದೆ.

    34 ವರ್ಷದ ವೆನ್​ಲಿಯಾಂಗ್​ ಓರ್ವ ನೇತ್ರಶಾಸ್ತ್ರಜ್ಞರಾಗಿದ್ದರು. ವುಹಾನ್​ನ ಕೇಂದ್ರೀಯ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಡಿಸೆಂಬರ್​ 30ರಲ್ಲಿ ತನ್ನ ಸ್ನೇಹಿತನಿಗೆ ಖಾಸಗಿ ಸಂದೇಶದ ಮೂಲಕ ಜಿಲ್ಲೆಯಾದ್ಯಂತ ಸೋಂಕು ಹರಡುತ್ತಿರುವುದಾಗಿ ತಿಳಿಸಿದ್ದರು. ತನ್ನ ಆಸ್ಪತ್ರೆಯಲ್ಲಿ 7 ರೋಗಿಗಳು ದಾಖಲಾಗಿದ್ದಾರೆ. ಅವರಿಗೆ ಸಾರ್ಸ್​​ ರೀತಿಯ ರೋಗದ ಲಕ್ಷಣಗಳು ಕಾಣಿಸಿಕೊಂಡಿವೆ. ದಾಖಲಾಗಿರುವ ಏಳು ರೋಗಿಯೂ ಹುಬೇ ಪ್ರಾಂತ್ಯದ ವುಹಾನ್​ನಲ್ಲಿನ ಒಂದೇ ಸಮುದ್ರ ಆಹಾರ ಮಾರುಕಟ್ಟೆಯಲ್ಲಿ ಪ್ರಾಣಿ ಮಾಂಸವನ್ನು ಸೇವಿಸಿದ್ದಾರೆ ಎಂದು ಮಾಹಿತಿ ನೀಡಿದ್ದರು.

    ಇದಾದ ಕೆಲವೇ ದಿನಗಳಲ್ಲಿ ವೆನ್​ಲಿಯಾಂಗ್​ ಅವರನ್ನು ವದಂತಿ ಹಬ್ಬಿಸುತ್ತಿದ್ದಾರೆ ಎಂಬ ಆರೋಪದಲ್ಲಿ ಬಂಧಿಸಲಾಗಿತ್ತು. ಅಲ್ಲದೆ, ಸಾಮಾಜಿಕ ಆದೇಶಕ್ಕೆ ಭಂಗವುಂಟು ಮಾಡಿ, ಕಾನೂನು ಉಲ್ಲಂಘಿಸಿದ್ದೇನೆ ಎಂದು ಒಪ್ಪಿಕೊಳ್ಳುವಂತೆ ಬಲವಂತ ಮಾಡಲಾಗಿತ್ತು. ಇದಾದ ಒಂದು ವಾರದಲ್ಲಿ ವೆನ್​ಲಿಯಾಂಗ್​ಗೆ ಜ್ವರ ಕಾಣಿಸಿಕೊಂಡಿತ್ತು. ಜನವರಿ ಅಂತ್ಯದಲ್ಲಿ ಪರೀಕ್ಷೆಗೆ ಒಳಗಾದಾಗ ಕೋವಿಡ್​-19 ಇರುವುದು ಧೃಡವಾಗಿತ್ತು. ವೈರಸ್​ ಸೋಂಕಿನಿಂದಲೇ ಫೆ. ಆರಂಭದಲ್ಲಿ ವೆನ್​ಲಿಯಾಂಗ್​ ಸಾವಿಗೀಡಾಗಿದ್ದಾರೆ ಎಂಬ ಸುದ್ದಿ ಚೀನಾದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿತ್ತು.

    ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ
    ವೆನ್​ಲಿಯಾಂಗ್​ ಸಾವಿನ ಸುದ್ದಿ ಹೊರಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಗಳು ವ್ಯಕ್ತವಾಗತೊಡಗಿದವು. ಈ ವಿಚಾರದಲ್ಲಿ ಸರ್ಕಾರದ ವಿರುದ್ಧವೇ ಬೊಟ್ಟು ಮಾಡಲಾಗಿತ್ತು. ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಚೀನಾ ಸರ್ಕಾರ ವೆನ್​ಲಿಯಾಂಗ್​ ಸಾವಿನ ತನಿಖೆಗೆ ಆದೇಶಿಸಿತ್ತು.

    ಇದಕ್ಕೆ ಸಂಬಂಧಿಸಿದ ವರದಿಯನ್ನು ಚೀನಾ ಸರ್ಕಾರದ ತನಿಖಾ ಸಂಸ್ಥೆ ನೀಡಿದೆ. ವೆನ್​ಲಿಯಾಂಗ್​ ಸಾರ್ವಜನಿಕ ಆದೇಶಕ್ಕೆ ಭಂಗ ಉಂಟುಮಾಡಿಲ್ಲ. ಇದರ ಬದಲಾಗಿ ವೃತ್ತಿಪರತೆ ಮೆರೆದು, ಕರೊನಾ ವೈರಸ್​ ವಿರುದ್ಧ ಹೋರಾಡಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದರು ಎಂದು ವರದಿಯಲ್ಲಿ ತಿಳಿಸಲಾಗಿದೆ. ಆರಂಭದಲ್ಲಿ ಕರೊನಾ ವೈರಸ್​ ಭೀಕರತೆ ಇಲ್ಲದಿದ್ದರಿಂದ ವೆನ್​ಲಿಯಾಂಗ್​ಗೂ ಕೂಡ ಖಚಿತ ಮಾಹಿತಿ ಇರಲಿಲ್ಲ ಎಂದು ತಿಳಿದುಬಂದಿದೆ. ವರದಿಯ ಬೆನ್ನಲ್ಲೇ ಚೀನಾ ಸರ್ಕಾರ ಮೃತ ವೈದ್ಯನ ಕುಟುಂಬದ ಬಳಿ ಕ್ಷಮೆಯಾಚಿಸಿದೆ.

    ಇದೇ ವೇಳೆ ವೆನ್​ಲಿಯಾಂಗ್​​ರನ್ನು ಬಂಧಿಸಿದ ಪೊಲೀಸ್​ ಅಧಿಕಾರಿಗಳಿಗೂ ಎಚ್ಚರಿಕೆಯನ್ನು ನೀಡಲಾಗಿದ್ದು, ಚೀನಾ ಸರ್ಕಾರದ ನಿರ್ಲಕ್ಯದಿಂದ ಓರ್ವ ಅಮಾಯಕ ಹಾಗೂ ದಿಟ್ಟ ವೈದ್ಯರನ್ನು ಕಳೆದುಕೊಂಡಂತಾಗಿದ್ದು, ಸಾರ್ವಜನಿಕ ವಲಯದಲ್ಲೂ ತೀವ್ರ ಟೀಕೆ ವ್ಯಕ್ತವಾಗಿವೆ. (ಏಜೆನ್ಸೀಸ್​)

    ಕೊರೊನಾ ವೈರಸ್​ ಮೊದಲು ಪತ್ತೆ ಹಚ್ಚಿ ಬಂಧನವಾಗಿದ್ದ ಚೀನಾ ವೈದ್ಯ ವೈರಸ್​ನಿಂದಲೇ ಮೃತ

    ಕೊರೊನಾ ವೈರಸ್​ ಮೊದಲು ಪತ್ತೆಹಚ್ಚಿ ವೈರಸ್​ನಿಂದಲೇ ವೈದ್ಯನ ಸಾವು ಪ್ರಕರಣ: ತೀವ್ರ ಟೀಕೆಯ ಬಳಿಕ ತನಿಖೆಗೆ ಆದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts