More

    ಮೆಚ್ಚುಗೆ ಗಳಿಸಿದ ಉಮ್ಮಡಹಳ್ಳಿ ಮಕ್ಕಳಸಂತೆ: ತಿಂಡಿ ತಿನಿಸು ಖರೀದಿಸಿದ ಅಧಿಕಾರಿಗಳು, ಸಾರ್ವಜನಿಕರು

    ಮಂಡ್ಯ: ಕ್ಯಾರೆಟ್ ಹಲ್ವಾ, ಕೇಸರಿಬಾತ್, ಕಡಲೆಕಾಳು ಗುಗ್ಗರಿ, ಪುಳಿಯೊಗರೆ, ಚುರುಮುರಿ, ಮಸಾಲೆ ಮಜ್ಜಿಗೆ, ಶರಬತ್, ಎಳನೀರು, ಸೌತೆಕಾಯಿ, ಬಜ್ಜಿ-ಬೋಂಡಾ, ಕಾಫಿ-ಟೀ ಸೇರಿದಂತೆ ವಿವಿಧ ಬಗೆಯ ತಿಂಡಿ ತಿನಿಸುಗಳು, ಮತ್ತೊಂದೆಡೆ ವಿಜ್ಞಾನಗಳ ವಸ್ತು ಪ್ರದರ್ಶನಗಳು.
    ಇದು ತಾಲೂಕಿನ ಉಮ್ಮಡಹಳ್ಳಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಉಮ್ಮಡಹಳ್ಳಿ ಗ್ರಾಮ ಪಂಚಾಯಿತಿ ಹಾಗೂ ಪ್ರೌಢಶಾಲೆ ಸಹಯೋಗದಲ್ಲಿ ಆಯೋಜಿಸಿದ್ದ ಮಹಿಳಾ ಮತ್ತು ಮಕ್ಕಳ ಗ್ರಾಮಸಭೆ, ಮಕ್ಕಳ ಸಂತೆ, ಮೆಟ್ರಿಕ್ ಮೇಳ ಹಾಗೂ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಕಂಡುಬಂದ ವೈವಿಧ್ಯತೆ. ಹಲವು ವಿಶೇಷತೆಗಳಿಂದ ಜಿಲ್ಲೆಯಲ್ಲಿ ಗಮನಸೆಳೆದಿರುವ ಉಮ್ಮಡಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು, ಬರೋಬರಿ 40 ಮಳಿಗೆ ಮೂಲಕ ಅಧಿಕಾರಿಗಳು ಹಾಗೂ ಜನರ ಮೆಚ್ಚುಗೆ ಗಳಿಸಿದರು. ಮಾತ್ರವಲ್ಲದೆ ತಿಂಡಿ ತಿನಿಸುಗಳನ್ನು ಮಾರಾಟ ಮಾಡಿ ಸುಮಾರು ಆರು ಸಾವಿರ ರೂ ಸಂಪಾದಿಸಿದರು.
    ವಿವಿಧ ಬಗೆಯ ಜೀವಿಗಳ ಸಂರಕ್ಷಿತ ಮಾದರಿಗಳು, ಸೌರವ್ಯೆಹ, ಹೂವಿನ ರಚನೆ, ಸೂಕ್ಷ್ಮದರ್ಶಕ ವೀಕ್ಷಣೆ, ಜೈವಿಕ ಅನಿಲ ತಯಾರಿ ಘಟಕ, ಸೌರ ಕುಕ್ಕರ್, ಸೌರಜಲತಾಪಕ ಮುಂತಾದ ಮಾದರಿ ಗಮನಸೆಳೆಯಿತು. ಈ ಪೈಕಿ ಮೂತ್ರದ ಪರೀಕ್ಷೆ, ಮಧುಮೇಹ ಪತ್ತೆ ಹಚ್ಚುವುದು ಹಾಗೂ ರಕ್ತದ ಗುಂಪು ಕಂಡುಹಿಡಿಯುವ ಚಟುವಟಿಕೆ ಪ್ರಯೋಗಗಳನ್ನೂ ವಿದ್ಯಾರ್ಥಿಗಳು ಮಾಡಿದರು. ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ಅವರು ರಕ್ತದ ಪರೀಕ್ಷೆ ಮಾಡಿಸಿದರು. ಅಂತೆಯೇ ರಕ್ತದ ಗುಂಪನ್ನು ವಿದ್ಯಾರ್ಥಿಯು ಸರಿಯಾಗಿ ಕಂಡುಹಿಡಿದಿರುವುದಾಗಿ ಮೆಚ್ಚುಗೆ ವ್ಯಕ್ತಪಡಿಸಿದರು. ಮಕ್ಕಳು ಸಂತೆಯಲ್ಲಿ ಸಿದ್ಧಪಡಿಸಿದ್ದ ತಿಂಡಿ-ತಿನಿಸುಗಳನ್ನು ಸವಿದರು. ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಸಿಇಒ, ಗ್ರಾಮಸ್ಥರಿಗೆ ಇ-ಸ್ವತ್ತು ಹಕ್ಕುಪತ್ರ ವಿತರಣೆ ಮಾಡಿದರು.
    ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿಯನ್ನು ಉತ್ತಮಪಡಿಸಿಕೊಳ್ಳಬೇಕು. ಶಾಲೆಯಲ್ಲಿ ತಮಗೆ ದೊರಕುತ್ತಿರುವ ಸಂಪನ್ಮೂಲಗಳನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು. ಸಮಾಜದಲ್ಲಿ ಉನ್ನತ ಹುದ್ದೆಗಳನ್ನು ಹೊಂದುವ ದಾರಿಯಲ್ಲಿ ಪ್ರಯತ್ನ ಮಾಡಬೇಕು. ಈ ಕಾರ್ಯಕ್ರಮ ವಿನೂತನವಾಗಿದ್ದು, ಖಾಸಗಿ ಶಾಲೆಗಳಿಗೆ ಸೀಮಿತವಾಗಿದ್ದ ಇಂತಹ ಕಾರ್ಯಕ್ರಮ ಏರ್ಪಡಿಸಿರುವುದು ಎಲ್ಲರೂ ಮೆಚ್ಚುವಂತಹದ್ದು. ವಿದ್ಯಾರ್ಥಿಗಳು ಇರುವ ಸೌಲಭ್ಯಗಳನ್ನೇ ಉಪಯೋಗಿಸಿಕೊಂಡು ಉತ್ತಮ ವಿದ್ಯಾಭ್ಯಾಸ ಮಾಡಿ ನನಗಿಂತ ಉನ್ನತ ಸ್ಥಾನ ಪಡೆಯುವಂತೆ ಕರೆ ನೀಡಿದರು.
    ಡಿಡಿಪಿಐ ಶಿವರಾಮೇಗೌಡ ಮಾತನಾಡಿ, ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ವ್ಯವಹಾರ ಕೌಶಲವನ್ನು ಉತ್ತಮಪಡಿಸಲು ಹಾಗೂ ಉತ್ತಮ ಕಲಿಕೆಗೆ ಪೂರಕವಾಗಿವೆ ಎಂದು ತಿಳಿಸಿದರು.
    ಗ್ರಾಪಂ ಅಧ್ಯಕ್ಷ ಶ್ರೀಕಾಂತ್, ತಾಪಂ ಇಒ ಎಂ.ಎಸ್.ವೀಣಾ, ಬಿಇಒ ಮಹದೇವ, ಪಿಡಿಒ ಮಂಜುನಾಥ್, ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ರಮ್ಯಾ, ಮುಖ್ಯಶಿಕ್ಷಕ ನಾಗರಾಜು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts